ಜನರ ಮನ ಗೆದ್ದ ಭೀಮ್ ಆ್ಯಪ್ ಈವರೆಗೂ ಆಗಿದೆ 30 ಲಕ್ಷ ಡೌನ್ ಲೋಡ್, 5 ಲಕ್ಷ ಬಾರಿ ವಹಿವಾಟು… ನೀವು ತಿಳಿಯಬೇಕಿರುವ ಈ ಪ್ರಮುಖ ಮಾಹಿತಿಗಳು

ಡಿಜಿಟಲ್ ಕನ್ನಡ ಟೀಮ್:

ದೇಶದ ಸಾಮಾನ್ಯ ಜನರು ಡಿಜಿಟಲ್ ವ್ಯವಹಾರ ನಡೆಸಲು ಸುಗಮ ಹಾದಿ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಬಿಡುಗಡೆ ಮಾಡಿದ ‘ಭೀಮ್’ (ಭಾರತ್ ಇಂಟರ್ ಫೇಸ್ ಫಾರ್ ಮನಿ) ಆ್ಯಪ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೂ 30 ಲಕ್ಷ ಡೌನ್ ಲೋಡ್ ಆಗಿದ್ದು, ಈ ಆ್ಯಪ್ ಅನ್ನು ಜನರು ಸ್ವೀಕರಿಸಿರುವುದಕ್ಕೆ ಈ ಅಂಕಿ ಅಂಶ ಸಾಕ್ಷಿಯಾಗಿದೆ.

ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅವರ ಹೆಸರಿನ ‘ಭೀಮ್’ ಆ್ಯಪ್ ಅನ್ನು ಕಳೆದ ಶುಕ್ರವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ 48 ಗಂಟೆಗಳಲ್ಲಿ ಅತಿ ಹೆಚ್ಚು ಡೌನ್ಲೋಡ್ ಆದ ಆ್ಯಪ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.

ಭೀಮ್ ಆ್ಯಪ್ ಅನ್ನು ಯಾವುದೇ ಮೊಬೈಲ್ ನಿಂದ ಆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕಿನ ಖಾತೆಯನ್ನು ಸಂಪರ್ಕಿಸಬಹುದು. ನಂತರ ಆ ಖಾತೆಯಿಂದ ಬೇರೆ ಖಾತೆಗೆ ಹಣ ಕಳಿಸುವುದಾಗಲಿ ಅಥವಾ ಹಣ ರವಾನೆ ಮಾಡುವುದಾಗಲಿ ಸುಲಭವಾಗಲಿದೆ. ಈವರೆಗೂ ಭಾರತದ ಗೂಗಲ್ ಪ್ಲೇನಲ್ಲಿ 10 ಲಕ್ಷದಿಂದ 50 ಲಕ್ಷದವರೆಗೂ ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಲಾಗಿದೆ ಎಂದು ತೋರಿಸುತ್ತಿದೆ. ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಟ್ವೀಟ್ ಮಾಹಿತಿಯನ್ನು ಪರಿಗಣಿಸುವುದಾದರೆ, ಈವರೆಗೂ ಒಟ್ಟು 30 ಲಕ್ಷ ಬಾರಿ ಈ ಆ್ಯಪ್ ಡೌನ್ ಲೋಡ್ ಆಗಿದ್ದು, ಒಟ್ಟು 5 ಲಕ್ಷ ಬಾರಿ ಹಣದ ವರ್ಗಾವಣೆ ಮಾಡಲಾಗಿದೆ.

