400 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾದ ಗ್ರೀನ್‍ಲ್ಯಾಂಡ್ ಶಾರ್ಕ್: ಶೇಕ್ಸ್ಪಿಯರ್ ಸತ್ತಾಗ ಇದು ಹುಟ್ಟಿತ್ತು, ಚಂದ್ರನ ಮೇಲೆ ಕಾಲಿಟ್ಟ ನೀಲ್ ಆರ್ಮ್‍ಸ್ಟ್ರಾಂಗ್ ಬದುಕಿರುವವರೆಗೂ ಇದೂ ಬದುಕಿತ್ತು!

 

author-ananthramuಗ್ರೀನ್‍ಲ್ಯಾಂಡಿನ ಸುತ್ತಣ ಸಾಗರದಲ್ಲಿ ಪತ್ತೆಯಾದ ಒಂದು ಶಾರ್ಕ್ ಜೀವಿವಿಜ್ಞಾನಿಗಳಿಗೇ ಶಾಕ್ ಕೊಟ್ಟಿದೆ. ಅದು ಬಾಳಿದ್ದ ಕಾಲದಲ್ಲಿ ಯಾವ ಯಾವ ಸಂಗತಿಗಳು ಘಟಿಸಿದವು ಎಂದು ಹೇಳಹೊರಟರೆ ಅದೇ ಒಂದು ವಿಶ್ವಕೋಶವಾಗುತ್ತದೆ. ಜನಪ್ರಿಯ ಕವಿ, ನಾಟಕಕಾರ ಇಂಗ್ಲೆಂಡಿನ ಶೇಕ್ಸ್’ಪಿಯರ್ ನಿಧನವಾದ ಆ ಸುಮಾರಿನಲ್ಲಿ ಹುಟ್ಟಿದ ಗ್ರೀನ್‍ಲ್ಯಾಂಡಿನ ಈ ಶಾರ್ಕ್ ಬರಿ ಎರಡು ಮಹಾಯುದ್ಧಗಳನ್ನಷ್ಟೇ ನೋಡಲಿಲ್ಲ, ನಾವು ಈ ಭೂಮಿಯನ್ನು ಕಲುಷಿತಗೊಳಿಸುವ ಮೊದಲೇ ಅದು ಸಾಗರದಲ್ಲಿ ಹಾಯಾಗಿ ಈಜಾಡುತ್ತಿತ್ತು. ಮನುಷ್ಯ ಚಂದ್ರನ ಮೇಲೆ ಕಾಲಿಡುವ ಸಮಯದಲ್ಲೂ ಅದು ಬೇಟೆಯಲ್ಲಿ ತೊಡಗಿತ್ತು. ನೀಲ್ ಆರ್ಮ್‍ಸ್ಟ್ರಾಂಗ್ ನಿಧನನಾಗುವವರೆಗೂ ಅದೂ ಬದುಕಿತ್ತು (2012). ಭಾರತದ ಇತಿಹಾಸವನ್ನು ನೆನಪಿಸುವುದಾದರೆ ಈ ಶಾರ್ಕ್ ಹುಟ್ಟಿದಾಗ ತಾಜ್‍ಮಹಲನ್ನು ಇನ್ನೂ ನಿರ್ಮಿಸಿರಲಿಲ್ಲ.

ಸಾಮಾನ್ಯವಾಗಿ ಅತಿ ದೀರ್ಘಕಾಲ ಬಾಳುವ ಮನುಷ್ಯರ ಹೆಸರನ್ನು ಪ್ರತಿಬಾರಿಯೂ ಪತ್ರಿಕೆಗಳಲ್ಲಿ ಓದುವಾಗ ಸಾಕಷ್ಟು ಕನ್‍ಫ್ಯೂಸ್ ಆಗುತ್ತದೆ. ನಿಜವಾದ ದೀರ್ಘಕಾಲ ಬಾಳಿದ ಮನುಷ್ಯ ಯಾರು ಎಂಬುದು ಲೆಕ್ಕಕ್ಕೆ ಸಿಕ್ಕಿರುವುದೇ ಇಲ್ಲ. ಈಗಿನ ಪ್ರಕಾರ ಫ್ರಾನ್ಸಿನ ಜೀನ್ ಲೂಯಿಸ್ ಕಾಲ್ಮೆಂಟ್ ಎಂಬಾಕೆ 122 ವರ್ಷ ಬದುಕಿದ್ದುದಕ್ಕೆ ದಾಖಲೆಗಳಿವೆ. ಆಕೆ ಪ್ರಸಿದ್ಧ ಕಲಾವಿದ ವಿನ್ಸೆಂಟ್ ವ್ಯಾನ್ ಗೋನನ್ನು ಭೇಟಿಯಾಗಿದ್ದಳು. ತನ್ನ 114ನೇ ವಯಸ್ಸಿನಲ್ಲಿ `ವಿನ್ಸೆಂಟ್ ಯತ್ ಮೊಯಿ’ ಚಿತ್ರದಲ್ಲಿ ನಟಿಸಿದ್ದಳು. ಇದು ನಂಬಬಹುದು. ಈ ವಿಚಾರವನ್ನು ಸ್ವಲ್ಪ ಬದಿಗೆ ಸರಿಸೋಣ.

