ಕಾಮನಬಿಲ್ಲು ನೋಡಿ ಖುಷಿ ಪಟ್ಟಿರೋ ನಿಮಗೆ ಚಂದ್ರನಬಿಲ್ಲಿನ ಬಗ್ಗೆ ಗೊತ್ತೇ?

ಡಿಜಿಟಲ್ ಕನ್ನಡ ವಿಶೇಷ:

ಬಿಸಿಲು ಮಳೆ ಬಂದಾಗ ಆಗಸದಲ್ಲಿ ಕಾಮನ ಬಿಲ್ಲಿನ ಸೌಂದರ್ಯವನ್ನು ನೀವೆಲ್ಲಾ ಕಣ್ತುಂಬಿಕೊಂಡಿರುತ್ತೀರಿ. ಆದರೆ ಎಂದಾದರು ಚಂದ್ರನಬಿಲ್ಲು (ಮೂನ್ ಬೋ) ಅಂದರೆ ಬಿಳಿ ಕಾಮನ ಬಿಲ್ಲನ್ನು ನೋಡಿದ್ದೀರಾ?

ಏನಿದು ಬಿಳಿ ಕಾಮನ ಬಿಲ್ಲು? ಬಿಳಿ ಬಣ್ಣದಲ್ಲೂ ಕಾಮನ ಬಿಲ್ಲು ಇದೆಯಾ? ಎಂದು ಯೋಚಿಸ್ತಿದ್ದೀರಾ…  ಹೌದು ಇದೆ. ಇದು ಕೇಳೋಕೆ ವೈಜ್ಞಾನಿಕ ಕಲ್ಪನೆಯಂತೆ ಕೇಳಿಸುವ ಇದು ಎಲ್ಲೆಡೆ ಕಾಣುವುದಿಲ್ಲ. ಇವು ಕಾಣಸಿಗುವುದು ತೀರಾ ವಿರಳ.

ಈ ಶ್ವೇತ ಕಾಮನಬಿಲ್ಲು ಕಾಣಸಿಗುವುದು ನಾಲ್ಕು ಸಂದರ್ಭಗಳಲ್ಲಿ ಮಾತ್ರ. ಹವಾಯಿಯಲ್ಲಿ ಜ್ವಾಲಾಮುಖಿ ಉಕ್ಕಿ ಹರಿದಾಗ, ಕ್ಯಾಲಿಫೋರ್ನಿಯಾದ ಯೊಸೆಸಿಟೆ ಜಲಪಾತದ ತಳದಲ್ಲಿ ಹಿಮ ಕರಗುವ ಸಮಯದಲ್ಲಿ, ಕೋಸ್ಟಾರಿಕಾದಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ಮೊದಲ ವಾರದ ವೇಳೆ ಮೋಡದಲ್ಲಿ ಕ್ರಿಸ್ ಮಸ್ ಗಾಳಿ ಬೀಸುತ್ತಿರುವಾಗ, ಕೆಲವು ಕಡೆ ಅಪರೂಪಕ್ಕೆ ಪೂರ್ಣ ಹುಣ್ಣಿಮೆ ದಿನ ಹಾಗೂ ಹುಣ್ಣಿಮೆಯ ರಾತ್ರಿ ಮಳೆ ಬೀಳುವಾಗ ಈ ಶ್ವೇತ ಕಾಮನಬಿಲ್ಲು ಮೂಡುತ್ತವೆ.

