ನೋಟು ಅಮಾನ್ಯ ಪರ್ವದ ಸಾಮಾನ್ಯರ ಕಷ್ಟಕ್ಕೆ ಯೋಜನೆಗಳ ಘೋಷಣೆಯ ಮುಲಾಮು ಸವರಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯದ ಪರ್ವ ಮುಕ್ತಾಯದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಆಡಿದ ಮಾತುಗಳಲ್ಲಿ ಯಾವುದೇ ಮುಂದುವರಿದ ‘ಸರ್ಜಿಕಲ್ ದಾಳಿ’ ಆಗಲಿಲ್ಲ… ಬದಲಿಗೆ ಈ ಪರ್ವದಲ್ಲಿ ಯಾವೆಲ್ಲ ವರ್ಗಗಳಿಗೆ ಘಾತವಾಗಿತ್ತೆಂದು ವಾದಿಸಲಾಗಿತ್ತೋ ಅವರಿಗೆಲ್ಲ ಮುಲಾಮು ಸವರುವ ಕಾರ್ಯವನ್ನು ಪ್ರಧಾನಿ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಮೊದಲಿಗೆ ನೋಟು ಅಮಾನ್ಯದ ಪರ್ವದಲ್ಲಿ ಬ್ಯಾಂಕುಗಳ ಎದುರು ಸರದಿ ಸಾಲಲ್ಲಿ ನಿಂತ ಸಾಮಾನ್ಯರ ಶ್ರಮವನ್ನು ಮೋದಿ ಪ್ರಾಮಾಣಿಕತೆಗೆ ಸಮೀಕರಿಸಿ ಎಲ್ಲದರ ಶ್ರೇಯಸ್ಸನ್ನು ಜನರಿಗೆ ನೀಡಿದ್ದಾರೆ. ರಾತ್ರಿ ಹಗಲು ಒಂದು ಮಾಡಿ ದುಡಿದ ಬ್ಯಾಂಕ್ ನೌಕರರಿಗೆ, ತಾಸು ಲೆಕ್ಕಿಸದೇ ದುಡಿದ ಮಹಿಳಾ ಬ್ಯಾಂಕರುಗಳಿಗೆ ಧನ್ಯವಾದ ಸಮರ್ಪಿಸಿದರು ಮೋದಿ. ಅದೇ ಉಸುರಿನಲ್ಲೇ ಬ್ಯಾಂಕ್ ಅಧಿಕಾರಿಗಳಿಂದ, ಸರ್ಕಾರಿ ನೌಕರರಿಂದ ಗಂಭೀರ ಅಪರಾಧಗಳಾಗಿರುವುದನ್ನೂ ಉಲ್ಲೇಖಿಸುತ್ತ, ಇವರ್ಯಾರಿಗೂ ಕ್ಷಮೆ ಇಲ್ಲವೆಂದಿದ್ದಾರೆ. ಹಾಗೆಯೇ ಭವಿಷ್ಯದ ಜವಾಬ್ದಾರಿಗಳಿಗೂ ಸಜ್ಜುಗೊಳಿಸುತ್ತ, ‘ಈ ಮಟ್ಟದ ಧನಭಂಡಾರ ಬ್ಯಾಂಕುಗಳಲ್ಲಿ ಎಂದೂ ಇರಲಿಲ್ಲ. ಇದನ್ನು ಬಡ, ನಿಮ್ಮನ, ಉಪೇಕ್ಷಿತ ವರ್ಗಗಳಿಗೆ ಹೆಚ್ಚಾಗಿ ಬಳಸಬೇಕು’ ಎಂದು ಬ್ಯಾಂಕುಗಳ ಸ್ವಾಯತ್ತೆ ಗೌರವಿಸುತ್ತಲೇ ತಾಕೀತು ಮಾಡುತ್ತಿರುವುದಾಗಿ ಹೇಳಿದ್ದಾರೆ.

ಇಂಥ ಮಾತುಗಳ ಮೂಲಕವೇ ಐವತ್ತು ದಿನಗಳ ಸಂಕಷ್ಟಗಳಿಗೆ ಅರ್ಥವಿದೆ, ಅದಕ್ಕೊಂದು ಮೌಲ್ಯವಿದೆ ಎಂಬುದನ್ನು ಜನರಿಗೆ ಅರ್ಥ ಮಾಡಿಸಿದ್ದಾರೆ ಮೋದಿ.