ಬಿಲ್ಲು ತಲೆಯ ತಿಮಿಂಗಿಲ (ಬೋ ಹೆಡ್ ವೇಲ್) ಅತಿ ದೀರ್ಘಾಯುವೆಂದು ದಾಖಲೆಯಾಗಿದೆ. ಸುಮಾರು 211 ವರ್ಷ ಬದುಕಿದ್ದಕ್ಕೆ ಸಾಕ್ಷಿ ಇದೆ. ಆದರೆ ಗ್ರೀನ್‍ಲ್ಯಾಂಡಿನ ಶಾರ್ಕ್ ಯಾವುದೇ ಸ್ಪರ್ಧೆಗಿಳಿಯದೆ ಆ ದಾಖಲೆಯನ್ನು ಮುರಿದುಬಿಟ್ಟಿದೆ. ವಾಸ್ತವವಾಗಿ ಶಾರ್ಕ್‍ಗಳನ್ನು ಮೀರಿಸುವ ಅನೇಕ ಅಕಶೇರುಕ (ಇನ್‍ವರ್ಟಿಬ್ರೇಟ್) ಸಾಗರಜೀವಿಗಳಿವೆ. ಐಸ್ಲೆಂಡಿನ ಮೃದ್ವಂಗಿ (ಮೊಲಸ್ಕ)  ವಿಭಾಗಕ್ಕೆ ಸೇರಿದ ಜೀವಿಯೊಂದು 507 ವರ್ಷ ಬದುಕಿರುವುದನ್ನು ಜೀವಿವಿಜ್ಞಾನಿಗಳು ಸ್ಪಷ್ಟವಾಗಿ ಗುರುತಿಸಿದ್ದಾರೆ.

