ಒಟ್ಟುಗೂಡಿಸಿದ್ದೆಲ್ಲಾ ಆಸ್ತಿ ಎಂದು ಖುಷಿಗೊಳ್ಳುವುದಕ್ಕೆ ಮುಂಚೆ ನೀವು ತಿಳಿಯಬೇಕಿರುವುದೇನು ಗೊತ್ತೆ?

authors-rangaswamyಜಗತ್ತಿನ ಬಹುಪಾಲು ಜನರ ಹಣಕಾಸು ಸ್ಥಿತಿ ಉತ್ತಮವಾಗಿಲ್ಲದಿರಲು ಆಸ್ತಿ (Asset) ಮತ್ತು ಹೊಣೆ (liability) ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಎನ್ನುವುದು ನಿಜವೇ? ನಮ್ಮ ಹಣಕಾಸು ನಿರ್ವಾಹಕರಿಂದ ಒಳಗೊಂಡು ವೈದ್ಯರು , ಇಂಜಿನಿಯರ್ ಗಳು, ಶಿಕ್ಷಕರು ಕೂಡ ಈ ವಿಷಯದಲ್ಲಿ ಅನಕ್ಷರಸ್ಥರು ಹೌದೇ? ಆಸ್ತಿ ಮತ್ತು ಹೊಣೆಗಾರಿಕೆ ಎಂದರೇನು ತಿಳಿಸಿ.  ಹೀಗೊಂದು ಮಿಂಚಂಚೆ ಬರಬಹುದು ಎನ್ನುವುದು ನಾನು ಎಣಿಸಿರಲಿಲ್ಲ! ಹೌದು, ಏಕೆಂದರೆ ಪ್ರಶ್ನೆಯಲ್ಲಿ ಉತ್ತರವಿದೆ!! ನಮ್ಮಲ್ಲಿ ಬಹುತೇಕರು ಆರ್ಥಿಕ ಅನಕ್ಷರಸ್ಥರು!. ಇರಲಿ. ಒಂದಷ್ಟರ ಮಟ್ಟಿಗೆ ಈ ರೀತಿಯ ಅನಕ್ಷರತೆ ಹೋಗಲಾಡಿಸುವ ಪ್ರಯತ್ನ ಮುಂದಿನ ಸಾಲುಗಳಲ್ಲಿ ಮಾಡೋಣ.

ಪ್ರಶ್ನೆಗಳ ವಿಭಜಿಸೋಣ. ಮೊದಲೆನೆಯದಾಗಿ ಹೌದು ಜಗತ್ತಿನ ಬಹುತೇಕ ಜನರ ಆರ್ಥಿಕ ಸಂಕಷ್ಟಕ್ಕೆ ಆಸ್ತಿ ಮತ್ತು ಹೊಣೆಗಳ ಅರ್ಥ ಮಾಡಿಕೊಳ್ಳದಿರುವುದು ಕಾರಣ.

ಎರಡೆನೆಯದಾಗಿ ನಾವು ಯಾರನ್ನು ವಿದ್ಯಾವಂತರು ಎಂದು ಹೇಳುತ್ತೇವೋ ಅವರಿಗೂ ಕೂಡ ಈ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದಿರುವುದು ಖೇದಕರವಾದರೂ ಸತ್ಯ ಸಂಗತಿ.

ಕೊನೆಯದಾಗಿ ಆಸ್ತಿ ಮತ್ತು ಹೊಣೆಗಳ ಅರ್ಥ ಜಗತ್ತಿನ ಬಹುತೇಕರು ತಿಳಿದಂತೆ ಮತ್ತು ಅದರ ನಿಜ ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಲೆಕ್ಕಪತ್ರಗಳ (ಅಕೌಂಟಿಂಗ್) ಪ್ರಕಾರ ನೀವು ಕೊಂಡ ವಸ್ತುಗಳ ನಿಮ್ಮ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ನೀವು ಒಂದು ಮನೆಯನ್ನು ಕೊಂಡರೆ ಅದನ್ನು ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆಕಸ್ಮಾತ್ ನೀವು ಆ ಮನೆಯನ್ನು ಸಾಲ ಮಾಡಿ ಕೊಂಡರೂ ಅದನ್ನ ಆಸ್ತಿ ಎಂದು ವರ್ಗಿಕರಿಸಲಾಗುತ್ತದೆ ಮತ್ತು ಸಾಲವನ್ನು ಹೊಣೆ (ಲಿಯಬಿಲಿಟಿ) ಎಂದು ವರ್ಗಿಕರಿಸಲಾಗುತ್ತದೆ. ಮನೆಯ ಬದಲಿಗೆ ನೀವು ಕಾರು ಕೊಂಡರು ಅದನ್ನು ಆಸ್ತಿಯೆಂದೆ ಪರಿಗಣಿಸಲಾಗುತ್ತದೆ. ಇದು ಅತ್ಯಂತ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಮತ್ತು ಜಗತ್ತಿನ ಮುಕ್ಕಾಲು ಪಾಲು ಹಣಕಾಸು ಸಂಕಷ್ಟಕ್ಕೆ ಕಾರಣೀಭೂತ ಪರಿಭಾಷೆ.