ಹೀಗೆ ಕಷ್ಟಪಟ್ಟ ನಮಗೆ ಸಿಕ್ಕಿದ್ದೇನು ಎಂಬ ಪ್ರಶ್ನೆಗೆ ತಕ್ಷಣಕ್ಕೆಂಬಂತೆ ಪ್ರಧಾನಿ ಮೋದಿ ಕೆಲ ಘೋಷಣೆಗಳನ್ನು ಮಾಡಿದ್ದಾರೆ. ಇದು ಜನವರ್ಗದ ಎಷ್ಟು ಭಾಗವನ್ನು ಮುಟ್ಟೀತು ಎಂಬ ಬಗ್ಗೆ ಸ್ಪಷ್ಟ ಚಿತ್ರಣವಿನ್ನೂ ಬೇಕಿದೆಯಾದರೂ, ಜನಕ್ಕೆ ಆಹಾ ನಮಗೆ ಸಿಕ್ಕಿತು ಎಂಬ ಭಾವ ಬರುವುದಕ್ಕೆ ಈ ಕೆಳಗಿನ ಯೋಜನಾ ಘೋಷಣೆಗಳು ಸಹಾಯ ಮಾಡುತ್ತವೆ.

  • ಈಗಾಗಲೇ ಜಾರಿಯಲ್ಲಿರುವ ಪ್ರಧಾನಮಂತ್ರಿ ಆವಾಸ ಯೋಜನೆ ಅಡಿ 2017ರ ವರ್ಷಕ್ಕೆ, ನಗರವಾಸಿಗಳಿಗೆ ಮನೆ ನಿರ್ಮಾಣಕ್ಕೆ ತೆಗೆದುಕೊಳ್ಳುವ ₹9 ಲಕ್ಷ ಸಾಲದ ಬಡ್ಡಿ ಮೇಲೆ 4% ರಿಯಾಯ್ತಿ, ₹12 ಲಕ್ಷ ಸಾಲದ ಬಡ್ಡಿಗೆ 3% ವಿನಾಯ್ತಿ.
  • ಗ್ರಾಮೀಣ ಭಾಗದಲ್ಲಿ ಆವಾಸ ಯೋಜನೆ ಅಡಿಯ ₹2 ಲಕ್ಷ ಸಾಲಕ್ಕೆ 3% ರಿಯಾಯ್ತಿ.
  • ಸಹಕಾರಿ ಬ್ಯಾಂಕುಗಳಿಂದ ಈ ಋತುವಿಗೆ ಮಾಡಿದ ಸಾಲದಲ್ಲಿ 60 ದಿನಗಳವರೆಗಿನ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ.
  • ನಬಾರ್ಡಿಗೆ 20 ಲಕ್ಷ ಕೋಟಿ ಹೆಚ್ಚುವರಿ ಹಣ ನೀಡಿ, ಸಹಕಾರಿ ಬ್ಯಾಂಕುಗಳಿಗೆ ಸಾಲ ನೀಡಿದ್ದರಲ್ಲಿ ಅದಕ್ಕಾಗಿರುವ ನಷ್ಟವನ್ನು ಸರ್ಕಾರವೇ ಭರಿಸುವ ಘೋಷಣೆ.
  • 3 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ರುಪೆಗೆ ಪರಿವರ್ತಿಸಿ ರೈತರಿಗೆ ಖರೀದಿ ಅವಕಾಶ ಸುಗಮಗೊಳಿಸುವಿಕೆ.
  • ಲಘು ಮತ್ತು ಮಧ್ಯಮ ಕೈಗಾರಿಕೆ ವಲಯಕ್ಕಿದ್ದ 1 ಕೋಟಿ ರು ಸಾಲಮಿತಿಯನ್ನು 2 ಕೋಟಿ ರುಪಾಯಿಗೆ ಹೆಚ್ಚಿಸುವ ನಿರ್ಧಾರ. ಬ್ಯಾಂಕೇತರ ಸಂಸ್ಥೆಗಳನ್ನೂ ಇದು ಒಳಗೊಳ್ಳುತ್ತದೆ. ಈ ವಲಯದ ಡಿಜಿಟಲ್ ವ್ಯವಹಾರಕ್ಕೆ ಗಣನೀಯ ತೆರಿಗೆ ಕಡಿತ.
  • ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಗಳಲ್ಲಿ ಹೆರಿಗೆಗನುಕೂಲವಾಗುವಂತೆ ನೇರವಾಗಿ ಅವರ ಖಾತೆಗೆ ₹ 6000 ವರ್ಗಾವಣೆ. ಪ್ರಾರಂಭದಲ್ಲಿ 53 ಜಿಲ್ಲೆಗಳಲ್ಲಿ ₹4000 ನೀಡಿಕೆಯೊಂದಿಗೆ ಪ್ರಯೋಗ.
  • ಬ್ಯಾಂಕುಗಳಲ್ಲಿ ಹಣದ ಸಂಗ್ರಹ ಹೆಚ್ಚಾದಾಗ ಠೇವಣಿಗಳ ಮೇಲೆ ಬಡ್ಡಿದರ ಕಡಿತ ಮಾಡಲಾಗುತ್ತದೆ. ಇದು ಹಿರಿಯ ನಾಗರಿಕರಿಗೆ ಪಿಂಚಣಿಯಿಂದ ಬರುವ ಬಡ್ಡಿಹಣದ ಮೇಲೆ ಪ್ರಹಾರವಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅಂಥ ಠೇವಣಿಗಳಿಗೆ ಶೇ. 8 ಬಡ್ಡಿದರ ನಿಗದಿ.

