ಅಪ್ಪ- ಮಗ ಕದನದಲ್ಲಿ ಅಖಿಲೇಶ್ ಮೇಲುಗೈ ನಿಸ್ಸಂಶಯ, ಮುಲಾಯಂಗೇ ಹೋಲಿಸಿದರೆ ದೇವೇಗೌಡರಾಟ ಹಿರಿದಯ್ಯ!

ಡಿಜಿಟಲ್ ಕನ್ನಡ ವಿಶೇಷ:

ಸಮಾಜವಾದಿ ಪಕ್ಷದಲ್ಲಿ ಅಪ್ಪ-ಮಗನ ನಡುವೆ ನಡೆದಿರುವ ಸಮರಕ್ಕೆ ರಾಷ್ಟ್ರೀಯ ಸುದ್ದಿವಾಹಿನಿಗಳು ಏನೇ ಪ್ರಾಮುಖ್ಯ ಕೊಟ್ಟರೂ ಅದೇನೂ ಅಂಥ ಆಸಕ್ತಿದಾಯಕವಲ್ಲ. ಏಕೆಂದರೆ ಎಲ್ಲ ಸದ್ದುಗಳ ಹೊರತಾಗಿಯೂ ಒಂದಂತೂ ನಿಶ್ಚಯವಾಗಿಬಿಟ್ಟಿದೆ. ಅದೆಂದರೆ, ಸಮಾಜವಾದಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಬೆನ್ನಿಗೆ ನಿಂತಿರುವುದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜತೆಗೇ ಹೊರತು ಮುಲಾಯಂ ಬೆನ್ನಿಗಲ್ಲ.

ತಮ್ಮನ್ನು ಮಾರ್ಗದರ್ಶಿ ಮಂಡಳಕ್ಕಟ್ಟಿ, ರಾಮ ಗೋಪಾಲ್ ಯಾದವ ಸೇರಿದಂತೆ ತಮ್ಮ ಪಾಳೆಯದ ಪ್ರಮುಖರನ್ನು ಉಚ್ಚಾಟಿಸಿರುವುದರಿಂದ ವ್ಯಗ್ರಗೊಂಡಿರುವ ಮುಲಾಯಂ, ಸೈಕಲ್ ಚಿಹ್ನೆ ತಮಗೆ ಸೇರಿದ್ದು ಅಂತ ಈಗ ಚುನಾವಣಾ ಆಯೋಗದೆದುರು ಇದ್ದಾರೆ. ವಾಸ್ತವ ಏನೆಂದರೆ, ಅವರಿಗೆ ಸೈಕಲ್ ಸಿಕ್ಕರೂ, ಕಾರ್ಯಕರ್ತರ ಚುನಾವಣಾ ರಥ ಸಾಗಲಿರುವುದು ಅಖಿಲೇಶ್ ಯಾದವ್ ಹಾದಿಯಲ್ಲೇ. ತಂದೆ ಮುಲಾಯಂ ಒಂದೊಮ್ಮೆ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯನ್ನು ಪಡೆದರೂ, ಚಿಹ್ನೆಯಷ್ಟೇ ನೆನಪಿಟ್ಟು  ಮತ ಒತ್ತುವ ವರ್ಗವನ್ನು ತ್ವರಿತವಾಗಿ ಮನಗಾಣಿಸುವುದು ಅಖಿಲೇಶ್ ಮುಂದಿನ ಸವಾಲಾಗುತ್ತದೆಯೇ ಹೊರತು ಉಳಿದಂತೆ ಚುನಾವಣೆಯ ಸೆಣಸಿಗೆ ಬಹುಮುಖ್ಯವಾಗಿ ಒದಗಬೇಕಾದ ಕಾರ್ಯಕರ್ತ ಬಲ ಅಖಿಲೇಶ್ ಜತೆಯೇ ಇದೆಯೇ ಹೊರತು ಮುಲಾಯಂ ಬಳಿ ಅಲ್ಲ. ಕಾರ್ಯಕರ್ತರಿಲ್ಲದೇ ಕೇವಲ ಅಮರ್ ಸಿಂಗ್ ಥರದ ದಲ್ಲಾಳಿಯನ್ನಿರಿಸಿಕೊಂಡು ಮುಲಾಯಂ ಸಿಂಗ್ ಯಾವ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ.

