ಬಿಜೆಪಿ ಸೇರಿದ ಶ್ರೀನಿವಾಸ್ ಪ್ರಸಾದ್, ಧರ್ಮ-ಜಾತಿ-ಜನಾಂಗ ಆಧಾರದ ಮೇಲೆ ಮತ ಕೇಳ್ಬಾರ್ದು: ಸುಪ್ರೀಂ ಮಹತ್ವದ ಆದೇಶ, ಅಗ್ನಿ-4 ಪರೀಕ್ಷೆ ಯಶಸ್ವಿ

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಗೆ ಶ್ರೀನಿವಾಸ ಪ್ರಸಾದ್ ಸೇರ್ಪಡೆ

ಮಾಜಿ ಸಚಿವ ಹಾಗೂ ದಲಿತ ನಾಯಕರಾಗಿ ಗುರುತಿಸಿಕೊಂಡಿರುವ ಶ್ರೀನಿವಾಸ್ ಪ್ರಸಾದ್ ಅವರು ಸೋಮವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಂದ ಪಕ್ಷದ ಚಿಹ್ನೆಯ ಬಾವುಟ ಪಡೆಯುವ ಮೂಲಕ ಪಕ್ಷದ ಸದಸ್ಯತ್ವ ಪಡೆದುಕೊಂಡರು. ಬಿಜೆಪಿಗೆ ಸೇರಿದ ನಂತರ ಮಾತನಾಡಿದ ಶ್ರೀನಿವಾಸ ಪ್ರಸಾದ್ ಅವರು ಹೇಳಿದಿಷ್ಟು…

‘ಸ್ವಾಭಿಮಾನ, ಆತ್ಮಗೌರವ ಕಾಪಾಡಿಕೊಳ್ಳಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇನೆ. ನಾನು ಆರಂಭದಿಂದಲೂ ಸ್ವಾಭಿಮಾನದ ರಾಜಕಾರಣ ಮಾಡಿಕೊಂಡು ಬಂದವನು. ಸಂಪುಟ ಪುನಾರಚನೆ ಸಂದರ್ಭದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು. ಸ್ವಾಭಿಮಾನಕ್ಕೆ ಪೆಟ್ಟುಬಿದ್ದಾಗ ಸಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆಯಬೇಕಾಯಿತು. ಸಂಪುಟ ವಿಸ್ತರಿಸಿದ ನಂತರ ಸರ್ಕಾರಕ್ಕೆ ಹೆಚ್ಚಿನ ವರ್ಚಸ್ಸು ಬಂದಿಲ್ಲ. ಬದಲಾಗಿ ಇನ್ನು ಕುಸಿದಿದೆ. ಸಿದ್ದರಾಮಯ್ಯ ತನ್ನ ರಾಜಕೀಯವನ್ನು ಮಾತ್ರ ಮುಗಿಸಿಕೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಕೊನೆ ಮೊಳೆ ಹೊಡೆಯುತ್ತಿದ್ದಾರೆ. ಇವರ ಮುಖವಾಡವೇ ಬೇರೆ. ಮೋದಿ ಅವರ ಸಾಮಾಜಿಕ ಬದ್ಧತೆ ಹಾಗೂ ಕಾಳಜಿಯನ್ನಿಟ್ಟುಕೊಂಡು ಆ ಪಕ್ಷದ ಸಿದ್ಧಾಂತ ಹಾಗೂ ವಿಚಾರದ ಮೇಲೆ ರಾಜಕಾರಣ ಮಾಡುತ್ತೇನೆ.’

ಮತ ಕೇಳುವಾಗ ಜಾತಿ, ಧರ್ಮ ಆಧಾರವಾಗಬಾರದು

ಚುನಾವಣೆ ಸಂದರ್ಭದಲ್ಲಿ ಧರ್ಮ, ಜಾತಿ, ಜನಾಂಗವನ್ನು ಮುಂದಿಟ್ಟುಕೊಂಡು ಯಾವುದೇ ಪಕ್ಷ ಹಾಗೂ ಯಾವುದೇ ಅಭ್ಯರ್ಥಿ ಮತವನ್ನು ಕೇಳಬಾರದು, ಕೇಳಿದರೆ ಅದು ಕಾನೂನು ಬಾಹೀರವಾಗಲಿದೆ… ಇದು ಸುಪ್ರೀಂ ಕೋರ್ಟ್ ಸೋಮವಾರ ನೀಡಿರುವ ಮಹತ್ವದ ತೀರ್ಪು.

ಧರ್ಮಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದ್ದು, ಚುನಾವಣಾ ಕಾನೂನಿನ ಪ್ರಕಾರ ಇನ್ನುಮುಂದೆ ಚುನಾವಣೆ ಸಮಯದಲ್ಲಿ ಈ ಮೂರು ಅಂಶವನ್ನು ಬಳಸಿ ಮತ ಕೇಳುವಂತಿಲ್ಲ. ಮುಖ್ಯ ನ್ಯಾಯಧೀಶರಾದ ಟಿ.ಎಸ್ ಠಾಕೂರ್ ಸೇರಿದಂತೆ ಏಳು ನ್ಯಾಯಾಧೀಶರ ಪೀಠ ಈ ಆದೇಶವನ್ನು ನೀಡಿದೆ. 1995ರಲ್ಲಿ ಸುಪ್ರೀಂ ಕೋರ್ಟ್ ‘ಹಿಂದುತ್ವ, ಜೀವನ ಶೈಲಿಯ ಒಂದು ವಿಧಾನವೇ ಹೊರತು ಧರ್ಮವಲ್ಲ’ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಬೇಕು ಎಂಬ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿತು.

