12 ಸಾವಿರ ಕಿ.ಮೀ. ದೂರದ ಲಂಡನ್ನಿಗೆ ಚೀನಾ ರೈಲು ಬಿಟ್ಟಿರೋದು ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಒಂದಿಲ್ಲೊಂದು ಸಾಹಸ ಯೋಜನೆಗಳಿಗೆ ಕೈಹಾಕಿ ಸದ್ದು ಮಾಡುವ ಚೀನಾ ಈಗ ಇಂತಹುದೇ ವಿಷಯಕ್ಕೆ ಸುದ್ದಿಯಾಗಿದೆ. ಅದೇನೆಂದರೆ ಚೀನಾದ ಪೂರ್ವದಂಚಿನಲ್ಲಿರುವ ಯಿವು ಪ್ರದೇಶದಿಂದ ಲಂಡನ್ನಿಗೆ ರೈಲು ಸಂಪರ್ಕವನ್ನು ಆರಂಭಿಸಲಾಗಿದೆ!

ಚೀನಾದಿಂದ ಲಂಡನ್ ಗೆ ರೈಲು ಮಾರ್ಗವೇ.. ಎಂದು ನೀವು ಅಚ್ಚರಿ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದು ಸತ್ಯ. ಈ ಮಾರ್ಗದ ಒಟ್ಟು ದೂರ ಬರೋಬ್ಬರಿ 12 ಸಾವಿರ ಕಿ.ಮೀ. ರೈಲು ಪ್ರಯಾಣದ ಅವಧಿ ಸುಮಾರು 18 ದಿನಗಳು. ನೀವು ವಿಶ್ವ ಭೂಪಟವನ್ನು ಹಿಡಿದು ನೋಡಿದರೆ ನೀಮಗೆ ಈ ರೈಲು ಮಾರ್ಗದ ಒಂದು ಅಂದಾಜು ರೇಖೆ ತಿಳಿಯುತ್ತದೆ. ಚೀನಾದ ಪೂರ್ವ ಭಾಗದಿಂದ ಪಶ್ಚಿಮವಾಗಿ ಅರ್ಧಕ್ಕೆ ಸೀಳಿದಂತೆ ಸಾಗುವ ಈ ರೈಲು ಮಾರ್ಗ ನಂತರ ಕಜಕಿಸ್ತಾನ ರಷ್ಯಾ, ಬೆಲಾರಸ್, ಪೊಲೆಂಡ್, ಜರ್ಮನಿ, ಬೆಲ್ಜಿಯಂ ಮತ್ತು ಫ್ರಾನ್ಸ್ ಮಾರ್ಗವಾಗಿ ಸಾಗಿ ಲಂಡನ್ ಸೇರುತ್ತದೆ.

ಅರೆ, ವಿಮಾನ ಹಾಗೂ ಹಡಗು ಇರುವಾಗ ಚೀನಾಕ್ಕೆ ಈ ರೈಲು ಮಾರ್ಗದ ಹುಚ್ಚು ಹಿಡಿದಿದ್ದಾದರು ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಬಹುದು. ಅದಕ್ಕೆ ಕಾರಣ ಇದೆ. 2015ರಲ್ಲಿ ಚೀನಾ ಆರ್ಥಿಕ ಕುಸಿತ 6.9ರವರೆಗೂ ಬಂದು ನಿಂತಿತ್ತು. ಇದು ಕಳೆದ 25 ವರ್ಷಗಳಲ್ಲಿ ಚೀನಾದ ಅತಿ ಕೆಟ್ಟ ಕುಸಿತವಾಗಿತ್ತು. ಹೀಗೆ ಹಳ್ಳ ಹಿಡಿಯುತ್ತಿರುವ ಚೀನಾ ಆರ್ಥಿಕತೆಯನ್ನು ಮೇಲಕ್ಕೆ ಏರಿಸಬೇಕು, ಜಾಗತಿಕ ಮಾರುಕಟ್ಟೆ ವಿಸ್ತರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚೀನಾ ಈ ರೈಲು ಮಾರ್ಗಕ್ಕೆ ಒತ್ತು ನೀಡಿದೆ.

ಚೀನಾದ ಯಿವು ಪ್ರದೇಶದಿಂದ ಲಂಡನ್ ಗೆ ತೆರಳಲಿರುವ ರೈಲಿನ ಮಾರ್ಗದ ಅಂದಾಜು ಚಿತ್ರ...
ಚೀನಾದ ಯಿವು ಪ್ರದೇಶದಿಂದ ಲಂಡನ್ ಗೆ ತೆರಳಲಿರುವ ರೈಲಿನ ಮಾರ್ಗದ ಅಂದಾಜು ಚಿತ್ರ…

