ಹೊಸಬರು ಗೆದ್ದರು, ಸ್ಟಾರ್‍ಗಳು ತುಸು ಮುಗ್ಗರಿಸಿದರು… ಇದು 2016ರ ರಿಪೋರ್ಟ್‍ಕಾರ್ಡ್

 

author-ssreedhra-murthy1970ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡವು. ರಾಷ್ಟ್ರಮನ್ನಣೆಯನ್ನೂ ಪಡೆದುಕೊಂಡವು. ಅದೇ ವೇಳೆಗೆ ಚಿತ್ರರಂಗದಲ್ಲಿ ಹಣದ ಹರಿವು ಕೂಡ ಹೆಚ್ಚಾಯಿತು. ಕಲಾತ್ಮಕ ವ್ಯಾಪಾರಿ ಎರಡೂ ಮಾದರಿಗಳ ನಡುವಿನ ಅಂತರ ಕ್ರಮೇಣ ಹೆಚ್ಚುತ್ತಲೇ ಹೋಗಿ ಕೊನೆಗೆ ಚಿತ್ರರಂಗದ ಒಂದು ಮಾದರಿ ತನ್ನದಾದ ಗುಣಗಳನ್ನು ಕಳೆದುಕೊಳ್ಳುವ ಮಟ್ಟಿಗೆ ಜನಪ್ರಿಯತೆಗೆ ಬಲಿಯಾದರೆ ಇನ್ನೊಂದು ಮಾದರಿ ಪ್ರಯೋಗಶೀಲತೆಗೆ ಸೀಮಿತವಾಗಿ ಸಾಮಾನ್ಯ ಪ್ರೇಕ್ಷಕರಿಂದ ದೂರವಾಯಿತು. ನಿರಂತರವಾಗಿ ಹೆಚ್ಚುತ್ತಲೇ ಹೋಗಿದ್ದ  ಅಂತರ ಈ ವರ್ಷ ಗಮನಾರ್ಹವಾಗಿ ಕುಗ್ಗಿದ್ದು ಕನ್ನಡ ಚಿತ್ರರಂಗ ಕಂಡ ಸ್ವಾಗತಾರ್ಹ ಬೆಳವಣಿಗೆ. ಜಾಗತಿಕ ಮನ್ನಣೆಯನ್ನು ಪಡೆದ ‘ತಿಥಿ’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿಯೂ ಗೆದ್ದಿದ್ದು ಮಾತ್ರವಲ್ಲದೆ ಚಿತ್ರದ ಕಲಾವಿದರ ಜನಪ್ರಿಯತೆಯನ್ನು ಬಂಡವಾಳವಾಗಿಸಿ ಹೊಸ ಚಿತ್ರಗಳು ನಿರ್ಮಾಣವಾಗುವ ಮಟ್ಟಿಗೆ  ಪ್ರೇಕ್ಷಕರ ಮೇಲೆ ಪರಿಣಾಮವನ್ನು ಬೀರಿತು. ವರ್ಷದ ಕೊನೆಯಲ್ಲಿ ಶತದಿನದ ಕಡೆಗೆ ಮುನ್ನುಗ್ಗುತ್ತಿರುವ ‘ರಾಮಾ ರಾಮಾರೇ’ ಇಂತಹ ಸಾಧ್ಯತೆಯನ್ನು ಪುನರಾರ್ವತಿಸುವ ಎಲ್ಲಾ ಸೂಚನೆಗಳನ್ನು ನೀಡಿದೆ.

