ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್- ಕಾರ್ಯದರ್ಶಿ ಸ್ಥಾನದಿಂದ ಶಿರ್ಕೆ ವಜಾ, ರಾಜಕೀಯ ಪ್ರತಿಷ್ಠೆಗೆ ಸುಪ್ರೀಂ ಪ್ರಹಾರ

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ. ಅದರೊಂದಿಗೆ ಲೋಧಾ ಸಮಿತಿ ಶಿಫಾರಸ್ಸನ್ನು ಜಾರಿಗೊಳಿಸದೇ ಸ್ವಯಂ ಪ್ರತಿಷ್ಠೆ ಮೆರೆಯುತ್ತಿದ್ದ ಬಿಸಿಸಿಐಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.

ಬಿಸಿಸಿಐ ಪ್ರಮುಖ ಅಧಿಕಾರಿಗಳನ್ನು ವಜಾಗೊಳಿಸುವ ಜತೆಗೆ ಎರಡು ವಾರಗಳ ಅವಧಿಗೆ ಬಿಸಿಸಿಐಗೆ ವೀಕ್ಷಕರನ್ನು ನೇಮಿಸಲಾಗಿದೆ. ಈ ಅವಧಿಯಲ್ಲಿ ಬಿಸಿಸಿಐನ ಇಬ್ಬರು ಉಪಾಧ್ಯಕ್ಷರುಗಳೇ ಮಂಡಳಿಯ ಆಡಳಿತವನ್ನು ನಿರ್ವಹಿಸಬೇಕಿದೆ. ಹಿರಿಯ ವಕೀಲರಾದ ಫಾಲಿ ನಾರಿಮನ್ ಹಾಗೂ ಗೋಪಾಲ್ ಸುಬ್ರಮಣಿಯಂ ಮಂಡಳಿಯ ಆಡಳಿತವನ್ನು ನಡೆಸುವ ಜವಾಬ್ದಾರಿಯನ್ನು ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ ಪಿಳ್ಳೈ, ಆಡಿಟರ್ ಜೆನರಲ್ ವಿನೋದ್ ರಾಯ್ ಹಾಗೂ ಮಾಜಿ ಟೆಸ್ಟ್ ಆಟಗಾರ ಮೋಹಿಂದರ್ ಅಮರನಾಥ್ ಅವರಿಗೆ ನೀಡಬಹುದಾಗಿ ಶಿಫಾರಸ್ಸು ಮಾಡಲಾಗಿದೆ. ಇನ್ನು ಸುಪ್ರೀಂ ಕೋರ್ಟ್ ವಜಾಗೊಳಿಸದ ಇತರೆ ಆಡಳಿತ ಮಂಡಳಿಯ ಸದಸ್ಯರು ಲೋಧಾ ಸಮಿತಿ ಶಿಫಾರಸ್ಸನ್ನು ಪಾಲಿಸಲೇಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಬಿಸಿಸಿಐನ ಆಡಳಿತದ ಬಗ್ಗೆ ಸಮರ್ಥನೆ ಮಾಡಿಕೊಂಡ ಅನುರಾಗ್ ಠಾಕೂರ್, ‘ಭಾರತ ಕ್ರಿಕೆಟ್ ತಂಡ ಎಲ್ಲ ಮಾದರಿಯಲ್ಲೂ, ಎಲ್ಲಾ ಹಂತದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ ಒನ್, ಟಿ20ಯಲ್ಲಿ 2ನೇ ಸ್ಥಾನ ಹಾಗೂ ಏಕದಿನ ಮಾದರಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಕಿರಿಯರ ತಂಡ ಏಷ್ಯಾಕಪ್ ಹಾಗೂ ಮಹಿಳೆಯರ ತಂಡ ಸಹ ಏಷ್ಯಾಕಪ್ ಟೂರ್ನಿಗಳನ್ನು ಗೆದ್ದುಕೊಂಡಿವೆ. ಪ್ರದರ್ಶನಗಳು ಇಷ್ಟು ಉತ್ತಮವಾಗಿರುವಾಗ ನಮ್ಮ ಆಡಳಿತ ಎಲ್ಲಿ ಕುಂಠಿತವಾಗಿದೆ. ವಿನಾಕಾರಣ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಲೋಧಾ ಸಮಿತಿ ನೀಡಿರುವ ಶಿಫಾರಸ್ಸುಗಳಲ್ಲಿ ನಾಲ್ಕರಿಂದ ಐದು ಶಿಫಾರಸ್ಸುಗಳನ್ನು ಒಪ್ಪಲು ಸದಸ್ಯ ಸಂಸ್ಥೆಗಳು ಸಿದ್ಧವಿಲ್ಲ. ಈ ಶಿಫಾರಸ್ಸುಗಳು ವಾಸ್ತವವಾಗಿ ಅಳವಡಿಸಿಕೊಳ್ಳಲು ಆಗುವುದೂ ಇಲ್ಲ. ಈ ಪರಿಸ್ಥಿತಿಯನ್ನು ಮನದಟ್ಟು ಮಾಡಲು ನಾವು ಸಮಯಾವಕಾಶ ಕೇಳಿದ್ದು, ಸಮಿತಿಯು ಕಳೆದ ಎರಡು ತಿಂಗಳಿನಿಂದ ಸಮಿತಿ ನಮಗೆ ಕಾಲಾವಕಾಶವನ್ನೇ ನೀಡಿಲ್ಲ’ ಎಂದು ಹೇಳಿದರು. ಆದರೆ ಕೋರ್ಟ್ ಅನುರಾಗ್ ಠಾಕೂರ್ ಅವರ ವಾದವನ್ನು ತಿರಸ್ಕರಿಸಿ ಈ ಆದೇಶ ನೀಡಿದೆ.

‘ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾರೂ ಕೂಡ ಕಾನೂನಿನ ಚೌಕಟ್ಟಿನಿಂದ ಹೊರತಾಗಿಲ್ಲ. ಪ್ರತಿಯೊಬ್ಬರು ಕಾನೂನನ್ನು ಗೌರವಿಸಲೇಬೇಕು. ಆದರೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಕಾನೂನನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರು ಈ ಪರಿಸ್ಥಿತಿ ಎದುರಿಸಬೇಕಿದೆ’ ಎಂದು ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ ಲೋಧಾ ಅಭಿಪ್ರಾಯಪಟ್ಟಿದ್ದಾರೆ.

ವರ್ಷದ ಆರಂಭದಲ್ಲೇ ಬಿಸಿಸಿಐ ಪಾಲಿಗೆ ಸುಪ್ರೀಂ ಕೋರ್ಟ್ ದೊಡ್ಡ ಹೊಡೆತ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಬಿಸಿಸಿಐ ನ್ಯಾಯಾಲಯ ಯಾವ ರೀತಿ ತೀರ್ಪು ನೀಡಲಿದೆ. ಅದು ಬಿಸಿಸಿಐ ಸುಧಾರಣೆಗೆ ಎಲ್ಲಕ್ಕಿಂತ ಮುಖ್ಯವಾಗಿ ತಂಡದ ಪ್ರದರ್ಶನದ ಮೇಲೆ ಯಾವ ರೀತಿಯ ಪ್ರಭಾವ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಅಂದಹಾಗೆ ಸುಪ್ರೀಂ ಕೋರ್ಟ್ ತನ್ನ ಮುಂದಿನ ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಿದೆ.

Leave a Reply