ಸರಿ ಹಾಗಾದರೆ ಇಂತಹ ಆರ್ಥಿಕ ಸಂಕಷ್ಟಕ್ಕೆ ಸಿಲುಕದಿರುವ ಆಸ್ತಿ ಮತ್ತು ಹೊಣೆಗಳ ಪರಿಭಾಷೆಯೇನು?

hana classನೀವು ಕೊಂಡ ವಸ್ತು ನಿಮಗೆ ಆದಾಯ ತಂದುಕೊಡುವುದಾದರೆ ಅದನ್ನು ಆಸ್ತಿ ಎಂದು ಪರಿಗಣಿಸಬೇಕು. ಮತ್ತು ಯಾವೆಲ್ಲಾ ನೀವು ಕೊಂಡ ವಸ್ತುಗಳು ನಿಮ್ಮ ವೆಚ್ಚವನ್ನು ಹೆಚ್ಚಿಸುತ್ತವೆಯೋ ಅದನ್ನು ಹೊಣೆ (ಲಿಯಬಿಲಿಟಿ) ಎಂದು ತಿಳಿಯಬೇಕು. ಒಂದು ಉದಾಹರಣೆ ಇದನ್ನು ಇನ್ನಷ್ಟು ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೀವು ಮನೆಯನ್ನು ಕೊಂಡಿರಿ ಎಂದುಕೊಳ್ಳಿ, ನಿಮ್ಮ ಉಳಿಕೆಯ ಹಣದಲ್ಲಿ ಮನೆಯನ್ನು ಕೊಂಡರೆ ಅದು ಆಸ್ತಿ. ನೀವು ಮನೆಯನ್ನು ಸಾಲ ಮಾಡಿ ಕೊಂಡರೆ ಅದು ಆಸ್ತಿಯಲ್ಲ! ಅದೊಂದು ದೊಡ್ಡ ಹೊಣೆಗಾರಿಕೆ. ಹತ್ತೋ ಹದಿನೈದು ವರ್ಷವೋ ನೀವು ನಿಮ್ಮದಲ್ಲದ ಮನೆಗೆ ಬಡ್ಡಿ ಕಟ್ಟುತ್ತಾ ಜೀವನ ಸವೆಸುತ್ತೀರಿ. ನಿಮ್ಮ ಆದಾಯದ ಅರ್ಧ ಭಾಗಕ್ಕೂ ಹೆಚ್ಚು ಬ್ಯಾಂಕಿಗೆ ಹೋಗುತ್ತದೆ. ಆದಾಯದ ಸೋರಿಕೆ ಆಸ್ತಿಯಾಗಲು ಸಾಧ್ಯಾವೆ ಇಲ್ಲ. ಜಗತ್ತಿನ 90ಕ್ಕೂ ಹೆಚ್ಚು ಮಧ್ಯಮವರ್ಗದ ಜನರಿಗೆ ಮನೆ ಕೊಳ್ಳುವುದು (ಸಾಲ ಮಾಡಿಯಾದರೂ ಸರಿಯೇ) ಆಸ್ತಿ ಎಂದು ಹೇಳಿಕೊಡಲಾಗಿದೆ. ಚಿಕ್ಕಂದಿನಿಂದ ಅದನ್ನೇ ಕೇಳುತ್ತಾ ಬೆಳೆದ ಮಕ್ಕಳು ವೈದ್ಯರೂ ಎಂಜಿನಿಯರೋ ಆದರೂ ಈ ವ್ಯಾಖ್ಯೆಗಳಿಂದ ಹೊರಬರಲಾಗದೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದು ನಿಮ್ಮ ಪ್ರಥಮ ಮನೆಯಾಗಿದ್ದು ವಾಸಿಸಲು ಕೊಂಡರೆ ಮೇಲೆ ಹೇಳಿದ್ದರಲ್ಲಿ ಸ್ವಲ್ಪ ರಿಯಾಯತಿ ನೀಡಬಹದು. ಎರಡನೇ ಅಥವಾ ಮೂರನೇ ಮನೆಯನ್ನು ನಗರ ಪ್ರದೇಶದ ಜನರು ಹೂಡಿಕೆ ದೃಷ್ಟಿಯಿಂದ ಸಾಲ ಮಾಡಿಕೊಳ್ಳುವುದು ‘ಹೊಣೆ’ ಯನ್ನೇ ಹೊರತು ‘ಆಸ್ತಿ’ ಯನ್ನಲ್ಲ.

