ನಕ್ಸಲರ ಶರಣಾಗತಿಯಲ್ಲಿ ಮೂರುಪಟ್ಟು ಹೆಚ್ಚಳ, ಮುಗಿಯಿತೇ ಮಾವೋ ಹಿಂಸಾಚಾರಿಗಳ ಕಾಲ?

ಡಿಜಿಟಲ್ ಕನ್ನಡ ಟೀಮ್:

ಈ ವರ್ಷ ದೇಶದಲ್ಲಿ ನಕ್ಸಲರ ಶರಣಾಗತಿ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ! ಅದೇ ರೀತಿ ಮಾವೋವಾದಿಗಳ ದಾಳಿಯಲ್ಲಿ ಸತ್ತವರ ಸಂಖ್ಯೆಯೂ ಏರಿಕೆಯಾಗಿದೆ… ಇವು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿರುವ ಮಾಹಿತಿ.

ಡಿಸೆಂಬರ್ 15ರವರೆಗಿನ ಅಂಕಿ ಅಂಶವನ್ನು ಕೇಂದ್ರ ಗೃಹಸಚಿವಾಲಯ ಬಿಡುಗಡೆ ಮಾಡಿದೆ. ಕಳೆದ ವರ್ಷ 570 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದರು. ಆದರೆ ಈ ವರ್ಷ 1,420 ನಕ್ಸಲರು ಶರಣಾಗಿದ್ದಾರೆ. ಅದರೊಂದಿಗೆ ನಕ್ಸಲರ ಶರಣಾಗತಿಯ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಇನ್ನು  2013ರಲ್ಲಿ 282 ಹಾಗೂ 2014ರಲ್ಲಿ 670 ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವುದು ಸಂತೋಷದ ವಿಚಾರವಾದರೆ, ಮತ್ತೊಂದೆಡೆ ಮಾವೋವಾದಿಗಳ ದಾಳಿಯಲ್ಲಿ ಸತ್ತವರ ಸಂಖ್ಯೆಯೂ ಹೆಚ್ಚಾಗಿರುವುದು ಬೇಸರದ ಸಂಗತಿಯಾಗಿದೆ.

ಈ ವರ್ಷ ನಕ್ಸಲರ ದಾಳಿಯಲ್ಲಿ ಒಟ್ಟು 202 ನಾಗರೀಕರು ಸಾವನ್ನಪ್ಪಿದ್ದು, ಆ ಪೈಕಿ 115 ಮಂದಿ ಪೊಲೀಸರಿಗೆ ನಕ್ಸಲರ ಬಗ್ಗೆ ಮಾಹಿತಿ ನೀಡುತ್ತಿದ್ದವರಾಗಿದ್ದಾರೆ. ಕಳೆದ ವರ್ಷ ನಕ್ಸಲರ ದಾಳಿಗೆ ಬಲಿಯಾದವರ ಸಂಖ್ಯೆ 156 ಮಂದಿ. ಆ ಪೈಕಿ 85 ಮಂದಿ ಪೊಲೀಸರಿಗೆ ಮಾಹಿತಿದಾರರಾಗಿದ್ದವರು. ಇನ್ನು ನಕ್ಸಲರ ಹತ್ಯೆಯ ಸಂಖ್ಯೆಯು ಏರಿಕೆಯಾಗಿದ್ದು, ಈ ವರ್ಷ 220 ನಕ್ಸಲರನ್ನು ಭದ್ರತಾ ಸಿಬ್ಬಂದಿ ತಮ್ಮ ಕಾರ್ಯಾಚರಣೆ ವೇಳೆ ಹತ್ಯೆ ಮಾಡಿದ್ದಾರೆ. ಕಳೆದ ವರ್ಷ ನಕ್ಸಲರ ಹತ್ಯೆ ಪ್ರಮಾಣ 89 ಇತ್ತು. ನಕ್ಸಲರ ಬಂಧನದಲ್ಲೂ ಏರಿಕೆಯಾಗಿದ್ದು, ಈ ಬಾರಿ 1,719 ನಕ್ಸಲರನ್ನು ಬಂಧಿಸಲಾಗಿದ್ದು, ಕಳೆದ ವರ್ಷ 1,668 ನಕ್ಸಲರನ್ನು ಬಂಧಿಸಲಾಗಿತ್ತು.

ಇನ್ನು ನಕ್ಸಲರ ಕೃತ್ಯದ ಪ್ರಮಾಣದಲ್ಲಿ ಈ ವರ್ಷ ತಗ್ಗಿದ್ದು, ಈ ವರ್ಷ 983 ಪ್ರಕರಣಗಳಲ್ಲಿ ನಕ್ಸಲರ ಕೈವಾಡವಿದೆ. ಕಳೆದ ವರ್ಷ 1088 ಪ್ರಕರಣಗಳಲ್ಲಿ ನಕ್ಸಲರು ಭಾಗಿಯಾಗಿದ್ದರು. ಈ ವರ್ಷ ನಕ್ಸಲರ ವಿರುದ್ಧ ಪೊಲೀಸ್ ಎನ್ ಕೌಂಟರ್ ಸಹ ಏರಿಕೆಯಾಗಿದ್ದು, 305 ಎನ್ಕೌಂಟರ್ ಗಳಾಗಿವೆ. ಕಳೆದ ವರ್ಷ 247 ಎನ್ ಕೌಂಟರ್ ಗಳಾಗಿದ್ದವು. ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗಳ ಸಾವಿನ ಪ್ರಮಾಣವೂ ಸ್ವಲ್ಪ ಹೆಚ್ಚಾಗಿದೆ. ಈ ವರ್ಷ ಕಾರ್ಯಾಚರಣೆ ವೇಳೆ 66 ಭದ್ರತಾ ಸಿಬ್ಬಂದಿ ಹತರಾದರೆ, ಕಳೆದ ವರ್ಷ 59 ಭದ್ರತಾ ಸಿಬ್ಬಂದಿಗಳು ಪ್ರಾಣ ತ್ಯಾಗ ಮಾಡಿದ್ದರು.

ದಿನೇ ದಿನೇ ನಕ್ಸಲರ ವಿರುದ್ಧ ಕೇಂದ್ರ ಬಿಗಿ ನಿಲುವು ತಾಳುತ್ತಿರುವುದು ಹಾಗೂ ನಕ್ಸಲ್ ಪೀಡಿತ 106 ಜಿಲ್ಲೆಗಳಲ್ಲಿನ ವಿವಿಧ ಪ್ರಯೋಗಗಳು ಹಾಗೂ ತೀವ್ರ ನಕ್ಸಲ್ ಪೀಡಿತ 36 ಜಿಲ್ಲೆಗಳಲ್ಲಿನ ಸರ್ಕಾರದ ಕಾರ್ಯಕ್ರಮಗಳ ಪರಿಣಾಮ ಈ ರೀತಿಯಾದ ಅಂಕಿ ಅಂಶಗಳು ಲಭ್ಯವಾಗಿವೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದಿಷ್ಟು… ‘ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸರ್ಕಾರ ಯಶಸ್ವಿಯಾಗಿದ್ದು, ಇದೇ ರೀತಿಯ ಕಾರ್ಯವನ್ನು ಮುಂದುವರಿಸುತ್ತೇವೆ. ಕಳೆದ 15-16 ವರ್ಷಗಳ ಪೈಕಿ ಇಂದು ಈ ಪ್ರದೇಶಗಳಲ್ಲಿನ ಸ್ಥಿತಿ ಸಾಕಷ್ಟು ಸುಧಾರಿಸಿದೆ.’

Leave a Reply