ಚೀನಾವನ್ನು ಹೊಡೆದುಹಾಕಬಲ್ಲ ‘ಅಗ್ನಿ-5’ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಯಶಸ್ವಿ, ನೀವು ತಿಳಿಯಬೇಕಿರುವ ಪ್ರಮುಖ ಮಾಹಿತಿಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ದಿನಗಳಿಂದ ನಿರೀಕ್ಷೆ ಹುಟ್ಟಿಸಿದ್ದ ಭಾರತದ ದೂರವ್ಯಾಪಿ ಅಣ್ವಸ್ತ್ರ ಕ್ಷಿಪಣಿ ‘ಅಗ್ನಿ-5’ ಅನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಇದರೊಂದಿಗೆ ಚೀನಾವನ್ನೇ ಉಡಾಯಿಸಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಯನ್ನು ಭಾರತ ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಂಡಂತಾಗಿದೆ.

ಒಡಿಶಾ ಕರಾವಳಿ ತೀರದಲ್ಲಿರುವ ದ್ವೀಪದಲ್ಲಿ ಈ ಖಂಡಾಂತರ ವಾಯು ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದ್ದು, ಇದು 5 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ಸಾಗಬಲ್ಲ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯದ ದೊಡ್ಡ ಕ್ಷಿಪಣಿ ಇದಾಗಿದ್ದು, ಭಾರತದ ಕ್ಷಿಪಣಿ ಸಾಮರ್ಥ್ಯ ಹೆಚ್ಚಿಸಿದೆ. ಈ ಕ್ಷಿಪಣಿಯು ಭಾರತದ ಅತ್ಯುನ್ನತ ತಂತ್ರಜ್ಞಾನ ಹೊಂದಿದ್ದು, ಶತ್ರುಗಳನ್ನು ಹೊಡೆದುರಿಳಿಸಲು ಭಾರತದ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿದೆ.ಈ ಪರೀಕ್ಷಾರ್ಥ ಹಾರಾಟದ ಬಗ್ಗೆ ಡಿಜಿಟಲ್ ಕನ್ನಡ ಈ ಹಿಂದೆ ವರದಿ ಮಾಡಿತ್ತು.

17 ಮೀಟರ್ ಉದ್ದ ಹಾಗೂ 2 ಮೀಟರ್ ಅಗಲ ವಿಸ್ತೀರ್ಣವಿರುವ ಈ ಕ್ಷಿಪಣಿ 50 ಟನ್ ನಷ್ಟು ತೂಕ ಹೊಂದಿದೆ. ಅದರಲ್ಲಿ ಒಂದು ಟನ್ ಗಿಂತ ಹೆಚ್ಚು ತೂಕದ ಅಣ್ವಸ್ತ್ರವನ್ನು ಹೊಂದಿದೆ. ಇಂದು ನಡೆದ ಪರೀಕ್ಷಾರ್ಥ ಹಾರಾಟವು ನಾಲ್ಕನೇ ಹಂತದ್ದಾಗಿದ್ದು, ಮೊದಲನೆ ಹಂತವನ್ನು 2012ರ ಏಪ್ರಿಲ್ 19ರಂದು, ಎರಡನೇ ಹಂತವನ್ನು 2013ರ ಸೆಪ್ಟೆಂಬರ್ 15ರಂದು ಹಾಗೂ ಮೂರನೇ ಹಂತದ ಪರೀಕ್ಷೆಯನ್ನು 2015ರ ಜನವರಿ 31ರಂದು ನಡೆಸಲಾಗಿತ್ತು.

ಈ ಕ್ಷಿಪಣಿಯನ್ನು ಕೇವಲ ಟ್ರಕ್ ನಲ್ಲಿ ಸಾಗಿಸಿ ತಮಗೆ ಬೇಕಾದ ಜಾಗದಿಂದ ಉಡಾಯಿಸುವ ಅನುಕೂಲವಿರುವುದರಿಂದ ಭಾರತ ಸೇನಾ ಬಲ ಹೆಚ್ಚಾಗಿದೆ. ಭಾರತ ರಕ್ಷಣಾ ಪಡೆಗೆ ಅಗ್ನಿ 5 ಕ್ಷಿಪಣೆ ಸೇರ್ಪಡೆಯಾದರೆ, 5 ಸಾವಿರ ಕಿ.ಮೀ ದೂರವ್ಯಾಪ್ತಿಯ ಕ್ಷಿಪಣಿಯನ್ನು ಹೊಂದಿದ ವಿಶ್ವದ 6ನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈಗಾಗಲೇ ಈ ಸಾಮರ್ಥ್ಯದ ಕ್ಷಿಪಣಿಯನ್ನು ಚೀನಾ, ರಷ್ಯಾ, ಫ್ರಾನ್ಸ್, ಅಮೆರಿಕ ದೇಶಗಳು ಹೊಂದಿವೆ. ಈ ಕ್ಷಿಪಣಿಯು ಚೀನಾ ಮಾತ್ರವಲ್ಲದೇ, ಪಾಕಿಸ್ತಾನ ಸೇರಿದಂತೆ ಏಷ್ಯಾದ ಬಹುತೇಕ ರಾಷ್ಟ್ರಗಳು ಹಾಗೂ ಯೂರೋಪ್ ರಾಷ್ಟ್ರಗಳನ್ನು ಹೊಡೆದು ಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ ಕ್ಷಿಪಣಿಯ ಶ್ರೇಣಿಯಲ್ಲಿ ಇದು ಐದನೇ ಕ್ಷಿಪಣಿಯಾಗಿದ್ದು, ಅಗ್ನಿ-1 700 ಕಿ.ಮೀ ವ್ಯಾಪ್ತಿಯ ಸಾಮರ್ಥ್ಯ ಹೊಂದಿದೆ. ಉಳಿದಂತೆ ಅಗ್ನಿ-2 2000 ಕಿ.ಮೀ ವ್ಯಾಪ್ತಿ, ಅಗ್ನಿ-3 ಮತ್ತು ಅಗ್ನಿ-4 ಕ್ಷಿಪಣಿಗಳು 2,500 ರಿಂದ 3500 ಕಿ.ಮೀಗೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇನ್ನು ಅಗ್ನಿ-5 ನಂತರದ ಶ್ರೇಣಿ ಅಗ್ನಿ-6 ಕ್ಷಿಪಣಿ ಆರಂಭಿಕ ನಿರ್ಮಾಣದ ಹಂತದಲ್ಲಿದ್ದು, ಇದು 8000 ರಿಂದ 9000 ಕಿ.ಮೀ ಸಾಮರ್ಥ್ಯವನ್ನು ಹೊಂದಿದ್ದು, ಜಲಾಂತರ್ಗಾಮಿಯಾಗಿಯೂ ಬಳಸುವ ಅಸ್ತ್ರವಾಗಿ ರೂಪುಗೊಳ್ಳುತ್ತಿದೆ.

Leave a Reply