ಆಧಾರ್ ಪೇಮೆಂಟ್ ಆ್ಯಪ್, ಲಕ್ಕಿ ಗ್ರಾಹಕ ಮತ್ತು ಡಿಜಿ ಧನ್ ವ್ಯಾಪಾರ್ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಸಂಗತಿಗಳು…

ಡಿಜಿಟಲ್ ಕನ್ನಡ ಟೀಮ್:

ಆಧಾರ್ ಪೇಮೆಂಟ್ ಆ್ಯಪ್, ಲಕ್ಕಿ ಗ್ರಾಹಕ ಯೋಜನೆ, ಡಿಜಿ ಧನ್ ವ್ಯಾಪಾರ್ ಯೋಜನೆ… ಇವು ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಡಿಜಿಟಲ್ ವ್ಯವಹಾರದತ್ತ ಸೆಳೆಯುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಮೂರು ಪ್ರಮುಖ ನಿರ್ಧಾರಗಳು.

ನೋಟು ಅಮಾನ್ಯ ನಿರ್ಧಾರದ ನಂತರ ದೇಶದಲ್ಲಿ ಡಿಜಿಟಲ್ ವ್ಯವಹಾರದ ಮೂಲಕ ನಗದು ರಹಿತ ಆರ್ಥಿಕತೆ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ. ಈ ನಿಟ್ಟಿನಲ್ಲಿ ಜನರು ಮೊಬೈಲ್, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬ್ಯಾಂಕಿಗ್ ಮೂಲಕ ತಮ್ಮ ವಹಿವಾಟು ನಡೆಸುವುದನ್ನು ಪ್ರೋತ್ಸಾಹಿಸಬೇಕು. ಜನರನ್ನು ಈ ವ್ಯವಸ್ಥೆಯತ್ತ ಆಕರ್ಷಿಸಿ ಇದಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು ಎಂಬ ಕಾರಣಕ್ಕೆ ಈ ಎರಡು ಯೋಜನೆಗಳನ್ನು ಪರಿಚಯಿಸಲಾಗಿದೆ.

ಕ್ರಿಸ್ ಮಸ್ ಹಬ್ಬದ ಅಂಗವಾಗಿ ಲಕ್ಕಿ ಗ್ರಾಹಕ ಯೋಜನೆ, ಡಿಜಿ ಧನ್ ವ್ಯಾಪಾರ್ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಯೋಜನೆ 100 ದಿನಗಳ ಕಾಲ ಅಂದರೆ ಏಪ್ರಿಲ್ 14ರ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ದಿನದವರೆಗೂ ಜಾರಿಯಲ್ಲಿರಲಿದೆ. ಇನ್ನು ಡಿಜಿಟಲ್ ವ್ಯವಹಾರವನ್ನು ಮತ್ತಷ್ಟು ಸುಲಭಗೊಳಿಸುವ ಪ್ರಯತ್ನವಾಗಿ ಸರ್ಕಾರ ಆಧಾರ್ ಪೇಮೆಂಟ್ ಆ್ಯಪ್ ಅನ್ನು ಇಂದೇ ಬಿಡುಗಡೆ ಮಾಡಿದೆ. ಈ ಮೂರು ಪ್ರಮುಖ ನಿರ್ಧಾರಗಳ ಬಗೆಗಿನ ಸಂಪೂರ್ಣ ಮಾಹಿತಿ ಹಾಗೂ ಅವುಗಳ ಪ್ರಯೋಜನ ಹೀಗಿವೆ…