ಶಾರ್ಕ್‍ಗಳು ದೀರ್ಘಾಯುಗಳೆಂಬುದು ತಜ್ಞರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಸುಮಾರು 20 ವರ್ಷವೂ ಇರಬಹುದು, ಸಾವಿರ ವರ್ಷವೂ ಇರಬಹುದು ಎಂಬ ಉಡಾಫೆ ಮಾತುಗಳೇ ಕೇಳಿಬರುತ್ತಿದ್ದವು. ಜ್ಯೂಲಿಯಸ್ ನೆಲ್ಸನ್ ಎಂಬಾತ ಕೋಪನ್‍ಹ್ಯಾಗನ್ ವಿಶ್ವವಿದ್ಯಾಲಯದ ಸಂಶೋಧಕ. ಒಂದು ತಂಡ ಕಟ್ಟಿಕೊಂಡು ಗ್ರೀನ್‍ಲ್ಯಾಂಡಿನ ಸುತ್ತಣ ಸಾಗರದಲ್ಲಿ 2010-2013ರಲ್ಲಿ ಶಾರ್ಕ್‍ಗಳ ಅಧ್ಯಯನಕ್ಕೆಂದೇ ಬಂದಿದ್ದ. 28 ಹೆಣ್ಣು ಶಾರ್ಕ್‍ಗಳು ಬಲೆಗೆ ಬಿದ್ದಿದ್ದವು. ಆ ಪೈಕಿ 8 ಶಾರ್ಕ್‍ಗಳು ಸುಮಾರು 200 ವರ್ಷ ಬಾಳಿದ್ದವು. ಎರಡು, ಮುನ್ನೂರು ವರ್ಷ ಬಾಳಿದ್ದವು. ಉಳಿದವು ಎರಡನೇ ಮಹಾಯುದ್ಧದ ನಂತರ ಜನಿಸಿದ್ದವು. ಲಿವರ್‍ಪೂಲ್ ವಿಶ್ವವಿದ್ಯಾಲಯದಲ್ಲಿ, ಶಾರ್ಕ್‍ಗಳು ಹೇಗೆ ಮುದಿತನ ಅನುಭವಿಸುತ್ತವೆ ಎನ್ನುವ ಬಗ್ಗೆಯೇ ವಿಶೇಷ ಅಧ್ಯಯನ ಮಾಡಲಾಗುತ್ತಿದೆ. ಅಲ್ಲಿನ ವರದಿಯಂತೆ ವಾಸ್ತವವಾಗಿ ಗ್ರೀನ್‍ಲ್ಯಾಂಡಿನ ಶಾರ್ಕ್‍ಗಳು ಆಹಾರದ ಪಿರಮಿಡ್ಡಿನಲ್ಲಿ ತುದಿಯಲ್ಲಿವೆ. ಇದರರ್ಥ ಇವು ಮಹಾಭಕ್ಷಕ. ಇನ್ನೂ ವಿಶೇಷವೆಂದರೆ ಅವು ಐದು ಮೀಟರ್ ಉದ್ದ ಬೆಳೆಯಬಲ್ಲವು. ಆದರೆ ಬಹು ನಿಧಾನ ಗತಿಯ ಬೆಳವಣಿಗೆ. ವರ್ಷಕ್ಕೆ ಒಂದು ಸೆಂ.ಮೀ. ಅಷ್ಟೇ. ಇದಕ್ಕಿಂತಲೂ ವಿಸ್ಮಯ ಎನ್ನಿಸುವುದು ಅವು ಪ್ರೌಢಾವಸ್ಥೆಗೆ ಅಂದರೆ ಹೆಣ್ಣು ಗರ್ಭ ಧರಿಸುವ ಹಂತಕ್ಕೆ ಬರಲು 150 ವರ್ಷಗಳು ಬೇಕೆಂದು ಈಗಿನ ಅಧ್ಯಯನ ಖಚಿತಪಡಿಸಿವೆ-`ಗಜಗರ್ಭ’ ಎನ್ನುವುದಕ್ಕೆ ಈಗ ಅರ್ಥವೇ ಇಲ್ಲ. ಶಾರ್ಕ್‍ಗಳ ದೀರ್ಘಾಯುಷ್ಯದ ಗುಟ್ಟು ಗ್ರೀನ್‍ಲ್ಯಾಂಡ್ ಸುತ್ತಣ ಸಮುದ್ರದ ಅತಿಶೀತಲ ನೀರು ಜೊತೆಗೆ ಅವುಗಳ ಶರೀರದಲ್ಲಿ ನಡೆಯುವ ಚಯಾಪಚಯ (ಮೆಟಬಾಲಿಸಂ) –ಅಂದರೆ ಆಹಾರ ಜೀರ್ಣವಾಗಿ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ನಡೆಯುವುದು.