ನೋಟು ಕ್ರಾಂತಿಯ ಹಿನ್ನೆಡೆಯ ನಡುವೆ ಕೂಡ ದಾಖಲೆಯ 214 ಚಿತ್ರಗಳು ಸೆನ್ಸಾರ್‍ಆದ ವರ್ಷದಲ್ಲಿ ಅಂತಿಮವಾಗಿ ಇವತ್ತು ಬಿಡುಗಡೆಯಾಗುತ್ತಿರುವ ಐದು ಚಿತ್ರಗಳೂ ಸೇರಿ ತೆರೆ ಕಂಡಿದ್ದು 171 ಚಿತ್ರಗಳು. ಇದರ ಜೊತೆಗೆ ರಾಜ ನನ್ನ ರಾಜ, ಬಬ್ರವಾಹನ ಮತ್ತು ಸಾಹಸ ಸಿಂಹ ಚಿತ್ರಗಳು ರೀ- ರಿಲೀಸ್ ಆದವು. ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಮಾರಕವಾಗಿದ್ದ ರೀಮೇಕ್ ಚಿತ್ರಗಳ ಭರಾಟೆ ತಗ್ಗಿ ಮಣ್ಣಿನ ಗುಣದ ಚಿತ್ರಗಳು ಗಮನ ಸೆಳೆದಿದ್ದು ಈ ವರ್ಷದ ಇನ್ನೊಂದು ಮುಖ್ಯವಾದ ಬೆಳವಣಿಗೆ. ತಿಥಿಯಿಂದಲೇ ಆರಂಭವಾದ ಇಂತಹ ಪ್ರಯೋಗ ತೇಜಸ್ವಿಯವರ ಕಾದಂಬರಿಯನ್ನು ಆಧರಿಸಿದ್ದ ‘ಕಿರುಗೂರಿನ ಗಯ್ಯಾಳಿಗಳು’, ನಗರ ಜೀವನವನ್ನು ಜನಪದ ಗುಣದೊಂದಿಗೆ ಹಿಡಿದ ‘ಯೂಟರ್ನ್’, ಅಂಚಿನ ಬದುಕನ್ನು ಸಹಾನುಭೂತಿಯಿಂದ ನೋಡಿದ ‘ನೀರ್ ದೋಸೆ’, ತಲ್ಲಣಗಳ ನಡುವೆ ಅರಳುವ ಮಾನವೀಯ ಮುಖಗಳನ್ನು ಹಿಡಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’  ಚಿತ್ರಗಳೊಂದಿಗೆ ಗಟ್ಟಿ ನೆಲೆಯನ್ನು ತಲುಪಿತು. ಇದರ ಜೊತೆಗೆ ಹೈಪ್‍ಕ್ರಿಯೇಟ್ ಮಾಡಿ ತೆರೆ ಕಂಡಿದ್ದ ಸ್ಟಾರ್‍ಗಳ ಚಿತ್ರಗಳನ್ನು ಪ್ರೇಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದು ಇನ್ನೊಂದು ಮಹತ್ವದ  ಬೆಳವಣಿಗೆ ಪುನೀತ್ ರಾಜ್ ಕುಮಾರ್ ಅವರ ‘ಚಕ್ರವ್ಯೂಹ’,  ಯಶ್ ಅಭಿನಯದ ‘ಸಂತು..’  