
ಬೆಂಗಳೂರಿನ ಗುರುಗುಂಟೆಪಾಳ್ಯದಲ್ಲಿ ಬುಧವಾರ ನಡೆದ 132ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಂಸದರಾದ ಡಿ.ಕೆ ಸುರೇಶ್, ವೀರಪ್ಪ ಮೊಯ್ಲಿ, ಕೆ.ಎಚ್ ಮುನಿಯಪ್ಪ, ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಎಚ್.ಆಂಜನೇಯ ಮತ್ತಿತರರು.
ಡಿಜಿಟಲ್ ಕನ್ನಡ ಟೀಮ್:
ನೋಟು ಅಮಾನ್ಯದಿಂದ ಜೂಜಾಟ ಕಡಿಮೆ
ನೋಟು ಅಮಾನ್ಯ ನಿರ್ಧಾರದ ನಂತರ ಜೂಜುಕೋರರು ರೇಸ್ ಆಡುತ್ತಿಲ್ಲ, ರಿಯಲ್ ಸ್ಟೇಟ್ ವ್ಯವಹಾರ ಬಿದ್ದು ಹೋಗಿದೆ ಎಂದು ಬುಧವಾರ ಅಧಿಕಾರಿಗಳು ಮುಖ್ಯಮಂತ್ರಿಗಳ ಬಳಿ ಅವಲತ್ತುಕೊಂಡಿದ್ದಾರೆ. ಅರೆ ಜೂಜಾಟ ಕಡಿಮೆಯಾಗಿರೋದು ಸಂತೋಷದ ಸುದ್ದಿ ಅಲ್ವಾ, ಅಧಿಕಾರಿಗಳೇಕೆ ಬೇಸರಗೊಂಡಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಬಹುದು. ಅದಕ್ಕೆ ಕಾರಣ ಇದೆ. ಸರ್ಕಾರದ ಬೊಕ್ಕಸಕ್ಕೆ ರಿಯಲ್ ಎಸ್ಟೇಟ್ ಹಾಗೂ ರೇಸ್ ನಂತಹ ಜೂಜಾಟದಿಂದ ಸಾಕಷ್ಟು ಪ್ರಮಾಣದಲ್ಲಿ ಆದಾಯ ಬರುತ್ತಿತ್ತು. ಆದರೆ, ನೋಟು ಅಮಾನ್ಯ ನಿರ್ಧಾರದಿಂದ ಇವುಗಳಿಗೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದ್ದು, ಸರ್ಕಾರದ ಆದಾಯ ಕುಸಿದಿದೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಾರಿಗೆ, ಅಬಕಾರಿ, ವಾಣಿಜ್ಯ ಹಾಗೂ ಮುದ್ರಾಂಕ ಶುಲ್ಕ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮಾಹಿತಿ ಪಡೆಯುವಾಗ, ಅಧಿಕಾರಿಗಳು ಈ ಅಂಶವನ್ನು ಬಿಚ್ಚಿಟ್ಟರು. ನೋಟು ಅಮಾನ್ಯ ನಿರ್ಧಾರದ ನಂತರ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯದಲ್ಲಿ ₹ 300 ಕೋಟಿಯಷ್ಟು ಕುಸಿತವಾಗಿದೆ. ಈ ಮೂಲದಿಂದಲೇ ಈ ಬಾರಿ ₹ 900 ಕೋಟಿ ಆದಾಯ ಪಡೆಯುವ ಗುರಿ ಹೊಂದಲಾಗಿತ್ತು. ಆದರೆ ನೋಟು ಅಮಾನ್ಯ ನಿರ್ಧಾರದ ನಂತರ ರಾಜ್ಯ ಸರ್ಕಾರ ಶೇ.50ರಷ್ಟು ಆದಾಯ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಏನಾಯ್ತು…
ಕಾಂಗ್ರೆಸ್ ಪಕ್ಷದ 132ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ನಡೆಸಲಾಯಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ಲೇವಡಿ ಮಾಡಿದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಮ್ಮದೇ ಪಕ್ಷದ ಕೆಲವು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
‘ವಿಧಾನಸಭೆ ಚುನಾವಣೆಗೆ ಇನ್ನೂ 18 ತಿಂಗಳು ಬಾಕಿ ಇದೆ. ಈ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಹಿಡಿಯುವ ತಿರುಕನ ಕನಸು ಕಾಣುತ್ತಿದೆ. ಬಿಜೆಪಿಯವರು ಮಿಷನ್ 150 ಎನ್ನುತ್ತಾರೆ, ಜೆಡಿಎಸ್ ನವರು 125 ಸೀಟು ಗೆಲ್ಲುತ್ತೇವೆ ಎನ್ನುತ್ತಾರೆ. ಇದ್ಯಾವುದೂ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ತಲೆ ಎತ್ತಿ ಜನರ ಬಳಿ ಹೋಗುವಂತಹ ಕೆಲಸಗಳನ್ನು ಸರ್ಕಾರ ಮಾಡಿದೆ. ಇದನ್ನು ಅರಿತಿರುವ ಪ್ರತಿಪಕ್ಷದವರು ಅಂಕಿ ಸಂಖ್ಯೆಗಳ ಮಿತಿಯನ್ನು ಅರಿಯದೇ ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
