ಬಗೆಹರಿಯದ ಎತ್ತಿನಹೊಳೆ ವಿವಾದ, ಮೋದಿ ವಿರುದ್ಧದ ರಾಹುಲ್ ಟೀಕೆಗೆ ಶೀಲಾ ದೀಕ್ಷಿತ್ ಬ್ರೇಕ್, ಕಾಂಗ್ರೆಸ್-ಬಿಜೆಪಿ ವಿರುದ್ಧ ಕುಮಾರಸ್ವಾಮಿ ಗರಂ, ನ್ಯಾಷನಲ್ ಹೆರಾಲ್ಡ್: ರಾಹುಲ್- ಸೋನಿಯಾ ನಿರಾಳ

ಎತ್ತಿನಹೊಳೆ ಯೋಜನೆ ಕುರಿತಂತೆ ಎದ್ದಿರುವ ವಿವಾದ ಬಗೆಹರಿಸಿ ಯೋಜನೆಗೆ ಒಂದು ರೂಪ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣದಲ್ಲಿ ಸೋಮವಾರ ನೀರಾವರಿ ತಜ್ಞರು, ಕರಾವಳಿ ಭಾಗದ ಜನಪ್ರತಿನಿಧಿಗಳ ಜತೆ ಸಭೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಎತ್ತಿನಹೊಳೆ ಯೋಜನೆ ಸಭೆ ವಿಫಲ

ತೀವ್ರ ವಿವಾದಕ್ಕೆ ಗುರಿಯಾಗಿರುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ಕುರಿತ ಬಿಕ್ಕಟ್ಟು ಸದ್ಯಕ್ಕೆ ಪರಿಹಾರವಾಗುವ ಯಾವುದೇ ಲಕ್ಷಣಗಳಿಲ್ಲ. ಸೋಮವಾರ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ಈ ಯೋಜನೆಯ ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಕರಾವಳಿ ಭಾಗದ ಶಾಸಕರು ಯೋಜನೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಈ ಸಮಸ್ಯೆಗೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಯೋಜನೆಯನ್ನು ಬಿಜೆಪಿ ಜನಪ್ರತಿನಿಧಿಗಳು ಹಾಗೂ ಎತ್ತಿನ ಹೊಳೆ ಸಂರಕ್ಷಣಾ ಸಮಿತಿಯು ವಿರೋಧಿಸುತ್ತಿದ್ದರೆ, ಸರ್ಕಾರ ಈ ಯೋಜನೆಯ ಪರವಾಗಿ ನಿಂತಿದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್, ‘ಎತ್ತಿನಹೊಳೆ ಯೋಜನೆಯಡಿ 32 ಟಿಎಂಸಿ ನೀರು ಲಭ್ಯವಾಗುತ್ತದೆ. ಆ ಪೈಕಿ 24 ಟಿಎಂಸಿ ನೀರನ್ನು ಜಲಾಶಯಕ್ಕೆ ತರುವುದಾಗಿ ಸರ್ಕಾರ ಹೇಳುತ್ತಿದ್ದು, ಸರ್ಕಾರದ ಈ ವಾದ ಶುದ್ಧ ಸುಳ್ಳು. ನೇತ್ರಾವತಿ ಮತ್ತು ಕುಮಾರಧಾರ ನದಿಯ ಮೂಲಕ ಸಿಗುವ ನೀರು ಒಂದು ಜಿಲ್ಲೆಯ ಅಗತ್ಯಕ್ಕೆ ಸಾಕಾಗುವಷ್ಟಿದೆ. ಆದರೆ ಇವರು ಏಳು ಜಿಲ್ಲೆಗಳಿಗೆ ಆ ನೀರನ್ನು ಹಂಚಲು ಹೊರಟಿದ್ದಾರೆ. ಈ ಬಗ್ಗೆ ನಾವು ಕೇಳಿದ ಪ್ರಶ್ನೆಗಳಿಗೆ ತಜ್ಞರು ನಿರುತ್ತರಗಿದ್ದಾರೆಯೇ ಹೊರತು ಯಾವು ಸೂಕ್ತ ಉತ್ತರ ಬರಲಿಲ್ಲ. ಕೋಲಾರ, ಚಿಕ್ಕಬಳ್ಳಾಪುರಗಳಿಗೆ ಕುಡಿಯುವ ನೀರು ಕೊಡುವ ವಿಷಯದಲ್ಲಿ ನಮ್ಮ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ ಈ ಜಿಲ್ಲೆಗಳಿಗೆ ಎಲ್ಲಿಂದ ನೀರು ತರುತ್ತೀರಿ? ಎಂದು ಪ್ರಶ್ನೆ ಕೇಳಿದರೆ ಅವರ ಬಳಿ ಉತ್ತರವೇ ಇಲ್ಲ’ ಎಂದರು.

ಇನ್ನು ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ದಕ್ಷಿಣ ಕನ್ನಡ, ಉಡುಪಿ, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮನಾಗಿ ನೋಡುತ್ತೇನೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಿಗೆ ತೊಂದರೆ ನೀಡುವ ಉದ್ದೇಶದಿಂತ ಎತ್ತಿನಹೊಳೆ ಯೋಜನೆ ರೂಪಿಸಿಲ್ಲ. ಈ ಯೋಜನೆಯಿಂದ ಈ ಎರಡು ಜಿಲ್ಲೆಗಳಿಗೆ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಅಲ್ಲವೇ’ ಎಂದು ಸಭೆಯಲ್ಲಿ ಎಲ್ಲರ ಮನವೊಲಿಸುವ ಪ್ರಯತ್ನ ಮಾಡಿದರು.

ಕಾಂಗ್ರೆಸ್- ಬಿಜೆಪಿ ವಿರುದ್ಧ ಗುಡುಗಿದ ಕುಮಾರಸ್ವಾಮಿ

ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟೀಕೆಗೂ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ನಾಲ್ಕು ಸೀಟು ಗೆಲ್ಲುವುದಿಲ್ಲ ಎಂಬ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರ ಟೀಕೆಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಅಥವ ಜಗದೀಶ್ ಶೆಟ್ಟರ್ ಅವರಾಗಲಿ ಸ್ವಂತ ಶಕ್ತಿಯಿಂದ ಶ್ರಮ ಹಾಕಿ ಪಕ್ಷ ಕಟ್ಟಿ ಮುಖ್ಯಮಂತ್ರಿಯಾದವರಲ್ಲ’ ಎಂದು ಲೇವಡಿ ಮಾಡಿದ್ದಾರೆ.

‘ಸಿದ್ದರಾಮಯ್ಯನವರು ಕಾಂಗ್ರೆಸ್ ಆಶ್ರಯಪಡೆದು ಮುಖ್ಯಮಂತ್ರಿಯಾದರೆ, ಜಗದೀಶ್ ಶೆಟ್ಟರ್ ಜಾತಿ ರಾಜಕಾರಣದಿಂದ ಮುಖ್ಯಮಂತ್ರಿ ಆದವರು. ಇವರಿಬ್ಬರಿದಲೂ ಅವರವರ ಪಕ್ಷಕ್ಕೆ ಯಾವುದೇ ಶಕ್ತಿ ಬಂದಿಲ್ಲ ಇಬ್ಬರೂ ಸವಕಲು ನಾಣ್ಯಗಳೇ. ಇವರಿಬ್ಬರು ಜೆಡಿಎಸ್ ಪಕ್ಷಕ್ಕೆ ಸರ್ಟಿಫಿಕೇಟ್ ಕೊಡುವುದು ಬೇಡ. ತಮ್ಮ ಸಾಮರ್ಥ್ಯ ಏನಿದೆ ಎಂಬುದನ್ನು ಮೊದಲು ನೋಡಿಕೊಳ್ಳಲಿ. ಸಿದ್ದರಾಮಯ್ಯನವರು ಚಾಂಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ನಿಂತರೆ ಠೇವಣಿ ಸಹ ಬರುವುದಿಲ್ಲ. ಇನ್ನು ಜಾತಿ ಬಲ ಇಲ್ಲದಿದ್ದರೆ ಶೆಟ್ಟರ್ ಅಧಿಕಾರಕ್ಕೆ ಬರುವುದಿಲ್ಲ. ನಂಜನಗೂಡು ವಿಧಾನ ಸಭೆ ಕ್ಷೇತ್ರದ ಮಧ್ಯಂತರ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಳಿ ಅಭ್ಯರ್ಥಿಯೇ ಇಲ್ಲ. ಬಿಜೆಪಿಯವರು ಶ್ರೀನಿವಾಸ್ ಪ್ರಸಾದ್ ಅವರ ಹಿಂದೆ ಬಿದ್ದರೆ, ಕಾಂಗ್ರೆಸ್ ನವರು ಜೆಡಿಎಸ್ ಅಭ್ಯರ್ಥಿ ಮನೆಗೆ ಬಂದು ಅವರ ಕಾಲಿಗೆ ಬೀಳುತ್ತಿದ್ದಾರೆ’ ಎಂದು ಹೆಚ್ಡಿಕೆ ಟೀಕಾ ಪ್ರಹಾರ ನಡೆಸಿದರು.

ರಾಹುಲ್ ದಾಳಿ ವಿಫಲಗೊಳಿಸಿದ ಶೀಲಾ ದೀಕ್ಷಿತ್

ಸಹರಾ ಡೈರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪ ಮಾಡುವ ಮೂಲಕ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮರ ಸಾರಿದ್ದರು. ಈಗ ರಾಹುಲ್ ಅವರ ದಾಳಿಯನ್ನು ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಶೀಲಾ ದೀಕ್ಷಿತ್ ವಿಫಲಗೊಳಿಸಿದ್ದಾರೆ.

‘ರಾಹುಲ್ ಗಾಂಧಿ ಅವರ ಈ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಈ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಈಗಾಗಲೇ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ವಜಾಗೊಳಿಸಲಾಗಿದೆ. ಆದರೂ ಈ ದಾಖಲೆಯನ್ನು ಮತ್ತೆ ಬಿಡುಗಡೆ ಮಾಡಿರುವುದು ನನಗೆ ಆಶ್ಚರ್ಯ ತಂದಿದೆ’ ಎಂದು ಶೀಲಾ ದೀಕ್ಷಿತ್ ಹೇಳಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿಗಳು ಆಗಿರುವ ಶೀಲಾ ದೀಕ್ಷಿತ್, ಗಾಂಧಿ ಕುಟುಂಬಕ್ಕೆ ಆಪ್ತ ನಾಯಕಿಯೂ ಆಗಿದ್ದಾರೆ. ಇವರಿಂದಲೇ ಈ ರೀತಿಯಾದ ವಿಭಿನ್ನ ಹೇಳಿಕೆ ಬಂದಿರುವುದು ರಾಹುಲ್ ಗಾಂಧಿಗೆ ತೀವ್ರ ಹಿನ್ನಡೆಯಾಗಿದೆ.

ಇಲ್ಲಿ ಶೀಲಾ ದೀಕ್ಷಿತ್ ಅವರು ಈ ವಿರೋಧ ವ್ಯಕ್ತಪಡಿಸಲು ಪ್ರಮುಖ ಕಾರಣವಿದೆ. ಸಹರಾ ಡೈರಿಯಲ್ಲಿ ಮೋದಿಯ ಜತೆ ಆಗಿನ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ಹೆಸರು ಸಹ ಇತ್ತು. ಇಲ್ಲಿ ಮೋದಿ ಅವರ ವಿರುದ್ಧದ ಆರೋಪ ನಿಜ ಎಂದು ಹೇಳುವುದಾದರೆ, ಶೀಲಾ ದೀಕ್ಷಿತ್ ಅವರು ಲಂಚ ಸ್ವೀಕರಿಸಿರುವುದು ನಿಜವಾಗಬೇಕಾಗುತ್ತದೆ. ಈ ಕಾರಣದಿಂದಾಗಿ ಶೀಲಾ ದೀಕ್ಷಿತ್ ರಾಹುಲ್ ಅವರ ಆರೋಪದ ವಿರುದ್ಧವಾಗಿ ಮಾತನಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡರು. ‘ರಾಹುಲ್ ಗಾಂಧಿ ಅವರು ಸತ್ತಿರುವ ಕುದುರೆ ಮೇಲೆ ಸವಾರಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಕುದುರೆ ಸತ್ತಿರುವ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಮರಣ ಪ್ರಮಾಣ ಪತ್ರ ನೀಡಿದೆ’ ಎಂದಿದ್ದಾರೆ.

