ಸ್ವಚ್ಛತೆಯ ಸಂಸ್ಕಾರವಿಲ್ಲದಿದ್ದರೆ ನಮ್ಮಲ್ಲಿರುವ ವಿದ್ಯೆ, ಹಣ ಅಂತಸ್ತುಗಳಿಗೇನು ಬೆಲೆ?

author-geetha‘ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿದೆಯೇ?’

‘ನನ್ನ ಯಾಕೆ ಕೇಳುತ್ತೀರಿ? ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಇಲಾಖೆಯನ್ನೇ ತೆರೆದಿದೆಯೇನೋ… ಅಲ್ಲಿ ಹೋಗಿ ಕೇಳಿ.’

‘ಯಾಕೆ ಕೋಪದಲ್ಲಿ ಇರೋ ಹಾಗಿದೆ… ಏನಾಯಿತು?’

‘ಬಿಡಿ..’

‘ಕಹಾ ಸೋಚ್ ವಹಾ ಶೌಚಾಲಯ್.. ಅದೂ ಕೂಡ ನಮ್ಮ ಪ್ರಧಾನಮಂತ್ರಿಗಳ ಉತ್ತಮ ಯೋಜನೆಗಳಲ್ಲಿ ಒಂದು… ಅದು ಯಶಸ್ವಿಯಾಗಿದೆ. ಅಲ್ಲವೇ?’

‘ನೀವೇನು ಸರ್ವೇ ಮಾಡ್ತಾ ಇದೀರಾ? ಎಲ್ಲಾ ಯೋಜನೆಗಳ ಯಶಸ್ಸಿನ ಬಗ್ಗೆ ವರದಿ ತಯಾರು ಮಾಡ್ತಾ ಇದೀರಾ?’

‘ಇಲ್ಲ… ಹಾಗೇನು ಇಲ್ಲ. ಎಲ್ಲರೂ ಡಿಮಾನೆಟೈಸೇಷನ್ ಬಗ್ಗೆ ಮಾತಾಡ್ತಾ ಇದಾರಲ್ಲ… ಸ್ವಲ್ಪ ಹಿಂದಕ್ಕೆ ಹೋಗೋಣ ಅಂತ… ವರ್ಷದ ಕೊನೆ ಅಲ್ಲವೇ… ಸ್ವಲ್ಪ ತಿರುಗಿ ನೋಡೋಣ ಅಂತ ಅಷ್ಟೇ…’

‘ಓ…’ ಸುಮ್ಮನಾದೆ.

‘ಎಲ್ಲರೂ ನೀವು ಈ ವರ್ಷ ನೋಡಿದ ಚಲನಚಿತ್ರಗಳಲ್ಲಿ ನಿಮಗೆ ಅತ್ಯಂತ ಇಷ್ಟವಾದದ್ದು ಯಾವುದು? ಕೊಂಡು ಓದಿದ ಪುಸ್ತಕಗಳಲ್ಲಿ ಇಷ್ಟವಾಗಿದ್ದು ಯಾವುದು? ಎಂದೆಲ್ಲಾ ವಿಚಾರಿಸ್ತಾ ಇದಾರಲ್ಲವೇ… ನಾನು ಯೋಜನೆಗಳ ಬಗ್ಗೆ ವಿಚಾರಿಸ್ತಾ ಇದೀನಿ ಅಷ್ಟೇ…’

‘ಸರಿ..’

‘ಸರಿಯಲ್ಲ.. ನಿಮ್ಮ ಅಭಿಪ್ರಾಯ ಹೇಳಿ’

‘ನೀವು ಮೋದಿ ಭಕ್ತರೋ, ವಿರೋಧಿಗಳೋ ಅನ್ನುವುದರ ಮೇಲೆ ನನ್ನ ಉತ್ತರವನ್ನು ತುಲನೆ ಮಾಡುತ್ತೀರಿ. ನನ್ನ ಬಗ್ಗೆ ಅಭಿಪ್ರಾಯ ತಳೆಯುತ್ತೀರಿ. ಒಂದು ಗುಂಪಿಗೆ ನನ್ನ ಸೇರಿಸಲು ನೋಡುತ್ತೀರಿ… ಕಷ್ಟ… ಈಗ ಅಭಿಪ್ರಾಯ ಮಂಡಿಸುವುದು ನನ್ನಂಥವರಿಗೆ ಕಷ್ಟ.’

