ಇಲ್ಲಿದೆ 2017ರ ವಿತ್ತ ಭವಿಷ್ಯ, ಅರ್ಥದ ಹೊರತಾಗಿ ತಲೆಕೆಡಿಸಿಕೊಳ್ಳಬೇಕಿರೋದು ಕಲಿಯುಗದಲ್ಲಿ ಇನ್ಯಾವ ವಿಷ್ಯ?

authors-rangaswamyಕಳೆದ ವರ್ಷ 2016 ರಲ್ಲಿ ವಿತ್ತ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎನ್ನುವ ಒಂದು ಮುನ್ನೋಟವನ್ನು ‘ಡಿಜಿಟಲ್ ಕನ್ನಡ’ದಲ್ಲಿ ಒದಗಿಸಿದ್ದೆವು. ಹೀಗಾಗಬಹುದು ಎಂದು ನಾವು ಲೇಖನದಲ್ಲಿ ಒದಗಿಸಿದ ಮಾಹಿತಿಯಲ್ಲಿ ಬಹುತೇಕ ನೂರರ ಖಚಿತತೆ ಹೊಂದಿದ್ದವು, ಹಲವು ನಮ್ಮ ಮಾಹಿತಿಗೆ ಬಹು ಹತ್ತಿರವಾಗಿದ್ದವು, ಕೆಲವು ನಮ್ಮ ಅನಿಸಿಕೆಯನ್ನು ಉಲ್ಟಾ ಕೂಡ ಹೊಡೆಸಿವೆ. ಅಮೇರಿಕಾ ಫೆಡರಲ್ ಬಡ್ಡಿ ದರ 0.25 ಹೆಚ್ಚಿಸುತ್ತದೆ ಎಂದಿದ್ದು, ಚೀನಾ ದೇಶದ ಕರೆನ್ಸಿ ಅಪಮೌಲ್ಯ, ಭಾರತದಲ್ಲಿ ಕಡಿಮೆ ಆಗಲಿರುವ ಬಡ್ಡಿ ದರ ನೂರಕ್ಕೆ ನೂರು ನಿಜವಾದ ವಿಷಯಗಳು. ಇ ಕಾಮರ್ಸ್ ಹಿನ್ನಡೆ ನಾವು ಹೇಳಿದಷ್ಟು ದೊಡ್ಡ ಮಟ್ಟದಲ್ಲಿ ಆಗದಿದ್ದರೂ ಕುಸಿತ ಕಂಡದ್ದು ಸುಳ್ಳಲ್ಲ.

ಪೆಟ್ರೋಲ್ ಬೆಲೆ ಕಡಿಮೆ ಆಗಬಹುದು ಎನ್ನುವುದು ಉಲ್ಟಾ ಹೊಡೆದ ಭವಿಷ್ಯ. ಆದರೆ ಮೋದಿ ಸರಕಾರದ ನೋಟು ಅಮಾನ್ಯದ ಮಾಸ್ಟರ್ ಸ್ಟ್ರೋಕ್ ಯಾವ ಪಂಡಿತರ ಊಹೆಗೂ ಸಿಲುಕದೆ ಹೋದದ್ದು ಮಾತ್ರ ಸೂರ್ಯನಷ್ಟೇ ಸತ್ಯ! ಇವಿಷ್ಟೂ 2016 ರ ವಿಷಯವಾಯ್ತು. 2017ರಲ್ಲಿ ಜಗತ್ತಿನಲ್ಲಿ ಏನೆಲ್ಲಾ ಪ್ರಮುಖ ಬದಲಾವಣೆಗಳು ಆಗಬಹುದು ನೋಡೋಣ ಬನ್ನಿ. ಒಂದು ವಿಷಯ ನಿಮ್ಮ ಗಮನದಲ್ಲಿರಲಿ. ಇದು ಅಂಕಿ ಅಂಶಗಳ ಅಳೆದು ತೂಗಿ ಕೊಡುವ ಸಂಭಾವ್ಯ ಮುನ್ನೋಟವಷ್ಟೇ.