ದಂಡ ಸಂಹಿತೆ 123(3)ರ ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಯಾವುದೇ ಅಭ್ಯರ್ಥಿ ಅಥವಾ ಆತನ ಬೆಂಬಲಿಗರು ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಮತಯಾಚಿಸುವಂತಿಲ್ಲ.

ಅಗ್ನಿ-4 ಯಶಸ್ವಿ ಪರೀಕ್ಷೆ

ಭಾರತದ ಅತಿ ದೊಡ್ಡ ಅಣ್ವಸ್ತ್ರ ಕ್ಷಿಪಣಿ ಅಗ್ನಿ-5 ನ ನಾಲ್ಕನೇ ಪರೀಕ್ಷಾರ್ಥ ಉಡಾವಣೆ ಮಾಡಿದ ಒಂದುವಾರದ ನಂತರ ಅಗ್ನಿ-4 ಕ್ಷಿಪಣಿಯ 6ನೇ ಹಂತದ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಯಶಸ್ವಿಯಾಗಿ ಮಾಡಲಾಗಿದೆ. ಅಬ್ದುಲ್ ಕಲಾಂ ದ್ವೀಪದಲ್ಲಿ ಮಧ್ಯಾಹ್ನ 12 ಗಂಟೆಗೆ ಉಡಾವಣೆ ಮಾಡಲಾಯಿತು. 4 ಸಾವಿರ ಕಿ.ಮೀ ದೂರಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ 20 ಮೀಟರ್ ಉದ್ದ, 17 ಟನ್ ತೂಕ ಹೊಂದಿದೆ. ಕಳೆದ ಒಂದು ವಾರದಲ್ಲಿ ಅಗ್ನಿ-5 ಹಾಗೂ ಅಗ್ನಿ-4 ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿರುವುದು ಭಾರತೀಯ ಸೇನೆಯ ಬಲ ಹೆಚ್ಚಿಸಿದಂತಾಗಿದೆ.

ಜಿಲ್ಲಾಧಿಕಾರಿಗಳಿಂದ ಭೂಮಿ ಪರಿವರ್ತನೆಯಾಗದಿದ್ದರೆ ಪರಭಾರೆ, ನೋಂದಣಿ ಇಲ್ಲ

ಜಿಲ್ಲಾಧಿಕಾರಿಗಳಿಂದ ಪರಿವರ್ತನೆಯಾಗದ ಭೂಮಿಯಲ್ಲಿ ನಿರ್ಮಾಣವಾದ ಕಟ್ಟಡ, ಬಡಾವಣೆ, ನಿವೇಶನ, ಆಸ್ತಿಯನ್ನು 11 ಬಿ ಫಾರಂ ಆಧಾರದ ಮೇಲೆ ಪರಭಾರೆ ಅಥವಾ ನೋಂದಣಿ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್, ‘2014ರ ಜೂನ್ ತಿಂಗಳವರೆಗೂ ಜಿಲ್ಲಾಧಿಕಾರಿಗಳಿಂದ ವಸತಿ ಉದ್ದೇಶಕ್ಕೆ ಪರಿವರ್ತನೆಯಾಗದ ಭೂಮಿಯಲ್ಲಿ ನಿವೇಶನ, ಮನೆ ನಿರ್ಮಾಣವಾಗಿದ್ದರೆ ಅಂತಹ ಆಸ್ತಿಗಳಿಗೆ ಸೀಮಿತವಾಗಿ ಪರಭಾರೆ ಮಾಡಬಹುದು. ಆದರೆ ನಂತರ ಇಂತಹ ಆಸ್ತಿಗಳನ್ನು 11 ಬಿ ಫಾರಂ ಆಧಾರದ ಮೇಲೆ ಪರಭಾರೆ ಮಾಡಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದೇವೆ.ಆಸ್ತಿಯ ಖಾತಾಗಳನ್ನು ಕೈಬರಹದ ರೂಪದಲ್ಲಿ ಫಾರಂ 9ರಲ್ಲಿ ನೀಡಬಾರದು, ಈ ವಿಷಯದಲ್ಲಿ ಜನ ಎಚ್ಚರ ವಹಿಸಬೇಕು. ಕೈಬರಹದ ಮೂಲಕ ಫಾರಂ 9ರಲ್ಲಿ ನೀಡುವ ದಾಖಲೆಗಳು ನಕಲಿಯಾಗಿರುತ್ತವೆ.’ ಎಂದು ಎಚ್ಚರಿಕೆ ನೀಡಿದರು.

Leave a Reply