‘ಹಾಗಾದರೆ ಮುಂಚೆ ವಾಕ್ ಸ್ವಾತಂತ್ರ್ಯವಿತ್ತು… ಈಗ ಇಲ್ಲ ಅಂತಲೇ?’

‘ಹಾಗಲ್ಲ… ಮುಂಚೆ ಸರ್ಕಾರ ಇರುವುದು, ಯೋಜನೆಗಳು ಇರುವುದು ನಮ್ಮ ಅರಿವಿಗೇ ಬರ್ತಾ ಇರಲಿಲ್ಲ. ಜನ ಹೀಗೆ ಅಭಿಪ್ರಾಯ ವ್ಯಕ್ತಪಡಿಸುವ ಪರಿಸ್ಥಿತಿಯೇ ಇರಲಿಲ್ಲ… ಈಗ ಯೋಜನೆ ಯಶಸ್ವಿಯಾಗುತ್ತಿದೆಯೋ ಇಲ್ಲವೋ.. ಯೋಜನೆಗಳು ನಮ್ಮನ್ನು ಮುಟ್ಟುತ್ತಿವೆ. ನಾವು ಸ್ಪಂದಿಸಬೇಕಷ್ಟೇ…’

‘ಅಂದರೇ?’

‘ಈ ಶೌಚಾಲಯದ ವಿಷಯವೇ ತೆಗೆದುಕೊಳ್ಳಿ. ಎಷ್ಟೊಂದು ಪ್ರಚಾರ ಕೊಡಲಾಯಿತು. ವಿದ್ಯಾ ಬಾಲನ್ ಟಿ.ವಿಯಲ್ಲಿ, ರೇಡಿಯೋದಲ್ಲಿ… ಚಲನಚಿತ್ರ ಮಂದಿರಗಳಲ್ಲಿ ಬಂದು ಬಂದು ಹೇಳಿದರು. ಶೌಚಾಲಯ ಕಟ್ಟಿಸಬೇಕು ಹೆಣ್ಣು ಮಕ್ಕಳಿಗೂ ಅದು ಅತ್ಯಂತ ಅವಶ್ಯಕ ವಿಷಯ… ಮದುವೆಯಾಗಿ ಮನೆಗೆ ಬರುವ ಸೊಸೆಗಾಗಿ ಕಟ್ಟಿಸಬೇಕು… ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಕಟ್ಟಿಸಬೇಕು.. ಹೀಗೇ ಎಷ್ಟೊಂದು ಜಾಹಿರಾತು… ಹಿಂದಿಯಲ್ಲಿ ಬರೆದು, ಚಿತ್ರಿಸಿ… ಕನ್ನಡದಲ್ಲಿ ಅಧ್ವಾನವಾಗಿ ಅನುವಾದ ಮಾಡಿ… ಅದೊಂದು ಹಾಸ್ಯ ಸರಕಾಯಿತು. ನಮ್ಮ ಹಳ್ಳಿ ಕಡೆ… ಯಾರವಳು ಹಾಗಾಡ್ತಾಳೆ? ಎಂದು ಪ್ರಶ್ನಿಸಿದರು.

