ನಾಚಿಕೆಗೇಡು!

ಡಿಜಿಟಲ್ ಕನ್ನಡ ಟೀಮ್:

  • ಭಾನುವಾರ ರಾತ್ರಿ ಎರಡೂವರೆಗೆ ಹೊಸವರ್ಷದ ಮತ್ತಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಿಸಿಟಿವಿ ದೃಶ್ಯಾವಳಿ ಮೂಲಕ ಈಗ ಬೆಳಕಿಗೆ ಬಂದಿದೆ. ನಗರ, ದೇಶವೇ ತಲೆತಗ್ಗಿಸುವಂತಾಗಿದೆ.

ಆಟೋ ರಿಕ್ಷಾದಿಂದಿಳಿದು ಮನೆಯತ್ತ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ಅಪರಿಚಿತನೊಬ್ಬ ಆಕೆಯನ್ನು ತಬ್ಬಿ ಎಳೆದಾಡಿದ್ದಾನೆ. ಪಕ್ಕದಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಸಹಚರನತ್ತ ಆಕೆಯನ್ನು ಎಳೆದೊಯ್ದಿದ್ದಾನೆ. ಯುವತಿ ಪ್ರತಿರೋಧ ತೋರಿ ಮರು ಪ್ರಹಾರ ಮಾಡಿದ್ದಾಳೆ. ಆಗ ಆಕೆಯನ್ನು ಬಿಟ್ಟು ನಡುರಸ್ತೆಯಲ್ಲಿ ತಳ್ಳಿ ಬೈಕಿನಲ್ಲಿ ಹೋಗಿದ್ದಾರೆ. ಈ ಕೃತ್ಯವೇ ಆಘಾತಕಾರಿ. ಈ ಆಘಾತವನ್ನು ಇನ್ನಷ್ಟು ಹೆಚ್ಚಿಸುವ ಸಂಗತಿ ಎಂದರೆ ಹತ್ತೆಂಟು ಜನ ಈ ಕೃತ್ಯವನ್ನು ಸುಮ್ಮನೇ ನಿಂತು ನೋಡುತ್ತಿದ್ದ ಸಿಸಿಟಿವಿ ದೃಶ್ಯ. ಇಬ್ಬರು ಆಕ್ರಮಕರನ್ನು ವಿರೋಧಿಸುವ ಶಕ್ತಿಯೂ ಆ ಜನರ ಗುಂಪಿಗೆ ಇಲ್ಲವಾಗಿತ್ತೇ?

ಹೊಸ ವರ್ಷಾಚರಣೆ, ರಾತ್ರಿ ತಡವಾಗಿ ರಸ್ತೆಯಲ್ಲಿದ್ದದ್ದು ಎಂದೆಲ್ಲ ಕಾರಣಗಳನ್ನು ಹುಡುಕುವ ಅವಶ್ಯ ಇಲ್ಲಿಲ್ಲ. ಅಂದು ರಾತ್ರಿ ಬೀದಿಯಲ್ಲಿ ಸಂಭ್ರಮದಲ್ಲಿದ್ದ ಎಲ್ಲರ ಹಕ್ಕು ಸಂತ್ರಸ್ತ ಯುವತಿಗೂ ಇತ್ತು, ಅಷ್ಟೆ..

ಇದಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರ ಪ್ರತಿಕ್ರಿಯೆ ಹೀಗಿದೆ- ‘ಈ ದೃಶ್ಯಾವಳಿಗಳನ್ನು ಮಾಧ್ಯಮ ಬಿತ್ತರಿಸುವುದಕ್ಕೆ ಮೊದಲೇ ನಾವು ಎಫ್ಐಆರ್ ದಾಖಲಿಸಿದ್ದೇವೆ. ನಾಲ್ವರನ್ನು ಈ ನಿಟ್ಟಿನಲ್ಲಿ ಪ್ರಶ್ನೆಗೂ ಒಳಪಡಿಸಲಾಗಿದೆ. ಇದೊಂದು ಹೇಯ ಕೃತ್ಯ ಎಂಬುದರಲ್ಲಿ ಸಂಶಯವೇ ಇಲ್ಲ. ಅಪರಾಧಿಯನ್ನು ಹಿಡಿಯುವ ಎಲ್ಲ ಪ್ರಯತ್ನಗಳು ಜಾರಿಯಲ್ಲಿವೆ.’

