ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಏಸು ಕ್ರಿಸ್ತನಿಗೆ ನಮಿಸುತ್ತಲೇ ಡಿಜಿಟಲ್ ಮಂತ್ರ ಪಠಿಸಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಷದ ಕಡೇಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟರು. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಏಸು ಕ್ರಿಸ್ತನನ್ನು ನೆನೆದ ಮೋದಿ, ನಗದು ರಹಿತ ಆರ್ಥಿಕತೆಯ ಮಹತ್ವವನ್ನು ದೇಶದ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಏಸು ಕ್ರಿಸ್ತ ಬಡವರ ಕಲ್ಯಾಣಕ್ಕೆ ಪಟ್ಟ ಶ್ರಮವನ್ನು ನೋಟು ಅಮಾನ್ಯ ನಿರ್ಧಾರಕ್ಕೆ ಹೋಲಿಕೆ ಮಾಡಿದ ಪ್ರಧಾನಿ, ಕ್ರಿಸ್ ಮಸ್ ಹಬ್ಬದ ಪ್ರಯುಕ್ತವಾಗಿ ದೇಶದಲ್ಲಿ ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ ‘ಲಕ್ಕಿ ಗ್ರಾಹಕ ಯೋಜನೆ’ ಹಾಗೂ ‘ಡಿಜಿ ಧನ್ ವ್ಯಾಪಾರ ಯೋಜನೆ’ಯನ್ನು ಪರಿಚಯಿಸಲಾಗುತ್ತಿದೆ. ಈ ಯೋಜನೆಯಲ್ಲಿ ₹ 3000 ಸಾವಿರಕ್ಕಿಂತ ಕಡಿಮೆ ವ್ಯವಹಾರದಲ್ಲಿ ಡಿಜಿಟಲ್ ಪೇಮೆಂಟ್ ಮಾಡಿದವರು ಮಾತ್ರ ಈ ಯೋಜನೆಗೆ ಒಳಪಡಲಿದ್ದಾರೆ. ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಸಾರಾಂಶ ಹೀಗಿದೆ…

‘ಏಸು ಕ್ರಿಸ್ತ ಬಡವರ ಏಳಿಗೆಗಾಗಿ ಸಾಕಷ್ಟು ಶ್ರಮವಹಿಸಿದ್ದರು. ಕೇವಲ ಶ್ರಮವಹಿಸಿದ್ದಷ್ಟೇ ಅಲ್ಲ, ಬಡವರ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಇದು ನಿಜವಾದ ಪ್ರಗತಿ. ಅದೇ ರೀತಿ ನೋಟು ಅಮಾನ್ಯದ ನಿರ್ಧಾರದ ನಂತರ ಸಾಕಷ್ಟು ಸಮಸ್ಯೆ ಎದುರಾದರೂ ದೇಶದ ಜನರು ಸರ್ಕಾರವನ್ನು ಬೆಂಬಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ದೇಶದ ಜನರು ಎಂತಹುದೇ ಕಷ್ಟವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಸಾರ್ವಜನಿಕರು ಸಂಕಷ್ಟ ಎದುರಿಸಿದಾಗ ನಾನು ಸಮಸ್ಯೆಗೆ ಸಿಲುಕುತ್ತೇನೆ. ಆದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಮ್ಮ ಗುರಿ ಗಟ್ಟಿಯಾಗಿದೆ.

