ಮುಂದುವರಿದ ತೆರಿಗೆ ಅಧಿಕಾರಿಗಳ ದಾಳಿ- ವಿವೇಕ್ ರಾವ್ ಮನೆಯಲ್ಲಿ ಸಿಕ್ಕಿದ್ದು ₹2500 ಕೋಟಿ ಮೌಲ್ಯದ ಅಕ್ರಮ ಆಸ್ತಿ, ಮೋದಿ ವಿರುದ್ಧ ಟೀಕೆ ಮುಂದುವರಿಸಿದ ರಾಹುಲ್, ಕಪ್ಪು ಸಮುದ್ರಕ್ಕೆ ಬಿದ್ದ ರಷ್ಯಾ ವಿಮಾನ

ಪತ್ರಕರ್ತ ರವಿಶಂಕರ್ ಕೆ.ಭಟ್ ಅವರ ‘ಫಾರಿನ್ ಟೂರ್’ ಪುಸ್ತಕವನ್ನು ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ಶನಿವಾರ ಬಿಡುಗಡೆ ಮಾಡಿದ ಸಾಹಿತಿ, ಖ್ಯಾತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಉದಯವಾಣಿ ಪತ್ರಿಕೆಯ ಸಂಪಾದಕ ರವಿ ಹೆಗಡೆ, ಅಮೆರಿಕ ರಾಯಭಾರಿ ಕಚೇರಿ ಅಧಿಕಾರಿ ಭರತ್ ಕುಮಾರ್, ಪ್ರಕಾಶಕಿ ರಮಾ.

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನಲ್ಲಿ ಐಟಿ ಅಧಿಕಾರಿಗಳ ದಾಳಿ

ತಮಿಳುನಾಡಿನ ಮಾಜಿ ಮುಖ್ಯ ಕಾರ್ಯದರ್ಶಿ ಡಾ.ರಾಮ್ ಮೋಹನ್ ರಾವ್ ಅವರ ಪುತ್ರ ವಿವೇಕ್ ರಾವ್ ಅವರ ಮನೆ ಮೇಲೆ ಭಾನುವಾರ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ₹ 2500 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಿಕ್ಕಿದೆ ಎಂಬ ವರದಿಗಳು ಬಂದಿವೆ. ಕಳೆದ ವಾರವಷ್ಟೇ ತೆರಿಗೆ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ರಾಮ್ ಮೋಹನ್ ಅವರು ಅಕ್ರಮ ಹಣ ಬದಲಾವಣೆ ದಂಧೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈಗ ರಾಮ್ ಮೋಹನ್ ಅವರು ಎದೆ ನೋವಿನ ಕಾರಣ ಕೊಟ್ಟು ಆಸ್ಪತ್ರೆಗೆ ದಾಖಲಾಗಿದ್ದು, ವಿಚಾರಣೆಗೆ ಭಾಗವಹಿಸಿಲ್ಲ. ಈ ದಾಳಿಯ ವೇಳೆ ತೆರಿಗೆ ಅಧಿಕಾರಿಗಳಿಗೆ ರಾಮ್ ಮೋಹನ್ ಅವರ ಡೈರಿಯೊಂದು ಸಿಕ್ಕಿದ್ದು, ಕಪ್ಪು ಹಣ ದಂಧೆಯಲ್ಲಿ ಭಾಗಿಯಾಗಿರುವ ಇತರೆ ಪ್ರಭಾವಿ ವ್ಯಕ್ತಿಗಳ ಮಾಹಿತಿಯೂ ಲಭ್ಯವಾಗಿವೆ.

ಈ ಡೈರಿಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು, ನೆರೆ ರಾಜ್ಯದ ರಾಜಕೀಯ ನಾಯಕರು, ಗುತ್ತಿಗೆದಾರರು, ಮಾಜಿ ರಾಜ್ಯಪಾಲರ ಹೆಸರು ಇರುವುದಾಗಿ ವರದಿಗಳು ಬಂದಿವೆ. ಹೀಗಾಗಿ ಹೆಚ್ಚು ತೆರಿಗೆ ಅಧಿಕಾರಿಗಳನ್ನು ಕರೆಸಿ, ಏಕ ಕಾಲದಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಯಾರು ಎಷ್ಟು ಹಣ ಪಡೆದಿದ್ದರು ಹಾಗೂ ನೀಡಿದ್ದರು ಎಂಬ ವಿವರ ಸಹ ಈ ಡೈರಿಯಲ್ಲಿ ಇದೆ. ಹೀಗಾಗಿ ಈ ಡೈರಿಯಲ್ಲಿರುವ ಪ್ರಭಾವಿ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಲು ಚೆನ್ನೈನಲ್ಲಿರುವ ತೆರಿಗೆ ಇಲಾಖೆ ಸಂಬಂಧಿಗಳು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆಂಗಳೂರು, ತಿರುವನಂತಪುರ ಹಾಗೂ ಹೈದರಾಬಾದ್ ನಿಂದ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. ಈಗ 70ಕ್ಕೂ ಹೆಚ್ಚು ಅಧಿಕಾರಿಗಳು ಚೆನ್ನೈಗೆ ತೆರಳಿದ್ದು, ವಿವಿಧ ತಂಡಗಳಾಗಿ ಸದ್ಯದಲ್ಲೇ ಕಾರ್ಯಾಚರಣೆ ಮಾಡಲಿದ್ದಾರೆ ಎಂದು ವರದಿಗಳು ಬಂದಿವೆ.