ಏಷ್ಯಾದ ಶಕ್ತಿಯುತ ರಾಷ್ಟ್ರ ಎಂದು ಕರೆಸಿಕೊಳ್ಳುವ ಚೀನಾ, ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ತನ್ನ ಮಾರುಕಟ್ಟೆಯ ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಚೀನಾಗೆ ಎದುರಾಗಿದೆ. ಹೀಗಾಗಿ ಯುರೋಪ್ ರಾಷ್ಟ್ರಗಳ ಜತೆಗಿನ ಸಂಬಂಧ ವೃದ್ಧಿಸಿಕೊಳ್ಳುವತ್ತ ಗಮನ ಹರಿಸಿರುವ ಚೀನಾ, ತನ್ನ ಪ್ರಮುಖ ವ್ಯಾಪಾರ ಸ್ನೇಹಿ ಬ್ರಿಟನ್ನಿನ ಜತೆಗಿನ ವಹಿವಾಟನ್ನು ಹೆಚ್ಚಿಸಿಕೊಳ್ಳು ಮುಂದಾಗಿದೆ. ಬ್ರಿಟನ್ ಮಾರುಕಟ್ಟೆಯಲ್ಲಿ ಚೀನಾ ತನ್ನ ಉತ್ಪನ್ನಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕಿದೆ. ಹೀಗಾಗಿ ಚೀನಾ ಲಂಡನ್ ಗೆ ರೈಲನ್ನು ಬಿಟ್ಟಿದೆ.

ರೈಲು ಮಾರ್ಗವೇ ಯಾಕೆ?

ವಿಮಾನ ಹಾಗೂ ಹಡಗಿನ ಮೂಲಕ ಚೀನಾ ತನ್ನ ಸರಕುಗಳನ್ನು ಲಂಡನ್ನಿಗೆ ಕಳುಹಿಸಬಹುದಲ್ಲ ಅಂತಾ ನೀವು ಯೋಚಿಸಬಹುದು. ಈ ಎರಡು ಮಾರ್ಗದ ಬದಲು ರೈಲು ಮಾರ್ಗದ ಆಯ್ಕೆಯ ಹಿಂದೆಯೂ ಕಾರಣವಿದೆ. ರೈಲು ಮಾರ್ಗ ಅನುಸರಿಸಿದರೆ, ವಿಮಾನ ಮಾರ್ಗವಾಗಿ ಸರಕುಗಳನ್ನು ರವಾನಿಸಲು ತಗುಲುವ ವೆಚ್ಚದಲ್ಲಿ ಅರ್ಧದಷ್ಟು ಉಳಿತಾಯವಾಗುತ್ತದೆ. ಇನ್ನು ಹಡಗು ಮಾರ್ಗದಲ್ಲಿ ತಗಲುವ ಸಮಯಾವಕಾಶದಲ್ಲಿ ಅರ್ಧದಷ್ಟು ಉಳಿತಾಯವಾಗಲಿದೆ. ಹೀಗಾಗಿ ಚೀನಾ ರೈಲು ಮಾರ್ಗವನ್ನೇ ಆರಿಸಿಕೊಂಡಿದೆ.

ಅಷ್ಟೇ ಅಲ್ಲ, ಚೀನಾ ಈಗಾಗಲೇ ಯೂರೋಪಿನ ಹಲವು ರಾಷ್ಟ್ರಗಳಿಗೆ ರೈಲು ಸಂಪರ್ಕವನ್ನು ಹೊಂದಿದೆ. ಈಗ ಲಂಡನ್ ಇದಕ್ಕೆ ಹೊಸ ಸೇರ್ಪಡೆ ಆಗಿದೆ. ಚೀನಾ ಮಾಧ್ಯಮಗಳ ಪ್ರಕಾರ ಈಗಾಗಲೇ ಲಂಡನ್ನಿಗೆ ರೈಲು ಪ್ರಯಾಣ ಆರಂಭಿಸಿದೆ. ಬ್ರಿಟನ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಚೀನಾ ಕಳೆದ ಕೆಲವು ವರ್ಷಗಳಲ್ಲಿ ಬಂಡವಾಳ ಹೂಡಿಕೆ ಪ್ರಮಾಣವನ್ನು ಎರಡು ಪಟ್ಟು ಹೆಚ್ಚಿಸಿದೆ.

ಚೀನಾ ಹಾಗೂ ಯುರೋಪ್ ರಾಷ್ಟ್ರಗಳ ನಡುವಣ ವ್ಯಾಪಾರ ಮಾರ್ಗ ಇಂದು ನಿನ್ನೆಯದ್ದಲ್ಲ. ಪ್ರಾಚೀನ ಕಾಲದಲ್ಲಿ ಚೀನಾ ತನ್ನ ಉತ್ಪನ್ನಗಳನ್ನು ಯುರೋಪಿನ ರಾಷ್ಟ್ರಗಳಿಗೆ ಸಾಗಿಸಲು ರಸ್ತೆ ಮಾರ್ಗವನ್ನು ನಿರ್ಮಿಸಿಕೊಂಡಿತ್ತು. ಈ ಮಾರ್ಗವನ್ನು ‘ಸಿಲ್ಕ್ ರೋಡ್’ ಎಂದು ಕರೆಯಲಾಗುತ್ತಿತ್ತು. ಈಗ ಆ ಸಂಪರ್ಕವನ್ನು ಮತ್ತೆ ಪುನಶ್ಚೇತನಗೊಳಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಅದರ ಪರಿಣಾಮವಾಗಿಯೇ ಈ ರೈಲು ಮಾರ್ಗ ಆರಂಭವಾಗಿದೆ.

ಚೀನಾ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಜಾಗತಿಕ ರಾಜಕೀಯದ ಝಲಕಿನ ಒಂದು ಅಧ್ಯಾಯವಿದು.

Leave a Reply