ಸಜ್ಜನ ರಾಜಕಾರಣಿ, ಸಚಿವ ಎಚ್.ಎಸ್ ಮಹದೇವ ಪ್ರಸಾದ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಸರಳತೆ, ಸಜ್ಜನಿಕೆ, ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದ ಪ್ರಾಮಾಣಿಕ ನಾಯಕ, ಮಿತಭಾಷಿ ಎಂದು ಹೆಸರು ಗಳಿಸಿದ್ದ ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್ ಮಹದೇವ ಪ್ರಸಾದ್ ಅವರು ಮಂಗಳವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

58 ವರ್ಷದ ಮಹದೇವ ಪ್ರಸಾದ್ ಅವರು ಚಿಕ್ಕಮಗಳೂರಿನ ಕೊಪ್ಪದಲ್ಲಿ ಸಹಕಾರ ಸಾರಿಗೆಯ 25ನೇ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಲು ತೆರಳಿದ್ದರು. ಸೋಮವಾರ ರಾತ್ರಿ 10.30ಕ್ಕೆ ತೆರಳಿದ್ದ ಮಹದೇವ ಪ್ರಸಾದ್ ಅವರು ಸ್ಠಳೀಯ ಹೊಟೇಲ್ ನಲ್ಲಿ ತಂಗಿದ್ದರು. ಮಲಗಿದ್ದ ಸಂದರ್ಭದಲ್ಲೇ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದು, ಇವರ ಹಠಾತ್ ಸಾವು ರಾಜ್ಯದ ಜನತೆಗೆ ಆಘಾತಕಾರಿಯಾಗಿದೆ.

ಚಾಮರಾಜನಗರ ಉಸ್ತುವಾರಿ ಸಚಿವರಾಗಿದ್ದ ಮಹದೇವ ಪ್ರಸಾದ್ ಸತತವಾಗಿ 5 ಬಾರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜತೆಗೆ 3 ಬಾರಿ ಸಚಿವರೂ ಆಗಿದ್ದರು. 2004ರ ಧರ್ಮಸಿಂಗ್ ನಾಗರೀಕ ಸರಬರಾಜು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2007ರ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ನಿರ್ವಹಿಸಿದ್ದ ಮಹದೇವ ಪ್ರಸಾದರು, 2010ರಲ್ಲಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಸಜ್ಜನ ರಾಜಕಾರಣಿ ಎಂದೇ ಎಲ್ಲರಿಂದಲೂ ಗೌರವ ಸಂಪಾದಿಸಿದ್ದ ಮಹದೇವ ಪ್ರಸಾದ್ ಅವರ ನಿಧನಕ್ಕೆ ರಾಜ್ಯದ ಎಲ್ಲ ಪಕ್ಷದ ನಾಯಕರೂ ಸಂತಾಪ ಸೂಚಿಸಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಮಹದೇವ ಪ್ರಸಾದರು, ನಂತರ 1999ರಲ್ಲಿ ಜೆಡಿಯುನಿಂದ, 2004ರಲ್ಲಿ ಜೆಡಿಎಸ್ ನಿಂದ 2008 ಮತ್ತು 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಇವರು ಸ್ಪರ್ಧಿಸುವ ಪಕ್ಷದ ಚಿಹ್ನೆ ಬದಲಾದರೂ ಮಹದೇವ್ ಪ್ರಸಾದ್ ಅವರೇ ಈ ಕ್ಷೇತ್ರದ ಜನನಾಯಕನಾಗಿ ಆಯ್ಕೆಯಾಗುತ್ತಿದ್ದರು. ಈ ಕ್ಷೇತ್ರದ ಜನರು ಮಹದೇವ ಪ್ರಸಾದ್ ಅವರ ಮೇಲಿಟ್ಟಿದ್ದ ನಂಬಿಕೆ, ವಿಶ್ವಾಸ ಹಾಗೂ ಪ್ರೀತಿಗೆ ಇದು ಸಾಕ್ಷಿಯಾಗಿತ್ತು.

‘ಮಹದೇವ ಪ್ರಸಾದ್ ಅವರ ಅನಿರೀಕ್ಷಿತ ನಿಧನ ದಿಗ್ಭ್ರಮೆಯಾಗಿದೆ. ಮಲಗಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಾವು ನನಗೆ ತುಂಬಾ ನೋವಾಗಿದೆ. ಜತೆಗೆ ಪಕ್ಷಕ್ಕೂ ತುಂಬಲಾರದ ನಷ್ಟವಾಗಿದೆ. ಅಜಾತಶತ್ರುವಿನಂತಿದ್ದ ಅವರು ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಸಚಿವರಾಗಿ ಸಾಕಷ್ಟು ಶಿಸ್ತಿನಿಂದ ಕೆಲಸ ಮಾಡುತ್ತಿದ್ದ ಅವರು ತಮ್ಮ ಕೆಲಸದಲ್ಲಿ ಯಾವುದೇ ಕಪ್ಪುಚುಕ್ಕೆ ಹೊಂದಿರಲಿಲ್ಲ. ಇನ್ನು ಎಷ್ಟು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅವರೇ ಗೆಲ್ಲುತ್ತಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲಲು ಇವರ ಕೊಡುಗೆ ಅಪಾರವಾಗಿತ್ತು. ಅವರದ್ದು ಸಾಯೋ ವಯಸ್ಸಲ್ಲ. ಸಾವು ಎಷ್ಟು ಅನಿಶ್ತಿತ ಎನ್ನುವುದಕ್ಕೆ ಇದೊಂದು ಉದಾಹರಣೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದರು.

ಇಂದು ಅವರ ಪಾರ್ಥೀವ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುವುದು. ನಂತರ ರಾತ್ರಿಯೇ ಅವರ ಹುಟ್ಟೂರು ಹಾಲಹಳ್ಳಿಗೆ ತರಲಾಗುವುದು. ನಾಳೆ ಬೆಳಗ್ಗೆ 10ಕ್ಕೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿ ನಂತರ ಮಧ್ಯಾಹ್ನ ಹಾಲಹಳ್ಳಿಯಲ್ಲಿರುವ ತೋಟದಲ್ಲಿ ಅಂತ್ಯ ಕ್ರಿಯೆ ಮಾಡಲಾಗುವುದು ಎಂದು ಪ್ರಸಾದರ ಪುತ್ರ ಮಾಹಿತಿ ನೀಡಿದ್ದಾರೆ. ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿದ್ದು, ರಾಜ್ಯದಲ್ಲಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.

Leave a Reply