ಅಪ್ಪ ವರ್ಸಸ್ ಮಗ ಎಂಬ ಚೌಕಟ್ಟಿನಲ್ಲಿ ಈ ಕತೆಯನ್ನು ನೋಡುವುದಾದರೆ ಇದರ ಮುಕ್ತಾಯ ಸ್ಪಷ್ಟವಿದೆ. ಇಲ್ಲಿ ಗೆಲುವು ಅಖಿಲೇಶರದ್ದೇ. ಆದರೆ ಈ ವರ್ಷದ ನಡುವಲ್ಲಿ ಗೆಲ್ಲಬೇಕಾಗಿದ್ದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೋಡಿದಾಗ ಕತೆ ಬೆಳೆದುಕೊಳ್ಳುತ್ತದೆ ಹಾಗೂ ಇವರ ಈ ಗದ್ದಲ ಬಿಜೆಪಿಗೆ ಏನೆಲ್ಲ ಧನಾತ್ಮಕ ಪರಿಣಾಮ ಬೀರಬಹುದೆಂಬ ಕೌತುಕ ತೆರೆದುಕೊಳ್ಳುತ್ತದೆ.

ಉಳಿದಂತೆ ಇದೊಂದು ಅಧಿಕಾರ ಹಸ್ತಾಂತರದ ಸಂಘರ್ಷ. ಆಡ್ವಾಣಿಯವರನ್ನು ಮಾರ್ಗದರ್ಶಕ ಮಂಡಳಿಯಲ್ಲಿರಿಸಿ ನರೇಂದ್ರ ಮೋದಿ ಮುನ್ನೆಲೆಗೆ ಬರುವಾಗಲೂ ಇಂಥದೇ ಸಂಘರ್ಷ ಎದುರಾಗಿತ್ತು. ಆದರೆ ಕೌಟುಂಬಿಕ ಅಡಿಪಾಯದಲ್ಲಲ್ಲದೇ ಕಾರ್ಯಕರ್ತರ ನೆಲೆಗಟ್ಟಿನ ಬಿಜೆಪಿ ಅದನ್ನು ನಿರ್ಧಾರಯುತವಾಗಿ ಬಗೆಹರಿಸಿಕೊಂಡಿತು. ಸಮಾಜವಾದಿಯಲ್ಲಿ ಒಂದಿಷ್ಟು ಗದ್ದಲಗಳು ಹೆಚ್ಚಾಗಬಹುದಾದರೂ ಕೊನೆಗೂ ಅಧಿಕಾರ ದಂಡ ಸೇರುವುದು ಹೊಸ ತಲೆಮಾರಿಗೇ ಎಂಬುದರಲ್ಲಿಲ್ಲ ಅನುಮಾನ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ದೇವೇಗೌಡರೇ ಗಟ್ಟಿಗರು. ಇಲ್ಲೂ ಯುವ ನಾಯಕತ್ವದ ವಿಚಾರದಲ್ಲಿ ಕುಮಾರಸ್ವಾಮಿ ಕಡೆಗೆ ಒಲವು ಹೆಚ್ಚಿರುವುದು ಖರೆ. ಈ ಹಿಂದೆ ತಮ್ಮ ಮಾತು ಕೇಳದೇ ಬಿಜೆಪಿ ಜತೆ ಕೈಜೋಡಿಸಿ ಮಗ ಮುಖ್ಯಮಂತ್ರಿಯಾದನೆಂದು ರೊಳ್ಳೆ ತೆಗೆದು ರಾಜಕೀಯಾತ್ಮಕ ಸೆಕ್ಯುಲರ್ ತನವನ್ನು ಗಟ್ಟಿಗೊಳಿಸಿಕೊಂಡಿದ್ದರು ಗೌಡರು. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಮಾತೇ ನಡೆದಿದ್ದರೆ ಇತ್ತೀಚಿಗೆ ಬಿಟ್ಟು ಹೋದವರೆಲ್ಲಾ ಪಕ್ಷದಲ್ಲೇ ಇದ್ದಿರುತ್ತಿದ್ದರಾ ಎಂಬುದೂ ಪ್ರಸ್ತುತತೆ ಉಳಿಸಿಕೊಂಡಿರುವ ಪ್ರಶ್ನೆ. ಅಂತೆಯೇ ಜೆಡಿಎಸ್ ದೀರ್ಘಕಾಲದಿಂದ ಅಧಿಕಾರದಿಂದ ದೂರ ಇರುವುದೇ, ಸಮಾಜವಾದಿ ಪಕ್ಷದ ರೀತಿಯ ತಳಮಳ ಇಲ್ಲಿ ರೂಪುಗೊಳ್ಳುವುದಕ್ಕೆ ಅವಕಾಶ ತಂದಿಲ್ಲವೇನೋ ಎಂಬ ಕೌತುಕದ ಪ್ರಶ್ನೆಯೂ ಎದುರಾಗುತ್ತದೆ. ಅದೇನೇ ಇದ್ದರೂ ದೇವೇಗೌಡರು ಪಕ್ಷದ ಮೇಲೆ ಅಂತಿಮ ಹಿಡಿತ ಉಳಿಸಿಕೊಂಡಿದ್ದಾರೆಂಬುದು ವಾಸ್ತವ.

