ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿ, ಮಾರ್ಚ್ 11ರಂದು ಫಲಿತಾಂಶ ಪ್ರಕಟ

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಆರಂಭಕ್ಕೆ ಬುಧವಾರ ಮುಹೂರ್ತ ನಿಗದಿಯಾಗಿದೆ. ಗೋವಾ, ಪಂಜಾಬ್ ಮತ್ತು ಉತ್ತಾರಾಖಂಡ ಚುನಾವಣೆಗಳನ್ನು ಒಂದು ಹಂತದಲ್ಲಿ, ಮಣಿಪುರ ಚುನಾವಣೆಯನ್ನು ಎರಡು ಹಂತಗಳಲ್ಲಿ ಹಾಗೂ ಉತ್ತರಪ್ರದೇಶ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸಲು ನಿರ್ಧರಿಸಿರುವುದಾಗಿ ಭಾರತೀಯ ಚುನಾವಣಾ ಆಯೋಗ ಮುಖ್ಯ ಆಯುಕ್ತ ನಸೀಮ್ ಜೈದ್ ತಿಳಿಸಿದ್ದಾರೆ.

ಫೆಬ್ರವರಿ 4ರಂದು ಗೋವಾ ಮತ್ತು ಪಂಜಾಬ್ ಚುನಾವಣೆ ನಡೆಯಲಿದ್ದು, ಉತ್ತರಾಖಂಡದ ಚುನಾವಣೆ ಫೆಬ್ರವರಿ 15 ರಂದು ನಡೆಯಲಿದೆ. ಮಣಿಪುರದಲ್ಲಿ ಮೊದಲ ಹಂತದ ಚುನಾವಣೆಯನ್ನು ಮಾರ್ಚ್ 4ರಂದು ಹಾಗೂ ಎರಡನೇ ಹಂತದ ಚುನಾವಣೆಯನ್ನು ಮಾರ್ಚ್ 8ರಂದು ನಡೆಸಲಾಗುವುದು.

ಇನ್ನು ಉತ್ತರ ಪ್ರದೇಶ ಚುನಾವಣೆಯಲ್ಲಿ ಮೊದಲ ಹಂತ- ಫೆ.11, ಎರಡನೇ ಹಂತ- ಫೆ.15, ಮೂರನೇ ಹಂತ- ಫೆ.19, ನಾಲ್ಕನೇ ಹಂತ- ಫೆ.23, ಐದನೇ ಹಂತ- ಫೆ.27, ಆರನೇ ಹಂತ- ಮಾರ್ಚ್ 7, ಏಳನೇ ಹಂತ- ಮಾರ್ಚ್ 8 ರಂದು ನಡೆಯಲಿದೆ. ಇನ್ನು ಐದೂ ರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಮಾರ್ಚ್ 11ರಂದು ಪ್ರಕಟಿಸಲಾಗುವುದು.

ಈ ಐದೂ ರಾಜ್ಯಗಳ ಚುನಾವಣೆಯಲ್ಲಿ 690 ಕ್ಷೇತ್ರಗಳಿದ್ದು, 1.85 ಲಕ್ಷ ಮತಗಟ್ಟೆಗಳನ್ನು ಹೊಂದಲಿವೆ. ಒಟ್ಟು 16 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ನಜೀಮ್ ಮಾಹಿತಿ ನೀಡಿದ್ದಾರೆ.

ಉಳಿದಂತೆ ಚುನಾವಣೆ ಕುರಿತು ನಸೀಮ್ ಅವರು ನೀಡಿದ ಇತರೆ ಮಾಹಿತಿಗಳು ಹೀಗಿವೆ…

  • ಈ ಐದು ರಾಜ್ಯಗಳಲ್ಲಿ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆಯನ್ನು ಜಾರಿ ಮಾಡಿದ್ದು, ಈ ಚುನಾವಣೆಯಲ್ಲಿ ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕೆಲವು ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಣೆ ಮಾಡಲಾಗುವುದು.
  • ಪ್ರತಿ ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ವಿವರಣೆಯಾಗಿ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬ ನಾಲ್ಕು ಪೋಸ್ಟರ್ ಗಳನ್ನು ಹಾಕಲಾಗುವುದು.
  • ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ಚುನಾವಣೆಯ ಸ್ಪರ್ಧಿಗಳು ಚುನಾವಣೆಗೆ ವೆಚ್ಚ ಮಾಡಬಹುದಾದ ಹಣದ ಮಿತಿಯನ್ನು ₹ 28 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಮಣಿಪುರ ಮತ್ತು ಗೋವಾ ರಾಜ್ಯಗಳ ಸ್ಪರ್ಧಿಗಳಿಗೆ ₹ 20 ಲಕ್ಷ ನಿಗದಿ ಮಾಡಲಾಗಿದೆ.
  • ಇತ್ತೀಚೆಗೆ ಹಿಂದುತ್ವ ಪ್ರಕರಣದ ಕುರಿತು ಸುಪ್ರೀಂ ಕೋರ್ಟಿನ ತೀರ್ಪನ್ನು ಚುನಾವಣಾ ಆಯೋಗ ಪಾಲಿಸಲಿದ್ದು, ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಜಾತಿ, ಧರ್ಮ, ಜನಾಂಗ, ಸಮುದಾಯ ಹಾಗೂ ಭಾಷೆಯ ಆಧಾರದ ಮೇಲೆ ಮತ ಯಾಚಿಸುವಂತಿಲ್ಲ. ಒಂದುವೇಳೆ ಈ ಆಧಾರದ ಮೇಲೆ ಮತಯಾಚನೆ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು.
  • ಈ ರಾಜ್ಯಗಳ ಚುನಾವಣೆಗೆ ಸಕಲ ಭದ್ರತೆಯನ್ನು ಒದಗಿಸಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯದಿಂದ 85 ಸಾವಿರ ಭದ್ರತಾ ಸಿಬ್ಬಂದಿಗಳನ್ನು ಹಾಗೂ 750 ಪ್ಯಾರಾ ಮಿಲಿಟರಿ ಪಡೆಗಳನ್ನು ಒದಗಿಸಿದೆ. ಇವರ ಜತೆಗೆ ರಾಜ್ಯ ಸಶಸ್ತ್ರ ಪಡೆಗಳು, ಭಾರತೀಯ ಮೀಸಲು ಪಡೆಗಳ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು.

Leave a Reply