ಅನ್ವೇಷಣೆಗೆ ಒಗ್ಗಿಕೊಳ್ಳದಿದ್ದರೆ ಐಟಿಯಲ್ಲಿ ನಮ್ಮ ಸ್ಥಾನ ಕಳೆದುಕೊಳ್ಳುತ್ತೇವೆ- ಇನ್ಫೋಸಿಸ್ ಮುಖ್ಯಸ್ಥ ವಿಶಾಲ್ ಸಿಕ್ಕಾ ಉದ್ಯೋಗಿಗಳಿಗೆ ಬರೆದಿರುವ ಪತ್ರ

ಡಿಜಿಟಲ್ ಕನ್ನಡ ಟೀಮ್:

ಹೊಸ ವರ್ಷದ ರಿವಾಜು ಎಂಬಂತೆ ಇನ್ಫೋಸಿಸ್ ಮುಖ್ಯಸ್ಥ ವಿಶಾಲ್ ಸಿಕ್ಕಾ ತಮ್ಮ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಅಲ್ಲಿ ಶುಭಾಶಯಕ್ಕಿಂತ ಎಚ್ಚರಿಕೆ ಮಾತುಗಳೇ ಧ್ವನಿಸಿವೆ. ಈ ಪತ್ರದಲ್ಲಿರುವ ಅಂಶಗಳು ಕೇವಲ ಇನ್ಫೋಸಿಸ್ ಮಾತ್ರವಲ್ಲದೇ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ದಿಮೆಗೂ ಪ್ರಸ್ತುತವಾಗುವಂತಿದೆ.

ಹೆಚ್ಚಿನ ಐಟಿ ಕಂಪನಿಗಳು ಅಮೆರಿಕಕ್ಕೆ ಸೇವೆ ಒದಗಿಸುತ್ತಿವೆ. ಇದೀಗ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿರುವ ಹೊತ್ತಿನಲ್ಲಿ ಈ ಹೊರಗುತ್ತಿಗೆ ಉದ್ಯೋಗಗಳ ಮೇಲೆ ತೂಗುಗತ್ತಿ ಇದೆ. ಆದರೆ ತಮ್ಮ ಪತ್ರದಲ್ಲಿ ಸಿಕ್ಕಾ ಇದಕ್ಕೆ ಅಂಥ ಪ್ರಾಮುಖ್ಯವನ್ನೇನೂ ಕೊಡಲು ಹೋಗಿಲ್ಲ. ಬದಲಿಗೆ ಅವರು ಒತ್ತಿ ಒತ್ತಿ ಹೇಳಿರುವುದು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚುತ್ತಿರುವ ಯಾಂತ್ರೀಕರಣದ ಬಗ್ಗೆ. ಈ ಅಟೊಮೇಷನ್ ಅರ್ಥಾತ್ ಯಾಂತ್ರೀಕರಣ ಪ್ರಕ್ರಿಯೆಯಿಂದ ನಾವು ವಹಿವಾಟು ಉಳಿಸಿಕೊಳ್ಳಬೇಕಾದರೆ ಅನ್ವೇಷಣಾತ್ಮಕ ಕೆಲಸದತ್ತ ಗಮನ ಹರಿಸಲೇಬೇಕು ಎಂದಿದ್ದಾರವರು. ಸೇವೆ ಪಡೆಯುವ ಗ್ರಾಹಕ ಏನು ಹೇಳಿದ್ದಾನೋ ಅಷ್ಟು ಮಾಡಿ ಮುಗಿಸುವ ಸಾಂಪ್ರದಾಯಿಕ ಕ್ರಮದಿಂದ ಹೊರಗೆ ಬಂದು, ಕೇವಲ ಪ್ರತಿಕ್ರಿಯಾತ್ಮಕ ಸಮಸ್ಯಾಪೂರ್ತಿ ಮಾತ್ರವಲ್ಲದೇ ಭವಿಷ್ಯದ ಸಮಸ್ಯೆಗೆ ಮುಂದಾಲೋಚನೆ ಪರಿಹಾರ ನೀಡುವುದರಲ್ಲಿ ತೊಡಗಿಸಿಕೊಳ್ಳದಿದ್ದರೆ ನಾವು ಉಳಿದುಕೊಳ್ಳಲಾರೆವು ಎಂಬ ಸ್ಪಷ್ಟ ಮಾತುಗಳು ಸಿಕ್ಕಾ ಪತ್ರದಲ್ಲಿ ಅಭಿವ್ಯಕ್ತವಾಗಿವೆ.

