ಕೇರಳದ ರಸ್ತೆ ತೆರಿಗೆ ನೀತಿ ಕರ್ನಾಟಕದ ಯಾತ್ರಿಕರಿಗೆ ಉಸ್ಸಪ್ಪ ಅನ್ನಿಸಿರೋದೇಕೆ ಗೊತ್ತೇ?

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಈ ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡುವ ರಾಜ್ಯದ ಭಕ್ತರಿಗೆ ಕೆರಳ ಸರ್ಕಾರದ ತೆರಿಗೆ ಬಿಸಿ ತಾಗುತ್ತಿದೆ. ಕಾರಣ ಏನಂದ್ರೆ, ಕೇರಳ ಸರ್ಕಾರ ಕರ್ನಾಟಕದಿಂದ ಕೇರಳಕ್ಕೆ ತೆರಳುವ ರಾಜ್ಯದ ಎಲ್ಲಾ ಖಾಸಗಿ ವಾಹನಗಳಿಗೂ ವಾರ್ಷಿಕ ತೆರಿಗೆಯನ್ನು ಹಾಕಿದೆ. ಈ ನೀತಿ ಆಗಸ್ಟಿನಲ್ಲೇ ಜಾರಿಗೆ ಬಂದಿದ್ದರೂ, ಕರ್ನಾಟಕದ ಯಾತ್ರಿಕರಿಗೆ ಅತಿಯಾಗಿ ಕಾಡುತ್ತಿರುವುದು ಶಬರಿಮಲೈ ಯಾತ್ರೆಯ ಈ ಸಂದರ್ಭದಲ್ಲೇ.

ಕೇರಳ ಸರ್ಕಾರ ಕಳೆದ ಜುಲೈ 18ರಂದು ಕರ್ನಾಟಕದಲ್ಲಿ ನೋಂದಣಿಯಾದ ಎಲ್ಲಾ ಪ್ರವಾಸಿ ವಾಹನಗಳಿಗೂ ವಾರ್ಷಿಕ ತೆರಿಗೆಯನ್ನು ವಿಧಿಸಿದೆ. ಅದರೊಂದಿಗೆ ರಾಜ್ಯದಲ್ಲಿ ನೋಂದಣಿಯಾದ ವಾಹನಗಳು ಕೇರಳಕ್ಕೆ ತೆರಳಬೇಕಾದರೆ ತೆರಿಗೆಯನ್ನು ಕಟ್ಟಬೇಕಿದೆ. ಈ ತೆರಿಗೆಯನ್ನು ಕಟ್ಟಿದರೆ ಆ ವಾಹನ ಎಷ್ಟು ಬಾರಿ ಬೇಕಾದರೂ ಕೇರಳಕ್ಕೆ ಸಂಚಾರ ಮಾಡಬಹುದಾಗಿದೆ. ಈ ತೆರಿಗೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಉಳಿದಂತೆ ಪ್ರವಾಸಿ ವಾಹನಗಳು ಹಾಗೂ ಖಾಸಗಿ ಬಸ್ ಗಳು ಈ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ.

ಕೇವಲ ಕರ್ನಾಟಕದಲ್ಲಿ ನೋಂದಣಿಯಾದ ವಾಹನಗಳಿಗೆ ಮಾತ್ರ ಈ ರೀತಿಯಾಗಿ ವಾರ್ಷಿಕ ತೆರಿಗೆ ಹಾಕಿದ್ದು, ಉಳಿದ ರಾಜ್ಯಗಳ ವಾಹನಗಳು ಕೇವಲ ಪ್ರವೇಶ ತೆರಿಗೆಯನ್ನು ಮಾತ್ರ ಕಟ್ಟಬೇಕಿದೆ.