  • ಆಧಾರ್ ಪೇಮೆಂಟ್ ಆ್ಯಪ್: ಈ ಯೋಜನೆಯು ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಗಳ ಬಳಕೆ ಹಾಗೂ ವ್ಯಾಪಾರಿಗಳ ಬಳಿ ಈ ಕಾರ್ಡ್ ಮೂಲಕ ಹಣ ಪಡೆಯುವ ಮಷಿನ್ ಇಲ್ಲದ ಸಮಸ್ಯೆಯನ್ನು ನಿವಾರಿಸಲು ತೆಗೆದುಕೊಂಡಿರುವ ನಿರ್ಧಾರವಾಗಿದೆ. ಇಲ್ಲಿ ವ್ಯಾಪಾರಿಗಳು ಆಧಾರ್ ಕ್ಯಾಶ್ ಲೆಸ್ ಮರ್ಚೆಂಟ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ₹ 2 ಸಾವಿರಕ್ಕೆ ಸಿಗಲಿರುವ ಬಯೋ ಮೆಟ್ರಿಕ್ ಯಂತ್ರವನ್ನು ಖರೀದಿಸಬೇಕು. ಇಲ್ಲಿ ಗ್ರಾಹಕನು ತನ್ನ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ತನ್ನ ಖಾತೆ ಇರುವ ಬ್ಯಾಂಕಿನ ವಿವರ ವನ್ನು ಆ್ಯಪ್ ನಲ್ಲಿ ಹಾಕಲಾಗುವುದು ಆನಂತರ ಪಾಸ್ ವರ್ಡ್ ಆಗಿ ಬಳಕೆ ಮಾಡಲು ಬಯೋಮೆಟ್ರಿಕ್ ಯಂತ್ರದ ಮೂಲಕ ಆ ವ್ಯಕ್ತಿಯ ಹಸ್ತಗುರುತು ಬಳಸಲಾಗುವುದು. ಆ ಮೂಲಕ ತಾನು ಪಾವತಿ ಮಾಡಬೇಕಿರುವ ಮೊತ್ತವನ್ನು ಹಾಕಿದರೆ ಹಣ ಬ್ಯಾಂಕ್ ಖಾತೆಯಿಂದ ನೇರವಾಗಿ ವರ್ಗಾವಣೆಯಾಗಲಿದೆ. ಗ್ರಾಹಕರ ಬಳಿ ಸ್ಮಾರ್ಟ್ ಫೋನ್ ಇಲ್ಲದೆಯೇ ಡಿಜಿಟಲ್ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ 40 ಕೋಟಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ಈ ಎಲ್ಲರು ಈ ಆ್ಯಪ್ ಮೂಲಕ ವಹಿವಾಟು ನಡೆಸಲು ನೆರವಾಗಲಿದೆ. ಒಂದು ವೇಳೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಜತೆ ಜೋಡಿಸಿಲ್ಲವಾದರೆ ಆದಷ್ಟು ಬೇಗ ಜೋಡಿಸಿಕೊಳ್ಳುವುದು ಉತ್ತಮ.
  • ಲಕ್ಕಿ ಗ್ರಾಹಕ ಯೋಜನೆ: ಈ ಯೋಜನೆಯಲ್ಲಿ ಮೂರು ವಿಧಗಳಿವೆ. ಅವು ದೈನಿಕ, ವಾರ ಹಾಗೂ ಬಂಪರ್ ಲಾಟರಿ ವ್ಯವಸ್ಥೆಯನ್ನು ಹೊಂದಿವೆ, ಯಾವುದೇ ವ್ಯಕ್ತಿ ಕನಿಷ್ಟ ₹ 50 ರಿಂದ ₹ 3000 ವರೆಗಿನ ಮೊತ್ತದ ವಹಿವಾಟಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ಹಣ ಪಾವತಿ ಮಾಡಿದರೆ ಅವರು ಈ ಯೋಜನೆಯೊಳಗೆ ಬರಲಿದ್ದಾರೆ.
    ಲಕ್ಕಿ ಗ್ರಾಹಕ ಯೋಜನೆ ಗ್ರಾಹಕರಿಗಾಗಿ ಪರಿಚಯಿಸಲಾಗಿದ್ದು, ದಿನ ನಿತ್ಯ ಡಿಜಿಟಲ್ ವ್ಯವಹಾರ ಮಾಡಿದವರ ಪೈಕಿ 15 ಸಾವಿರ ಜನರಿಗೆ ಲಕ್ಕಿ ಡ್ರಾ ಮೂಲಕ ₹ 1000 ಕ್ಯಾಶ್ ಬ್ಯಾಕ್ (ಹಣ ಮರುಪಾವತಿ) ಮಾಡಲಾಗುವುದು. ಹೀಗೆ 100 ದಿನಗಳ ಕಾಲವೂ ಪ್ರತಿ ನಿತ್ಯ ಲಕ್ಕಿ ಡ್ರಾ ಮೂಲಕ 15 ಸಾವಿರ ಮಂದಿ ತಲಾ ಒಂದು ಸಾವಿರ ಪಡೆಯಲಿದ್ದಾರೆ. ಇಲ್ಲಿ ವಿಜೇತರ ಖಾತೆಗೆ ನೇರವಾಗಿ ಈ ಬಹುಮಾನ ಹಣವನ್ನು ಹಾಕಲಾಗುವುದು. ಇನ್ನು