ಹೀಗೆ ಪ್ರತಿಪಕ್ಷಗಳು ನೋಟು ಅಮಾನ್ಯದಿಂದ ಯಾವೆಲ್ಲ ವರ್ಗಗಳಿಗೆ ತೊಂದರೆಯಾಗಿತ್ತೆಂದು ಪ್ರತಿಪಾದಿಸಿದ್ದವೋ ಅಂಥವರಿಗೆಲ್ಲ ತುಸು ಕೊಡುಗೆ ನೀಡಿ ಟೀಕೆಗೆ ಪ್ರತಿ ಪ್ರಹಾರ ಮಾಡಿದ್ದಾರೆ ಮೋದಿ.

ಹೀಗೆಲ್ಲ ಯೋಜನೆಗಳನ್ನು ಬಿಚ್ಚಿಡುವಾಗಲೂ ಮೋದಿ ತಮ್ಮ ವ್ಯಾಖ್ಯಾನ ಕಟ್ಟುವಿಕೆಯ ಚತುರತೆಯನ್ನು ಮರೆಯಲಿಲ್ಲ. ನೋಟು ಅಮಾನ್ಯದ ಜತೆ ಜನ ನಿಂತಿದ್ದು ಸತ್ಯದ ಪರವಾಗಿ ಎಂದು ವ್ಯಾಖ್ಯಾನಿಸಿದ ಮೋದಿ, ವಿಶ್ವದಲ್ಲಿ ಇಂಥ ಕಾರ್ಯ ಕಾನೂನು ವ್ಯವಸ್ಥೆ  ಏರುಪೇರಾಗದಂತೆ ನಡೆದ ಉದಾಹರಣೆಯೇ ಇಲ್ಲ ಎನ್ನುತ್ತ ಆ ಶ್ರೇಯಸ್ಸನ್ನೆಲ್ಲ ಜನಕ್ಕೆ ಕೊಟ್ಟರು. ಪ್ರಧಾನಿ ಬಾಯಲ್ಲಿ ತಾವು ಸತ್ಯದ ಪರ ಎಂದು ಹೊಗಳಿಸಿಕೊಳ್ಳುವುದನ್ನು ಯಾವ ಸಾಮಾನ್ಯ ತಿರಸ್ಕರಿಸಿಯಾನು?

