ನೋಟು ಅಮಾನ್ಯ, ಸಿಬಿಐ ದುರ್ಬಳಕೆ ಬಗ್ಗೆ ಕಿಡಿಯಾದ ದೇವೇಗೌಡರ ‘ಕುಮಾರ ಮಮತಾ’ಗಾಥೆ

ಡಿಜಿಟಲ್ ಕನ್ನಡ ಟೀಮ್:

‘ಕೇಂದ್ರ ಸರ್ಕಾರ ನೋಟು ರದ್ದತಿಯ ಹೆಸರಿನಲ್ಲಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡು ಎದುರಾಳಿ ಪಕ್ಷಗಳನ್ನು ಬಗ್ಗು ಬಡಿಯುವ ಪ್ರಯತ್ನ ಮಾಡುತ್ತಿದೆ…’ ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಪರಿ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರನ್ನು ಸಿಬಿಐ ಬಂಧಿಸಿರುವ ವಿದ್ಯಮಾನ ದೇವೇಗೌಡರಿಗೆ ಅಸಮಾಧಾನ ತಂದಿದೆ.

ನೋಟು ಅಮಾನ್ಯ ನಿರ್ಧಾರ, ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ಸಿಬಿಐ ದಾಳಿ, ರೈತರ ಸಾಲ ಮನ್ನಾ, ರಾಜ್ಯಕ್ಕೆ ಕೇಂದ್ರದ ಅನುದಾನ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ಹೇಳಿದಿಷ್ಟು…

‘ನಾನು ಮಮತಾ ಬ್ಯಾನರ್ಜಿ ಅವರ ಮನೆಗೆ ಹೋಗಿದ್ದೇನೆ. ಸಣ್ಣ ಮನೆಯಲ್ಲಿದ್ದಾರೆ. ಹುಡುಕಿದರೆ ಅವರ ಬಳಿ ಹತ್ತು ಸಾಮಾನ್ಯ ಸೀರೆಗಳಿರಬಹುದು ಅಷ್ಟೇ. ಅವರು ನೋಟು ರದ್ದತಿ ವಿರೋಧಿಸಿದರು ಎಂಬ ಕಾರಣಕ್ಕೆ ಅವರ ಪಕ್ಷದ ವಿರುದ್ಧ ಸಿಬಿಐ ಅನ್ನು ಮುಂದೆ ಬಿಟ್ಟಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಸಿಬಿಐ ಮೂಲಕ ತೃಣಮೂಲ ಕಾಂಗ್ರೆಸ್ ನ ಇಬ್ಬರು ಸಂಸದರನ್ನು ಬಂಧಿಸುವ ಮೂಲಕ ಮಮತಾ ಬ್ಯಾನರ್ಜಿ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ.

ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಹಲವು ಬಾರಿ ಈ ರೀತಿಯಾಗಿ ಸಿಬಿಐ ಸಂಸ್ಥೆಯನ್ನು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿವೆ. ಪಕ್ಷಕ್ಕೆ ದೇಣಿಗೆ ಕೊಡುವವರು ಯಾರು, ಅವರ ಕುಲ, ಗೋತ್ರ, ಜಾತಕ, ವಿಳಾಸ, ಹಿನ್ನೆಲೆಯನ್ನು ದಾಖಲಿಸಿಕೊಂಡಿರಲು ಸಾಧ್ಯವಾ? ನಮಗಿದ್ದ ಪಕ್ಷದ ಕಚೇರಿ ಕಾಂಗ್ರೆಸ್ ಪಕ್ಷದ ವಶಕ್ಕೆ ಹೋಗಿದೆ. ನಾವು ಹೊಸ ಕಟ್ಟಡ ಕಟ್ಟುತ್ತಿದ್ದೇವೆ. ಸುಮಾರು ಮೂರೂವರೆ ಕೋಟಿಯಷ್ಟು ಹಣ ದೇಣಿಗೆಯಾಗಿ ಬಂದಿದೆ. ಹಾಗೆಂದು ಇದಕ್ಕೆ ಹಣ ಕೊಟ್ಟವರ ಹಿನ್ನೆಲೆ, ವಿಳಾಸಗಳನ್ನೆಲ್ಲ ಬರೆದಿಟ್ಟುಕೊಂಡು ಅದನ್ನು ಇವರಿಗೆ ಕೊಡಲು ಸಾಧ್ಯವೇ? ಸಿಬಿಐ ಅನ್ನು ಯಾವ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಒಂದು ಉದಾಹರಣೆ.

