ಸುರೇಶ್ ಕಲ್ಮಾಡಿ, ಅಭಯ್ ಚೌತಾಲರಂತಹ ಭ್ರಷ್ಟರಿಗೆ ಐಒಎ ಮಣೆ ಹಾಕುತ್ತಿರುವಾಗ ನಮ್ಮ ಕ್ರೀಡಾ ಕ್ಷೇತ್ರ ಉದ್ಧಾರವಾಗುವುದಾದರು ಹೇಗೆ?

ಡಿಜಿಟಲ್ ಕನ್ನಡ ಟೀಮ್:

(ಅಪ್ ಡೇಟ್ ಮಾಹಿತಿ: ಬುಧವಾರ ಸಂಜೆ ವೇಳೆಗೆ ಬಂದ ಮಾಹಿತಿ ಪ್ರಕಾರ, ಸುರೇಶ್ ಕಲ್ಮಾಡಿ ಅವರು ತಮಗೆ ಸಿಕ್ಕ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಜೀವಮಾನ ಮುಖ್ಯಸ್ಥ ಗೌರವವನ್ನು ನಿರಾಕರಿಸಿದ್ದಾರೆ.)

ದೇಶ ಕಂಡ ಅತ್ಯಂತ ದೊಡ್ಡ ಕ್ರೀಡಾ ಹಗರಣ ಎಂದೇ ಕುಖ್ಯಾತಿ ಪಡೆದಿದ್ದ 2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ರಮುಖ ಆರೋಪಿಗಳಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಚೌತಾಲ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮತ್ತೆ ಮಣೆ ಹಾಕಿದೆ. ಈ ಇಬ್ಬರು ಮಹಾನುಭಾವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಜೀವಮಾನ ಮುಖ್ಯಸ್ಥ ಗೌರವವನ್ನು ನೀಡಿದೆ. ಇದು ಭಾರತೀಯ ಕ್ರೀಡಾ ಕ್ಷೇತ್ರವೇ ತಲೆತಗ್ಗಿಸಬೇಕಾದ ಬೆಳವಣಿಗೆ.

ದಶಕಗಳ ಕಾಲ ಭಾರತೀಯ ವಿವಿಧ ಕ್ರೀಡಾ ಸಂಸ್ಥೆಗಳ ಅಧಿಕಾರವನ್ನು ತಮ್ಮ ಕೈಯಲ್ಲಿ ಹೊಂದಿದ್ದ ಇವರ ಸಾಧನೆ ಏನು ಎಂದು ನೋಡಿದರೆ ನಮಗೆ ಸಿಗುವುದು, ಕೇವಲ ಭ್ರಷ್ಟಾಚಾರ ಆರೋಪಗಳು. ಕಾಮನ್ವೆಲ್ತ್ ಗೇಮ್ಸ್ ಹಗರಣದಲ್ಲಿ ತಪ್ಪಿತಸ್ಥನಾಗಿ 10 ತಿಂಗಳು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಈ ಭ್ರಷ್ಟ ಸಾಧಕರಿಗೆ ಈ ರೀತಿಯಾದ ಮನ್ನಣೆ ನೀಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ರೀತಿಯಾಗಿ ಭ್ರಷ್ಟರಿಗೆ ಮಾನ್ಯತೆ ನೀಡುತ್ತಿರುವ ಪರಿಸ್ಥಿತಿಯಲ್ಲಿ ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಭಾರತ ಪ್ರಜ್ವಲಿಸಬೇಕು ಎಂದು ನಿರೀಕ್ಷೆ ಮಾಡುವುದಾದರೂ ಹೇಗೆ?

ಕ್ರೀಡಾ ಆಡಳಿತದಲ್ಲಿ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದ ಸುರೇಶ್ ಕಲ್ಮಾಡಿ 1996ರಿಂದ 2011ರವರೆಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರಾಗಿದ್ದರು. 2000ರಿಂದ 2013ರವರೆಗೂ ಏಷ್ಯನ್ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇನ್ನು 2001ರಿಂದ 2013ರವರೆಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆಗಳ ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಪ್ರಭಾವಿ ಸದಸ್ಯರಾಗಿಯೂ ಅಧಿಕಾರ ಹೊಂದಿದ್ದರು. ಜತೆಗೆ ಕಾಂಗ್ರೆಸ್ ನ ಸಂಸದರಾಗಿಯೂ ಆಯ್ಕೆಯಾಗಿದ್ದ ಸುರೇಶ್ ಕಲ್ಮಾಡಿ 2010ರಲ್ಲಿ ದೆಹಲಿಯಲ್ಲಿ ನಡೆದ ದಹೆಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭ್ರಷ್ಟಾಚಾರ, ಪಿತೂರಿ, ನಕಲು ಸಹಿ ಸೇರಿದಂತೆ ವಿವಿಧ ಆರೋಪಗಳನ್ನು ಹೊತ್ತು ಜೈಲು ಸೇರಿದ್ದರು.