ನಾವು ಮಾಡುತ್ತಿರುವ ಹಲವು ಕೆಲಸಗಳನ್ನು ಕೃತಕ ವ್ಯವಸ್ಥೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಅದಾಗಲೇ ಮಾಡಲು ತೊಡಗಿದೆ. ಈ ಕೃತಕ ವ್ಯವಸ್ಥೆಯನ್ನು ನಮ್ಮದಾಗಿಸಿಕೊಂಡು ಅದರಲ್ಲಿಯೂ ಅನ್ವೇಷಣೆಗಳನ್ನು ಮಾಡುವುದಕ್ಕೆ ತೊಡಗದಿದ್ದರೆ ಉಳಿಗಾಲವಿಲ್ಲ ಎಂಬ ಮಾತುಗಳನ್ನು ವಿಶಾಲ್ ಸಿಕ್ಕಾ ಕಾವ್ಯಾತ್ಮಕವಾಗಿ ಹೇಳಿದ್ದಾರೆ. ‘ನಮ್ಮೆದುರಿನ ಪರ್ವತಗಳು ಬಹು ಎತ್ತರವಾಗಿವೆ. ಅವುಗಳ ಬಳಿಸಾರಿ ದಾಟದೇ ಬೇರೆ ಮಾರ್ಗವೇ ಇಲ್ಲ. ಹಾಗೆ ಮಾಡದಿದ್ದರೆ ಯಾಂತ್ರೀಕರಣ ಮತ್ತು ತಂತ್ರಜ್ಞಾನಗಳಿಂದ ಮಿಳಿತ ಪರಿವರ್ತನಾ ಅಲೆಗಳಿಗೆ ಸಿಲುಕಿ ನಾವು ಅಪ್ರಸ್ತುತರಾಗಿಬಿಡುತ್ತೇವೆ. ಆದರೆ ನಾವಿದರಲ್ಲಿ ಜಯಿಸಿದ್ದೇ ಆದರೆ ಜಗತ್ತಿನ ಪರಿವರ್ತನೆಯಲ್ಲಿ ಮುಖ್ಯ ಬಲವಾಗಿ ಗುರುತಿಸಲ್ಪಡುತ್ತೇವೆ..’ ಎಂದು ತಮ್ಮ ಸುದೀರ್ಘ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಸಿಕ್ಕಾ.

ಅವರ ಪತ್ರದಲ್ಲಿ ಉಲ್ಲೇಖವಾಗಿರುವ ಆಸಕ್ತಿಕರ ಅಂಶ- ‘ಮೈಸೂರಿನಲ್ಲಿ ಹೊಸತಾಗಿ ನೇಮಕಗೊಳ್ಳುವವರಿಗೆಲ್ಲ ‘ಅಟೊಮೇಷನ್- ಅ ವೇ ಆಫ್ ಲೈಫ್’ ಎಂಬ ಪಠ್ಯವನ್ನೇ ಒದಗಿಸಲಾಗಿದೆ.

ತಮ್ಮ ಪತ್ರದಲ್ಲಿ ಸಿಕ್ಕಾ ಅವರು ಜಗತ್ತಿನಲ್ಲಿ ಬದಲಾವಣೆ ಪ್ರಚೋದಿಸುತ್ತಿರುವ  ಬ್ರೆಕ್ಸಿಟ್, ಅಮೆರಿಕ ಅಧ್ಯಕ್ಷೀಯ ಚುನಾವಣೆ, ನೋಟು ಅಮಾನ್ಯ, ಸೈಬರ್ ಭದ್ರತೆ, ನಿರಾಶ್ರಿತರ ಸಮಸ್ಯೆ, ಭಯೋತ್ಪಾದನೆ…ಇವೆಲ್ಲವನ್ನೂ ಪ್ರಸ್ತಾಪಿಸಿದ್ದಾರಾದರೂ ಅಟೋಮೇಷನ್- ಇನ್ನೋವೇಷನ್ ಎಂಬ ಪದಗಳನ್ನೇ ಪದೇ ಪದೆ ಜಪಿಸಿದ್ದಾರೆ ಹಾಗೂ ಇದುವೇ ಬದುಕನ್ನು ಬದಲಿಸಲಿರುವ ಬಹುಮುಖ್ಯ ಬದಲಾವಣೆ ಎಂದು ಸೂಚಿಸಿದ್ದಾರೆ.

1 COMMENT

Leave a Reply