‘ಕೆಲವರು ಸಚಿವರಾದ ನಂತರ ಪಕ್ಷವನ್ನೇ ಮರೆತಿದ್ದಾರೆ. ಅಧಿಕಾರ ಸಿಗುವವರೆಗೂ ಪಕ್ಷದ ನೆಲೆ ಬೇಕು. ಅಧಿಕಾರ ಸಿಕ್ಕ ನಂತರ ಇತ್ತ ತಿರುಗಿಯೂ ನೋಡುವುದಿಲ್ಲ. ಪಕ್ಷದ ಪ್ರತಿಷ್ಠಿತ ಸಮಾರಂಭಗಳಿಗೂ ಭಾಗವಹಿಸದೇ ಮೋಜು ಮಾಡಲು ಹೋಗಿದ್ದಾರಾ? ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಖುದ್ದಾಗಿ ನಾನೇ ಆಹ್ವಾನ ನೀಡಿದ್ದೆ ಆದರೂ ಸಾಕಷ್ಟು ಸಚಿವರು ಗೈರಾಗಿದ್ದು ಅಗೌರವ ತೋರಿದ್ದಾರೆ. ರಾಹುಲ್ ಗಾಂಧಿ ಅವರು ಭಾಗವಹಿಸುವ ಕಾರ್ಯಕ್ರಮಕ್ಕೂ ಬರುವುದಿಲ್ಲ, ವಿಧಾನ ಸೌಧದಲ್ಲೂ ಇರುವುದಿಲ್ಲ. ಹೀಗೆ ಅಸಡ್ಡೆ ತೋರುವವರ ವಿರುದ್ಧ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಪರಮೇಶ್ವರ್ ಅತೃಪ್ತಿ ಹೊರಹಾಕಿದರು.
ಹಳ್ಳಿಗಳಿಗೆ ವಾಪಸ್ಸಾದವರಿಗೆ ಉದ್ಯೋಗಾವಕಾಶ
ನೋಟು ಅಮಾನ್ಯ ನಿರ್ಧಾರದ ನಂತರ ನಗರ ಪಟ್ಟಣಗಳಲ್ಲಿ ಕಟ್ಟಡ ನಿರ್ಮಾಣ ಕೆಲಸಗಳಿಗೆ ಆಗಮಿಸಿದ್ದ ಅನೇಕರು ಮತ್ತೆ ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅಂತಹವರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ. ಕೂಲಿ ಕಾರ್ಮಿಕರಿಗೆ ಸಕಾಲಕ್ಕೆ ಹಣ ನೀಡದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಗೌರವ ನಿರಾಕರಿಸಿದ ಕಲ್ಮಾಡಿ
ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಯ ಜೀವಮಾನ ಮುಖ್ಯಸ್ಥ ಗೌರವಕ್ಕೆ ಆಯ್ಕೆಯಾಗಿದ್ದ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ, ತಮಗೆ ಸಿಕ್ಕಿರುವ ಗೌರವವನ್ನು ತಾತ್ಕಾಲಿಕವಾಗಿ ನಿರಾಕರಿಸಿದ್ದಾರೆ. 2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತು ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಚೌತಾಲ್ ಅವರನ್ನು ಮಂಗಳವಾರ ಐಒಎ ಜೀವಮಾನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ಬೆಳವಣಿಗೆ ನಂತರ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ರಾಜಕೀಯ ಚರ್ಚೆಗೂ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಲ್ಮಾಡಿ ತಮಗೆ ಸಿಕ್ಕಿರುವ ಗೌರವವನ್ನು ನಿರಾಕರಿಸಿದ್ದಾರೆ. ‘ನನಗೆ ಈ ಜೀವಮಾನ ಅಧ್ಯಕ್ಷ ಗೌರವ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ಸದ್ಯಕ್ಕೆ ನನಗೆ ಈ ಗೌರವ ಬೇಡ. ನನ್ನ ಮೇಲಿರುವ ಕಳಂಕಗಳು ಇತ್ಯರ್ಥವಾದ ಮೇಲೆಯೇ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ ಸುರೇಶ್ ಕಲ್ಮಾಡಿ.
ಮತ್ತೊಂದೆಡೆ ಸುರೇಶ್ ಕಲ್ಮಾಡಿ ಅವರ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್, ‘ಕಳಂಕಿತರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಈ ರೀತಿಯಾದ ಗೌರವವನ್ನು ನೀಡುವುದೇ ಆದರೆ, ಕ್ರೀಡಾ ಸಚಿವಾಲಯ ಐಒಎ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಲಿದೆ’ ಎಂದಿದ್ದಾರೆ.