ಹಳೇಯ ₹500- 1000 ನೋಟು ಇಟ್ಟುಕೊಂಡರೆ 4 ವರ್ಷ ಜೈಲು… ಅಕ್ರಮ ಹಣ ಬದಲಾವಣೆ ಮಾಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಬಂಧನ… ನೀವು ತಿಳಿಯಬೇಕಿರುವ ಎರಡು ಪ್ರಮುಖ ಸುದ್ದಿಗಳಿವು

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದಂತೆ ನೀವು ತಿಳಿಯಬೇಕಿರುವ ಎರಡು ಪ್ರಮುಖ ಸುದ್ದಿಗಳು ಹೀಗಿವೆ… ಮೊದಲನೆಯದು, ಮುಂದಿನ ವರ್ಷ ಮಾರ್ಚ್ 31ರ ನಂತರ ಹಳೇ ₹500 ಮತ್ತು 1000 ಮುಖಬೆಲೆಯ ನೋಟುಗಳನ್ನು ಹೊಂದಿದ್ದರೆ ಅದು ಕಾನೂನಿನ ಪ್ರಕಾರ ಅಪರಾಧವಾಗಲಿದೆ! ಎರಡನೆಯದು, ಅಕ್ರಮ ಹಣ ಬದಲಾವಣೆಯಲ್ಲಿ ಭಾಗಿಯಾಗಿದ್ದ ಕೋಟಕ್ ಮಹಿಂದ್ರಾ ಬ್ಯಾಂಕ್ ಮ್ಯಾನೇಜರ್ ನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

ಹೌದು, ಕೇಂದ್ರ ಸಚಿವ ಸಂಪುಟ ಸಭೆ ಇಂದು ಹಳೇ ನೋಟುಗಳನ್ನು ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ ಎಂಬ ನಿರ್ಣಯವನ್ನು ಕೈಗೊಂಡಿದೆ. ಇದು ಸುಗ್ರೀವಾಜ್ಞೆ ರೂಪದಲ್ಲಿ ಜಾರಿಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯದ ನಿರ್ಧಾರದ ನಂತರ ಮುಂದಿನ ದಿನಗಳಲ್ಲಿನ ಕಾನೂನು ಸಮಸ್ಯೆಗಳನ್ನು ನಿಭಾಯಿಸಲು ಆರ್ಬಿಐ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರವನ್ನು ಹೊಣೆಯಿಂದ ಮುಕ್ತಿಗೊಳಿಸಿದ್ದಾರೆ.

ಹಳೇ ನೋಟು ಹೊಂದಿದ್ದರೆ ಅಂತಹವರನ್ನು ತಪ್ಪಿತಸ್ಥರನ್ನಾಗಿಸಿ ಅವರಿಗೆ ನಾಲ್ಕು ವರ್ಷವರೆಗಿನ ಜೈಲು ಶಿಕ್ಷೆ ವಿಧಿಸುವುದು, ಹಳೇಯ ನೋಟಿನಲ್ಲಿ ವಹಿವಾಟು ನಡೆಸಿದರು 5 ಸಾವಿರ ದಂಡ ವಿಧಿಸಲು ಈ ನಿರ್ಣಯದಲ್ಲಿ ನಿರ್ಧರಿಸಲಾಗಿದೆ ಸರ್ಕಾರದ ಉನ್ನತ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಆದರೆ ಈ ಶಿಕ್ಷೆಯ ಪ್ರಮಾಣ ಡಿಸೆಂಬರ್ 30ರಂದು ಬ್ಯಾಂಕಿನಲ್ಲಿ ಹಳೇ ನೋಟು ಠೇವಣಿ ಮಾಡುವ ಅವಧಿ ಮುಕ್ತಾಯದ ನಂತರದಿಂದ ಅನ್ವಯವಾಗುತ್ತದೋ ಅಥವಾ ಆಯ್ದ ರಿಸರ್ವ್ ಬ್ಯಾಂಕ್ ಶಾಖೆಗಳಲ್ಲಿ ಆಸ್ತಿ ಘೋಷಣೆಗೆ ಮಾಡಿಕೊಡಲಾಗಿರುವ ಮಾರ್ಚ್ 31ರ ನಂತರ ಅನ್ವಯವಾಗಲಿದೆಯೋ ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿಲ್ಲ.