ನೋಟು ಅಮಾನ್ಯ ನೀತಿಯಿಂದ ಕಷ್ಟ ಎದುರಾಗಿದ್ದು ಹೌದು. ಆ ಕಷ್ಟದ ಬಗ್ಗೆಯೂ ಜನರು ತಮಗೆ ಪತ್ರ ಬರೆದಿದ್ದಾರೆ. ಆದರೆ ಎಲ್ಲ ಕಡೆಗಳಲ್ಲೂ ಜನ ತಮ್ಮವನೆಂಬ ವಿಶ್ವಾಸದಿಂದ ಮಾತನಾಡಿದ್ದಾರೆ ಎನ್ನುತ್ತ ಪ್ರಶಂಸಿಸಿರುವ ಮೋದಿ, ಎಲ್ಲ ಕಷ್ಟಗಳನ್ನು ಸಹಿಸುವ ದೇಶದ ಮನೋಧರ್ಮ ಶ್ಲಾಘಿಸುತ್ತ, ‘ನಮ್ಮ ಮುಗುಳ್ನಗೆ ಮಸುಕಾಗಿಸದ ಮಾತೊಂದು ಇಲ್ಲಿದೆ…’ ಎಂಬ ಕವಿವಾಣಿಯ ಮೆರುಗನ್ನೂ ಲೇಪಿಸಿದರು.

ಹೀಗೆ ಯೋಜನೆ ಸಂಪನ್ನಗೊಂಡಿರುವ ಶ್ರೇಯಸ್ಸನ್ನು ಜನರಿಗೆ ನೀಡುವಾಗ, ರಾಜಕೀಯ ಚೌಕಟ್ಟಿನಲ್ಲಿ ಮೋದಿ ಮೆರೆದಿರುವ ಚತುರತೆಯನ್ನೂ ಗಮನಿಸಬೇಕು. ಜನರ ಇಂಥ ಪ್ರಯತ್ನ ನೋಡಿದ್ದರೆ ಲಾಲಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ ನಾರಾಯಣ, ಲೋಹಿಯಾ, ಕಾಮರಾಜ್… ಇವರೆಲ್ಲ ಆಶೀರ್ವದಿಸುತ್ತಿದ್ದರು ಎಂದಿದ್ದಾರೆ ಮೋದಿ. ಇಲ್ಲೆಲ್ಲೂ ನೆಹರು ಹಾಗೂ ಅವರ ಪರಿವಾರದವರಿಗೆ ಶ್ರೇಯವಿಲ್ಲ ಎಂಬುದನ್ನು ಗಮನಿಸಬೇಕು!

ಆದರೆ, ಬ್ಯಾಂಕುಗಳಲ್ಲಿ ನಗದು ವ್ಯವಸ್ಥೆ ಯಾವಾಗ ಸರಿಯಾಗುತ್ತದೆ ಎಂಬ ಸ್ಪಷ್ಟ ಚಿತ್ರಣವೇನೂ ಭಾಷಣದಲ್ಲಿ ಸಿಗಲಿಲ್ಲ. ಇದನ್ನೇ ಪ್ರತಿಕ್ರಿಯೆಯಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್ಸಿನ ರಾಜ್ದೀಪ್ ಸುರ್ಜೇವಾಲಾ- ‘ಮೋದಿ ಡೆಡ್ಲೈನ್ ಹೇಳದೇ ಕೇವಲ ಹೆಡ್ಲೈನ್ ಸೃಷ್ಟಿಸುತ್ತಿದ್ದಾರೆ’ ಎಂಬ ಪಂಚ್ ಡೈಲಾಗ್ ಬಿಟ್ಟಿದ್ದಾರೆ. ಗರ್ಭಿಣಿಯರಿಗೆ ಧನಸಹಾಯವೆಂಬುದು ಸೋನಿಯಾ ಗಾಂಧಿ ಪ್ರಣೀತ ಆಹಾರ ಭದ್ರತೆ ಕಾಯ್ದೆಯಲ್ಲೇ ಇತ್ತು. ಈ ಅನಿವಾರ್ಯ ಕ್ರಮಕ್ಕೆ ಮೋದಿಗೆ ಶ್ರೇಯಸ್ಸು ಸಲ್ಲಬೇಕಿಲ್ಲ ಎಂಬುದು ಕಾಂಗ್ರೆಸ್ಸಿನ ಪ್ರತಿವಾದ.

Leave a Reply