ಈ ಆ್ಯಪ್ ಮೂಲಕ ಹಣ ಪಡೆಯುವುದಾಗಲಿ ಅಥವಾ ಪಾವತಿ ಮಾಡಲು ಯಾವುದೇ ರೀತಿಯ ಇಂಟರ್ ನೆಟ್ ಅಥವಾ ಸ್ಮಾರ್ಟ್ ಫೋನಿನ ಅಗತ್ಯವಿಲ್ಲದಿರುವುದು ಇದರ ವಿಶೇಷತೆ. ಈ ಆ್ಯಪ್ ಮೂಲಕ ವಿವಿಧ ರೀತಿಯಲ್ಲಿ ಹಣದ ವಹಿವಾಟು ಮಾಡಬಹುದಾಗಿದ್ದು, ಈ ಆ್ಯಪ್ ಬಳಸುವ ವಿಧಾನ ಕುರಿತ ಪ್ರಮುಖ ಮಾಹಿತಿಗಳು ಹೀಗಿವೆ…

  • ಈ ಆ್ಯಪ್ ನಲ್ಲಿ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಜೋಡಿಸಿರುವ ಹಿನ್ನೆಲೆಯಲ್ಲಿ ಖಾತೆಯನ್ನು ಗುರುತಿಸಲು ಮೊಬೈಲ್ ಸಂಖ್ಯೆಯನ್ನು ಬಳಸಲಾಗುವುದು. ಒಂದು ವೇಳೆ ಬೇರೆ ಖಾತೆಗೆ ಹಣ ವರ್ಗಾಯಿಸಬೇಕಾದರೆ, ಅದೇ ಸಂಖ್ಯೆಯಿಂದ ಬೇರೆ ಖಾತೆಯನ್ನು ಬದಲಾಯಿಸಿಕೊಳ್ಳಬಹುದು. ಆದರೆ ಈ ಆ್ಯಪ್ ನಲ್ಲಿ ಒಂದು ಬಾರಿ ಒಂದು ಬ್ಯಾಂಕ್ ಖಾತೆಯನ್ನು ಮಾತ್ರ ಜೋಡಿಸಬಹುದಾಗಿದೆ.
  • ಒಂದು ವೇಳೆ ನೀವು ಅಂಗಡಿಗೆ ಹೋಗಿ ಯಾವುದೇ ವಸ್ತುವನ್ನು ಕೊಂಡರೆ, ನಿಮ್ಮ ಮೊಬೈಲ್ ನಲ್ಲಿರುವ ಭೀಮ್ ಆ್ಯಪ್ ಅನ್ನು ತೆರೆದು, ಅಂಗಡಿಯ ಮಾಲೀಕ ಭೀಮ್ ಆ್ಯಪ್ ನಲ್ಲಿ ಬ್ಯಾಂಕ್ ಖಾತೆಗೆ ಸಂಪರ್ಕಿಸಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ವರ್ಗಾವಣೆ ಮಾಡಬೇಕಾದ ಹಣದ ಮೊತ್ತವನ್ನು ಸೇರಿಸಿ ‘ಹಣ ಕಳುಹಿಸುವ’ ಬಟನ್ ಒತ್ತಿದರೆ ಸಾಕು. ನಿಮ್ಮ ಖಾತೆಯಿಂದ ಅಂಗಡಿ ಮಾಲೀಕನ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.
  • ಈ ಆ್ಯಪ್ ನಲ್ಲಿ ಕ್ಯೂಆರ್ ಕೋಡ್ ಮೂಲಕವೂ ಹಣ ವರ್ಗಾವಣೆ ಮಾಡುವ ಅವಕಾಶ ನೀಡಲಾಗಿದೆ. ಅಂಗಡಿಯ ಮಾಲೀಕ ಈ ಆ್ಯಪ್ ಮೂಲಕ ತನ್ನದೇ ಆದ ಕ್ಯೂ.ಆರ್ ಕೋಡ್ ಅನ್ನು ಸೃಷ್ಠಿ ಮಾಡಿಕೊಳ್ಳಬಲ್ಲ. ನೀವು ಹಣ ನೀಡುವಾಗ ‘ಪಾವತಿಸುವ ಬಟನ್’ ಒತ್ತಬೇಕು ನಂತರ ಅಂಗಡಿ ಮಾಲೀಕನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಹಣ ವರ್ಗಾವಣೆಯಾಗುತ್ತದೆ.
  • ಈ ಆ್ಯಪಿನ ವಿಶೇಷ ಅನುಕೂಲ ಎಂದರೆ ಸ್ಮಾರ್ಟ್ ಫೋನ್ ಅಥವಾ ಇಂಟರ್ ನೆಟ್ ಇಲ್ಲದೆಯೇ ಈ ಆ್ಯಪ್ ಅನ್ನು ಬಳಸಿ ಹಣ ಪಾವತಿಸುವುದು. ಅದು ಹೇಗೆ ಅಂದರೆ, ನೀವು ನಿಮ್ಮ ಯಾವುದೇ ಮೊಬೈಲ್ ನಿಂದ *99# ಅನ್ನು ಡಯಲ್ ಮಾಡಿದರೆ ನಿಮಗೆ ಹಣ ಪಾವತಿ ಮಾಡುವ, ನಿಮ್ಮ ಖಾತೆಯಲ್ಲಿನ ಹಣದ ಪ್ರಮಾಣ ಹಾಗೂ ಹಣದ ವಹಿವಾಟಿನ ಹಳೆಯ ಮಾಹಿತಿ ತಿಳಿಯುವ ಅವಕಾಶ ಸಿಗುತ್ತದೆ. ಅದರ ಮೂಲಕವಾಗಿ ಹಣ ಪಡೆಯುವವರ ಮೊಬೈಲ್ ಸಂಖ್ಯೆಯನ್ನು ಹಾಕಿ, ಕಳುಹಿಸಬೇಕಿರುವ ಮೊತ್ತವನ್ನು ನಮೂದಿಸಿದರೆ ನಿಮ್ಮ ವಹಿವಾಟು ಸುಗಮವಾಗಿ ನಡೆಯಲಿದೆ.