  • ಅಮೇರಿಕಾ ತನ್ನ ಫೆಡರಲ್ ಬಡ್ಡಿ ದರವನ್ನ ಇನ್ನಷ್ಟು ಹೆಚ್ಚಿಸುವ ಸಂಭಾವ್ಯತೆ ಹೆಚ್ಚಾಗಿದೆ. ಸದ್ಯಕ್ಕೆ 0.75 ಇರುವ ಫೆಡರಲ್ ಬಡ್ಡಿ ದರ 2017 ರ ವರ್ಷಾಂತ್ಯದ ವೇಳೆಗೆ 1.5 ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಭಾರತ ಮತ್ತು ಚೀನಾವನ್ನು ನೆಚ್ಚಿಕೊಂಡು ಕೂತಿದ್ದ ಬಹುತೇಕ ಹೂಡಿಕೆದಾರರು ಅಮೇರಿಕಾ ಕಡೆ ಮುಖ ಮಾಡಲಿದ್ದಾರೆ.
  • ಅಮೇರಿಕಾ ಫೆಡರಲ್ ಬಡ್ಡಿ ದರವನ್ನ ಹೆಚ್ಚಿಸಿದಂತೆ, ತನ್ನ ಮಾರುಕಟ್ಟೆ ಪಾರುಪತ್ಯ ಉಳಿಸಿಕೊಳ್ಳುವ ಸಲುವಾಗಿ ಚೀನಾ ತನ್ನ ಕರೆನ್ಸಿ ಇನ್ನಷ್ಟು ಅಪಮೌಲ್ಯಗೊಳಿಸಿಕೊಳ್ಳದೆ ಬೇರೆ ದಾರಿ ಇಲ್ಲದಂತೆ ಆಗಲಿದೆ. ಅಂದರೆ ಚೀನಾದ ಜನರ ಬದುಕು ಮತ್ತಷ್ಟು ಕುಸಿಯಲಿದೆ. ಕಳೆದ ವರ್ಷ ಗಳಿಸಿದ ಹಣವನ್ನು ಗಳಿಸಲು ಕಳೆದ ವರ್ಷ ಇಳಿಸಿದ ಬೆವರಿಗಿಂತ ಹೆಚ್ಚಿನ ಬೆವರು ಹರಿಸಬೇಕು.
  • ಅಮೇರಿಕಾ ಮತ್ತು ಚೀನಾಳಲ್ಲಿ ಆಗುವ ಈ ಬದಲಾವಣೆ ಭಾರತದ ಮೇಲೆ ನೇರ ಪರಿಣಾಮ ಬೀರಲಿದೆ. ರಫ್ತು ವಿಷಯದಲ್ಲಿ ಭಾರತ ಚೀನಾ ದೇಶದೊಂದಿಗೆ ಕಳೆದ ವರ್ಷಗಳಿಗಿಂತ ಹೆಚ್ಚಿನ ಪೈಪೋಟಿ ಎದುರಿಸಬೇಕಾಗುತ್ತದೆ. ಮೋದಿ ಸರಕಾರ ಡಿಮಾನಿಟೈಸೇಶನ್ ಮಾಡಿದ ನಂತರ ವಾಣಿಜ್ಯ ವಹಿವಾಟು ಕುಸಿದಿರುವುದು ಸತ್ಯ. ಕುಸಿದ ವ್ಯಾಪಾರಕ್ಕೆ ಮಾನಸಿಕ ಸ್ಥೈರ್ಯ ತುಂಬುವ ಯೋಜನೆಗಳನ್ನು 2017 ರಲ್ಲಿ ಸರಕಾರ ಹೊರಡಿಸಬೇಕು. ಇಲ್ಲದಿದ್ದರೆ ಚೀನಾ ಜೊತೆಗಿನ ಪೈಪೋಟಿಯಲ್ಲಿ ಭಾರತ ಸೋಲುವ ಸಾಧ್ಯತೆಗಳೇ ಅತಿ ಹೆಚ್ಚು.
  • ಕಳೆದ ವರ್ಷ ಸತತ ಕುಸಿತ ಕಂಡ ಕಚ್ಚಾ ತೈಲ, ರಷ್ಯಾ ಮತ್ತು ಇತರ ಕಚ್ಚಾ ತೈಲ ಉತ್ಪಾದಕ ಕೊಲ್ಲಿ ದೇಶಗಳು ಉತ್ಪಾದನೆಗೆ ಕಡಿವಾಣ ಹಾಕುವ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಬೆಲೆಯನ್ನ ಹೆಚ್ಚುವಂತೆ ನೋಡಿಕೊಳ್ಳುವಲ್ಲಿ ಸಫಲವಾಗಿವೆ. 2017ರಲ್ಲಿ ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹೆಚ್ಚಿದ ತೈಲ ಬೆಲೆ ಭಾರತದ ಮಟ್ಟಿಗೆ ಒಳ್ಳೆಯ ಸುದ್ದಿಯಲ್ಲ. ಕುಸಿದ ಬಡ್ಡಿ ದರ, ಹಣದುಬ್ಬರವನ್ನ ಕಡಿಮೆ ಮಾಡಬೇಕು ಇಲ್ಲದಿದ್ದರೆ ಅದು ಸಾಮಾಜಿಕ ಅಸ್ಥಿರತೆಗೆ ನಾಂದಿ ಹಾಡುತ್ತದೆ. ಹೆಚ್ಚಿದ ತೈಲ ಬೆಲೆ ಹಣದುಬ್ಬರವನ್ನ ಹೆಚ್ಚಿಸಲಿದೆ. ಸರಕಾರ ಹಣದುಬ್ಬರವನ್ನ ಸಮತೋಲನದಲ್ಲಿ ಇಡಲು ಇನ್ನಷ್ಟು ಪ್ರಯತ್ನಗಳನ್ನ ಮಾಡಬೇಕು.
  • ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಆಗಲೇ ಒಂದು ಹೆಜ್ಜೆ ಹೊರಗಿಟ್ಟಿರುವುದು ೨೦೧೬ ರ ಪ್ರಮುಖ ಘಟನೆಗಳಲ್ಲಿ ಒಂದು. ಇಟಲಿಯ ಪ್ರಮುಖ ಬ್ಯಾಂಕ್, ಜರ್ಮನಿಯ ಪ್ರಮುಖ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಒಕ್ಕೂಟದಿಂದ ಇಟಲಿ ಮತ್ತು ಫ್ರಾನ್ಸ್ ಹೊರಹೋಗುತ್ತವೆ ಎನ್ನುವ ಕೂಗು ಧ್ವನಿ ಪಡೆದುಕೊಳ್ಳುತ್ತಿದೆ. ಗ್ರೀಸ್ , ಪೋರ್ಚುಗಲ್ ಮತ್ತು ಸ್ಪೇನ್ ನ ಆರ್ಥಿಕತೆ ಹೇಳಿಕೊಳ್ಳುವ ಸುಧಾರಣೆ ಕಂಡಿಲ್ಲ. ಇವೆಲ್ಲಾ ಕಾರಣಗಳಿಂದ ಯುರೋ ಕರೆನ್ಸಿ ಕುಸಿತ ಕಾಣುವ ಸಾಧ್ಯತೆಗಳು ಹೆಚ್ಚಾಗಿದೆ.
  • ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ಮತ್ತು ಹೊಸ ಅಧ್ಯಕ್ಷ ಸಿಕ್ಕ ಹೊಸ ಉತ್ಸಾಹದಲ್ಲಿರುವ ಅಮೇರಿಕಾ ಆರ್ಥಿಕತೆ ಚೇತರಿಕೆ ಕಂಡು, ಡಾಲರ್ ಮತ್ತೊಮ್ಮೆ ಜಗತ್ತಿನ ಏಕಮೇವ ಕರೆನ್ಸಿ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಭಾರತಕ್ಕೆ ಶುಭ ಸುದ್ದಿಯಲ್ಲ. ಹೆಚ್ಚಿದ ಡಾಲರ್ ಮೌಲ್ಯದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚದೆ ಇದ್ದರೂ ನಾವು ಹೆಚ್ಚಿನ ಮೌಲ್ಯ ನೀಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇದು ನಮ್ಮ ದೇಶದ ಹಣದುಬ್ಬರ ಹೆಚ್ಚಿಸುತ್ತದೆ.
  • ಆಫ್ರಿಕಾ ದೇಶಗಳತ್ತ ಮುಂಬರುವ ವರ್ಷಗಳಲ್ಲಿ ಹೂಡಿಕೆದಾರರ ಗಮನ ಹೋಗಲಿದೆ. ಜಗತ್ತಿನ ಇಂದಿನ ವಿತ್ತ ಪ್ರಪಂಚ ಸುತ್ತುವುದು ತೈಲೋದ್ಯಮದ ಮೇಲೆ. ಇಂದು ತೈಲ ಉತ್ಪಾದಿಸುತ್ತಿರುವ ದೇಶಗಳಿಗೆ ಹೋಲಿಸಿದರೆ ಇನ್ನೂ ನೂರು ವರ್ಷ ತೈಲ ಉತ್ಪಾದಿಸುವ ಸಾಧ್ಯತೆ ಆಫ್ರಿಕಾ ದೇಶಗಳಿಗಿದೆ. ಹೀಗಾಗಿ ಆಫ್ರಿಕಾ ಹೂಡಿಕೆದಾರರ ಹೊಸ ಗರ್ಲ್ ಫ್ರೆಂಡ್ ಆಗುವ ಸಾಧ್ಯಗಳು ಹೆಚ್ಚಾಗಿವೆ.

ಜಗತ್ತಿನ ಮುಕ್ಕಾಲು ಪಾಲು ದೇಶಗಳು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವ ಸ್ಥಿತಿಯಲ್ಲಿ ಮುಂದುವರಿಯಲಿವೆ. ಕಳೆದ ಏಳೆಂಟು ವರ್ಷದಿಂದ ಜಗತ್ತಿನ ವಿತ್ತ ಪ್ರಪಂಚಕ್ಕೆ ನೆಗಡಿ ಹಿಡಿದಿದೆ. 2017ರಲ್ಲಿ ಆಗೊಮ್ಮೆ ಈಗೊಮ್ಮೆ ಕಟ್ಟಿದ ಮೂಗು ಬಿಟ್ಟ ಅನುಭವಾಗಬಹದು. ಆದರೆ ಈ ವರ್ಷವೂ ಹೆಚ್ಚಿನ ಬದಲಾವಣೆ ಕಾಣದೆ ಜಾಗತಿಕ  ವಿತ್ತ ಪ್ರಪಂಚದ ಬಿಕ್ಕಟ್ಟು ಮುಂದುವರಿಯಲಿದೆ.

Leave a Reply