ನಮ್ಮ ದೇಶ ವೈವಿದ್ಯಮಯ ಸಂಸ್ಕೃತಿ, ಭಾಷೆಗಳಿರುವ ದೇಶ. ಕೋಟಿಗಟ್ಟಲೇ ಖರ್ಚು ಮಾಡುತ್ತಿರುವಾಗ (ಜಾಹಿರಾತಿಗೆ) ಆಯಾ ರಾಜ್ಯದಲ್ಲಿ ಅಲ್ಲಿನ ಜನಪ್ರಿಯ ನಟಿಯನ್ನು ಹಾಕಿಕೊಂಡು ಮಾಡಬಹುದಿತ್ತು. ಇಲ್ಲಿ ಕನ್ನಡದ ಆಲೋಚನೆ ಹಾಗೂ ಭಾಷೆಯಲ್ಲಿ ಜಾಹಿರಾತು ಮಾಡಬಹುದಿತ್ತು… ನಮ್ಮ ಜಯಂತಿ ಅಥವಾ ಭಾರತಿ ಅಥವಾ ರಾಧಿಕಾ ಪಂಡಿತ್ ಹೇಳಿದ್ದರೆ ಇನ್ನೂ ಹೆಚ್ಚಿನ ಜನರನ್ನು ತಲುಪಬಹುದಿತ್ತು…

ಜೊತೆಗೆ ಹಳ್ಳಿಯಲ್ಲಿ ಶೌಚಾಲಯ (ಮನೆಗಳಲ್ಲಿ) ಕಟ್ಟಲು ಒಬ್ಬೊಬ್ಬರಿಗೆ ಹತ್ತರಿಂದ ಇಪ್ಪತ್ತು ಸಾವಿರ ರುಪಾಯಿ ಕೊಟ್ಟರು. ಅವರದೇ ದುಡ್ಡಿನಲ್ಲಿ ಈಗಾಗಲೇ ಕಟ್ಟಿಸಿಕೊಂಡವರು ಪೆದ್ದರಾದರು. ಹೊಸದಾಗಿ ಕಟ್ಟಿಸಿಕೊಂಡವರು ಸುಮ್ಮನೆ ಒಂದು ಹಳ್ಳ, ನಾಲ್ಕು ಗೋಡೆ ಕಟ್ಟಿಸಿ ದುಡ್ಡು ಪಡೆದರು. ನಾಲ್ಕು ಮನೆಯವರು ಒಂದೇ ಶೌಚಾಲಯ ತೋರಿಸಿ ಬೇರೆ ಬೇರೆಯಾಗಿ ದುಡ್ಡು ಪಡೆದರು. ಹತ್ತು ಸಾವಿರಕ್ಕೆ ಸಹಿ ಹಾಕಿಸಿಕೊಂಡು ಎಂಟು ಸಾವಿರ ಕೊಟ್ಟು ಎರಡು ಸಾವಿರ ಜೇಬಿಗಿಳಿಸಿಕೊಂಡರು ಅಧಿಕಾರದಲ್ಲಿ ಇರುವವರು.

ನ್ಯಾಯವಾಗಿ ಕೆಲಸ ಆಗಲಿಲ್ಲ ಎಂದು ಹೇಳುತ್ತಿಲ್ಲ… ಹೀಗೆ ಆಗಿದ್ದೇ ಹೆಚ್ಚು.

‘ಸ್ವಚ್ಛ ಭಾರತ್’ ಎಂದಾಗ ಹೆಮ್ಮೆ ಎನ್ನಿಸುತ್ತದೆ. ಸ್ವಚ್ಛತೆಯಿದ್ದೆಡೆ ರೋಗರುಜಿನಗಳು ಕಡಿಮೆ. ನಮ್ಮಲ್ಲಿ ಮಡಿ ಎಂದು ಶುರುವಾಗಿದ್ದೇ ನಾವು ಸ್ವಚ್ಛವಾಗಿರಲು, ನಮ್ಮ ಪರಿಸರು ಶುಚಿಯಾಗಿ ಇಟ್ಟುಕೊಳ್ಳಲು. ಅದು ಬಿಟ್ಟು ಬೇರೆ ಹುಚ್ಚುಚ್ಚು ಆಗಿದ್ದು ಅದರ ತಪ್ಪು ಪರಿಕಲ್ಪನೆಯಲ್ಲಿ. ಮಡಿಯಲ್ಲಿ ತಪ್ಪಿಲ್ಲ. ಕಾಲು ತೊಳೆದು ಒಳಬರಬೇಕು… ಕೈ ತೊಳೆದು ತಿನ್ನಬೇಕು. ಸ್ನಾನ ಮಾಡಿ ಅಡುಗೆ ಮಾಡಬೇಕು. ನಾವಿರುವ ಜಾಗ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು… ಗುಡಿಸಿ ಸಾರಿಸಬೇಕು…

