ಉ.ಪ್ರ. ಯಾದವರ ಮಂಗಾಟ, ಶಶಿಕಲಾ- ಪೇಮಾ ಖಂಡು ಹೊಸ ಆಟ, ಪ್ರಧಾನಿ ಭೇಟಿ ನಂತರ ಮುಖ್ಯಮಂತ್ರಿಗಳ ಆರೋಪ ಉವಾಚ, 2017 ವನ್ಯಜೀವಿ ವರ್ಷ

ಕರ್ನಾಟಕ ಪ್ರವಾಸೋದ್ಯಮದ ವಿಷನ್ ಗ್ರೂಪ್ ಸಭೆ. ಚಿತ್ರಕೃಪೆ- ಸಚಿವ ಪ್ರಿಯಾಂಕ ಖರ್ಗೆ ಟ್ವಿಟರ್ ಪುಟ

 

3 ರಾಜಕೀಯ ಆಟಗಳು

ಶನಿವಾರ ಭಾರತೀಯ ರಾಜಕಾರಣದ ಬೇರೆ ಬೇರೆ ರಂಗಗಳಲ್ಲಿ ಮೂರು ರಂಗಿ ರಂಗು ವಿದ್ಯಮಾನಗಳು ನಡೆದಿವೆ.

ಶುಕ್ರವಾರವಷ್ಟೇ ಸಮಾಜವಾದಿ ಪಕ್ಷದಿಂದ ಮಗ ಅಖಿಲೇಶ್ ಯಾದವ್ ಹಾಗೂ ಸಹೋದರ ರಾಮ್ಗೋಪಾಲ್ ಯಾದವರನ್ನು ಅಮಾನತುಗೊಳಿಸಿದ್ದಾಗಿ ಘೋಷಿಸಿದ್ದ ಪಕ್ಷ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಶನಿವಾರ ಆ ಆದೇಶವನ್ನು ಹಿಂಪಡೆದು ನಾಟಕ ಸಧ್ಯಕ್ಕೆ ಕೊನೆಗೊಳಿಸಿದರು. ಹೆಚ್ಚಿನ ಶಾಸಕರು ಅಖಿಲೇಶ್ ಜತೆ ನಿಂತಿದ್ದು ಮುಲಾಯಂ ಮೆತ್ತಗಾಗಲು ಕಾರಣವಾಯಿತು ಎಂಬ ವರದಿಗಳು ಒಂದೆಡೆಯಾದರೆ, ಇದು ಸುಮ್ಮನೇ ಮಾಡಲಾದ ನಾಟಕ ಎಂಬ ವಿಶ್ಲೇಷಣೆಗಳೂ ಬಂದಿವೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಚುಕ್ಕಾಣಿಯನ್ನು ನಿರೀಕ್ಷೆಯಂತೆ ಶಶಿಕಲಾ ಹಿಡಿದಿದ್ದಾರೆ. ಎಂಜಿಆರ್ ಜನ್ಮ ಶತಮಾನೋತ್ಸವ ವರ್ಷದ ವಿಜೃಂಭಣೆಯ ಆಚರಣೆ, ಜಯಾ ದಾರಿಯಲ್ಲಿ ಮುಂದುವರಿಯುವ ಮಾತು ಇವೆಲ್ಲ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಶಶಿಕಲಾ ಉವಾಚಗಳು.

ಇನ್ನು ಅರುಣಾಚಲ ಕೇಸರಿಮಯವಾಗಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ತನ್ನ ಬೆಂಬಲ ಸೂಚಿಸಿ ಅದರ ಮುಖ್ಯಸ್ಥ ಪೇಮಾ ಖಂಡು ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡಿತ್ತು ಬಿಜೆಪಿ. ಇದೀಗ ಪಿಪಿಎಯ 43 ಶಾಸಕರ ಪೈಕಿ ಪೇಮಾ ನೇತೃತ್ವದಲ್ಲಿ 33 ಮಂದಿ ಬಿಜೆಪಿ ಸೇರಿ ಅರುಣಾಚಲದಲ್ಲಿ ಕಮಲ ಅರಳಿಸಿದ್ದಾರೆ.

