ಎಸ್ಬಿಐ ದರ ಇಳಿಕೆಯಿಂದ ಗೃಹ- ವಾಹನ ಸಾಲಗಳ ಬಡ್ಡಿದರಗಳೆಲ್ಲ ಇಳಿದುಬಿಡುತ್ತವೆಂದು ಸಾರಾಸಗಟಾಗಿ ಹೇಳುವುದು ಸರಿಯೇ?

authors-rangaswamyMCLR (ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ )  ಎಂದರೇನು?  ಈ ರೀತಿಯ ಲೆಂಡಿಂಗ್ ರೇಟ್ ತರಲು ಕಾರಣವೇನು? ಇದು ಗೃಹ ಸಾಲದ  ಮೇಲಿನ ಬಡ್ಡಿಯನ್ನ ಕಡಿಮೆ ಮಾಡುತ್ತದೆಯೇ ?  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಓವರ್ ನೈಟ್ ಸಾಲದ ಮೇಲಿನ ಬಡ್ಡಿ ದರ ದಿಂದ ತಿಂಗಳು , ಮೂರು ತಿಂಗಳು , ಆರು ತಿಂಗಳು , ವರ್ಷ , ಎರಡು ವರ್ಷ , ಮತ್ತು ಮೂರು ವರ್ಷದ ಬಡ್ಡಿ ದರವನ್ನ ಬಿಡುಗಡೆ ಮಾಡಿದೆ. ಇದು ಹೇಗೆ ಕೆಲಸ ಮಾಡುತ್ತದೆ?

ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ಎನ್ನುವುದು ಬ್ಯಾಂಕ್ ವಿಧಿಸಲೇಬೇಕಾದ  ಕನಿಷ್ಠ ಬಡ್ಡಿ ದರ. ಅಂದರೆ ಈ ನಿಗದಿತ ಬಡ್ಡಿ ದರಕ್ಕಿಂತ ಕಡಿಮೆ ವಿಧಿಸಲು ಸಾಧ್ಯವಿಲ್ಲ ಎಂದಹಾಗೆ. ಆಕಸ್ಮಾತ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅದಕ್ಕಿಂತ ಕಡಿಮೆ ಮಾಡಿ ಎಂದು ಹೇಳಿದರೆ ಬೇರೆ ದಾರಿಯಿಲ್ಲ. ಹೆಚ್ಚಿದ ಹಣದ ಹರಿವು, ಕುಸಿದ ಡೆಪಾಸಿಟ್ ಮೇಲಿನ ಬಡ್ಡಿ  ಇವು ಸಾಲದ ಮೇಲಿನ ಬಡ್ಡಿಯನ್ನೂ ಕಡಿಮೆ ಆಗುವಂತೆ ಮಾಡಿವೆ.

ಈ ರೀತಿಯ ಸಾಲದ ದರ/ ಲೆಂಡಿಂಗ್ ರೇಟ್ ತರಲು ಮುಖ್ಯ ಕಾರಣ ಹಣದ ಹರಿವು. ಹಿಂದೆಲ್ಲಾ ಬ್ಯಾಂಕ್ಗಳು ಬೇಸ್ ರೇಟ್ ಆಧಾರ ಇಟ್ಟುಕೊಂಡು ಸಾಲದ ಮೇಲಿನ ಬಡ್ಡಿಯನ್ನ ನಿರ್ಧಾರ ಮಾಡುತ್ತಿದ್ದವು. ಈ ಹೊಸ ಲೆಂಡಿಂಗ್ ರೇಟ್ ನಿಂದ ಸಾಲ ಪಡೆಯುವರಿಗೆ ಸ್ಪರ್ಧಾತ್ಮಕ ಬಡ್ಡಿ ದರ ದೊರೆಯುತ್ತದೆ. ಬ್ಯಾಂಕ್ಗಳ ನಡುವೆ ಸ್ಪರ್ಧೆ ಹೆಚ್ಚುತ್ತದೆ, ಖರ್ಚು ಕಡಿಮೆ ಮಾಡಿ ಹೆಚ್ಚಿನ ಸೇವೆ ಕೊಡುವ ದರ್ದಿಗೆ ಬ್ಯಾಂಕ್ಗಳು ಬೀಳಲಿವೆ. ಬ್ಯಾಂಕಿನ ವ್ಯಹಾರಗಳಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ.