ಬೆಂಗಳೂರಿನಂತ ಮಹಾನಗರಳಲ್ಲಿ ಇಂದು ಕಾರಿಲ್ಲದವನ ಮನೆಯಿಂದ ಸಾಸಿವೆ ತನ್ನಿ ಎಂದು ಗಾದೆಯನ್ನು ಬದಲಾಯಿಸುವ ಮಟ್ಟಕ್ಕೆ ಎಲ್ಲೆಲ್ಲೂ ಕಾರಿನದ್ದೇ ಸಾಮ್ರಾಜ್ಯ!. ಸ್ವಂತ ಸೂರಿಲ್ಲದ ಬಾಡಿಗೆ ಮನೆಯಲ್ಲಿ ವಾಸಿಸುವ ಕಾರನ್ನು ನಿಲ್ಲಿಸಲು ವ್ಯವಸ್ಥೆ ಕೂಡ ಇಲ್ಲದ ಜನ ಕೂಡ ಇಂದು ಕಾರನ್ನು ಖರೀದಿಸಿ ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಕಾರು ನೀವು ಸಾಲ ಮಾಡಿ ಕೊಳ್ಳಿ ಅಥವಾ ಪೂರ್ಣ ಉಳಿತಾಯದ ಹಣದಲ್ಲಿ ಕೊಳ್ಳಿ ಅದು ಹೊಣೆ, ಏಕೆಂದರೆ ಅದು ನಿಮ್ಮ ವೆಚ್ಚ ಹೆಚ್ಚಿಸುತ್ತದೆ. ಆರ್ಥಿಕವಾಗಿ ಸಬಲರಾದ ವರ್ಗ ಕಾರು ಕೊಂಡರೆ ಅಡ್ಡಿಯಿಲ್ಲ, ಹೆಚ್ಚೇನೂ ಆದಾಯವಿಲ್ಲದ ಮಧ್ಯಮ ವರ್ಗದ ಜನ ತಮ್ಮ ತಿಂಗಳ ಆದಾಯವನ್ನು ಮನೆ, ಕಾರಿನ ಕಂತಿಗೆ ಕಟ್ಟುತ್ತಾರೆ. ಹತ್ತು ಹದಿನೈದು ವರ್ಷ ಜೀವನದಲ್ಲಿ ಬದಲಾವಣೆ ಕಾಣದೆ ತಾವೇ ಹಣಿದುಕೊಂಡ ಬಲೆಯಲ್ಲಿ ಜೀವನ ಸವೆಸಬೇಕು. ಆಕಸ್ಮಾತ್ ಸಣ್ಣ ಪುಟ್ಟ ಅಡಚಣೆ ಬಂದರೆ ಈ ವರ್ಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತದೆ.

ಹೀಗೆ ಹಲವು ಉದಾಹರಣೆ ಕೊಡಬಹದು, ಆದರೆ ಮುಖ್ಯವಾಗಿ ನೆನೆಪಿಡಬೇಕಾಗಿರುವುದು ನಿಮ್ಮ ಆದಾಯ ಹೆಚ್ಚಿಸುವುದು ಆಸ್ತಿ, ವೆಚ್ಚ ಹೆಚ್ಚಿಸುವುದು ಹೊಣೆ. ಕೊಳ್ಳುವ ಮೊದಲು ಇದು ಆದಾಯ ನೀಡುತ್ತದೋ, ಖರ್ಚು ಹೆಚ್ಚಿಸುತ್ತದೋ ತಾಳೆ ಹಾಕಿ ನೋಡಿ ನಿರ್ಧರಿಸಿ.

ನೀವು ಸ್ಥಿತಿವಂತರಾಗಿದ್ದರೆ, ಹಣಕ್ಕೆ ದುಡಿಯದ ನಿಮ್ಮದೇ ಮೂಲದ ಆದಾಯವಿದ್ದಲ್ಲಿ ಮೇಲೆ ಹೇಳಿದ್ದು ನಿಮಗಲ್ಲ. ನಿಜವಾದ ಅರ್ಥ ತಿಳಿದಿರುವ ಸ್ಥಿತಿವಂತರ ಮನಿ ಗೇಮ್ ನಲ್ಲಿ ರೂಲ್ಸ್ ಸರಿಯಾಗಿ ತಿಳಿಯದೆ ಅವರು ಹಣಿಯುವ ಡೆಟ್ ಟ್ರ್ಯಾಪ್ ಗೆ ಸಿಲುಕದಿರುವುದು ಜಾಣತನ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply