ಜಡ್ಡು ಹಿಡಿದಿರುವ ಬೇನಾಮಿ ಆಸ್ತಿ ಕಾಯ್ದೆಗೆ ಹೊಸರೂಪ, ಸದ್ಯದಲ್ಲೇ ಮತ್ತೊಂದು ಹೋರಾಟದ ಸೂಚನೆ ಕೊಟ್ಟ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

‘ನೋಟು ಅಮಾನ್ಯ ನಿರ್ಧಾರ ಕಾಳಧನಿಕರು ಹಾಗೂ ಭ್ರಷ್ಟರ ವಿರುದ್ಧದ ಹೋರಾಟದ ಆರಂಭಿಕ ಭಾಗವಷ್ಟೇ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಸಮರ ಸಾಗಲಿದೆ. ಸದ್ಯದಲ್ಲೇ ಬೇನಾಮಿ ಆಸ್ತಿ ಕಾಯ್ದೆಯೂ ಜಾರಿಗೆ ಬರುವುದು…’ ಇದು ಸರ್ಕಾರದ ಮುಂದಿನ ನಡೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಸೂಚನೆ.

ನಿನ್ನೆ ಈ ವರ್ಷದ ಕಡೇಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಪ್ರಧಾನಿ, ಮುಂದಿನ ದಿನಗಳಲ್ಲೂ ತಮ್ಮ ಹೋರಾಟ ಮುಂದುವರಿಸುವುದಾಗಿ ಸುಳಿವು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಸರ್ಕಾರ ಸದ್ಯದಲ್ಲೇ ಬೇನಾಮಿ ಆಸ್ತಿ ಕಾಯ್ದೆಯನ್ನು ಜಾರಿಗೆ ತರಲಿದೆ ಎಂದಿದ್ದಾರೆ. ಈ ಬಗ್ಗೆ ಮೋದಿ ಆಡಿರುವ ಮಾತುಗಳು ಹೀಗಿವೆ…

‘1988ರಲ್ಲೇ ಬೇನಾಮಿ ಆಸ್ತಿ ಕಾಯ್ದೆ ಬಂದಿರುವುದು ನಿಮಗೆ ಗೊತ್ತಿರಬಹುದು. ಆದರೆ ಈ ಕಾಯ್ದೆಯಲ್ಲಿ ಅಗತ್ಯ ನಿಯಮಗಳನ್ನು ರೂಪಿಸಲೂ ಇಲ್ಲ, ಅದನ್ನು ಜಾರಿಗೊಳಿಸುವ ಪ್ರಯತ್ನವೂ ನಡೆಯಲಿಲ್ಲ. ಹೀಗಾಗಿ ಆ ಕಾಯ್ದೆ ಜಡ್ಡು ಹಿಡಿದು ಕೂತಿದೆ. ಈಗ ಅದಕ್ಕೆ ಹೊಸ ರೂಪ ಕೊಟ್ಟು, ಕಾಯ್ದೆಯ ಮಹತ್ವವನ್ನು ಹೆಚ್ಚಿಸಲಾಗಿದೆ. ಸದ್ಯದಲ್ಲೇ ಈ ಕಾಯ್ದೆಯೂ ಜಾರಿಗೆ ಬರಲಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

ಬೇರೆಯವರ ಹೆಸರಿನಲ್ಲಿ ಅಕ್ರಮ ಆಸ್ತಿಯನ್ನು ಸಂಪಾದಿಸುವುದು ಅಕ್ರಮ ಹಾಗೂ ಭ್ರಷ್ಟಾಚಾರದ ಒಂದು ಬಗೆ. ಶೀಘ್ರದಲ್ಲೇ ಬೇನಾಮಿ ಆಸ್ತಿ ದೇಶದ ಆಸ್ತಿಯಾಗಲಿವೆ. ಆ ಮೂಲಕ ಭ್ರಷ್ಟಾಚಾರ ಹಾಗೂ ಕಪ್ಪುಹಣ ವಿರುದ್ಧ ಹೋರಾಡಲು ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲಿದೆ. ಈ ಕಾಯ್ದೆಯಲ್ಲಿ ತಪ್ಪು ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆಯಾಗಲಿದೆ. ಜತೆಗೆ ಆ ಆಸ್ತಿಯ ಮಾರುಕಟ್ಟೆ ಮೌಲ್ಯದ ನಾಲ್ಕನೇ ಒಂದು ಭಾಗದಷ್ಟು ದಂಡವನ್ನು ವಿಧಿಸಲಾಗುವುದು. ಅಷ್ಟೇ ಅಲ್ಲ ಈ ಕಾಯ್ದೆಯಿಂದ ಕಪ್ಪುಹಣವನ್ನು ಬಿಳಿಯಾಗಿಸಲು ಬೇರೆಯವರ ಖಾತೆಯಲ್ಲಿ ಹಾಕಲಾದ ಅಕ್ರಮ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಸುಲಭವಾಗಲಿದೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಇದು ಕೊನೆಯಲ್ಲ ಎಂಬ ಭರವಸೆಯನ್ನು ದೇಶದ ಜನತೆಗೆ ನೀಡುತ್ತೇನೆ. ಈ ಹೋರಾಟ ನಿಲ್ಲುಸುವ ಹಾಗೂ ಹೋರಾಟದಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ. ಈ ಹೋರಾಟ ಪರಿಣಾಮಕಾರಿಯಾಗಲು ಸರ್ಕಾರ ಅಗತ್ಯ ರೀತಿಯಲ್ಲಿ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿದೆ. ಜನರ ಹಿತಾಸಕ್ತಿ ಮನದಲ್ಲಿಟ್ಟುಕೊಂಡು ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರ್ಕಾರ ಎಚ್ಚರವಹಿಸಿದೆ.

ರಾಜಕೀಯ ಪಕ್ಷಗಳು ಎಲ್ಲ ರೀತಿಯ ಅನುಕೂಲಗಳನ್ನು ಅನುಭವಿಸುತ್ತಿದ್ದು, ಇವುಗಳಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂಬ ವದಂತಿಯನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಮಾಹಿತಿ. ಕಾನೂನು ಎಲ್ಲರಿಗೂ ಒಂದೇ, ಅದು ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ರಾಜಕೀಯ ಪಕ್ಷವಾಗಲಿ. ಎಲ್ಲರಿಗೂ ಕಾನೂನು ಒಂದೇ ಆಗಿದ್ದು, ಅದಕ್ಕೆ ಪ್ರತಿಯೊಬ್ಬರು ತಲೆ ಬಾಗಲೇಬೇಕು.’

Leave a Reply