ಸರಿ.. ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೇನೋ. ಆದರೆ ಮನೆಯ ಹೊರಗೆ? ರಸ್ತೆ? ಪಾರ್ಕು? ಅದೂ ಅವರದೇ ಅಲ್ಲವೇ?

ಇಂದಷ್ಟೇ ಮೈಸೂರಿನ ಎಕ್ಸಿಭಿಷನ್ನಿಗೆ ಹೋಗಿ ಬಂದೆ… ಅಲ್ಲಿ ಎಲ್ಲಾ ಅಂಗಡಿಗಳಿಗಿಂಥ ಹೆಚ್ಚಿಗೆ ಇರುವುದು ಚುರುಮುರಿ ಸ್ಟಾಲು, ಪಾಪ್ ಕಾರ್ನು, ಬೊಂಡ, ಬಜ್ಜಿ, ಡೆಲ್ಲಿ ಪಾಪಡ್, ಇಡ್ಲಿ, ದೋಸೆ… ಬಿರಿಯಾನಿ ಮಾರುವ ಅಂಗಡಿಗಳು. ಜ್ಯೂಸು, ಕಬ್ಬಿನ ಹಾಲು, ಫಿಶ್ ಕರಿ… ಐಸ್ ಕ್ರೀಮು… ನೀವೇನು ಕೇಳಿ… ಅದಲ್ಲಿದೆ. ಅಲ್ಲಲ್ಲಿ ಡಸ್ಟ್ಬಿನ್ ಇದೆ… ಆದರೂ ತಿಂದವರೆಲ್ಲಾ ತಿಂದ ಪ್ಲಾಸ್ಟಿಕ್ ಕಪ್ಪು, ತಟ್ಟೆ… ಹೊಲಸಾದ ಪೇಪರ್ರು… ಐಸ್ ಕ್ಯಾಂಡಿ ಚೀಪಿದ ಮೇಲೆ ಉಳಿದ ಕಡ್ಡಿ ಎಲ್ಲವನ್ನು ಹಾದಿಯಲ್ಲೇ ಹಾಕಿ ಹೊರ ನಡೆದರು.

ದೊಡ್ಡ ಕಾರುಗಳಲ್ಲಿ ಹೋಗುತ್ತಿರುತ್ತಾರೆ… ಪ್ಲಾಸ್ಟಿಕ್ ಕವರ್ ಕಿಟಕಿಯಿಂದ ಹೊರಗೆ ರಸ್ತೆಗೆ ಎಸೆಯುತ್ತಾರೆ… ಚುಯಿಂಗ್ ಗಮ್ ಅಗೆದು ರಸ್ತೆಯಲ್ಲಿ ಉಗುಳಿ ಹೋಗುತ್ತಾರೆ… ಮೊನ್ನೆ ಅದ್ಯಾವುದೋ ಫೈವ್ ಸ್ಟಾರ್ ಹೊಟಲ್ಲಿಗೆ ಹೋಗಿ ಬಂದ ಮೇಲೆ ಚಪ್ಪಲಿ ತೊಳೆದುಕೊಂಡಿದ್ದಾಯಿತು. ಅಂತಹ ಹೊಟೆಲ್ಲಿಗೆ ಬಂದವರೂ ಕೂಡ ಕೈ ಒರೆಸಿಕೊಂಡ ಪೇಪರ್ ನ್ಯಾಪ್ಕಿನ್ ಗಳನ್ನು ನೆಲಕ್ಕೆ ಹಾಕಿ.. ನಾನು ಅದರ ಮೇಲೆ ಕಾಲಿಟ್ಟು ನನ್ನ ಚಪ್ಪಲಿಯೆಲ್ಲಾ ಅಂಟು ಅಂಟಾಗಿತ್ತು. ದುಡ್ಡು ಕಾಸು, ಅಂತಸ್ತು, ವಿದ್ಯೆ, ಸಂಸ್ಕಾರ, ಸಂಸಾರ… ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಲುವುದನ್ನು ಕಲಿಸದಿದ್ದರೆ… ಮತ್ತೇನು ಕಲಿಸುತ್ತದೆ? ಮನವರಿಕೆ ಮಾಡಿಕೊಡುವುದು ಹೇಗೆ? ಮನವರಿಕೆಯಾದ ಮೇಲೆ ಅದನ್ನು ಪಾಲಿಸುವುದು ಬಹಳ ಮುಖ್ಯ ಎಂಬ ತಿಳಿವು ಅರಿವು ಬರುವುದು ಹೇಗೆ?

ಲಾಲ್ ಬಾಗಿನಲ್ಲಿ ಐಸ್ ಕ್ಯಾಂಡಿಯ ಕವರ್ರನ್ನು ತೆಗೆದು ನೆಲಕ್ಕೆ ಎಸೆದು, ಚೀಪುತ್ತಾ ಹೊರಟ ಹುಡುಗಿ (ಎಂಟು ವರ್ಷವಿರಬಹುದು)ಯ ಭುಜ ಹಿಡಿದು ಆ ಕವರ್ರನ್ನು ಡಸ್ಟ್ ಬಿನ್ಗೆ ಹಾಕಲು ಸವಿನಯವಾಗಿಯೇ ಹೇಳಿದ್ದೆ ಒಮ್ಮೆ. ಆ ಹುಡುಗಿಯ ತಾಯಿ ನನ್ನೊಂದಿಗೆ ಜಗಳಕ್ಕೆ ಬಂದಿದ್ದಳು.

‘ನನ್ನ ಮಗಳೇ ಸಿಕ್ಕಿದಾ ನಿಮ್ಗೆ? ಇಲ್ಲೆಲ್ಲಾ ಎಷ್ಟು ಪೇಪರ್ ಬಿದ್ದಿದೆ ನೋಡಿ… ನೀವೇನು ಲಾಲ್ ಬಾಗಿನ ಆಫಿಸರ್ರಾ? ಪೊಲೀಸಾ? ಸುಮ್ಮನೆ ಹೋಗ್ರಿ..’ ಎಂದು ರೇಗಿದ್ದರು. ಅದನ್ನು ನಾನು ಜನ್ಮೇಪಿ ಮರೆಯಲಾರೆ. ಫೈನ್ ಹಾಕಿದರೆ ಪರಿಹಾರ ಆಗುವ ಸಮಸ್ಯೆಯಲ್ಲ ಇದು.

ತಮ್ಮ ತಲೆಯ ಭದ್ರತೆಗಿಂತ ಫೈನಿನ ಭೀತಿಗೆ ಹೆಲ್ಮೆಟ್ ಧರಿಸುವವನು, ಪೊಲೀಸ್ ಇಲ್ಲವೆಂದಾಗ ಹಾಗೇ ಹೋಗುತ್ತಾನೆ. ಒಂದು ಟ್ರಾಫಿಕ್ ಸಿಗ್ನಲ್ ಪಾಲಿಸಲು ಪೊಲೀಸರ ಅವಶ್ಯಕತೆ ಇದೆ ನಮಗೆ. ಒಂದು ಸುಂದರ ಜಲಪಾತ ನೋಡಲು ಹೋದರೂ ಅಲ್ಲಿ ನಿಂತು ಜೋಳ ತಿಂದು, ಬೊಂಡ ತಿಂದು, ಗಲೀಜು ಮಾಡಿ ಮಿಕ್ಕವನ್ನು ನೀರಿಗೆ ಎಸೆದು ಬರುತ್ತೇವೆ. ಶಿಸ್ತಿನಿಂದ ಇರಲು, ಸ್ವಚ್ಛತೆ ಕಾಪಾಡಲು ನಮ್ಮ ಹಿಂದೆ ಹೆದರಿಸುತ್ತಾ ಪೊಲೀಸರು ಇರಬೇಕು ಅಂದರೆ ಹೇಗೆ?

ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು, ಮಕ್ಕಳ ಗಲೀಜು ಡೈಪರ್ರುಗಳನ್ನು ಕನಿಷ್ಟ ಪೇಪರ್ರಿನಲ್ಲಿ ಸುತ್ತಿ ಡಸ್ಟ್ ಬಿನ್ನಿಗೆ ಹಾಕಲಾರೆವು ನಾವು. ಯಾರಾದರು ಹೇಳಿದರೆ ಅವರ ಮೇಲೆ ಜಗಳಕ್ಕೆ ಹೋಗುತ್ತೇವೆ.

ನಿಮ್ಮ ದೇಶ, ನಿಮ್ಮ ಪರಿಸರ, ನಿಮಗಾಗಿ ಸ್ವಚ್ಛವಾಗಿ ಇರಿಸಿ ಎಂದು ಹೇಳಲು ಕೋಟ್ಯಂತರ ರುಪಾಯಿ ಖರ್ಚು ಮಾಡಿ ಯೋಜನೆಗಳನ್ನು ರೂಪಿಸಬೇಕೇ ಸರ್ಕಾರ?

ಮನೆಯಲ್ಲಿ ಕಲಿಯುವಂಥ ಚಿಕ್ಕ ವಿದ್ಯೆ ಎಂದರೆ ಚೊಕ್ಕವಾಗಿ ಇರುವುದು, ನಮ್ಮ ಸುತ್ತಲೂ ಚೊಕ್ಕವಾಗಿ ಇರಿಸಿಕೊಳ್ಳುವುದು… ಅಲ್ಲವೇ ?

ಮಾತು ಶುರು ಮಾಡಿದವನು ಈಕೆಯನ್ನು ಕೇಳಿದ್ದೇ ತಪ್ಪಾಯಿತೇನೋ ಎಂಬಂತೆ ಮುಖ ಮಾಡಿಕೊಂಡು ಕುಳಿತಿದ್ದ.

‘ಸಾರಿ… ತುಂಬಾ ಮಾತಾಡಿದ್ನಾ?’

‘ಇಲ್ಲ.. ನಂಗೆ ಹೊತ್ತಾಯಿತು, ಹೊರಡ್ತೀನಿ..’

ಎದ್ದು ಹೊರಟು ಹೋದ. ಅವನ ಕುರ್ಚಿಯ ಪಕ್ಕ ಬಿದ್ದಿದ್ದ ಖಾಲಿ ಬಿಸ್ಕತ್ತಿನ ಪೊಟ್ಟಣ, ನನ್ನ ಅಣಕಿಸಿತು. ಅದನ್ನು ನನ್ನ ಪರ್ಸಿನಲ್ಲಿ ಕಸಕ್ಕೆಂದು ಇದ್ದ (ನಾನು ಮಾಡಿಕೊಂಡಿದ್ದ) ಪೌಚಿಗೆ ಅದನ್ನು ತುರುಕಿ ನಾನೂ ಹೊರಟೆ.

ಅಂದ ಹಾಗೆ ಹೊಸ ವರ್ಷಕ್ಕೆ ನಿಮ್ಮ resolution ಏನು?

ಹೊಸ ವರ್ಷದ ಶುಭಾಶಯಗಳು.

1 COMMENT

  1. Firstly sorry for the comment in English. Very well said geetha madam. I on a daily basis see the so called educated and high paid people throw bus tickets after the travel on the road. The story is not any different even if the dustbins are close by. We have to change our attitude without which anytging would seem to not work.

Leave a Reply to Prakopa Cancel reply