ಈ ಶ್ವೇತ ಕಾಮನಬಿಲ್ಲನ್ನು ಕಣ್ತುಂಬಿಕೊಳ್ಳಬೇಕಾದರೆ, ನೀವು ಹುಣ್ಣಿಮೆ ಸಂದರ್ಭದಲ್ಲಿ ಜಿಂಬಾಬ್ವೆ ಮತ್ತು ಜಾಂಬಿಯಾ ಗಡಿ ಪ್ರದೇಶದಲ್ಲಿರುವ ವಿಕ್ಟೋರಿಯಾ ಜಲಪಾತ ಮತ್ತು ಅಮೆರಿಕದ ಕೆಂಟುಕಿಯ ಕಂಬರ್ ಲ್ಯಾಂಡ್ ಜಲಪಾತಗಳಿಗೆ ಭೇಟಿ ನೀಡಬೇಕು. ಇಲ್ಲಿ ಬೆಳಗಿನ ಸಮಯದಲ್ಲಿ ಕಾಮನ ಬಿಲ್ಲು ಮೂಡಿದರೆ, ಹುಣ್ಣಿಮೆಯ ದಿನ ಸ್ವಚ್ಛ ಆಗಸವಿದ್ದಾಗ ಶ್ವೇತ ಕಾಮನಬಿಲ್ಲು ಕಾಣ ಸಿಗುತ್ತದೆ. ಇನ್ನು ಈ ಹಿಂದೆ ನಯಾಗರ ಜಲಪಾತದಲ್ಲೂ ಈ ಶ್ವೇತ ಕಾಮನಬಿಲ್ಲನ್ನು ಕಾಣಬಹುದಿತ್ತು. ಈಗ ಅಲ್ಲಿನ ಪರಿಸರ ಮಾಲಿನ್ಯದಿಂದಾಗಿ ಈಗ ಅಲ್ಲಿ ಈ ಶ್ವೇತ ಕಾಮನ ಬಿಲ್ಲು ಕಾಣುವುದಿಲ್ಲ ಎನ್ನುತ್ತಾರೆ ತಜ್ಞರು.

ಈ ಶ್ವೇತ ಕಾಮನಬಿಲ್ಲು ಪ್ರತಿ ತಿಂಗಳು ಐದು ರಾತ್ರಿಗಳು ಕಾಣಸಿಗುತ್ತವೆ. ಹುಣ್ಣಿಮೆಯ ಪೂರ್ವ 2-3 ದಿನ ಹಾಗೂ ಹುಣ್ಣಿಮೆಯ ನಂತರದ 2-3 ರಾತ್ರಿಗಳು ಬಿಳಿ ಕಾಮನಬಿಲ್ಲು ಮೂಡುತ್ತವೆ. ಆದರೆ ಈ ಸಂದರ್ಭದಲ್ಲಿ ವಾತಾವರಣ ಹಾಗೂ ಆಗಸ ಸಂಪೂರ್ಣವಾಗಿ ತಿಳಿಯಾಗಿದ್ದರೆ ಮಾತ್ರ ಶ್ವೇತ ಕಾಮನಬಿಲ್ಲು ಕಣ್ಣಿಗೆ ಕಾಣುತ್ತದೆ.

ಹವಾಮಾನ ತಜ್ಞರು ಮಾಹಿತಿ ಪ್ರಕಾರ ನವೆಂಬರ್ ಮತ್ತು ಡಿಸೆಂಬರಿನ ಚಳಿಗಾಲದಲ್ಲಿ ಈ ಶ್ವೇತ ಕಾಮನಬಿಲ್ಲು ಸಂಜೆ 6.30 ಸುಮಾರಿಗೆ ಕಾಣಸಿಗುತ್ತದೆ. ಇನ್ನು ಇನ್ನು ಬೇಸಿಗೆಯಲ್ಲಿ ರಾತ್ರಿ 9.30ರ ಸುಮಾರಿಗೆ ಈ ಇವು ಮೂಡುತ್ತವೆ. ವಿಕ್ಟೋರಿಯಾ ಹಾಗೂ ಕಂಬರ್ ಲ್ಯಾಂಡ್ ಜಲಪಾತ ಪ್ರದೇಶಗಳಲ್ಲಿ ಮೂಡುವ ಈ ಶ್ವೇತ ಕಾಮನಬಿಲ್ಲನ್ನು ನೋಡಲೆಂದೆ ಸಾವಿರಾರು ಪ್ರವಾಸಿಗರು ಕಾತುರದಿಂದ ಕಾಯುತ್ತಾರೆ.

ಒಟ್ಟಿನಲ್ಲಿ ಪ್ರಕೃತಿಯ ಇಂತಹ ವರ್ಣರಂಜಿತ ಚಿತ್ತಾರಗಳನ್ನು ನೋಡಿ ಕಣ್ತುಂಬಿಕೊಳ್ಳುವುದು ಒಂದು ರೋಚಕ ಅನುಭವ ಎಂದರೆ ತಪ್ಪಿಲ್ಲ.

Leave a Reply