ಸಮಾಜವಾದಿ ಪಕ್ಷದ ಅಪ್ಪ- ಮಗನ ಸಂಘರ್ಷವು ಎದುರಾಳಿ ಬಿಜೆಪಿ ಬಣ್ಣಿಸುವಂತೆ ತೀರ ನಾಟಕವೇನಲ್ಲ. ಅದರ ನಿಜ ತಿರುಳನ್ನು ಈ ಹಿಂದಿನ ಲೇಖನವೊಂದರಲ್ಲಿ ಹೀಗೆ ಕಟ್ಟಿಕೊಡಲಾಗಿತ್ತು-

ಸಮಸ್ಯೆ ಉದ್ಭವಿಸಿರುವುದೇ, ಅಖಿಲೇಶ್ ಯಾದವ್ ಪಕ್ಷದಲ್ಲಿ ತಂದೆಯ ಸರೀಕರನ್ನು ಪಕ್ಕಕ್ಕೆ ಸರಿಸಲು ಹೊರಟಿರುವುದರಲ್ಲಿ. ಹಾಗೆ ನೋಡಿದರೆ ಈ ಹಿಂದಿನ ವಿಧಾನಸಭೆ ಅವಧಿಯಲ್ಲೇ ಮುಲಾಯಂ ಸಿಂಗ್ ಎಂಬ ಉತ್ತರ ಪ್ರದೇಶದವರ ಪಾಲಿನ ನೇತಾಜಿ ಮುಖ್ಯಮಂತ್ರಿ ಆಗಬೇಕಿತ್ತು. ಆ ಸಂದರ್ಭದಲ್ಲಿ ಮಗ ಅಖಿಲೇಶಗೆ ಹುದ್ದೆ ಬಿಟ್ಟುಕೊಟ್ಟಿದ್ದು ತೀರ ಕ್ರಾಂತಿಕಾರಕ ನಿರ್ಧಾರವೇನೂ ಆಗಿರಲಿಲ್ಲ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ಸಿಗಾಗಲೀ, ಬಿಜೆಪಿಗಾಗಲೀ ದೆಹಲಿಯಲ್ಲಿ ಅಧಿಕಾರ ಹಿಡಿಯುವುದಕ್ಕೆ ತಮ್ಮ ಸಮಾಜವಾದಿ ಪಡೆಯ ಬೆಂಬಲ ಬೇಕೇ ಬೇಕಾಗುತ್ತದೆ ಎಂದೆಣಿಸಿದ್ದರು ಮುಲಾಯಂ. ಹಾಗೆಂದೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವವರ ಜುಟ್ಟು ಹಿಡಿಯುವುದಕ್ಕೆ ತಮ್ಮ ಪಾತ್ರವನ್ನು ಕಾಪಿಟ್ಟು, ಮುಖ್ಯಮಂತ್ರಿ ಗಾದಿಗೆ ಮಗನನ್ನು ಕೂರಿಸಿದರು. ಆದರೆ ಮೋದಿ ಅಲೆಯಲ್ಲಿ ಮುಲಾಯಂ ಮಾತ್ರವಲ್ಲದೇ ತಮ್ಮದೊಂದು ಆಟಕ್ಕೆ ಸಿದ್ಧರಾಗಿದ್ದ ತಥಾಕಥಿತ ಸೆಕ್ಯುಲರ್ ಬಲಗಳೆಲ್ಲ ಅಪ್ರಸ್ತುತವಾಗಿಬಿಟ್ಟವು. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ತಮ್ಮ ಸ್ಥಾನ ಗೆದ್ದುಕೊಂಡರಾದರೂ ಬಿಜೆಪಿ- ಅಪ್ನಾದಳಗಳು ಒಟ್ಟೂಗೂಡಿ 80 ಕ್ಷೇತ್ರಗಳ ಪೈಕಿ 73 ಗೆದ್ದುಬಿಟ್ಟವು. ಅತ್ತ, ಅಖಿಲೇಶ್ ಸಿಂಗ್ ಉತ್ತರ ಪ್ರದೇಶದ ಆಡಳಿತದಲ್ಲಿ ತೀರ ಬದಲಾವಣೆಗಳನ್ನೇನು ತರದಿದ್ದರೂ, ಸಮಾಜವಾದಿ ಪಕ್ಷದ ಹಳೆತಲೆಗಳಿಗಿಂತ, ಉಚಿತ ಲ್ಯಾಪ್ಟಾಪ್, ಬಂಡವಾಳ ಅಂತೆಲ್ಲ ಮಾತನಾಡುವ ಅಖಿಲೇಶೇ ಪರ್ವಾಗಿಲ್ಲ ಎಂಬೊಂದು ಅಭಿಮತ ರೂಪುಗೊಂಡಿತ್ತು.

