ಕಡೆಗಾಲದಲ್ಲಿ ಒಬಾಮಾ ದುರ್ಬುದ್ಧಿ..? ಟ್ರಂಪ್ ಆಗಮನದ ನಂತರ ಅಮೆರಿಕ-ಇಸ್ರೇಲ್ ಸ್ನೇಹಶುದ್ಧಿ?

ಡಿಜಿಟಲ್ ಕನ್ನಡ ವಿಶೇಷ:

ಇದನ್ನೇನು ವಿದಾಯ ಕಾಲದ ಒಬಾಮಾ ದುರ್ಬುದ್ಧಿ ಎನ್ನೋಣವೇ?

ಮುಸ್ಲಿಂ ತೀವ್ರವಾದಿಗಳೊಂದಿಗೆ ಅನವರತ ಸೆಣೆಸುತ್ತಲೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಇಸ್ರೇಲಿಗೆ ಅಮೆರಿಕ ಯಾವತ್ತೂ ಆತುಕೊಂಡುಬಂದಿತ್ತು. ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ಸಂಘರ್ಷದಲ್ಲಿ ಯಾರು ಸರಿ ಎಂಬ ವಾದ-ಪ್ರತಿವಾದಗಳು ಮುಗಿಯದಂತೆ ಬೆಳೆದುಕೊಂಡಿರುವುದು ನಿಜ. ಆದರೆ, ಯಹೂದಿಗಳಿಗೆ ಇಸ್ರೇಲ್ ಬಿಟ್ಟರೆ ಜಗತ್ತಿನಲ್ಲಿ ಬೇರೆ ಜಾಗ ಒದಗುವುದು ಕಷ್ಟ ಅಂತ ಚರಿತ್ರೆ ನಿರೂಪಿಸಿದೆ. ಹಾಗೆಂದೇ ಇಸ್ರೇಲಿಗಳು ಆಕ್ರಮಕ ಧೋರಣೆಯೊಂದಿಗೆ ಬದುಕುವವರು. ಇದನ್ನು ತಪ್ಪೆನ್ನುವವರಿಗೆ ಪರ್ಯಾಯ ಸೂಚಿಸುವ ಶಕ್ತಿ ಇಲ್ಲ ಎಂಬುದು ಅಷ್ಟೇ ವಾಸ್ತವ.

ಈಗ ಆಗಿರುವುದೇನು?

ಪ್ಯಾಲಸ್ತೀನ್ ವಿವಾದಿತ ಪ್ರದೇಶದಲ್ಲಿ ಗುಡಾರಗಳನ್ನು ನಿರ್ಮಿಸುತ್ತಿರುವ ಇಸ್ರೇಲ್ ಕ್ರಮಕ್ಕೆ ವಿರುದ್ಧವಾಗಿ ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದು ಅಂಗೀಕಾರವಾಗಿದೆ. ಇಸ್ರೇಲ್ ನೀತಿಯನ್ನು ವಿರೋಧಿಸಿ 1979ರ ನಂತರ ಅಂಗೀಕಾರವಾಗುತ್ತಿರುವ ಮೊದಲ ನಿರ್ಣಯ ಇದು. ಅಂತಾರಾಷ್ಟ್ರೀಯವಾಗಿ ಇಸ್ರೇಲ್ ಮತ್ತು ಸುತ್ತಲಿನ ರಾಷ್ಟ್ರಗಳೊಂದಿಗೆ ಅಂತಿಮ ಒಡಂಬಡಿಕೆಯಿನ್ನೂ ಪೂರ್ಣವಾಗುವುದಕ್ಕೆ ಮೊದಲು ತನ್ನ ಮಧ್ಯಪ್ರವೇಶವಿಲ್ಲ ಎಂಬ ನಿಲುವಿನಿಂದ ಅಮೆರಿಕ ಹಿಂದೆ ಸರಿದಿದ್ದೇಕೆ ಎಂಬುದು ಇಸ್ರೇಲಿನ ಆಕ್ಷೇಪ. ವಿಶ್ವಸಂಸ್ಥೆಯು ಇಸ್ರೇಲಿನ ವಿರುದ್ಧ ನಿರ್ಣಯ ಅಂಗೀಕರಿಸುವಾಗ ಅಮೆರಿಕದ ಪ್ರತಿನಿಧಿಗಳು ಸಭೆಯಿಂದ ಹೊರಗುಳಿದು ಈ ನಿರ್ಣಯ ಬರುವುದಕ್ಕೆ ಪರೋಕ್ಷ ಸಹಕಾರವಿತ್ತರು.