ಒಂದು ಉದಾಹರಣೆ ಇದನ್ನ ಅರ್ಥ ಮಾಡಿ ಕೊಳ್ಳಲು ಸಹಾಯ ಮಾಡುತ್ತದೆ.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನವರಿ 2 ರಿಂದ ಚಾಲ್ತಿಗೆ ಬರುವಂತೆ ತನ್ನhana class ಹೊಸ MCL ರೇಟ್  ಅನ್ನು ಘೋಷಿಸಿದೆ.  ಕೆನರಾ ಬ್ಯಾಂಕ್ ಅಥವಾ ಮತ್ತಿತರೇ ಬ್ಯಾಂಕು ಇಷ್ಟೇ ಲೆಂಡಿಂಗ್ ರೇಟ್ ಇಡಬೇಕು ಎನ್ನುವಂತಿಲ್ಲ.  ಏಕೆಂದರೆ ತನ್ನ ಖರ್ಚು ವೆಚ್ಚ , ಆದಾಯ ಎಲ್ಲವ ಲೆಕ್ಕ ಹಾಕಿ  ಬ್ಯಾಂಕ್ಗಳು ತನ್ನ ಆಂತರಿಕ ಮಾನದಂಡದ ಆಧಾರದ ಮೇಲೆ ಈ ಲೆಂಡಿಂಗ್ ರೇಟ್  ನಿರ್ಧರಿಸುತ್ತವೆ. ಹೀಗಾಗಿ ಗ್ರಾಹಕ ಎಲ್ಲಿ ಕಡಿಮೆ ಬಡ್ಡಿಯೂ ಅಲ್ಲಿಗೆ ವಲಸೆ ಹೋಗಬಹುದು.

ಇದು ಗೃಹ ಸಾಲದ  ಮೇಲಿನ ಬಡ್ಡಿಯನ್ನ ಕಡಿಮೆ ಮಾಡುತ್ತದೆಯೇ ?

ಹೌದು ಎಂದು ಲೆಕ್ಕಾಚಾರ ಮಾಡದೆ ಹೇಳುವುದು ಅತ್ಯಂತ ಬಾಲಿಶವಾಗುತ್ತದೆ.  ಗೃಹ ಸಾಲ ಮಾಡಿದವರಿಗೆಲ್ಲ ಇನ್ನುಮುಂದೆ ಕಂತಿನ ಹಣ ಕಡಿಮೆಯಾಗುತ್ತದೆ ಎನ್ನುವಂತೆ ಹಲವು ಪತ್ರಿಕೆಗಳು ಬರೆದಿವೆ. ಆದರೆ ಲೆಕ್ಕಾಚಾರ ಅಷ್ಟು ಸುಲಭವಿಲ್ಲ!  ಏಕೆಂದರೆ  MCLR  ಬಡ್ಡಿಯ ಮೇಲೆ ‘ಮಾರ್ಕ್ ಅಪ್ಸ್ ‘  ಅಥವಾ ‘ಸ್ಪ್ರೆಡ್ ‘  ಎನ್ನುವ ಪುಟ್ಟ ಬಡ್ಡಿ ಇರುತ್ತದೆ. ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರು ವರ್ಷಕ್ಕೆ MCLR  ದರ 8.15 ಎಂದು ಹೇಳಿದೆ. ಅರ್ಥ 8.15% ಕ್ಕಿಂತ ಕಡಿಮೆ ಇರಬಾರದು ಎಂದು. ಜಾಸ್ತಿ ಇರಬಾರದು ಎಂದಲ್ಲ. ಒಂದು ಉದಾಹರಣೆ  ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಖಾತ್ರಿ ಪಡಿಸುತ್ತದೆ.

ರಾಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಗೃಹ ಸಾಲ ಪಡೆದಿದ್ದಾನೆ ಎಂದು ಕೊಳ್ಳಿ ಮತ್ತು ಆತನ ಕ್ರೆಡಿಟ್ ವರ್ತಿನೆಸ್ಸ್ (ಸಾಲದ ಅರ್ಹತೆಗಳು) ತುಂಬಾ ಚನ್ನಾಗಿದೆ ಅಂದುಕೊಳ್ಳಿ.  ಜನವರಿ ಒಂದರಿಂದ ಆತನಿಗೆ ತನ್ನ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತದೆ. 9.05% ಬದಲು ಆತ ಕೊಡಬೇಕಿರುವುದು 8.15% ಬಡ್ಡಿ.

