ಎತ್ತಿನಹೊಳೆ ಯೋಜನೆ ಜಾರಿಗೆ ಕ್ರೀಡಾಪಟುಗಳ ಮನವಿ, ಕೇಂದ್ರದ ಅನುದಾನ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಬಿಜೆಪಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಮೋದಿ ವಿರುದ್ಧ ರಾಹುಲ್-ಮಮತಾ ಜಂಟಿ ಸಮರ

ಪ್ರಸಕ್ತ ಸಾಲಿನ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರಿಯ ಪತ್ರಿಕಾ ಛಾಯಾಗ್ರಾಹಕ ಜಿ.ಮೋಹನ್ ಅವರಿಗೆ ಪ್ರದಾನ ಮಾಡಿದರು. ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ಅವರು ಇದ್ದರು.

ಡಿಜಿಟಲ್ ಕನ್ನಡ ಟೀಮ್:

ಎತ್ತಿನಹೊಳೆ ಯೋಜನೆ ಜಾರಿಗೆ ಕ್ರೀಡಾಪಟುಗಳ ಒತ್ತಾಯ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳ ಕ್ರೀಡಾಪಟುಗಳು ಎತ್ತಿನಹೊಳೆ ಯೋಜನೆ ಜಾರಿಗೊಳಿಸಬೇಕು ಎಂದು ಕರಾವಳಿ ಭಾಗದ ಸಚಿವರಾದ ಪ್ರಮೋದ್ ಮಧ್ವರಾಜ್ ಅವರನ್ನು ಮಂಗಳವಾರ ಒತ್ತಾಯಿಸಿದರು.

ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ವಿಕಾಸಸೌಧದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ರಾಜ್ಯದ ಕ್ರೀಡಾಪಟುಗಳು ಸಚಿವರಲ್ಲಿ ಯೋಜನೆ ಜಾರಿ ಬಗ್ಗೆ ಮನವಿ ಮಾಡಿದರು. ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ರೀಡೆ, ಮೀನುಗಾರಿಕೆ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಈ ಯೋಜನೆ ಜಾರಿಯಾಗುವಂತೆ ಮಾಡಬೇಕು. ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾದ ಸಂದರ್ಭದಲ್ಲಿ ಸಮುದ್ರ ಸೇರುವ ನೀರನ್ನು ಬರ ಪೀಡಿತ ಜಿಲ್ಲೆಗಳಿಗೆ ದೊರೆಯುವಂತೆ ಮಾಡಬೇಕು ಎಂದರು. ಜತೆಗೆ ಕ್ರೀಡಾಪಟುಗಳ ತರಬೇತಿಗೆಗಾಗಿ ಸರ್ಕಾರ ಕ್ರೀಡಾ ಇಲಾಖೆ ಮೂಲಕ ಈಗಾಗಲೇ ನೀಡುತ್ತಿರುವ ಆರ್ಥಿಕ ಸಹಾಯವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ

ರಾಜ್ಯದಲ್ಲಿ ಬರ ಎದುರಾಗಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಸರ್ಕಾರದಿಂದ ನೀಡುತ್ತಿರುವ ಪ್ರೋತ್ಸಾಹ ಧನದ ಜತೆಗೆ ಜಿಲ್ಲಾ ಒಕ್ಕೂಟಗಳಿಂದಲೂ ಪ್ರತಿ ಲೀಟರಿಗೆ ₹ 1ರಿಂದ 2 ಪ್ರೋತ್ಸಾಹ ಧನ ನೀಡಲು ಸೂಚನೆ ನೀಡಲಾಗಿದೆ. ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು, ‘ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜತೆಗೆ ಜಿಲ್ಲಾ ಒಕ್ಕೂಟಗಳಿಂದಲೂ ಸಹಾಯ ಧನ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 9 ಲಕ್ಷ ಹಾಲು ಉತ್ಪಾದಕರಿದ್ದು, ನಿತ್ಯ 65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ಸರ್ಕಾರ ನೀಡಬೇಕಿದ್ದ ₹ 1016 ಕೋಟಿ ಮೊತ್ತವನ್ನು ಬ್ಯಾಂಕ್ ಗಳ ಮೂಲಕ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಬರ ಹಿನ್ನೆಲೆಯಲ್ಲಿ 30 ಗೋಶಾಲೆ ತೆರೆಯಲಾಗಿದ್ದು, ಪ್ರತಿ ಗೋಶಾಲೆಯಲ್ಲಿ ಅಗತ್ಯ ಮೇವು ದಾಸ್ತಾನು ಮಾಡಲಾಗಿದೆ’ ಎಂದರು.

ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ವಿವಿಧ ಕಾರ್ಯಕ್ರಮಗಳಿಗಾಗಿ ಬಂದಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಅರವಿಂದ ಲಿಂಬಾವಳಿ, ‘ಮುಖ್ಯಮತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ಸಚಿವರು ಹಾಗೂ ನಾಯಕರು ದಿನ ನಿತ್ಯ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಮಾಡುತ್ತಲೇ ಇವೆ. ಕೇಂದ್ರದ ವಿರುದ್ಧ ದೂರುವ ಬದಲು ಇದೇ ಗಮನವನ್ನು ಅಭಿವೃದ್ಧಿ ಕಡೆ ನೀಡಬೇಕು. ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದರಲ್ಲೇ ಕಾಲ ಕಳೆಯಬಾರದು’ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಶತಮಾನೋತ್ಸವ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರಿ. ಇದೇವೇಳೆ ಕಸಾಪ ಅಧ್ಯಕ್ಷ ಮನು ಬಳಿಗಾರ್, ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ರಾಜಶೇಖರ ಹತಗುಂದಿ ಸಹ ಉಪಸ್ಥಿತರಿದ್ದರು.

ಐಟಿ ದಾಳಿಯೇ ಸಂವಿಧಾನಿಕ ಎಂದ ಮೋಹನ್ ರಾವ್

ಅಕ್ರಮ ಹಣ ಇಟ್ಟುಕೊಂಡು ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ತಮಿಳುನಾಡು ಮಾಜಿ ಮುಖ್ಯ ಕಾರ್ಯದರ್ಶಿ ಪಿ.ರಾಮ್ ಮೋಹನ್ ರಾವ್, ಈಗ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಮೋಹನ್, ‘ನನ್ನ ವಿರುದ್ಧ ಮಾಡಲಾಗಿರುವ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯು ಸಂವಿಧಾನ ಬಾಹೀರ. ನಾನು ಈಗಲೂ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿಯೇ ಇದ್ದೇನೆ. ಏಕಾಏಕಿ ಸಿಆರ್ ಪಿಎಫ್ ಸಿಬ್ಬಂದಿ ನನ್ನ ಮನೆಯನ್ನು ಪ್ರವಶಿಸಲು ಹೇಗೆ ಸಾಧ್ಯ? ಅವರು ನನ್ನನ್ನು ಏಕೆ ವರ್ಗಾವಣೆ ಮಾಡಲಿಲ್ಲ? ಇದು 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ಸಿಕ್ಕ ಗೌರವವೇ. ಇದೊಂದು ರಾಜಕೀಯ ಪಿತೂರಿ. ನನ್ನನ್ನು ಸತತ 26 ಗಂಟೆಗಳ ಕಾಲ ಗೃಹ ಬಂಧನದಲ್ಲಿಡಲಾಗಿತ್ತು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಯಾವುದೇ ರೀತಿಯ ಗೌರವ ನೀಡುತ್ತಿಲ್ಲ. ನನ್ನ ಮನೆಯ ಮೇಲೆ ದಾಳಿ ಮಾಡಲು ಅವರ ಬಳಿ ವಾರೆಂಟ್ ಇರಲಿಲ್ಲ. ವಾರೆಂಟ್ ನಲ್ಲಿ ನನ್ನ ಮಗನ ಹೆಸರಿತ್ತೇ ವಿನಃ ನನ್ನ ಹೆಸರಿರಲಿಲ್ಲ. ನನ್ನ ಬೆಂಬಲಕ್ಕೆ ನಿಂತಿರುವ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳು’ ಎಂದರು.

ಕೇಂದ್ರದ ವಿರುದ್ಧ ವಿಪಕ್ಷಗಳ ದಾಳಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಟ್ಟಿಗೆ ಸೇರಿ ನೋಟು ಅಮಾನ್ಯ ನಿರ್ಧಾರದ ವಿರುದ್ಧ ಸಮರ ಸಾರಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ಸರ್ಕಾರ ನಿರ್ಧಾರವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಸಭೆ ನಡೆಯಿತು. ಈ ಸಭೆಯಿಂದ ಜೆಡಿಯು, ಎನ್ ಸಿಪಿ ಹಾಗೂ ಸಮಾಜವಾದಿ ಪಕ್ಷಗಳು ದೂರ ಉಳಿದಿದ್ದು ಕೂತೂಹಲಕ್ಕೆ ಕಾರಣವಾಗಿತ್ತು. ಉಳಿದಂತೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಎಂಟು ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.

ಈ ಸಭೆಯ ನಂತರ ಮಾತನಾಡಿದ ರಾಹುಲ್ ಗಾಂಧಿ, ‘ನರೇಂದ್ರ ಮೋದಿ ಅವರು 50 ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದ್ದರು. ಆದರೆ, ಆರಂಭದಲ್ಲಿ ಪರಿಸ್ಥಿತಿ ಹೇಗಿತ್ತೊ ಈಗಲೂ ಹಾಗೇ ಇದೆ. ಈ ಬಗ್ಗೆ ಅವರು ಏನನ್ನು ಹೇಳುತ್ತಿಲ್ಲ. ಇನ್ನು ಅವರ ವಿರುದ್ಧ ಲಂಚದ ಆರೋಪ ಮಾಡಿದೆ. ಆ ಬಗ್ಗೆಯೂ ಅವರು ಉತ್ತರಿಸುತ್ತಿಲ್ಲ. ದೇಶದ ಜನತೆಗೆ ಈ ಬಗ್ಗೆ ಅವರು ಉತ್ತರಿಸಬೇಕು’ ಎಂದರು.

ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, ‘ಪ್ರಧಾನಿ ಮೋದಿ ಅವರು ಅಚ್ಚೆ ದಿನ್ ಬರುತ್ತದೆ ಎಂದು ಹೇಳಿದ್ದರು. ಇದೇನಾ ಅಚ್ಚೆ ದಿನ ಎಂದರೆ. ಜನರ ಬಳಿ ಸಣ್ಣ ಪುಟ್ಟ ವಸ್ತು ಖರೀದಿಸಲು ಹಣವಿಲ್ಲದಂತಾಗಿದೆ. ಈ 50 ದಿನಗಳಲ್ಲಿ ದೇಶ 20 ವರ್ಷ ಹಿಂದಕ್ಕೆ ಹೋಗಿದೆ. ದೇಶದ ಅಭಿವೃದ್ಧಿ ಮಟ್ಟ ಕುಸಿಯುತ್ತಿದೆ. ದೇಶದಲ್ಲಿ ಕೇವಲ ಎಮರ್ಜೆನ್ಸಿ ಇಲ್ಲ, ಸೂಪರ್ ಎಮರ್ಜೆನ್ಸಿ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 30ರ ನಂತರವೂ ಜನರು ಸಂಕಷ್ಟ ಅನುಭವಿಸಬೇಕಿದೆ’ ಎಂದು ಕಿಡಿಕಾರಿದರು.

ಸರ್ಕಾರದ ಜತೆ ನಿಲ್ಲುವಂತೆ ಮೋದಿ ಮನವಿ

ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ತೆಗೆದುಕೊಳ್ಳಲಾದ ನೋಟು ಅಮಾನ್ಯ ನಿರ್ಧಾರಕ್ಕೆ ಬೆಂಬಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಉತ್ತಾರಾಖಂಡದಲ್ಲಿ ಕರೆ ಕೊಟ್ಟಿದ್ದಾರೆ. ಡೆಹ್ರಾಡೂನ್ ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಈ ವೇಳೆ ಅವರು ಹೇಳಿದ ಮಾತುಗಳು ಹೀಗಿತ್ತು…‘ಈ ಹಿಂದೆ ದೇಶವನ್ನು ಚಿನ್ನದ ಪಕ್ಷಿಗೆ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ವ್ಯತಿರಿಕ್ತವಾಗಿ ಬದಲಾಗಿದೆ. ಈ ಪರ್ವತಗಳ ರಾಜ್ಯ ಅಭಿವೃದ್ಧಿಯ ಕಡೆ ಸಾಗಬೇಕಾದರೆ ಅದಕ್ಕೆ ಎರಡು ರೀತಿಯ ಯಂತ್ರಗಳ ಅಗತ್ಯವಿದೆ. ದೆಹಲಿಯಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಈ ಎರಡು ಯಂತ್ರಗಳು ಒಟ್ಟಿಗೆ ಸಾಗುವಂತೆ ಮಾಡಬೇಕಿದೆ. ದೇಶದ ಜನತೆ 2014ರ ಚುನಾವಣೆಯಲ್ಲಿ ನನ್ನನ್ನು ಕೇವಲ ರೆಡ್ ಟೇಪ್ ಕಟ್ ಮಾಡಲು ಹಾಗೂ ಕಾರ್ಯಕ್ರಮಗಳಲ್ಲಿ ದೀಪ ಬೆಳಗಲು ಮಾತ್ರ ಆಯ್ಕೆ ಮಾಡಿಲ್ಲ. ಭ್ರಷ್ಟಾಚಾರ ವಿರುದ್ಧ ಹೋರಾಡಲು ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಆ ನಿಟ್ಟಿನಲ್ಲಿ ಹೋರಾಡುತ್ತಿದ್ದು, ನಿಮ್ಮ ಬೆಂಬಲದ ಅಗತ್ಯವಿದೆ. ಆ ಮೂಲಕ ನಾನು ಮಾನವ ಕಳ್ಳಸಾಗಾಣೆ, ಡ್ರಗ್ಸ್ ಮಾಫಿಯಾ ಭೂಗತ ಲೋಕವನ್ನು ಹತ್ತಿಕ್ಕಲು ನೆರವಾಗುತ್ತದೆ’ ಎಂಬ ಭರವಸೆಗಳನ್ನು ನೀಡಿದರು.

Leave a Reply