ಈಗ 2017ಕ್ಕೆ ಮತ್ತೊಂದು ವಿಧಾನಸಭೆ ಚುನಾವಣೆ ಎದುರಿಗಿದೆ. ಕೇಂದ್ರದಲ್ಲಿ ಮೋದಿ ಅಧಿಕಾರದಿಂದ ಕೆಳಗಿಳಿದು ಹೊಸ ರಾಜಕೀಯ ಸಮೀಕರಣ ರೂಪುಗೊಂಡು ಅದರಲ್ಲಿ ತನ್ನಂಥವರಿಗೆ ಜಾಗ ಸಿಕ್ಕುವುದು ಸದ್ಯಕ್ಕೆ ದುಬಾರಿ ಕನಸು ಅಂತ ಮುಲಾಯಂ ಸಿಂಗ್ ಗೆ ಗೊತ್ತಾಗಿದೆ. ಹೀಗಾಗಿಯೇ ತನ್ನ ಹಳೆ ಗಾರ್ಡುಗಳನ್ನೆಲ್ಲ ಜತೆಗಿರಿಸಿಕೊಂಡು ಈ ಬಾರಿ ಉತ್ತರ ಪ್ರದೇಶದ ಅಧಿಕಾರ ಸೂತ್ರವನ್ನಾದರೂ ತಾನೇ ಹಿಡಿಯೋಣ ಎಂಬ ಹವಣಿಕೆ ಮುಲಾಯಂ ಸಿಂಗ್ ಅವರದ್ದು. ಅಖಿಲೇಶರ ಆಳ್ವಿಕೆಯಲ್ಲಿ ಅಪ್ರಸ್ತುತರಾಗುತ್ತಿರುವ ಹಳೆತಲೆಗಳು ಮುಲಾಯಂಗೆ ಈ ನಿಟ್ಟಿನಲ್ಲಿ ತಿದಿ ಒತ್ತುತ್ತಲೇ ಬಂದವು.

ಇದೀಗ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷವೆಂಬ ಕೌಟುಂಬಿಕ ಉದ್ದಿಮೆಯಲ್ಲಿ (ಲೋಹಿಯಾ ಆತ್ಮಕ್ಕೆ ಶಾಂತಿಯಿರಲಿ) ಶಿವಪಾಲ್ ಯಾದವ್ ಎಂಬ ಚಿಕ್ಕಪ್ಪನ ವಿಷಯವಾಗಿ ಅಖಿಲೇಶ್ ವಿರೋಧದ ನೆಲೆಯಲ್ಲಿ, ಮುಲಾಯಂ ಪರವಾದ ನೆಲೆಯಲ್ಲಿ ಹೊಡೆದಾಡುವಂತಾಗಿದೆ.

Leave a Reply