  • ಮೇಲಿನದು ಲೈಂಗಿಕ ದೌರ್ಜನ್ಯದ ನಾಚಿಕೆಗೇಡು ಕೃತ್ಯವಾದರೆ, ಪಶ್ಚಿಮ ಬಂಗಾಳದಲ್ಲಿ ನಾಚಿಕೆಯಿಲ್ಲದೇ ನಡೆಯುತ್ತಿದೆ ಆಡಳಿತಾರೂಢರ ರಾಜಕೀಯ ಗೂಂಡಾಗಿರಿ. ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಬಂಧಿಸಿದೆ ಸಿಬಿಐ. ಇದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ಕ್ರಮ ಎಂಬುದು ಮಮತಾ ಬ್ಯಾನರ್ಜಿ ಪ್ರಣೀತ ತೃಣಮೂಲಿಗರ ಆಕ್ರೋಶ. ಹಾಗೆ ಆರೋಪಿಸಲೇಬಾರದು ಎಂದೇನಲ್ಲ. ಪಂಜರದ ಗಿಣಿ ಎಂಬ ಕುಖ್ಯಾತಿಗೊಳಗಾಗಿದ್ದ ಸಿಬಿಐ ಅನ್ನು ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರೆಲ್ಲ ಆಯಾ ಕಾಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ.

ಆದರೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿಯುತ ಪಕ್ಷ ತೃಣಮೂಲ ಕಾಂಗ್ರೆಸ್ ತನ್ನ ಕಾರ್ಯಕರ್ತರ ಕೈಲಿ ಮಾಡಿಸುತ್ತಿರುವುದೇನನ್ನು? ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಾಲಯದ ಮೇಲೆ ಕಲ್ಲು ತೂರಾಟವಾಗಿದೆ. ಬಂಗಾಳದ ಬಿಜೆಪಿಯ ನೇತಾರ ಕೃಷ್ಣ ಭಟ್ಟಾಚಾರ್ಯ ಮನೆ ಮೇಲೆ ದಾಳಿಯಾಗಿದೆ. ಬುಧವಾರ ಬೆಳಗ್ಗೆ ಬಿಜೆಪಿ ಸಂಸದ ಬಾಬುಲ್ ಸುಪ್ರಿಯಾ ಅವರ ಮನೆಗೆ ನುಗ್ಗುವ ಪ್ರಯತ್ನ ನಡೆಸಿದ್ದಾರೆ ತೃಣಮೂಲ ಕಾಂಗ್ರೆಸ್ಸಿಗರು.

ಇದೇನಿದು? ಮಮತಾ ಬ್ಯಾನರ್ಜಿಯದ್ದು ಇದ್ಯಾವ ಹೋರಾಟದ ಪರಿ? ಕೇಂದ್ರದ ನಡೆ ವಿರುದ್ಧ ಅಸಮಾಧನವಿದ್ದರೆ ಕಾನೂನು ಮಾರ್ಗದ ಹಾದಿ ತುಳಿಯಲಿ, ಪ್ರತಿಭಟನೆಗಳೂ ಆಗಲಿ. ಆದರೆ ಬಿಜೆಪಿಗರ ಸಂಸಾರವನ್ನು ವಿಚಾರಿಸಿಕೊಳ್ಳುವುದಕ್ಕೆ ಗೂಂಡಾಗಳನ್ನು ಬಿಡುತ್ತಾರೆಂದರೆ ಪಶ್ಚಿಮ ಬಂಗಾಳವೇನು ಸಿರಿಯಾದಲ್ಲಿದೆಯೇ?

ಎಂಥಾ ನಾಚಿಕೆಗೇಡು!

Leave a Reply