ಬ್ಯಾಂಕ್ ಖಾತೆಗೆ ಅಪಾರ ಹಣ ಹಾಕಿದಾಗ ಪ್ರಶ್ನೆ ಮಾಡಿದರೆ ಅದು ದಲಿತ ವಿರೋಧಿ… ಇದು ಮಾಯಾವತಿ ತರ್ಕ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಘನತೆಗೆ ಧಕ್ಕೆ ತರಲು ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ಇದರೊಂದಿಗೆ ಬಿಜೆಪಿಯ ದಲಿತ ವಿರೋಧಿ ನೀತಿ ಬಹಿರಂಗವಾಗಿದೆ… ಇದು ತಮ್ಮ ಪಕ್ಷದ ಠೇವಣಿ ಮತ್ತು ತಮ್ಮ ಸಹೋದರನ ಅನಧಿಕೃತ ಬ್ಯಾಂಕ್ ಠೇವಣಿ ಕುರಿತಂತೆ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನೀಡಿರುವ ಉತ್ತರ.

ಹೌದು, ನೋಟು ಅಮಾನ್ಯದ ನಂತರ ಬಹುಜನ ಸಮಾಜವಾದಿ ಪಕ್ಷದ ಬ್ಯಾಂಕ್ ಖಾತೆಗೆ ₹ 104 ಕೋಟಿ ಹಣ ಠೇವಣಿಯಾಗಿದೆ. ಮತ್ತೊಂದೆಡೆ ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಅವರ ಖಾತೆಗೆ ₹ 1.43 ಕೋಟಿ ಹಣ ಠೇವಣಿಯಾಗಿದೆ. ನೋಟು ಅಮಾನ್ಯ ನಿರ್ಧಾರದ ನಂತರ ಬ್ಯಾಂಕ್ ವ್ಯವಹಾರಗಳ ಮೇಲೆ ತೆರಿಗೆ ಇಲಾಖೆ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಹದ್ದಿನ ಕಣ್ಣಿಟ್ಟಿದೆ. ಈ ಎರಡು ಠೇವಣಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಆರಂಭಿಸಿದೆ. ಈ ತನಿಖೆಯ ಕ್ರಮವನ್ನು ಈಗ ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಈ ವಿಚಾರ ಕೇವಲ ರಾಜಕೀಯ ಬಣ್ಣ ಪಡೆದಿಲ್ಲ, ಅದರ ಜತೆಗೆ ದಲಿತ ವಿರೋಧಿ ಬಣ್ಣವನ್ನು ಮಾಯಾವತಿ ಬಳಿದಿದ್ದಾರೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ ರಾಜಕೀಯ ಪಕ್ಷಗಳ ದೇಣಿಗೆ ತೆರಿಗೆ ವಿನಾಯಿತಿ ಹೊಂದಿದ್ದರೂ, ₹ 20 ಸಾವಿರಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಮೂಲಕವೇ ಪಡೆಯಬೇಕು. ಇಲ್ಲವಾದರೆ, ಆ ದೇಣಿಗೆ ಅಥವಾ ಆದಾಯಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಹೊಂದಿರಬೇಕು. ಈ ರಾಜಕೀಯ ಪಕ್ಷಗಳ ಖಾತೆ ಕಾಲ ಕಾಲಕ್ಕೆ ಲೆಕ್ಕ ಪರಿಶೋಧನೆ ಆಗಿರಬೇಕು.

ಈ ಎಲ್ಲ ನಿಯಮಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಬಿಎಸ್ಪಿ ಪಕ್ಷದ ಖಾತೆಗೆ ಠೇವಣಿಯಾದ ದೊಡ್ಡ ಮೊತ್ತದ ಕುರಿತು ಮುಂದಾಗಿದೆ. ಮಂಗಳವಾರ ಈ ತನಿಖೆಯ ಕ್ರಮವನ್ನು ವಿರೋಧಿಸಿದ ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದಿಷ್ಟು…

‘ನಮ್ಮ ಪಕ್ಷದ ಆದಾಯದ ಪ್ರತಿಯೊಂದು ಪೈಸೆಗೂ ನಾನು ಲೆಕ್ಕ ಕೊಡುತ್ತೇನೆ. ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಕ್ಷದ ಘನತೆ ಹಾಳು ಮಾಡಲು ಈ ರೀತಿಯಾದ ಸಂಚು ರೂಪಿಸುತ್ತಿದೆ. ಇದೊಂದು ರಾಜಕೀಯ ಕುತಂತ್ರವಾಗಿದೆ. ಈ ಹಣವನ್ನು ಕಾನೂನು ಪ್ರಕಾರವಾಗಿಯೇ ಠೇವಣಿ ಮಾಡಲಾಗಿದೆ. ಆದರೆ ಬಿಜೆಪಿ ಪಕ್ಷ ತನ್ನ ಬ್ಯಾಂಕಿನಲ್ಲಿ ಠೇವಣಿಯಾದ ಙಮದ ಬಗ್ಗೆ ಲೆಕ್ಕ ಕೊಡಲಿ.

ಪ್ರಧಾನ ಮಂತ್ರಿಗಳಿಗೆ ನಿಜವಾಗಲೂ ಪ್ರಾಮಾಣಿಕತೆ ಇದ್ದರೆ, ನೋಟು ಅಮಾನ್ಯ ನಿರ್ಧಾರಕ್ಕೂ ಮುನ್ನ 10 ತಿಂಗಳ ಕಾಲ ತಮ್ಮ ಪಕ್ಷದ ಖಾತೆಗೆ ಜಮಾ ಆದ ಆದಾಯದ ಬಗ್ಗೆ ಲೆಕ್ಕ ಕೊಡಲಿ. ಎಲ್ಲವೂ ಜನರ ಮುಂದೆ ಬರಲಿ. ಬಿಜೆಪಿ ಸರ್ಕಾರ ರಾಜಕೀಯ ಕುತಂತ್ರ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಕೇಂದ್ರದ ದಲಿತ ವಿರೋಧಿ ನೀತಿಯೂ ಜನರಿಗೆ ಗೊತ್ತಾಗಿದೆ.

ಉತ್ತರ ಪ್ರದೇಶ ಜನರಿಗೆ ಬಹುಜನ ಸಮಾಜವಾದಿ ಪಕ್ಷದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ಸರ್ಕಾರದ ಈ ನಿರ್ಧಾರದಿಂದ ನಮ್ಮ ಪಕ್ಷದ ಬಗ್ಗೆ ಮತ್ತಷ್ಟು ನಂಬಿಕೆ ಹೆಚ್ಚಿದೆ. ಬಿಜೆಪಿ ಅವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.’

Leave a Reply