‘ಕ್ಲೈಮೆಟ್ ಸ್ಮಾರ್ಟ್’ ಆಗಲಿರುವ ಮಧ್ಯ ಪ್ರದೇಶದ 1100 ಗ್ರಾಮಗಳು, ಏನಿದರ ತಿರುಳು?

0
287

ಡಿಜಿಟಲ್ ಕನ್ನಡ ಟೀಮ:

ಹವಾಮಾನ ವೈಪರಿತ್ಯ, ಮಣ್ಣಿನ ಫಲವತ್ತತೆ ಕುಸಿತ, ನೀರಿನ ನಿರ್ವಹಣೆ ಇವು ನಮ್ಮ ರೈತರು ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳು. ಇಂತಹ ಸಮಸ್ಯೆಗಳ ವಿರುದ್ಧ ರೈತರನ್ನು ಹೋರಾಟಕ್ಕೆ ಸಿದ್ಧಗೊಳಿಸುವ ಒಂದು ಪ್ರಯತ್ನ ಈಗ ಮಧ್ಯಪ್ರದೇಶದ 1100 ಗ್ರಾಮಗಳಲ್ಲಿ ನಡೆಯುತ್ತಿದೆ.

ಹೌದು, ‘ಕ್ಲೈಮೆಟ್ ಸ್ಮಾರ್ಟ್’ ಯೋಜನೆ ಮೂಲಕ ಮಧ್ಯಪ್ರದೇಶ ಸರ್ಕಾರವು 1100 ಗ್ರಾಮಗಳಲ್ಲಿ ರೈತರಿಗೆ ಆಧುನಿಕ ಕೃಷಿ ವಿಧಾನದ ಬಗ್ಗೆ ತರಬೇತಿ ನೀಡಿ ಈ ಸವಾಲುಗಳನ್ನು ಮೆಟ್ಟಿ ನಿಂತು ಉತ್ತಮ ಇಳುವರಿ ಪಡೆಯುವಂತೆ ಮಾಡಲು ಮುಂದಾಗಿದೆ. ರೈತರ ಕಲ್ಯಾಣ ಹಾಗೂ ಕೃಷಿ ಅಭಿವೃದ್ಧಿ ಇಲಾಖೆ ವತಿಯಿಂದ ಈ ಯೋಜನೆ ರೂಪಿಸಲಾಗಿದ್ದು, 6 ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ. ಮಧ್ಯ ಪ್ರದೇಶದಲ್ಲಿ ವಿವಿಧ ಬಗೆಯ 11 ಕೃಷಿ ಹವಾಮಾನ ಪ್ರದೇಶಗಳಿದ್ದು, ಆ ಪೈಕಿ ಪ್ರತಿ ಪ್ರದೇಶದ 100 ಗ್ರಾಮಗಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಕಾರ್ಯಕ್ರಮದಡಿ ಈ ಯೋಜನೆ ಮಾಡಲಾಗುತ್ತಿದ್ದು, ಪ್ರತಿ ವರ್ಷ ₹ 150 ಕೋಟಿ ಬಳಕೆ ಮಾಡಲಾಗುತ್ತಿದೆ.

ಈ ಯೋಜನೆಯಲ್ಲಿ ರೈತರು ಅಲ್ಪಾವಧಿಯ ಬೆಳೆಗಳತ್ತ ಹೆಚ್ಚು ಗಮನಹರಿಸುವಂತೆ ಮಾಡಲಾಗುತ್ತಿದೆ. ಅಲ್ಪಾವಧಿಯ ಬೆಳೆಯ ಜತೆ ಜತೆಗೆ ಸಮಗ್ರ ಕೃಷಿಯನ್ನು ರೈತರು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತದೆ. ಬೆಳೆ ಬೆಳೆಯುವುದರ ಜತೆಗೆ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಸಾಂಪ್ರದಾಯಿಕ ಕೃಷಿ, ವನ್ಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ನೆರವಾಗುವಂತೆ ಮಾಡಲಾಗುವುದು.

ವನ್ಯ ಕೃಷಿ ಪದ್ಧತಿಯಿಂದ ಮಣ್ಣಿನ ಫಲವತ್ತತೆ ಸಂರಕ್ಷಣೆ ಜತೆಗೆ ಮಣ್ಣಿನ ಸವೆತವನ್ನು ತಡೆಗಟ್ಟಲಾಗುವುದು. ಇನ್ನು ರಾಸಾಯನಿಕ ಗೊಬ್ಬರದ ಜತೆಗೆ, ಜೈವಿಕ ಗೊಬ್ಬರ ಬಳಕೆಯ ಬಗ್ಗೆಯೂ ಅರಿವು ಮೂಡಿಸಲಾಗುವುದು. ಇವೆಲ್ಲದರ ಜತೆಗೆ ಕೀಟ, ರೋಗಗಳ ನಿರ್ವಹಣೆ, ಶೂನ್ಯ ಸಾಗುವಳಿ ಜತೆಗೆ ಸಣ್ಣ ನೀರಾವರಿ ವ್ಯವಸ್ಥೆಗಳನ್ನು ಈ ಕ್ಲೈಮೆಟ್ ಸ್ಮಾರ್ಟ್ ಗ್ರಾಮ ಯೋಜನೆಯಲ್ಲಿ ಪರಿಚಯಿಸಲಾಗುವುದು. ಶೂನ್ಯ ಉಳುಮೆ ಮೂಲಕ ಕೃಷಿ ಮಾಡುವುದರಿಂದ ಪದೇ ಪದೇ ಭೂಮಿಯನ್ನು ಉಳುಮೆ ಮಾಡಿ ಅದರಲ್ಲಿನ ಸಾರ ಬರಿದಾಗುವಂತೆ ತಪ್ಪಿಸಬಹುದು. ಇನ್ನು ಹನಿ ನೀರಾವರಿ, ತುಂತುರು ನೀನಾವರಿ ವ್ಯವಸ್ಥೆ ಅಳವಡಿಕೆಯಿಂದ ಗೊಬ್ಬರಗಳ ಬಳಕೆಯು ಕಡಿಮೆಯಾಗಲಿದೆ.

ಈ ಎಲ್ಲ ಅಂಶಗಳನ್ನು ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಮಧ್ಯಪ್ರದೇಶದ ಈ ಚತುರ ಯೋಜನೆ ಸಾಫಲ್ಯ ಕಂಡರೆ ಗ್ರಾಮೀಣ ಭಾರತಕ್ಕೆ ಕನಸಿನ ಹಾದಿಯೊಂದನ್ನು ಹಾಕಿಕೊಟ್ಟೀತು!

-Ad-

Leave a Reply