ನಮ್ಮ ದೇಶ ಯುವಕರ ದೇಶ. ಈ ಯುವಕರ ಏಳಿಗೆಗೆ ಡಿಜಿಟಲ್ ಒಂದು ಅಸ್ತ್ರವಾಗಿದ್ದು, ಯುವಕರು ಹಾಗೂ ಸ್ಟಾರ್ಟ್ ಅಪ್ ಗಳಿಗೆ ಇದೊಂದು ಉತ್ತಮ ಕಾಲ. ಸುದೀರ್ಘ ವರ್ಷಗಳಿಂದ ದೇಶದ ಕಾರ್ಮಿಕರು ಶೋಷಣೆಗೆ ಒಳಪಡುತ್ತಲೇ ಬಂದಿದ್ದಾರೆ. ಆದರೆ ಇನ್ನು ಮುಂದೆ ಕಾರ್ಮಿಕರ ಮೇಲಿನ ಶೋಷಣೆ ನಡೆಯುವುದಿಲ್ಲ. ಡಿಜಿಟಲ್ ವ್ಯವಹಾರದ ಭಾಗವಾಗಿ ಈಗ ಹಣ ನೇರವಾಗಿ ಬ್ಯಾಂಕಿಗೆ ಸೇರುವುದರಿಂದ ಕಾರ್ಮಿಕರನ್ನು ಶೋಷಿಸುತ್ತಿದ್ದ ಅನೌಪಚಾರಿಕ ವ್ಯವಸ್ಥೆಗಳು ಔಪಚಾರಿಕವಾಗಲಿದೆ. ಇದರಿಂದ ಕಾರ್ಮಿಕರು ತಾವು ದುಡಿದ ಹಣದಲ್ಲಿ ಯಾವುದೇ ಹಿಡಿತವಿಲ್ಲದೇ ಪೂರ್ಣವಾಗಿ ಪಡೆಯಬಹುದಾಗಿದೆ.

ಸರ್ಕಾರ ನೋಟು ಅಮಾನ್ಯ ನಿರ್ಧಾರದ ನಂತರ ದೇಶದ ಜನರು ನಗದು ರಹಿತ ಆರ್ಥಿಕತೆಗೆ ಹೊಂದುಕೊಳ್ಳುತ್ತಿದ್ದಾರೆ. ನಗದು ರಹಿತ ಆರ್ಥಿಕತೆ ಎಂದರೆ ಏನು ಎಂದು ಒಬ್ಬರಿಗೊಬ್ಬರು ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ‘ನೀವು ವಾಟ್ಸಾಪ್ ಬಳಸಿದಂತೆ ಇದು ಕೂಡ’ ಎಂದು ಒಬ್ಬರಿಗೊಬ್ಬರು ಡಿಜಿಟಲ್ ವ್ಯವಹಾರದ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ನೋಟು ಅಮಾನ್ಯ ನಿರ್ಧಾರದ ನಂತರ 200-300 ಪಟ್ಟು ಡಿಜಿಟಲ್ ವಹಿವಾಟು ಹೆಚ್ಚಾಗಿದೆ.

ನೋಟು ಅಮಾನ್ಯದ ನಿರ್ಧಾರದ ನಂತರ ಪದೇ ಪದೇ ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು. ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಅದಕ್ಕೆ ಕಾರಣವಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗುವವರನ್ನು ಪತ್ತೆಹಚ್ಚಿ ಹಿಡಿಯಲು ಈ ರೀತಿಯಾಗಿ ಪದೇ ಪದೇ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು. ಪ್ರತಿ ಬಾರಿಯೂ ಸಾರ್ವಜನಿಕರ ಪ್ರತಿಕ್ರಿಯೆಯ ಆಧಾರದ ಮೇಲೆಯೇ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈ ಬಾರಿಯ ಚಳಿಗಾಲದ ಅಧಿವೇಶನ ಗೊಂದಲದ ಗೂಡಾಗಿತ್ತು. ಎಲ್ಲಡೆ ಗದ್ದಲವೇ ಕೂಡಿತ್ತು. ಇದಕ್ಕೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳು ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯಾಗಬೇಕೆಂದು ನಾನು ಬಯಸಿದ್ದೆ. ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ಆದಾಯದ ಬಗ್ಗೆಯು ಚರ್ಚಿಸುವ ಅಗತ್ಯವಿತ್ತು. ಕಾರಣ ಕಾನೂನಿನ ಮುಂದೆ ಎಲ್ಲರೂ ಒಂದೇ ಅದು ಸಾಮಾನ್ಯ ವ್ಯಕ್ತಿ ಆಗಿರಲಿ ಅಥವಾ ರಾಜಕೀಯ ಪಕ್ಷವಾಗಿರಲಿ. ಆದರೆ ವಿರೋಧ ಪಕ್ಷಗಳು ಸಂಸತ್ತಿನ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಈ ಅವಕಾಶವನ್ನು ಕಸಿದುಕೊಂಡರು.’

Leave a Reply