ಇನ್ನು ಭಾನುವಾರ ಮುಂಬೈನಲ್ಲಿ ತೆರಿಗೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ಪನ್ವೇಲ್ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹ 35 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ವೇಳೆ 6 ಮಂದಿಯನ್ನು ವಶಪಡಿಸಿಕೊಳ್ಳಲಾಗಿದ್ದು, 2 ಕೆ.ಜಿಯಷ್ಟು ಚಿನ್ನ ಸಹ ಸಿಕ್ಕಿದೆ.

ಮೋದಿ ವಿರುದ್ಧ ರಾಹುಲ್ ಟೀಕೆ

‘ನೋಟು ಅಮಾನ್ಯ ನಿರ್ಧಾರದಿಂದ ದೇಶದಲ್ಲಿ ಆಗಿರುವ ಸಮಸ್ಯೆ ಸದ್ಯಕ್ಕೆ ಮುಗಿಯುವುದಿಲ್ಲ. ಡಿಸೆಂಬರ್ 30ರ ನಂತರವೂ ಸಂಕಷ್ಟದ ಪರಿಸ್ಥಿತಿ ಮುಂದುವರಿಯಲಿದೆ…’ ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನುಡಿದಿರುವ ಭವಿಷ್ಯ.

ಧರ್ಮಶಾಲದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸಲು 50 ದಿನಗಳ ಗಡವು ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ಬಡವರ ಕಣ್ಣಿಗೆ ಮಣ್ಣೆರೆಚಿದ್ದಾರೆ. ಸದ್ಯ ನಗದು ಕೊರತೆಯಿಂದ ಎದುರಾಗಿರುವ ಸಮಸ್ಯೆ ಮುಂದಿನ 6 ರಿಂದ 7 ತಿಂಗಳ ಕಾಲ ಹಾಗೇ ಮುಂದುವರಿಯಲಿದೆ. ಬಡವರು ತಮ್ಮ ಹಣವನ್ನು ಬ್ಯಾಂಕಿಗೆ ಹಾಕಿದ ನಂತರ ಅವರು ಮತ್ತೆ ಹಣ ಪಡೆಯಲು ವಾರಕ್ಕೆ ₹ 24 ಸಾವಿರ ಗರಿಷ್ಠ ಮಿತಿ ನಿಗದಿಪಡಿಸಿ, ಬಡವರಿಗೆ ಮತ್ತೆ ತಮ್ಮ ಸೇರದಂತೆ ಮಾಡಿದ್ದಾರೆ. ಮಲ್ಯನಂತಹ ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವ ಪ್ರಧಾನಿ ಬಡವರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ರಾಹುಲ್ ಪ್ರಧಾನಿ ವಿರುದ್ಧ ಟೀಕೆ ಮಾಡಿದರು.

ಕಪ್ಪು ಸಮುದ್ರಕ್ಕೆ ಬಿತ್ತು ರಷ್ಯಾ ವಿಮಾನ

92 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರಷ್ಯಾ ರಕ್ಷಣಾ ವಿಭಾಗದ ಟಿಯು- 154 ವಿಮಾನ ಅಪಘಾತಕ್ಕೆ ಸಿಲುಕಿ ಕಪ್ಪು ಸಮುದ್ರಕ್ಕೆ ಬಿದ್ದಿದೆ. ಈವರೆಗೂ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, ಇತರರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಈ ಅಪಘಾತದ ಹಿಂದೆ ಐಎಸ್ಐಎಸ್ ಉಗ್ರ ಕೈವಾಡದ ಶಂಕೆಯೂ ವ್ಯಕ್ತವಾಗಿದ್ದು, ಈ ಅಪಘಾತದ ಪ್ರಕರಣವನ್ನು ತನಿಖೆ ನಡೆಸಲು ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಆಗ್ರಹಿಸಿದ್ದಾರೆ.

Leave a Reply