green-land

ಸಾಗರ ಜೀವಿಗಳ ತಜ್ಞರ ಅಭಿಪ್ರಾಯದಲ್ಲಿ ಮೀನುಗಳ ವಯಸ್ಸನ್ನು ಅಳೆಯುವುದು ಅಂಥ ಕಷ್ಟವೇನಿಲ್ಲ. ಮೀನುಗಳ ಕಿವಿಗಳಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಕಲ್ಲು ಸ್ತರಸ್ತರವಾಗಿ ಬೆಳೆಯುತ್ತವೆ. ಅವುಗಳನ್ನು ಎಣಿಸಬಹುದು-ಮರಗಳ ಕಾಂಡದಲ್ಲಿ ವಾರ್ಷಿಕ ಉಂಗುರ ಎಣಿಸಿ ಅವುಗಳ ವಯಸ್ಸನ್ನು ನಿರ್ಧರಿಸುವಂತೆ. ಆದರೆ ಶಾರ್ಕ್‍ಗಳಲ್ಲಿ ಈ ಬಗೆಯ ಬೆಳವಣಿಗೆ ಇಲ್ಲ. ಆದ್ದರಿಂದ ಅದರ ವಯಸ್ಸನ್ನು ನಿರ್ಧರಿಸಲು ಬೇರೆಯದೇ ತಂತ್ರ ಅನ್ವಯಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಅವುಗಳ ಊತಕಗಳಲ್ಲಿ (ಟಿಷ್ಯು) ಅಧಿಕ ಕ್ಯಾಲ್ಸಿಯಂ ಇರುವುದಿಲ್ಲ. ಆದರೆ ಅವುಗಳ ಕಣ್ಣಿನ ಮಸೂರಗಳು ವಯಸ್ಸನ್ನು ಅರಿಯಲು ನೆರವಿಗೆ ಬರುತ್ತವೆ. ಈ ಮಸೂರಗಳ ಕೇಂದ್ರದಲ್ಲಿ ಕಾಲ ಕಳೆದ ಹಾಗೆ ಪ್ರೋಟೀನ್ ಹೆಚ್ಚುತ್ತ ಹೋಗುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಪ್ರೊಟೀನ್ ಆಧರಿಸಿ ಕಾಲನಿರ್ಣಯ ಮಾಡುವುದಕ್ಕೆ ಈಗಾಗಲೇ ಬಳಕೆಯಲ್ಲಿರುವ ಒಂದು ತಂತ್ರವಿದೆ. ಕಾರ್ಬನ್-14 ಎಂಬ ಒಂದು ಬಗೆ ವಿಕಿರಣ ಸೂಸುತ್ತ ಕ್ಷಯಿಸುತ್ತದೆ ಎನ್ನುವುದು ಈಗಾಗಲೇ ತಿಳಿದಿರುವ ಸಂಗತಿ. ಸಾಮಾನ್ಯವಾಗಿ ಪುರಾತತ್ತ್ವ ಇಲಾಖೆ ಪ್ರಾಚೀನ ಕಟ್ಟಡಗಳಲ್ಲಿ ಬಳಸಿದ ಮರದ ವಯಸ್ಸನ್ನು ಹೇಳಲು ಈ ತಂತ್ರ ಬಳಸುತ್ತದೆ..

ಇಲ್ಲಿ ಬೇರೆಯದೇ ಆದ ಸಮಸ್ಯೆ ಎದುರಾಗುತ್ತದೆ. ತಜ್ಞರು ಸಂಗ್ರಹಿಸಿದ ಕೆಲವು ಶಾರ್ಕ್ ಮರಿಗಳಲ್ಲಿ ಸಿ-14 ಪ್ರಮಾಣ ಜಾಸ್ತಿಯೇ ಇತ್ತು. ಇದಕ್ಕೂ ಕಾರಣವನ್ನು ಪತ್ತೆಹಚ್ಚಿದರು. ಎರಡನೇ ಮಹಾಯುದ್ಧ ಸಮಯದಲ್ಲಿ ಸಿಡಿಸಿದ ಪರಮಾಣು ಬಾಂಬು ವಾಯುಗೋಳದಲ್ಲಿ ಸಿ-14 ಪ್ರಮಾಣವನ್ನು ಹೆಚ್ಚಿಸಿತ್ತು. ಸಾಗರದಲ್ಲಿ ಅದು ಆಹಾರ ಸರಪಳಿಯ ಮೂಲಕ ಇತರ ಜೀವಿಗಳ ಒಡಲನ್ನು ಸೇರಿದಂತೆ ಶಾರ್ಕ್‍ಗಳ ದೇಹವನ್ನೂ ಪ್ರವೇಶಿಸಿತ್ತು. ಅದು ಅವುಗಳ ಸಂತಾನಕ್ಕೂ ವರ್ಗಾವಣೆಯಾಗಿತ್ತು. ಆದ್ದರಿಂದ ಇಂಥ ಶಾರ್ಕ್‍ಗಳೆಲ್ಲವೂ ಕಳೆದ ಐವತ್ತರ ದಶಕಗಳಿಂದ ಈಚೆಗೆ ಹುಟ್ಟಿದವು ಎಂದು ಹೇಳುವುದು ಸುಲಭವಾಗಿತ್ತು.

green-land-shar-k1

ಒಂದು ಶಾರ್ಕ್ 400 ವರ್ಷ ಬಾಳಿದೆ ಎಂದು ಲೆಕ್ಕ ಹಾಕಿದಾಗ ಇದೊಂದು ಅಂದಾಜು ಎಂದು ಮಾತ್ರ ಎಂದು ತೆಗೆದುಕೊಳ್ಳಬೇಕೆಂದು ತಜ್ಞರು ನುಡಿದಿದ್ದಾರೆ. ಕೆಲವರು ಇದರ ಜೀವಿತಾವಧಿ 272ರಿಂದ 512 ವರ್ಷದವರೆಗೆ ಇರಬಹುದು ಎಂದು ತರ್ಕಿಸಿದ್ದಾರೆ.