ತನ್ನ ಹಿತಾಸಕ್ತಿಗೆ ವಿರುದ್ಧವಾಗಿ ನಿಂತವರು ಅಮೆರಿಕನ್ನರಾದರೇನು, ವಿಶ್ವದ ಇನ್ಯಾವ ಶಕ್ತಿ ಆದರೇನು? ಅಮೆರಿಕ ರಾಯಭಾರಿಯನ್ನು ಕರೆಸಿಕೊಂಡ ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ತಮ್ಮ ಆಕ್ಷೇಪವನ್ನು ಖಡಾಖಡಿಯಾಗಿಯೇ ದಾಖಲಿಸಿದರು. ಇಸ್ರೇಲ್ ವಿರೋಧಿ ನಿರ್ಣಯದಲ್ಲಿ ಪಾಲ್ಗೊಂಡ ಇನ್ನೂ 10 ದೇಶಗಳ ಪ್ರತಿನಿಧಿಗಳನ್ನೂ ಕರೆಸಿಕೊಂಡು ಖಂಡಿಸುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡಿದ್ದಾಗಿದೆ.

ಪೂರ್ವ ಜೆರುಸಲೇಂ ಮತ್ತು ಪ್ಯಾಲಸ್ತೀನಿನ ಭಾಗಗಳಲ್ಲಿ ಇಸ್ರೇಲ್ ಗುಡಾರ ನಿರ್ಮಿಸುವುದನ್ನು ತಕ್ಷಣಕ್ಕೆ ಕೈಬಿಡಬೇಕು ಎನ್ನುತ್ತದೆ ವಿಶ್ವಸಂಸ್ಥೆ ನಿರ್ಣಯ. ‘ಇಂಥದೊಂದು ನಿರ್ಣಯ ಬರುವುದಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಗೃಹ ಕಾರ್ಯದರ್ಶಿ ಜಾನ್ ಕೆರಿ ಅವರೇ ಕಾರಣ’ ಅಂತ ಮುಲಾಜಿಲ್ಲದೇ ಗುಡುಗಿದ್ದಾರೆ ನೆತನ್ಯಾಹು. ‘ಯಹೂದಿಗಳ ಪವಿತ್ರ ಹಬ್ಬ ಹಾನುಕ್ಕಾಗೆ ಹಾರೈಸಿದ ರಾಷ್ಟ್ರಗಳೇ ಆ ಹಬ್ಬ ನಡೆಯುವ ಪ್ರದೇಶ ಇಸ್ರೇಲಿಗಲ್ಲದೇ ಪ್ಯಾಲಸ್ತೀನಿಗೆ ಸೇರಿದ್ದು ಅಂತ ನಿರ್ಣಯ ಸ್ವೀಕರಿಸುತ್ತಾರಲ್ಲ… ಇದನ್ನು ಹೇಗೆ ಒಪ್ಪುವುದಕ್ಕೆ ಸಾಧ್ಯ?’ ಎಂದಿದ್ದಾರೆ ನೆತನ್ಯಾಹು.

ಟ್ರಂಪ್ ಗೆಲ್ಲುವುದಕ್ಕೆ ರಷ್ಯಾ ಕಾರಣ ಎಂದೆಲ್ಲ ಬಡಬಡಿಸಿದ್ದ ಬರಾಕ್ ಒಬಾಮಾ, ತಾವು ಎದ್ದುಹೋಗುವ ಕಾಲಕ್ಕೆ ಅಮೆರಿಕದ ಇಸ್ರೇಲ್ ಸ್ನೇಹ ನೀತಿಯನ್ನೂ ಕದಡಿಹೋಗಿದ್ದಾರೆ. ಆದರೆ ಜನವರಿ 20ರ ನಂತರ ಶ್ವೇತಭವನ ಅಲಂಕರಿಸಲಿರುವ ಡೊನಾಲ್ಡ್ ಟ್ರಂಪ್ ಮಾತ್ರ ಈ ವಿಷಯದಲ್ಲಿ ವಿರುದ್ಧ ನಿಲುವನ್ನೇ ಹೊಂದಿರುವ ವ್ಯಕ್ತಿ. ಇಸ್ರೇಲಿಗೆ ವಿರುದ್ಧವಾಗಿ ವಿಶ್ವಸಂಸ್ಥೆ ನಿರ್ಣಯ ಬರಬಾರದು ಎಂಬ ಅಭಿಪ್ರಾಯವನ್ನು ಟ್ರಂಪ್ ತಮ್ಮ ಚುನಾವಣಾ ಭಾಷಣದಲ್ಲೇ ವ್ಯಕ್ತಪಡಿಸಿದ್ದರೆಂಬುದು ಗಮನಾರ್ಹ. ಅಲ್ಲದೇ ವಿಶ್ವಸಂಸ್ಥೆಯ ಕುರಿತೂ ಡೊನಾಲ್ಡ್ ಟ್ರಂಪ್ ಗೆ ಅಂಥ ಆದರವೇನಿಲ್ಲ. ಕೆಲವೇ ಪ್ರತಿಷ್ಠಿತರ ಕ್ಲಬ್ ಅದಷ್ಟೆ ಎಂದು ವಿಶ್ವಸಂಸ್ಥೆಯನ್ನು ಗೇಲಿ ಮಾಡಿದ್ದಾರೆ.