ನೋಟು ಬ್ಯಾನ್ ಮಾಡಿ, ಭಯೋತ್ಪಾದನೆ, ನಕ್ಸಲರನ್ನು ಬಗ್ಗು ಬಡಿಯುವುದಾಗಿ ಪ್ರಧಾನಿ ತಿಳಿಸಿದ್ದರು. ಆದರೆ ಈಗಲೂ ಕಾಶ್ಮೀರ ಶಾಂತಿಯಾಗಿಲ್ಲ. ನಾಗಾಲ್ಯಾಂಡ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಿಧ್ವಂಸಕ ಚಟುವಟಿಕೆಗಳು ನಡೆಯುತ್ತಿವೆ. ಹೀಗಿರುವಾಗ ಇವರ ನೋಟ್ ಅಮಾನ್ಯ ನಿರ್ಧಾರದ ಪರಿಣಾಮವಾದರೂ ಏನು? ಇವರ ನಿರ್ಧಾರದಿಂದ ಹಾಲು ಮಾರುವವರು, ರೈತರು, ಬಡ ಬಗ್ಗರು, ಕಷ್ಟ ಪಡುವ ಸ್ಥಿತಿ ಬಂದಿದೆಯೇ ಹೊರತು ಇನ್ನೇನು ಸಾಧನೆಯಾಗಿಲ್ಲ. ಮೋದಿ ಒಳ್ಳೆ ಉದ್ದೇಶದಿಂದ ಈ ಕ್ರಮ ಕೈಗೊಂಡಿರಬಹುದು ಆದರೆ, ಫಲಿತಾಂಶ ನೋಡಿ ನನಗೆ ತೀವ್ರ ನಿರಾಸೆಯಾಗಿದೆ. ಈ ನಿರ್ಧಾರದಿಂದ ಯಾರಿಗೆ ಅನುಕೂಲವಾಗಬೇಕಿತ್ತೋ, ಯಾರಿಗೆ ಅನಾನುಕೂಲವಾಗಬೇಕಿತ್ತೋ ಆ ಉದ್ದೇಶ ಈಡೇರಿಲ್ಲ.

ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿ ರಾಜ್ಯದ ರೈತರ ಎರಡೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಆದರೆ ಮೋದಿ ಪ್ರಧಾನಿಯಾಗಿ ರೈತರ ಸಾಲದ ಮೇಲಿನ ಎರಡು ತಿಂಗಳ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇದು ಹಾಸ್ಯವಲ್ಲದೇ ಇನ್ನೇನು? ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ನಾಲ್ಕು ಸಾವಿರ ಕೋಟಿ ಹೆಚ್ಚಿನ ನೆರವು ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಪಕ್ಷ ನಿಯೋಗ ಜತೆ ಬೇಡಿಕೆ ಇಟ್ಟರೆ, ಪ್ರಧಾನಿ ಕೇವಲ ಎರಡು ಸಾವಿರ ಕೋಟಿ ಕೊಡುವುದಾಗಿ ತಿಳಿಸಿರುವುದು ಸರಿಯಲ್ಲ.

ನಮ್ಮೆಲ್ಲರ ಒಡನಾಡಿಯಾಗಿದ್ದ ಮಹದೇವ ಪ್ರಸಾದ್ ಅವರು ತೀರಿಕೊಂಡ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಸಾಕಷ್ಟು ಹೇಳುವುದಿದೆಯಾದರೂ ಈ ಹಂತದಲ್ಲಿ ಹೇಳುವುದಿಲ್ಲ.’

Leave a Reply