ಸುದೀಪ್ ಅವರ ‘ಕೋಟಿಗೊಬ್ಬ-2’ ರವಿಚಂದ್ರನ್ ‘ಅಪೂರ್ವ’ ಗಣೇಶ್ ಅವರ ‘ಮುಂಗಾರು ಮಳೆ-2’ ಮಲ್ಟಿಸ್ಟಾರ್ ಚಿತ್ರ ‘ಮುಕುಂದ ಮುರಾರಿ’ ಪ್ರಕಾಶ್ ರೈ ಅವರ ‘ಇದೊಳ್ಳೆ ರಾಮಾಯಣ’ ಮೊದಲಾದ ಚಿತ್ರಗಳು ಹಾಕಿದ ಬಂಡವಾಳವನ್ನು ಗಮನಿಸಿದರೆ ಯಶಸ್ಸಿನ ಗೆರೆಯನ್ನು ದಾಟಲಿಲ್ಲ. ಎಲ್ಲಾ ಸ್ಟಾರ್‍ಚಿತ್ರಗಳೂ ಮುಗ್ಗಿರಿಸಿದವು ಎಂದೇನೂ ಅಲ್ಲ ಶಿವರಾಜ್ ಕುಮಾರ್ ಅವರ ‘ಶಿವಲಿಂಗು’ ಶತದಿನವನ್ನು ಪೂರೈಸುವುದರ ಜೊತೆಗೆ ಅವರಿಗೆ ಅಗತ್ಯವಾಗಿದ್ದ ಆತ್ಮವಿಶ್ವಾಸವನ್ನು ತಂದು ಕೊಟ್ಟಿತು. ಗಣೇಶ್ ಅವರ ‘ಜೂಮ್’ 125 ದಿನಗಳ ಪ್ರದರ್ಶನವನ್ನು ಕಂಡು ವರ್ಷದ ಅತಿ ಯಶಸ್ವಿ ಚಿತ್ರ ಎನ್ನಿಸಿಕೊಂಡಿತು. ಕೃಷ್ಣರಕ್ಕು, ರಥಾವರ, ಕಲ್ಪನಾ-2 ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎನ್ನುವ ಯಶಸ್ಸನ್ನು ಪಡೆದಿವೆ. ಒಟ್ಟಿನಲ್ಲಿ  ಸ್ಟಾರ್ ಗಿರಿಯೊಂದರಿಂದಲೇ ಚಿತ್ರ ಗೆಲ್ಲುವುದಿಲ್ಲ ಎನ್ನುವ ಸತ್ಯವನ್ನು ಈ ವರ್ಷ ಕನ್ನಡ ಚಿತ್ರರಂಗ ಸ್ಟಷ್ಟವಾಗಿ ಕಲಿತಿದೆ. ಬಿಗ್ ಬಜೆಟ್‍ಚಿತ್ರಗಳಿಗಿಂತಲೂ ಸಾಧಾರಣ ಬಜೆಟ್ ಚಿತ್ರಗಳು ಯಶಸ್ಸನ್ನು ಕಂಡಿದ್ದು ಈ ವರ್ಷದ ಇನ್ನೊಂದು ಬೆಳವಣಿಗೆ. ಹೀಗಾಗಿ ಒಂದು ಅಂದಾಜಿನಂತೆ ಈ ವರ್ಷ ಚಿತ್ರರಂಗದಲ್ಲಿ ಹೂಡಿಕೆಯಾಗಿದ್ದ 726 ಕೋಟಿ ರೂಪಾಯಿಗಳಲ್ಲಿ ಮುಕ್ಕಾಲು ಭಾಗ ಹಿಂದಿರುಗಿ ಬಂದಿದೆ. ಇದು ಕನ್ನಡ ಚಿತ್ರರಂಗದ ಭವಿಷ್ಯದ ಕುರಿತು ಭರವಸೆ ಇಟ್ಟುಕೊಳ್ಳಬಹುದಾದ ಬೆಳವಣಿಗೆ.