ಇದೇನೇ ಇದ್ದರೂ ಟ್ರಂಪ್ ಅಧ್ಯಕ್ಷರಾಗುವುದಕ್ಕೆ ಮುನ್ನ ಪಾಸಾಗಿ ಬಿಟ್ಟಿರುವ ಈ ನಿರ್ಣಯದ ಪರಿಣಾಮ ಏನಾಗುತ್ತದೆ? ವಿಶ್ವಸಂಸ್ಥೆ ನಿರ್ಣಯ ಹೇಳುವ ಪ್ರಕಾರ ಇಸ್ರೇಲ್ ಅದನ್ನು ಪಾಲಿಸದಿದ್ದರೆ, ಆ ಪ್ರದೇಶಗಳಲ್ಲಿ ಬಿಡಾರ ಹೂಡುವ ಜನರ ವಸ್ತು- ಸೇವೆಗಳನ್ನು ಖರೀದಿಸದಂತೆ ಹಾಗೂ ಆ ನಿರ್ದಿಷ್ಟ ಪ್ರದೇಶಕ್ಕೆ ಆರ್ಥಿಕ ಸಹಕಾರ ನೀಡದೇ ಇರುವ ಮಾರ್ಗವನ್ನು ಸದಸ್ಯ ರಾಷ್ಟ್ರಗಳು ತುಳಿಯಬಹುದಾಗಿದೆ.

ಆದರೆ, ಇನ್ನೇನು ತಿಂಗಳೊಳಗೆ ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿ ಡೊನಾಲ್ಡ್ ಟ್ರಂಪ್ ಆಗಮಿಸಿಬಿಡುವುದರಿಂದ ಈ ನಿರ್ಣಯ ಧಮ್ಮು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಅಲ್ಲಿಗೆ ಒಬಾಮಾ ಆಡಳಿತದ ಕೊನೆಕ್ಷಣದ ಹತಾಶ ಪ್ರಯತ್ನಗಳ ಸಾಲಿಗೆ ಇದೂ ಸೇರುತ್ತದೆ.

ಅಂದಹಾಗೆ, ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಸುಭಗ ಕೆಲಸ ಮಾಡುತ್ತಾರೆ ಎಂದಲ್ಲ. ಆದರೆ, ಜಾಗತಿಕವಾಗಿ ಅಮೆರಿಕದ ಹಲವು ನೀತಿಗಳು ಭಾರಿ ಬದಲಾವಣೆ ಕಾಣಲಿವೆ ಎಂಬುದು ನಿಸ್ಸಂಶಯ. ಹಾಗೆಂದೇ ಐಎಸ್ಐಎಸ್, ರಷ್ಯಾ ಜತೆಗಿನ ಸ್ನೇಹ, ಇಸ್ರೇಲ್ ಜತೆ ಮತ್ತೆ ಬಿಗಿ ಆಲಿಂಗನ… ಹೀಗೆ ಹಲವು ನಿರೀಕ್ಷಿತ ಕಾರ್ಯಕ್ರಮಗಳು ಹೊಸ ವರ್ಷದ ಕ್ಯಾಲೆಂಡರಿನಲ್ಲಿವೆ ಅಂದುಕೊಳ್ಳಬಹುದು.

Leave a Reply