‘ಡಿಜಿಟಲ್ ಅನ್ ಲಾಕ್ಡ್…’ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗೂಗಲ್ ಸೃಷ್ಟಿಸಿರುವ ಜಾಗತಿಕ ವೇದಿಕೆ

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿನ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಗೂಗಲ್ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿದೆ. ಅದೇ… ಡಿಜಿಟಲ್ ಅನ್ ಲಾಕ್ಡ್.

ಬುಧವಾರ ಗೂಗಲ್ ಸಿಇಒ ಸುಂದರ್ ಪಿಚ್ಚೈ, ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ಅವರೊಂದಿಗೆ ಒಡಗೂಡಿ ಈ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದರು.

ದೇಶದಲ್ಲಿ 5 ಕೋಟಿಗೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿವೆ. ಆದರೆ ಈ ಉದ್ದಿಮೆಗಳು ಕೇವಲ ತಮ್ಮ ನಗರ ಹಾಗೂ ಸುತ್ತಮುತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಈ ವರ್ಗದ ಶೇ.68 ರಷ್ಟು ಮಂದಿ ಅಂತರ್ಜಾಲದ ಮೂಲಕ ತಮ್ಮ ವ್ಯಾಪಾರವನ್ನು ನಡೆಸುತ್ತಿಲ್ಲ. ಹೀಗಾಗಿ ಈ ವರ್ಗದ ಉದ್ದಿಮೆದಾರರು ಅಂತರ್ಜಾಲದ ಲಾಭ ಪಡೆದು ತಮ್ಮ ಉದ್ಯಮವನ್ನು ಬೆಳೆಸಿಕೊಳ್ಳುವಂತೆ ಮಾಡಲು ಗೂಗಲ್ ಗಮನಹರಿಸಿದೆ.

ಭಾರತದ ಜಿಡಿಪಿಯಲ್ಲಿ ಶೇ.37 ರಷ್ಟು ಕೊಡುಗೆ ಬರುತ್ತಿರುವುದೇ ಈ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಂದ. ಈ ಉದ್ದಿಮೆಗಳಿಗೆ ಅಂತರ್ಜಾಲದ ಮೂಲಕ ಡಿಜಿಟಲ್ ವೇದಿಕೆಯನ್ನು ಕಲ್ಪಿಸಿದರೆ ಈ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಜಾಗತಿಕ ಮಾರುಕಟ್ಟೆಗೆ ತಮ್ಮನ್ನು ತಾವು ತೆರೆದುಕೊಳ್ಳಬಹುದು. ಇದರಿಂದ ಹೆಚ್ಚಿನ ಜನರನ್ನು ತಲುಪಿ ಹೊಸ ಹೊಸ ಗ್ರಾಹಕರನ್ನು ಸಂಪಾದಿಸಿಕೊಳ್ಳಬಹುದು ಎಂಬುದು ಗೂಗಲ್ ಪ್ರತಿಪಾದನೆ.

ಈಗಾಗಲೇ ಶೇ.32 ರಷ್ಟು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಈಗಾಗಲೇ ಡಿಜಿಟಲ್ ವ್ಯವಸ್ಥೆಗೆ ಹೊಂದುಕೊಂಡಿದ್ದು, ಆ ಪೈಕಿ ಶೇ.51 ರಷ್ಟು ಉದ್ದಿಮೆಗಳು ತಮ್ಮ ನಗರ ಪ್ರದೇಶದಿಂದ ಹೊರಗೆ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿವೆ. ಆ ಮೂಲಕ ತಮ್ಮ ವ್ಯಾಪಾರವನ್ನು ವೃದ್ಧಿಸಿ ಎರಡು ಪಟ್ಟು ಲಾಭವನ್ನು ಪಡೆಯುತ್ತಿದ್ದಾರೆ.

ಭಾರತದ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಏಕಾಏಕಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅಥವಾ ಇದಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ವರ್ಗದ ಉದ್ಯಮದವರು ಡಿಜಿಟಲ್ ವ್ಯವಸ್ಥೆಗೆ ಹೊಂದುಕೊಳ್ಳುವಂತೆ ಮಾಡಲು ಗೂಗಲ್ ಎಫ್ಐಸಿಸಿಐ ಜತೆ ಕೈಜೋಡಿಸಿ ಡಿಜಿಟಲ್ ಅನ್ ಲಾಕ್ಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಯೋಜನೆ ಮೂಲಕ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಡಿಜಿಟಲ್ ಕೌಶಲ್ಯ, ಅಂತರ್ಜಾಲದ ಬಳಕೆ ಹಾಗೂ ಅದರ ಮೂಲಕ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು ಹಾಗೂ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಇಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಡಿಜಿಟಲ್ ಅನ್ ಲಾಕ್ಡ್ ವೆಬ್ ಸೈಟ್ ನಲ್ಲಿ ತಮ್ಮ ಉದ್ದಿಮೆಯನ್ನು ನೋಂದಣಿ ಮಾಡಿಕೊಂಡರೆ ಈ ತರಬೇತಿಯನ್ನು ಪಡೆಯಬಹುದಾಗಿದೆ.

