ಲಖ್ನೊ ಮೋದಿ ಮಹಾ ಸಮಾವೇಶ, ನೀವು ಓದಿಕೊಳ್ಳಬೇಕಾದ ಪಂಚಿಂಗ್ ಮಾತುಗಳು!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಖ್ನೊದಲ್ಲಿ ಉತ್ತರ ಪ್ರದೇಶ ಚುನಾವಣೆಯ ಪೂರ್ವಭಾವಿ ಪ್ರಚಾರಕ್ಕಾಗಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಎಂದಿನಂತೆ ಬಿಜೆಪಿಯನ್ನು ಜನರೆದುರು ಆಕರ್ಷಕವಾಗಿ ಕಟ್ಟಿಡುವ ಪ್ರಯತ್ನ ಅಲ್ಲಿತ್ತು. ಇನ್ಯಾವುದೇ ಯೋಜನೆಯ ಘೋಷಣೆಗಳಾಗಿಲ್ಲ.

ಭಾಷಣ ಸಂದರ್ಭದಲ್ಲಿ ಮೋದಿ ಬಾಯಿಂದ ಬರುವ ತುಂಡು ತುಂಡು ಚತುರ ಮಾತುಗಳು ಅವರ ಯಾವುದೇ ಸಾರ್ವಜನಿಕ ಮಾತುಗಾರಿಕೆಯ ರೋಚಕಾಂಶ. ಈ ಬಾರಿಯದ್ದು ಉತ್ತರ ಪ್ರದೇಶದಲ್ಲಾದ ಅತಿದೊಡ್ಡ ಜನ ಸಮಾವೇಶ ಎಂದು ಹೇಳಲಾಗುತ್ತಿರುವುದರಿಂದ ಇಲ್ಲಿಯೂ ಅಂಥ ಜಲಕುಗಳಿಗೆ ಬರವಿರಲಿಲ್ಲ. ದೇಶ ಅಭಿವೃದ್ಧಿಯಾಗಬೇಕಾದರೆ ಉತ್ತರ ಪ್ರದೇಶ ಅಭಿವೃದ್ಧಿಯಾಗದೇ ಸಾಧ್ಯವಿಲ್ಲ ಎಂಬ ಹಳೆ ಒಕ್ಕಣೆ ಸಹ ಮರುಪ್ರಸ್ತುತಿ ಹೊಂದಿತು. ಉಳಿದಂತೆ ಬಿಜೆಪಿಗೆ ಮತ ಕೋರುತ್ತ ಮೋದಿ ಆಡಿದ ಮಾತುಗಳಲ್ಲಿ ಈ ಕೆಳಗಿನ ಸಾಲುಗಳೆಲ್ಲ ಹೊಳೆದವು.

  • ಉತ್ತರ ಪ್ರದೇಶದಲ್ಲಿ ಅಧಿಕಾರ ಸಿಗದೇ ಬಿಜೆಪಿ ವನವಾಸದಲ್ಲಿದೆ. ಆದರೆ ವಿಷಯ ಅದಲ್ಲ. ರಾಜ್ಯದಲ್ಲಿ ಅಭಿವೃದ್ಧಿಗೂ ವನವಾಸವೇ ಗತಿಯಾಗಿಬಿಟ್ಟಿದೆ.
  • ಬಿಎಸ್ಪಿ ಮತ್ತು ಎಸ್ಪಿಗಳೆರಡೂ ಮೋದಿ ಹಠಾವೋ (ಮೋದಿ ಕೆಳಗಿಳಿಸಿ) ಎನ್ನುತ್ತಿವೆ. ಆದರೆ ನಾನು ಕಾಳಧನ, ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಎನ್ನುತ್ತಿದ್ದೇನೆ. ಇವೆರಡರಲ್ಲಿ ನಿಮಗ್ಯಾವುದು ಬೇಕು ನಿರ್ಧರಿಸಿ.
  • ಈಮಟ್ಟದಲ್ಲಿ ಜನ ಸೇರಿರುವುದನ್ನು ನೋಡಿದರೆ ಅಟಲ್ ಬಿಹಾರಿ ವಾಜಪೇಯಿ, ಕಲ್ಯಾಣ್ ಸಿಂಗ್ ಇವರೆಲ್ಲ ಆಶೀರ್ವದಿಸುತ್ತಾರೆ.
  • ವಿಕಾಸಕ್ಕಾಗಿ ಜಾತಿ, ಮತ ಇತ್ಯಾದಿ ಭೇದಗಳನ್ನೆಲ್ಲ ಮರೆತು ಬಿಜೆಪಿ ಬೆಂಬಲಿಸಿ. ನಮ್ಮನ್ನು ಬೆಂಬಲಿಸುವವರಿಗೂ ಹಿತ ಬಯಸುತ್ತೇವೆ ಹಾಗೂ ನಮ್ಮ ಜತೆಗಿಲ್ಲದವರಿಗೂ ಹಿತವನ್ನೇ ಬಯಸುತ್ತೇವೆ. ಎಲ್ಲರ ಜತೆ, ಎಲ್ಲರ ವಿಕಾಸವೆಂಬುದು ನಮ್ಮ ಮಂತ್ರ.
  • ಉತ್ತರ ಪ್ರದೇಶದಲ್ಲಿ ಒಂದು ಪಕ್ಷ 15 ವರ್ಷಗಳಿಂದ ತನ್ನ ನಾಯಕನನ್ನು ನೆಲೆಗೊಳಿಸುವ ವಿಫಲ ಯತ್ನ ಮಾಡಿಕೊಂಡಿದೆ. ಇನ್ನೊಂದಕ್ಕೆ ಹಣ ಉಳಿಸಿಕೊಳ್ಳುವ ಯತ್ನ ಹಾಗೂ ಮತ್ತೊಂದು ಪಕ್ಷ ಕುಟುಂಬವನ್ನು ಉಳಿಸಿಕೊಳ್ಳುವುದರಲ್ಲಿದೆ.
  •  ತನ್ನ ಕುಟುಂಬದ ವಿಷಯವನ್ನೇ ಸಂಭಾಳಿಸಿಕೊಳ್ಳಲಾಗದ ಪಕ್ಷವೊಂದು ಉತ್ತರ ಪ್ರದೇಶದ ಸಮಸ್ಯೆಗಳನ್ನು ಹೇಗೆ ಪರಿಹರಿಸೀತು?

Leave a Reply