ಇನ್ನು ಮತ್ತೊಬ್ಬ ವ್ಯಕ್ತಿ ಅಭಯ್ ಸಿಂಗ್ ಚೌತಾಲ ಭಾರತೀಯ ಅಮೆಚುರ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷರಾಗಿದ್ದರು ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು.

2011ರಲ್ಲಿ ಕಲ್ಮಾಡಿ ಅವರು ಐಒಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ವಿಜಯ್ ಕುಮಾರ್ ಮಲ್ಹೋತ್ರಾ ಹಂಗಾಮಿ ಅಧ್ಯಕ್ಷರಾಗಿ ಕೆಲ ಕಾಲ ಅಧಿಕಾರದಲ್ಲಿದ್ದರು. ನಂತರ ಆ ಸ್ಥಾನ ಕಲ್ಮಾಡಿ ಆಪ್ತರಾದ ಅಭಯ್ ಸಿಂಗ್ ಚೌತಾಲ ಅವರನ್ನು ತಂದು ಕೂರಿಸಲಾಯಿತು. 2012ರ ಡಿಸೆಂಬರ್ನಿಂದ 2014ರ ಫೆಬ್ರವರಿವರೆಗೂ ಐಒಎ ಅಧ್ಯಕ್ಷರಾಗಿದ್ದರು.

ಭ್ರಷ್ಟಾಚಾರದ ಆರೋಪ ಹೊತ್ತಿದ್ದರೂ ಚೌತಾಲ ಅವರನ್ನು ಐಒಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಪರಿಣಾಮ ಅಂತಾರಾಷ್ಟ್ರೀಯ ಒಲಿಂಪಿಕ್ಸ ಸಂಸ್ಥೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮಾನ್ಯತೆಯನ್ನೇ ತೆರವುಗೊಳಿಸಿತ್ತು. ಹೀಗೆ ಈ ಇಬ್ಬರು ಇಡೀ ಭಾರತೀಯ ಕ್ರೀಡಾ ಕ್ಷೇತ್ರವನ್ನೇ ಅಸ್ಥಿರತೆಗೆ ತಂದು ನಿಲ್ಲಿಸಿದ್ದರು. ನಂತರ ಒತ್ತಡ ಹೆಚ್ಚಾದ ನಂತರ 2014ರ ಫೆಬ್ರವರಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತವರು ಕ್ರೀಡಾ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ತಿದ್ದುಪಡಿ ಮಾಡಿಕೊಂಡ ಮೇಲಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಐಒಎ ಮೇಲಿನ ನಿಷೇಧವನ್ನು ಹಿಂಪಡೆದಿತ್ತು.

ಇಷ್ಟೆಲ್ಲಾ ಆರೋಪಗಳನ್ನು ಹೊತ್ತು ಭಾರತೀಯ ಕ್ರೀಡಾ ರಂಗವೇ ತಲೆತಗ್ಗಿಸುವಂತೆ ಮಾಡಿದ್ದ ಈ ಇಬ್ಬರಿಗೆ ಈಗ ಐಒಎನ ಜೀವಮಾನ ಅಧ್ಯಕ್ಷ ಗೌರವ ನೀಡಿರುವುದು ನಮ್ಮ ಕ್ರೀಡಾ ಕ್ಷೇತ್ರ ಭ್ರಷ್ಟರ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಎತ್ತ ಸಾಗುತ್ತಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಗೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಆತಂಕ ವ್ಯಕ್ತಪಡಿಸಿದ್ದು, ‘ಈ ಇಬ್ಬರನ್ನು ಐಒಎ ಜೀವಮಾನ ಅಧ್ಯಕ್ಷ ಗೌರವ ಸಿಕ್ಕಿರುವುದು ಗಂಭೀರವಾದ ವಿಷಯ’ ಎಂದು ಹೇಳಿದ್ದಾರೆ.

ಇನ್ನು ಈ ಬೆಳವಣಿಗೆಗೆ ಕಾಂಗ್ರೆಸ್ ನಿಂದಲೂ ವಿರೋಧ ವ್ಯಕ್ತವಾಗಿದ್ದು, ‘ಸುರೇಶ್ ಕಲ್ಮಾಡಿ ಅವರು ಕಾಮನ್ವೆಲ್ತ್ ಕ್ರೀಡಾಕೂಟ ಹಗರಣದಲ್ಲಿ ಭಾಗಿಯಾದ ನಂತರ ಅವರನ್ನು ನಾವು ಪಕ್ಷದಿಂದಲೇ ಕಿತ್ತು ಹಾಕಿದ್ದೆವು. ಆದರೆ ಈಗ ಅವರಿಗೆ ಈ ಗೌರವ ನೀಡಲಾಗುತ್ತಿದೆ. ಈ ಬೆಳವಣಿಯ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯ ಕೈಚೆಲ್ಲಿ ಕೂತಿದ್ದು, ಈ ಬೆಳವಣಿಗೆಯಲ್ಲಿ ಸರ್ಕಾರದ ಪಾತ್ರವಿರುವ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ಮಾಜಿ ಕ್ರೀಡಾ ಸಚಿವ ಅಜಯ್ ಮಕೇನ್ ಆರೋಪಿಸಿದ್ದಾರೆ.

Leave a Reply