 2017 ರಾಜ್ಯದಲ್ಲಿ ವನ್ಯಜೀವಿ ವರ್ಷ

ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮುಂದಿನ 2017ನ್ನು ವನ್ಯ ಜೀವಿ ವರ್ಷ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಮತ್ತು ವಿಹಾರಧಾಮಗಳ ಕ್ಯಾಲೆಂಡರ್ ಬಿಡುಗಡೆ ಮಾಡಿ, ಪ್ರವಾಸೋದ್ಯಮ ಇಲಾಖೆ ಆ್ಯಪ್‍ನ್ನು ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಮುಂದಿನ ವರ್ಷವನ್ನು ವನ್ಯ ಜೀವಿ ವರ್ಷ ಎಂದು ಘೋಷಿಸಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು- ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ರಾಜ್ಯದಲ್ಲಿ 17 ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ಗಳಿವೆ. ಅವುಗಳಿಗೆ ವೆಬ್‍ಸೈಟ್ ಮೂಲಕ ಬುಕ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇನ್ನು ಮೊಬೈಲ್ ಮೂಲಕವೂ ಬುಕ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ಪಶ್ಚಿಮಘಟ್ಟ, ಚಂದ್ರಗಿರಿ ಮತ್ತಿತರೆಡೆ ಅನಧಿಕೃತವಾಗಿ ಟೇಲರಿಂಗ್ ನಡೆಯುತ್ತಿತ್ತು. ಅದನ್ನು ತಪ್ಪಿಸಲು ಪ್ರವಾಸೋದ್ಯಮ ಇಲಾಖೆಯೇ 9 ಕಡೆ ಅಧಿಕೃತವಾಗಿ ಟೇಲರಿಂಗ್ ಕ್ರೀಡೆಯನ್ನು ಆರಂಭಿಸುತ್ತಿದೆ. ಮೈಸೂರು, ಮಂಗಳೂರಿನಲ್ಲಿ ಸರ್ಫಿಂಗ್ ಕ್ರೀಡೆಯನ್ನು ಆರಂಭಿಸಲಾಗುತ್ತಿದೆ. ಬೆಳಗಾವಿ ಮತ್ತಿತರ ಕಡೆ ಸಾಹಸಮಯ ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ. ಹೋಂ ಸ್ಟೇ ಗಳಿಗೆ ಅಧಿಕೃತ ನೋಂದಣಿ ಪಡೆದುಕೊಳ್ಳಲು ಜ.26ರವರೆಗೂ ಕಾಲಾವಕಾಶ ನೀಡಲಾಗಿದೆ. ಈವರೆಗೂ 500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಹಂತದಲ್ಲಿ 250, ಎರಡನೆ ಹಂತದಲ್ಲಿ 400 ಅರ್ಜಿಗಳು ಬಂದಿದ್ದವು. ಬಹಳಷ್ಟು ಮಂದಿಗೆ ಹೋಂ ಸ್ಟೇಯಲ್ಲಿರುವ ಲಾಭ, ಅನುಕೂಲತೆಗಳ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದೇವೆ.

ಬರ ಪರಿಹಾರಕ್ಕೆ ಕೇಂದ್ರವನ್ನೇ ನಂಬಿಲ್ಲ- ಮುಮಂ

ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ನೆರವು ಕೊಡುತ್ತೇ ಎಂದು ಕೈ ಕಟ್ಟಿ ಕುಳಿತಿಲ್ಲ. ಬದಲಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ 862 ಕೋಟಿ ರೂ. ಬಿಡುಗಡೆ ಮಾಡಿ, ಪರಿಹಾರ ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಅಕ್ರಮ ಸಕ್ರಮ ಕಟ್ಟಡಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಈಗಾಗಲೇ 325 ಕೋಟಿ ರೂ. ಇದೆ ಎಂದು ತಿಳಿಸಿದರು.

ಬರದಿಂದ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಎನ್‍ಡಿಆರೆಫ್ ನಿಯಮ ಅನ್ವಯ 4702 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ದೆಹಲಿಯಲ್ಲಿ ನಿನ್ನೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಗೃಹ ಸಚಿವರ ಅಧ್ಯಕ್ಷತೆಯ ಸಮಿತಿ ಜನವರಿ 4ರಂದು ಸಭೆ ಸೇರಲಿದ್ದು, ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯ ಉತ್ತಮ ಸಾಧನೆ ಮಾಡಿದೆ. ನಮ್ಮಲ್ಲಿ 6.7 ಕೋಟಿ ಮಾನವ ದಿನಗಳು ಸೃಷ್ಟಿಯಾಗಿದೆ. ಅದನ್ನು ಈಗ ಹತ್ತು ಕೋಟಿಗೆ ಹೆಚ್ಚಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡುವಂತೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯಕ್ಕೆ 3985 ಕೋಟಿ ರೂ.ಗಳ ಅನುದಾನ ಬರಬೇಕಿದೆ. ಈ ವರೆಗೆ  1660 ಕೋಟಿ ಕೊಡಲಾಗಿದೆ. ಎರಡನೇ ಕಂತಿನಲ್ಲಿ 2856 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೆ 250 ಕೋಟಿ ರೂ. ಕೊಟ್ಟಿದ್ದಾರೆ. ಇದಲ್ಲದೆ 250 ಕೋಟಿ ರೂ.ಗಳ ಕಟ್ಟಡ ಸಾಮಗ್ರಿ ವೆಚ್ಚವೂ ಈ ವರೆಗೆ ಬಂದಿಲ್ಲ. ಇದರಿಂದ ಹಲವಡೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದರು.

ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಾಧೀಕರಣದ ಮುಖ್ಯಸ್ಥರು ಸಲಹೆ ನೀಡಿದ್ದಾರೆ. ಜೊತೆಗೆ ಪ್ರಧಾನಿಯವರ ಮಧ್ಯಸ್ಥಿಕೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯವೂ ಆಗಿದೆ. ಈ ಕುರಿತು ಪ್ರಧಾನಿಯವರ ಗಮನ ಸೆಳೆಯಾಯಿತು. ಅವರು ನಮ್ಮ ಮಾತುಗಳನ್ನು ಆಲಿಸಿದರೇ ಹೊರತು ಯಾವುದೇ ಭರವಸೆ ಕೊಡಲಿಲ್ಲ.

ಮಹಾದಾಯಿ ಕುರಿತು ಪ್ರಧಾನಿಯವರೊಂದಿಗೆ ಮಾತನಾಡುವಾಗ ನಿಯೋಗದೊಂದಿಗೆ ಬಂದಿದ್ದ ರಾಜ್ಯ ಬಿಜೆಪಿ ನಾಯಕರು ಮೌನವಾಗಿದದರು. ಆದರೆ ಕೇಂದ್ರ ಸಚಿವ ಅನಂತಕುಮಾರ್ ಅವರು ಮಾತ್ರ ನಾವು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇವೆ ಎಂದರು.

ತೆಲುಗುಗಂಗಾ ಯೋಜನೆಯಲ್ಲಿ ಈ ಹಿಂದೆ ನಾವು 15 ಟಿಎಂಸಿ ಕೊಟ್ಟಿದ್ದೇವೆ. ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಆಗ ಬಿಕ್ಕಟ್ಟು ಇತ್ಯರ್ಥ ಮಾಡಿದ್ದರು. ಈ ವಿಚಾರವನ್ನು ಪ್ರಧಾನಿಯವರ ಗಮನಕ್ಕೆ ತರಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಅಕ್ರಮ- ಸಕ್ರಮ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹತ್ತು ಮಹಾನಗರ ಪಾಲಿಕೆ ಹಾಗೂ 60 ಸ್ಥಳೀಯ ಸಂಸ್ಥೆಗಳಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಸಕ್ಷಮ ಪ್ರಾಧಿಕಾರದಿಂದ ಬಡಾವಣೆ ಮಂಜೂರಾತಿ ಪಡೆಯದ ನಿವೇಶನಗಳಲ್ಲಿನ ಕಟ್ಟಡಗಳನ್ನು ಸಕ್ರಮಗೊಳಿಸಲು ಏಪ್ರಿಲ್ ಅಂತ್ಯದವರೆಗೆ ಅರ್ಜಿ ಸಲ್ಲಿಸಲು ಸರ್ಕಾರ ಕಾಲಾವಕಾಶ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ   ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸೋಮವಾರ ಇಲ್ಲವೇ ಮಂಗಳವಾರ ಈ ಕುರಿತ ಅಧಿಸೂಚನೆ ಹೊರಬೀಳಲಿದೆ.

ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಪೌರಾಡಳಿತ ಸಚಿವ  ಈಶ್ವರ್ ಖಂಡ್ರೆ, ಬೆಂಗಳೂರು ನಗರ ಅಲ್ಲದೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ತುಮಕೂರು, ಬಳ್ಳಾರಿ, ಬೆಳಗಾವಿ, ಗುಲ್ಬರ್ಗ ಹಾಗೂ ಶಿವಮೊಗ್ಗ ಪಾಲಿಕೆಗಳ ವಾಪ್ತಿ ಮತ್ತು 60 ನಗರಸಭೆ, ಪುರಸಭೆಗಳಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡ ಸಕ್ರಮಗೊಳಿಸಿಕೊಳ್ಳಬಹುದು. ಅಧಿಸೂಚನೆ ಹೊರಬೀಳುತ್ತಿದ್ದಂತೆ ಅರ್ಜಿ ವಿತರಣೆ ಮಾಡಲಿದ್ದು ಆನ್‍ಲೈನ್ ಅಥವಾ ಲಿಖಿತವಾಗಿ ಸಲ್ಲಿಸಬಹುದು. 2013 ರ ಕಾನೂನಿನ ಪ್ರಕಾರವೇ ವಸತಿ ಕಟ್ಟಡಗಳಿಗೆ ಶೇ.50 ರಷ್ಟು ವಾಣಿಜ್ಯ ಕಟ್ಟಡಗಳಿಗೆ ಶೇ.25 ರಷ್ಟು ನಿಗದಿಪಡಿಸಿ ದಂಡ ವಿಧಿಸಲಾಗುವುದು. ನಿಗದಿ ಅವಧಿಯಲ್ಲಿ ಸಕ್ರಮ ಮಾಡಿಸಿಕೊಳ್ಳದಿದ್ದರೆ ಅಂತಹ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ತಿಳಿಸಿದರು.

Leave a Reply