ಈ ಆ್ಯಪಿನ ಪ್ರತಿ ವರ್ಗಾವಣೆಯಲ್ಲಿ ಗರಿಷ್ಠ ಮಿತಿ ₹ 10 ಸಾವಿರ ಇದ್ದು, ದಿನದ ವಹಿವಾಟಿನ ಗರಿಷ್ಠ ಮಿತಿ ₹ 20 ಸಾವಿರ ಇದೆ. ಒಂದು ವೇಳೆ ₹ 20 ಸಾವಿರಕ್ಕೂ ಹೆಚ್ಚಿನ ವಹಿವಾಟು ನಡೆಸಬೇಕಾದರೆ, ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಟ್ ಅಥವಾ ನೆಟ್ ಬ್ಯಾಂಕಿಗ್ ನಲ್ಲಿ ಐಎಫ್ಎಸ್ ಸಿ ಮೂಲಕವೇ ವಹಿವಾಟು ನಡೆಸಬೇಕು.

ಸಾಮಾನ್ಯ ಜನರು, ಬಡವರು, ಸಣ್ಣ ಪುಟ್ಟ ವ್ಯಾಪಾರಿಗಳು ಡಿಜಿಟಲ್ ವ್ಯವಹಾರ ನಡೆಸುವುದನ್ನು ಅನುಕೂಲ ಮಾಡಿಕೊಡಲು ಈ ಭೀಮ್ ಆ್ಯಪ್ ಅನ್ನು ಪರಿಚಯಿಸಲಾಗಿದ್ದು, ಸಾಮಾನ್ಯ ಜನರಿಗೆ ಸಾಧ್ಯವಾದಷ್ಟು ಅನುಕೂಲಕರವಾಗಿದೆ. ಸದ್ಯ ಕೇವಲ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ ಮಾತ್ರ ಸಿದ್ಧವಾಗಿದ್ದು, ಎರಡು ವಾರಗಳಲ್ಲಿ ಆಪಲ್ ಫೋನಿಗೂ (ಐಒಎಸ್) ಆ್ಯಪ್ ಬಿಡುಗಡೆಯಾಗುವ ನಿರೀಕ್ಷೆ ಇದೆ.

1 COMMENT

Leave a Reply