ಇದೇಕೆ ಹೇಗೆ ಎಂಬುದಕ್ಕೆ ಕೇರಳದ ಬಳಿ ಉತ್ತರವಿದೆ. ಕರ್ನಾಟಕದ ಪ್ರವೇಶ ಶುಲ್ಕ ಲಾಗಾಯ್ತಿನಿಂದಲೂ ಹೆಚ್ಚಾಗಿತ್ತು. ಈ ಬಗ್ಗೆ ಹಲವು ಚೌಕಾಶಿಗಳಾದರೂ ಫಲ ಕೊಟ್ಟಿಲ್ಲ. ಹೀಗಾಗಿ ಈ ನೀತಿ ಅನುಸರಿಸುತ್ತಿದ್ದೇವೆನ್ನುವ ಅಲ್ಲಿನ ಸರ್ಕಾರ, ಕರ್ನಾಟಕಕ್ಕೆ ಹೀಗೊಂದು ಸಮಬಲ ಉತ್ತರ ನೀಡಲು ಹೊರಟಿದ್ದರ ಪರಿಣಾಮ ಯಾತ್ರಿಗಳ ಮೇಲಾಗಿದೆ. ಹಿಂದೆಲ್ಲ ಏಳು ದಿನಗಳ ಮಟ್ಟಿಗಿನ ಪ್ರವೇಶ ಶುಲ್ಕ ತುಂಬುವ ಅವಕಾಶವಿತ್ತು. ಆಗ ₹150-₹200 ತಗುಲುತ್ತಿದ್ದ ವೆಚ್ಚ ಈಗ ವಾರ್ಷಿಕ ತೆರಿಗೆ ರೂಪದಲ್ಲಿ ₹2500-₹3000ದವರೆಗೂ ಆಗುತ್ತದೆ. ಕೇರಳದೊಂದಿಗೆ ವಾರ್ಷಿಕ ವಹಿವಾಟು ಇಟ್ಟುಕೊಂಡವರಿಗೆ ಇದು ಅನುಕೂಲವಾಗಬಹುದಾದರೂ ವರ್ಷಕ್ಕೊಮ್ಮೆ ಯಾತ್ರೆಗೆ ಹೋಗುವಾಗ ಕರ್ನಾಟಕದ ವಾಹನಗಳನ್ನು ಬಳಸುವವರಿಗೆ ವೆಚ್ಚ ಅತಿಯೆನಿಸುತ್ತದೆ.

ಈಗ ರಾಜ್ಯದಿಂದ ಶಬರಿ ಮಲೆಗೆ ಅಯ್ಯಪ್ಪ ಸ್ವಾಮಿ ಭಕ್ತರು ತೆರಳುವ ಸಂಖ್ಯೆ ಹೆಚ್ಚಾಗಿದ್ದು, ಕೇವಲ ಈ ಸಂದರ್ಭದಲ್ಲಿ ಖಾಸಗಿ ವಾಹನ ಸೇವಕರು ಕೇರಳ ಮಾರ್ಗಕ್ಕೆ ಹೆಚ್ಚಿನ ಬಸ್ ಬಿಟ್ಟಿರುತ್ತಾರೆ. ಕೇರಳ ಸರ್ಕಾರದ ಈ ತೆರಿಗೆ ಪರಿಣಾಮ ಖಾಸಗಿ ವಾಹನದಾರರಿಗೆ ಕಷ್ಟವಾಗಿದ್ದು, ಇದರ ಪರಿಣಾಮ ಭಕ್ತರ ಮೇಲೆ ಬೀಳುತ್ತಿದೆ.

ಅಯ್ಯಪ್ಪ ಸ್ವಾಮಿ ಭಕ್ತರ ಸಮಸ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕೇರಳ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ‘ಕೇರಳ ಸರ್ಕಾರದ ಈ ತೆರಿಗೆ ನಿರ್ಧಾರದಿಂದ ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಬಗ್ಗೆ ಕೇರಳ ಸರ್ಕಾರಕ್ಕೆ ಸದ್ಯದಲ್ಲೇ ಪತ್ರ ಬರೆಯುತ್ತೇನೆ’ ಎಂದು ಹೇಳಿದ್ದಾರೆ ದೇವೇಗೌಡ್ರು.

Leave a Reply