ಹಳೇಯ ನೋಟಿನಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಎದುರಾಗಬಹುದಾದ ಕಾನೂನು ಸಮಸ್ಯೆಗಳಿಂದ ಪಾರಾಗಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದು, ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಡಿ.31ರಿಂದ ಮಾರ್ಚ್ 31ರವರೆಗೂ ಆರ್ಬಿಐನ ಆಯ್ದ ಶಾಖೆಗಳಲ್ಲಿ ಮಾತ್ರ ಹಳೇ ನೋಟು ಸ್ವೀಕರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಮೂಲಗಳು ಮಾಹಿತಿ ಕೊಟ್ಟಿವೆ. ಹೀಗಾಗಿ ಹಳೇಯ ನೋಟುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧ ಎಂಬ ನಿರ್ಣಯ ಮಾರ್ಚ್ 31ರ ನಂತರ ಅನ್ವಯವಾಗಲಿದೆ ಎಂದು ಪರಿಗಣಿಸಲಾಗುತ್ತಿದೆ.

ಇನ್ನು ಆರ್ಬಿಐ ಕಾಯ್ದೆ ತಿದ್ದುಪಡಿಯ ಮೂಲಕ ಸರ್ಕಾರ ತನ್ನ ಹೊಣೆಯಿಂದ ವಿಮುಖವಾಗಲಿದ್ದು, 1978ರಲ್ಲೂ ಮೊರಾರ್ಜಿ ದೇಸಾಯಿ ಅವರ ಜನತಾ ಪಕ್ಷದ ಸರ್ಕಾರ ₹ 1 ಸಾವಿರ, 5 ಸಾವಿರ ಹಾಗೂ 10 ಸಾವಿರ ನೋಟುಗಳನ್ನು ಅಮಾನ್ಯಗೊಳಿಸಿದ್ದ ಸಂದರ್ಭದಲ್ಲಿ ಇದೇ ರೀತಿಯ ನಿರ್ಣಯ ಕೈಗೊಂಡು ತನ್ನ ಹೊಣೆಯನ್ನು ಅಂತ್ಯಗೊಳಿಸಿಕೊಂಡಿತ್ತು.

ನೆನಪಿನ ಸಂಗ್ರಹದ ಭಾಗವಾಗಿಯೂ ಹಳೆ ನೋಟು ಇರಕೂಡದೇ? ಕ್ವಿಂಟ್ ಜಾಲತಾಣದ ವರದಿ ಪ್ರಕಾರ 10ಕ್ಕಿಂತ ಹೆಚ್ಚು ಹಳೆ ನೋಟುಗಳನ್ನು ಇಟ್ಟುಕೊಳ್ಳುವುದಷ್ಟೆ ಶಿಕ್ಷಾರ್ಹ ಅಪರಾಧವಾಗುತ್ತದೆ.

ಕೊಟಕ್ ಮಹೀಂದ್ರಾ ಬ್ಯಾಕ್ ಮ್ಯಾನೇಜರ್ ಬಂಧನ…

ಅಕ್ರಮವಾಗಿ ಕೋಟ್ಯಂತರ ಹಣವನ್ನು ಬದಲಾಯಿಸಲು ಸಹಾಯ ಮಾಡುತ್ತಿದ್ದ ಕೋಟಕ್ ಮಹಿಂದ್ರಾ ಬ್ಯಾಂಕಿನ ಮ್ಯಾನೇಜರ್ ಆಶೀಶ್ ಕುಮಾರ್ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಕಸ್ತೂರಬಾ ಗಾಂಧಿ ಮಾರ್ಗ ಶಾಖೆಯ ಮ್ಯಾನೇಜರ್ ಆಶೀಶ್ ಕುಮಾರ್, ಉದ್ಯಮಿ ಜೆ.ಶೇಖರ್ ರೆಡ್ಡಿ ಮತ್ತು ವಕೀಲರಾದ ರೋಹಿತ್ ಟಂಡನ್ ಅವರಿಗೆ ಸೇರಿದ ₹ 25 ಕೋಟಿ ಹಣವನ್ನು ಅಕ್ರಮವಾಗಿ ಬದಲಾಯಿಸಲು ಸಹಾಯ ಮಾಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಹರ್ಯಾಣ ಮೂಲದ ಆಶೀಶ್ ಹವಾಲ ಹಣ ವ್ಯವಹಾರ ಮಾಡುವ ಉದ್ಯಮಿ ಪರಸ್ಮಲ್ ಲೋಧ ಜತೆ ಸಂಪರ್ಕ ಹೊಂದಿದ್ದ ಎಂದು ಆರೋಪಿಸಲಾಗಿದೆ. ಡಿಸೆಂಬರ್ 23ರಂದು ಈ ಬ್ಯಾಂಕಿನ ಶಾಖೆ ಮೇಲೆ ನಡೆದ ದಾಳಿಯ ನಂತರ ಈ ಪ್ರಕರಣ ಹೊರಬಂದಿದ್ದು, ಮಲೇಷ್ಯಾಗೆ ತಪ್ಪಿಸಿಕೊಳ್ಳುತ್ತಿದ್ದ ಲೋಧನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

Leave a Reply