ಉದ್ದಿಮೆದಾರರಿಗೆ ಆನ್ ಲೈನ್, ಆಫ್ ಲೈನ್ ಹಾಗೂ ಮೊಬೈಲ್ ಮೂಲಕ ಡಿಜಿಟಲ್ ವ್ಯವಸ್ಥೆ ಬಗ್ಗೆ ತರಬೇತಿ ನೀಡಲಾಗುವುದು. ಆನ್ ಲೈನ್ ಮೂಲಕ ಉದ್ದಿಮೆದಾರರಿಗೆ ಸುಮಾರು 6 ನಿಮಿಷಗಳ ಅವಧಿಯ 90 ವಿಡಿಯೋಗಳ ಮೂಲಕ ಡಿಜಿಟಲ್ ವ್ಯವಸ್ಥೆ ಹಾಗೂ ಅದರ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇನ್ನು ಮೊಬೈಲ್ ಮೂಲಕ ತರಬೇತಿ ನೀಡಲು ಪ್ರಿಮಿಯರ್ ಎಂಬ ಆ್ಯಪ್ ಪರಿಚಯಿಸಲಾಗಿದ್ದು, ಆ ಮೂಲಕವೂ ಡಿಜಿಟಲ್ ಕ್ಷೇತ್ರದ ಕುರಿತ ಮೂಲಭೂತ ತರಬೇತಿ ನೀಡಲಾಗುವುದು. ಇನ್ನು ಆಫ್ ಲೈನ್ ನಲ್ಲಿ ಮಾಹಿತಿ ನೀಡಲು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ತರಬೇತಿ ಸಾಮಾಗ್ರಿಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ತೆಲುಗು, ಗುಜರಾತಿ ಹಾಗೂ ಇತರೆ ಸ್ಥಳೀಯ ಭಾಷೆಗಳಲ್ಲೂ ತರಬೇತಿ ಸಾಮಾಗ್ರಿಗಳನ್ನು ನೀಡಲು ಗೂಗಲ್ ನಿರ್ಧರಿಸಿದೆ. ಆಫ್ ಲೈನ್ ತರಬೇತಿ ಭಾಗವಾಗಿ ಗೂಗಲ್ ಈ ವರ್ಷ ಸುಮಾರು 5 ಸಾವಿರ ಕಾರ್ಯಗಾರಗಳನ್ನು ನಡೆಸಲು ನಿರ್ಧರಿಸಿದೆ. ಈ ಕಾರ್ಯಗಾರದಲ್ಲಿ ಭಾಗವಹಿಸಲು ಇಚ್ಛಿಸುವವರು ಡಿಜಿಟಲ್ ಅನ್ ಲಾಕ್ಡ್ ವೆಬ್ ಸೈಟಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಆ ಮೂಲಕ ಸಮೀಪದ ಸ್ಥಳದಲ್ಲಿ ನಡೆಯಲಿರುವ ಕಾರ್ಯಗಾರದಲ್ಲಿ ಭಾಗವಹಿಸಬಹುದು.

ಈ ಡಿಜಿಟಲ್ ಅನ್ ಲಾಕ್ಡ್ ಸೌಲಭ್ಯದ ಬಗ್ಗೆ ಮಾತನಾಡಿದ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚ್ಚೈ ಹೇಳಿದಿಷ್ಟು….

‘ಅಂತರ್ಜಾಲ ಈಗ ಅತ್ಯುತ್ತಮ ಸಾಧನವಾಗಿ ಪರಿಣಮಿಸಿದೆ. ಹೀಗಾಗಿ ಸಾಧ್ಯವಾದಷ್ಟು ಹೆಚ್ಚು ಜನರು ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದ ಲಾಭ ಪಡೆದು ತಮ್ಮ ಉದ್ಯಮವನ್ನು ವೃದ್ಧಿಸಿಕೊಳ್ಳುವಂತೆ ಮಾಡಲು ಮುಂದಾಗಿದ್ದೇವೆ. ಈ ಸೌಲಭ್ಯ ಪ್ರತಿಯೊಬ್ಬರ ಕೈಗೆ ಸೇರಬೇಕೆಂಬ ಉದ್ದೇಶ ನಮ್ಮದು.’

Leave a Reply