ಹೊಸ ನಿರ್ದೇಶಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಯಾಶೀಲರಾಗಿದ್ದು ಈ ವರ್ಷದ ಇನ್ನೊಂದು ವಿಶೇಷ. ‘ತಿಥಿ’ ಮೂಲಕ ರಾಮರೆಡ್ಡಿ, ‘ಕರ್ವ’ ಮೂಲಕ ನವನೀತ್, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹೇಮಂತ್ ರಾವ್, ‘ರಾಮಾ ರಾಮಾರೇ’ ಮೂಲಕ ಸತ್ಯಪ್ರಕಾಶ್, ‘ಮಮ್ಮಿ’ಮೂಲಕ ಲೋಹಿತ್ ಮೊದಲ ಪ್ರಯತ್ನದಲ್ಲಿಯೇ ತಮ್ಮ ಸ್ವಂತಿಕೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ರಂಗಿತರಂಗ, ಲಾಸ್ಟ್ ಬಸ್‍, ಯೂಟರ್ನ್ ಚಿತ್ರಗಳ ಯಶಸ್ಸಿನ ನಂತರ ದೆವ್ವದ ಹಿಂದೆ ಬಿದ್ದಿದ್ದು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡ ಪ್ರವೃತ್ತಿ. ತಾಂತ್ರಿಕವಾಗಿ ಸಾಕಷ್ಟು ಪ್ರಗತಿಯುಂಟಾಗಿರುವುದರಿಂದ ಜಾಗತಿಕವಾಗಿಯೇ ಹಾರರ್ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ತೆರೆ ಕಾಣುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಕೂಡ ಈ ವರ್ಷ 18 ಹಾರರ್ ಚಿತ್ರಗಳು ತೆರೆ ಕಂಡವು. ಅದರಲ್ಲಿ ಕೂಡ ತರಾವರಿ ದೆವ್ವಗಳು ಕಂಡು ಬಂದವು. ಯೂಟರ್ನ್‍ನಲ್ಲಿ ಸೌಮ್ಯ ದೆವ್ವ ಇದ್ದರೆ ಮಮ್ಮಿಯಲ್ಲಿ ಮಮತಾಮಯಿ ದೆವ್ವವಿತ್ತು ಹಾಗೆ ಕಲ್ಪನಾ-2ದಲ್ಲಿ ದೆವ್ವಗಳ ಮಾರಾಮಾರಿ ಕೂಡ ಇತ್ತು. ದೆವ್ವಗಳು ಇವೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಕೂಡ ‘ಕರ್ವ’ ದಂತಹ ಚಿತ್ರಗಳಲ್ಲಿ ಕಾಣಿಸಿತು. ಗ್ರಾಫಿಕ್ ಚಮತ್ಕಾರದ ಜೊತೆಗೆ ನೇಟಿವಿಟಿಗೆ ವಸ್ತವನ್ನು ಒಗ್ಗಿಸುವ ಪ್ರಯತ್ನಗಳು ಕಂಡು ಬಂದಿದ್ದು ವರ್ಷದ ವಿಶೇಷ ಎನ್ನಬಹುದು. ಎಪ್ಪತ್ತರ ದಶಕದಲ್ಲಿ ದೇವರು ಮತ್ತು ದೆವ್ವದ ಹಿಂದೆ ಬಿದ್ದರೆ ಬಂಡವಾಳಕ್ಕೆ ಮೋಸವಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಅಂತಹ ಕಾಲ ಮತ್ತೆ ಬಂದಿದೆಯೇ ಎನ್ನುವುದು ಇನ್ನೊಂದು ಕುತೂಹಲಕರ ಸಂಗತಿ. ಚಿತ್ರರಂಗದಲ್ಲಿ ಹೊಸತನ ಕಂಡು ಬಂದಿರುವುದೇನೋ ನಿಜ. ಆದರೆ ಬಿಡುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ವರ್ಷದ ಕೊನೆಗೆ ಜನತಾ ಚಿತ್ರಮಂದಿರದ ಯೋಜನೆಗೆ ಚಾಲನೆ ದೊರೆತಿದೆ. ಐವತ್ತು ಲಕ್ಷ ರೂಪಾಯಿಗಳನ್ನು ಅನುದಾನವಾಗಿ ಪಡೆದು ಗ್ರಾಮೀಣ ಭಾಗದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಕನ್ನಡ ಚಿತ್ರಗಳಿಗೆ ಆದ್ಯತೆ ನೀಡುವ ಪ್ರಯತ್ನ ಜಾರಿಗೆ ಬಂದರೆ ಹೊಸ ಪ್ರಯೋಗಗಳಿಗೆ ಸೂಕ್ತ ವೇದಿಕೆ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ 2017ರಲ್ಲಿ ಕನ್ನಡ ಚಿತ್ರರಂಗದ ಪಾಲಿಗೆ ಭರವಸೆಗಳಿಂದಲೇ ಆರಂಭವಾಗಲಿದೆ.

Leave a Reply