ಇದೇನೇ ಇರಲಿ, ಮನುಷ್ಯನಂತೂ ಒಂದೂವರೆ ಸೆಂಚುರಿ ದಾಟಿದ ಉದಾಹರಣೆ ಇಲ್ಲ. ಅವೇನಿದ್ದರೂ ಪುರಾಣಗಳಲ್ಲಿ ಮಾತ್ರ. ಆದರೆ ಎಲ್ಲ ಜೀವಿಗಳ ಆಯುಷ್ಯವನ್ನೂ ಮೊಟಕುಮಾಡುವ ತಂತ್ರವಂತೂ ಮನುಷ್ಯನಿಗೆ ಸಿದ್ಧಿಸಿದೆ. ಸದ್ಯ ಜಗತ್ತಿನ ಸಾರ್ವಭೌಮರೆಂದರೆ ನಾವೇ. ಹಾಗೆಂದು ಎಲ್ಲರೂ `ಹಿಂಸಾನಂದ’ರಲ್ಲ. ಬೇರೆ ಬೇರೆ ಜೀವಿಗಳ ಆಹಾರ ಸೇವನೆ, ವರ್ತನೆ, ಅಭಿವರ್ಧನೆ, ಆಯುಷ್ಯ ಇವೆಲ್ಲವನ್ನೂ ದೀರ್ಘಕಾಲ ಅಧ್ಯಯನಮಾಡಿ ಖಚಿತಪಡಿಸಿಕೊಂಡರೆ ಭೂಮಿಯಲ್ಲಾಗಲಿ, ಸಾಗರದಲ್ಲಾಗಲಿ ಅವುಗಳ ಸಂರಕ್ಷಣೆಯನ್ನು ವೈಜ್ಞಾನಿಕ ವಿಧಾನದಿಂದ ರೂಪಿಸಬಹುದು. `ಮೆರೈನ್ ಪಾರ್ಕ್’ ಸ್ಥಾಪನೆಯ ಉದ್ದೇಶವೂ ಇದೇ. ಇಷ್ಟೆಲ್ಲ ಎಚ್ಚರಿಕೆ, ಕಾಳಜಿ ತೆಗೆದುಕೊಂಡರೂ ಪ್ರತಿವರ್ಷವೂ ಅಳಿವಿನಂಚಿಗೆ ಬರುವ ಜೀವಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಅದು ನಮ್ಮ ಪಾಪದ ಅಳತೆಗೋಲೂ ಹೌದು.

2 COMMENTS

  1. ಒಳ್ಳೆಯ ಮಾಹಿತಿಗೆ ಧನ್ಯವಾದಗಳು ಸರ್. ಆದರೆ ನನಗೊಂದು ಮಾಹಿತಿ ಬೇಕಿತ್ತು. ಅವರ ಶಿಪ್ಪಿನೊಳಗೆ ಆ ಶಾರ್ಕ್ ಕಂಡು ಕಳವಳಗೊಂಡು ಕೇಳುತ್ತಿರುವೆ ಅಷ್ಟೆ. ಗ್ರೀನ್ ಲ್ಯಾಂಡ್ ಸುತ್ತ ಶಾರ್ಕ್ ಗಳ ವಯಸ್ಸು ಅಳೆಯುವ ಪ್ರಯೋಗದಲ್ಲಿ ಇವರು ಶಾರ್ಕ್ ಗಳನ್ನು ಕೊಂದುಹಾಕಿಲ್ಲ ತಾನೆ? ಜೀವಂತವಾಗಿದ್ದಾಗಲೇ ವಯಸ್ಸು ಅಳೆದು, ವಾಪಸ್ ಸಮುದ್ರಕ್ಕೆ ಬಿಡಬಹುದಾ?

  2. ಇಲ್ಲ.ಅದು ಮೊದಲೇ ಸತ್ತುಹೋಗಿತ್ತು, ಅನಂತರವಷ್ಷೆ ಅದರ ವಯಸ್ಸು ಅಳೆದದ್ದು

Leave a Reply