ಲಕ್ಷ್ಮಣ ಕೂಡ ಅದೇ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಆತನ ಸಾಲದ ಚರಿತ್ರೆ ಅಷ್ಟು ಉತ್ತಮ ವಾಗಿಲ್ಲದಿದ್ದರೆ MCLR  ದರದ ಮೇಲೆ ಬ್ಯಾಂಕು ಇನ್ನೊಂದು ೨೦ ಬೇಸ್ ಪಾಯಿಂಟ್ ಹೆಚ್ಚು ಬಡ್ಡಿ ವಿಧಿಸಬಹುದು.

ಭರತ ಎನ್ನುವ ವ್ಯಕ್ತಿ ಮುಂದಿನ ಮೂರು ವರ್ಷಕ್ಕೆ MCLR  ದರಕ್ಕೆ ಬದ್ಧನಾಗಿರುವುದಕ್ಕೆ ಸಾಲದ ಷರತ್ತು ಪತ್ರಕ್ಕೆ ಸಹಿ ಹಾಕಿದ್ದರೆ ಮುಂದಿನ ಎರಡಕ್ಕೂ ಹೆಚ್ಚು ವರ್ಷ ಆತ ತನ್ನ ಹಳೆಯ ಬಡ್ಡಿ ದರವನ್ನೇ ನೀಡಬೇಕಾಗುತ್ತದೆ.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ೯೦ ಬೇಸ್ ಪಾಯಿಂಟ್ ಬಡ್ಡಿ ಇಳಿಸಿಯೂ ಭರತನಿಗೆ ಲಾಭವಿಲ್ಲದೆ ಹೋಗುತ್ತದೆ.

ಹೀಗಾಗಿ ಗೃಹ ಸಾಲದ ಮೇಲಿನ ಕಂತಿನ ಹಣ ಕಡಿಮೆಯಾಗುವುದು ಅಥವಾ ಬಿಡುವುದು ಆಯಾ ವ್ಯಕ್ತಿಯ ಮತ್ತು ಬ್ಯಾಂಕಿನ ಒಪ್ಪಂದದ ಮೇಲೆ ನಿರ್ಧಾರವಾಗುತ್ತದೆ.

ಬ್ಯಾಂಕುಗಳು ಪ್ರತಿ ತಿಂಗಳು  ಬದಲಾದ ಬಡ್ಡಿ ದರವನ್ನ ಬಿಡುಗಡೆ ಮಾಡುತ್ತವೆ. ನೀವು ಗೃಹ ಸಾಲವನ್ನು ಎಷ್ಟು ತಿಂಗಳಿಗೆ ಅಥವಾ ವರ್ಷಕ್ಕೆ ಸೀಮಿತ ಗೊಳಿಸಿಕೊಳ್ಳಬೇಕು ಎನ್ನುವುದರ ಮೇಲೆ ಬಡ್ಡಿ ದರ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ 12 ತಿಂಗಳಿಗೆ ಒಪ್ಪಂದ ಮಾಡಿಕೊಳ್ಳುವುದು ವಾಡಿಕೆ.  ಉದಾಹರಣೆ ನೋಡೋಣ.

ರಾಜ ಎನ್ನುವ ವ್ಯಕ್ತಿಯ ಗೃಹ ಸಾಲದ ಅವಧಿ 20 ವರ್ಷ ಎಂದು ಕೊಳ್ಳಿ. ಸಾಲದ ಮೇಲಿನ ಬಡ್ಡಿ ದರವನ್ನ  MCLR ದರದಂತೆ ಗರಿಷ್ಠ 3 ವರ್ಷಗಳವರೆಗೆ ನಿಗದಿ ಮಾಡಿಕೊಳ್ಳಬಹುದು. ರಾಜ 12 ತಿಂಗಳಿಗೆ ನಿಗದಿ ಮಾಡಿಕೊಂಡಿದ್ದಾನೆ ಎಂದು ಕೊಂಡರೆ 12 ತಿಂಗಳ ನಂತರ ಬಡ್ಡಿ ದರವನ್ನು ಪುನಃ ಪರಿಶೀಲಿಸಲಾಗುತ್ತದೆ. ಬ್ಯಾಂಕಿನ ಅಂದಿನ ಪರಿಷ್ಕೃತ ದರ ಆತನಿಗೆ ಲಾಗೂ ಆಗುತ್ತದೆ.

ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂತೆ ಗೃಹ ಸಾಲದ ಮೇಲಿನ ಕಂತು ಕಡಿಮೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ .

Leave a Reply