ಗಾಂಧಿ ಕುಟುಂಬಕ್ಕೆ ನಿರಾಳ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೋಮವಾರ ದೊಡ್ಡ ನಿರಾಳತೆ ಸಿಕ್ಕಿದೆ. ಕಾರಣ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಂಗ್ರೆಸ್ ನಿಂದ ಪಡೆಯುವ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪಟಿಯಾಲಾ ಹೌಸ್ ನ್ಯಾಯಾಲಯ ವಜಾಗೊಳಿಸಿದೆ. ನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಲಾಗಿದೆ. ಈ ನಿರ್ಧಾರದ ನಂತರ ಪ್ರತಿಕ್ರಿಯೆ ನೀಡಿರುವ ಸ್ವಾಮಿ, ‘ನನ್ನ ಕಾನೂನು ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ. ಈ ಹೋರಾಟವನ್ನು ಸುಪ್ರೀಂ ಕೋರ್ಟಿನಲ್ಲಿ ಮುಂದುವರಿಸುತ್ತೇನೆ’ ಎಂದಿದ್ದಾರೆ.

ಮುಸಾ ವಿರುದ್ಧ ಎನ್ಐಎ ಆರೋಪಪಟ್ಟಿ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಶಂಕಿತ ಉಗ್ರ ಮೊಹಮದ್ ಸುಸಿರುದ್ದೀನ್ ಅಲಿಯಾಸ್ ಮುಸಾ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ. ಮುಸಾ ಕೋಲ್ಕತಾದ ಮುಲ್ಲಿಕ್ ಬಜಾರ್ ನಲ್ಲಿ ಚಾರಿಟಿ ಸಂಸ್ಥೆ ಮದರ್ ಹೌಸ್ ಮೇಲೆ ದಾಳಿ ಮಾಡಿ ಬ್ರಿಟನ್, ರಷ್ಯಾ ಹಾಗೂ ಅಮೆರಿಕದ ಪ್ರವಾಸಿಗರನ್ನು ಗುರಿಯಾಗಿಸಿ ಈ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಎನ್ಐಎ ಆರೋಪಪಟ್ಟಿಯಲ್ಲಿ ತಿಳಿಸಿದೆ. ಈತನ ಬಂಧನದ ನಂತರ ಮದರ್ ಹೌಸ್ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಈತನನ್ನು ಜನವರಿ 3ರವರೆಗೆ ತಮ್ಮ ವಶದಲ್ಲಿಟ್ಟುಕೊಂಡು ವಿಚಾರಣೆ ಮುಂದುವರಿಸಲಿದೆ.

ಎಸ್.ಪಿ ತ್ಯಾಗಿಗೆ ಜಾಮೀನು

ಬಹುಕೋಟಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದ ವಾಯು ಸೇನಾ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಅವರಿಗೆ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ₹ 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸೇರಿದಂತೆ ಉತರೆ ಆಧಾರದ ಮೇಲೆ ತ್ಯಾಗಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಇದೇ ವೇಳೆ ಸಾಕ್ಷ್ಯಾಧಾರಗಳಿಗೆ ಯಾವುದೇ ರೀತಿಯ ಹಾನಿ ಮಾಡುವ ಪ್ರಯತ್ನ ಮಾಡಬಾರದು ಎಂದು ತ್ಯಾಗಿ ಅವರಿಗೆ ಕೋರ್ಟ್ ಸೂಚನೆ ನೀಡಿದೆ. ಇನ್ನು ಇತರೆ ಬಂಧಿತ ಆರೋಪಿಗಳಾದ ಸಂಜೀವ್ ತ್ಯಾಗಿ ಹಾಗೂ ವಕೀಲರಾದ ಗೌತಮ್ ಖೈತಾನ್ ಅವರ ಜಾಮೀನು ಅರ್ಜಿಯನ್ನು ಜನವರಿ 4ರಂದು ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ತಿಳಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಐಟಿ ಬಿಟಿಯಲ್ಲೂ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ಬಗ್ಗೆ ಚಿಂತನೆ

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಹಾಗೂ ಐಟಿ ಬಿಟಿ ವಲಯದಲ್ಲೂ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಪ್ರಸ್ತುತ ಕೈಗಾರಿಕೆಗಳಲ್ಲಿ ಎ ಮತ್ತು ಬಿ ಹುದ್ದೆಗಳಿಗೆ ಶೇ.20ರಷ್ಟು, ಸಿ ಮತ್ತು ಡಿ ಹುದ್ದೆಗಳಿಗೆ ಶೇ.50ರಷ್ಟು ಮೀಸಲು ಕರಡು ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಐ ಟಿ ವಲಯಕ್ಕೂ ವಿಸ್ತರಿಸಲಾಗುವುದು’ ಎಂದರು.

Leave a Reply