ವಾರದ ಲಕ್ಕಿ ಡ್ರಾನಲ್ಲಿ ಆಯಾ ವಾರ ಡಿಜಿಟಲ್ ಮೂಲಕ ವ್ಯವಹಾರ ಮಾಡಿದವರ ಪೈಕಿ ಮೂವರನ್ನು ಆಯ್ಕೆ ಮಾಡಿ ಅವರಿಗೆ ಮೊದಲ ಬಹುಮಾನವಾಗಿ ₹ 1 ಲಕ್ಷ, ಎರಡನೇ ಬಹುಮಾನವಾಗಿ ₹ 10 ಸಾವಿರ ಹಾಗೂ ಮೂರನೇ ಬಹುಮಾನವಾಗಿ ₹ 5 ಸಾವಿರ ಮೌಲ್ಯದ ಉಡುಗೊರೆ ನೀಡಲಾಗುವುದು. ಇಲ್ಲಿ ಕ್ರಿಡಿಟ್ ಕಾರ್ಡ್ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್ ಮೂಲಕ ವ್ಯವಹಾರ ನಡೆಸಿದವರು ಈ ಯೋಜನೆಯಲ್ಲಿ ಒಳಪಡುವುದಿಲ್ಲ.
    ಇನ್ನು ಬಂಪರ್ ಪ್ರಶಸ್ತಿ ವಿಭಾಗದಲ್ಲಿ ನವೆಂಬರ್ 8ರಿಂದ ಮುಂದಿನ ವರ್ಷ ಏಪ್ರಿಲ್ 14ರವರೆಗೆ ಕಾಲ ಡಿಜಿಟಲ್ ವ್ಯವಹಾರ ನಡೆಸಿದವರ ಪೈಕಿ ಲಕ್ಕಿ ಡ್ರಾ ಮೂಲಕ ಮೂವರನ್ನು ಆಯ್ಕೆ ಮಾಡಲಾಗುವುದು. ಮೊದಲ ಬಹುಮಾನವಾಗಿ ₹ 1 ಕೋಟಿ, ಎರಡನೇ ಬಹುಮಾನವಾಗಿ ₹ 50 ಲಕ್ಷ ಹಾಗೂ ಮೂರನೇ ಬಹುಮಾನವಾಗಿ ₹ 25 ಲಕ್ಷ ಮೌಲ್ಯದ ಉಡುಗೊರೆ ನೀಡಲಾಗುವುದು.
  • ಡಿಜಿ ಧನ್ ವ್ಯಾಪಾರ್ ಯೋಜನೆ: ಇದು ವ್ಯಾಪಾರಿಗಳಿಗೆ ಮಾಡಿರುವ ಯೋಜನೆಯಾಗಿದ್ದು, ಇಲ್ಲಿಯೂ ₹ 50ರಿಂದ ₹ 3 ಸಾವಿರವರೆಗಿನ ವ್ಯಾಪಾರದಲ್ಲಿ ಡಿಜಿಟಲ್ ಸೇವೆ ಮೂಲಕ ಹಣ ಪಡೆಯುವ ವ್ಯಾಪಾರಿಗಳು ಈ ಯೋಜನೆಯಲ್ಲಿ ಒಳಪಡಲಿದ್ದಾರೆ. ಇಲ್ಲಿ ವಾರದ ಲಕ್ಕಿ ಡ್ರಾನಲ್ಲಿ ಮೊದಲ ಬಹುಮಾನವಾಗಿ ₹ 50 ಸಾವಿರ, ಎರಡನೇ ಬಹುಮಾನವಾಗಿ ₹ 5 ಸಾವಿರ ಹಾಗೂ ಮೂರನೇ ಬಹುಮಾನವಾಗಿ ₹ 2.5 ಸಾವಿರ ಮೌಲ್ಯದ ಉಡುಗೊರೆ ಸಿಗಲಿದೆ. ವ್ಯಾಪಾರಿಗಳ ಬಂಪರ್ ಡ್ರಾ (ನ.8 ರಿಂದ ಏ.14ರವರೆಗೆ) ನಲ್ಲಿ ಮೊದಲ ಬಹುಮಾನವಾಗಿ ₹ 50 ಲಕ್ಷ, ಎರಡನೇ ಬಹುಮಾನವಾಗಿ ₹ 25 ಲಕ್ಷ ಹಾಗೂ ಮೂರನೇ ಬಹುಮಾನವಾಗಿ ₹ 12 ಲಕ್ಷ ಮೌಲ್ಯದ ಬಹುಮಾನ ನೀಡಲಾಗುವುದು. ಈ ಎಲ್ಲ ಬಹುಮಾನಗಳ ಯೋಜನೆಗಾಗಿ ಸರ್ಕಾರ ₹ 340 ಕೋಟಿ ಹಣವನ್ನು ನಿಗದಿಪಡಿಸಿದೆ. ಈ ಯೋಜನೆಯ ಜಾರಿ ಹಾಗೂ ಯಶಸ್ವಿ ಅಳವಡಿಕೆ ಬಗ್ಗೆ ಸರ್ಕಾರ ಆಗಾಗ್ಗೆ ಪರಿಶೀಲನೆ ನಡೆಸಲಿದೆ.

ಒಟ್ಟಿನಲ್ಲಿ ನೋಟು ಅಮಾನ್ಯ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಜನರ ಬಳಿ 50 ದಿನಗಳ ಕಾಲ ಗಡವು ಪಡೆದುಕೊಂಡಿದ್ದ ಸರ್ಕಾರ, ಮುಂದಿನ ದಿನಗಳಲ್ಲಿ ನಗದು ರಹಿತ ಆರ್ಥಿಕತೆಯ ಜಾರಿಗೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರದಿಂದ ಆಗಬೇಕಿರುವ ಕಾರ್ಯಗಳು ನಡೆಯುತ್ತಿದ್ದು, ಈಗ ಜನ ಈ ಯೋಜನೆಗಳನ್ನು ಯಾವ ರೀತಿ ಸದುಪಯೋಗ ಮಾಡಿಕೊಳ್ಳಲಿದ್ದಾರೆ ಎಂಬುದು ಸದ್ಯದ ಕುತೂಹಲ.

1 COMMENT

Leave a Reply