ಹೊಸವರ್ಷದ ಹೊಸ್ತಿಲಲ್ಲಿ ನಮ್ಮ ಬೀದಿಗಳಲ್ಲೇಕೆ ಹದಗೆಟ್ಟ ಚಿತ್ರಣವೇ ಕಾಣುತ್ತಿದೆ?

author-geetha ‘ಹೊಸ ವರ್ಷದ ಶುಭಾಶಯಗಳು.’

‘ಇದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ. ನಮ್ಮ ಹೊಸ ವರ್ಷ ಯುಗಾದಿಯಂದು. ಚೈತ್ರ ಮಾಸ, ಮಾವಿನ ಚಿಗುರು, ಕಣ್ಣು ಹಾಯಿಸಿದಲೆಲ್ಲಾ ಹಸಿರು… ಹೂವು ಹಣ್ಣು… ಬೇವು ಬೆಲ್ಲ… ಒಬ್ಬಟ್ಟು… ಚಿತ್ರಾನ್ನ… ಅದು ಹೊಸ ವರ್ಷ… ಚಳಿ ಚಳಿಯಾಗಿರುವ ಜನವರಿಯಲ್ಲ…’

‘ಸಾರಿ…’

ವಾದ ಮಾಡಿ ಪ್ರಯೋಜನವಿಲ್ಲ… ಇಂದು ಕೇಕ್ ತಿಂದ ಅಂದು ಒಬ್ಬಟ್ಟು ತಿಂದ ಆಯ್ತು… ವರ್ಷಗಳು ಉರುಳುತ್ತಿರುತ್ತವೆ. ನಾವು ಸಾವಿಗೆ ಹತ್ತಿರವಾಗುತ್ತಿರುತ್ತೇವೆ. ಈ ಹುಟ್ಟಿದ ಹಬ್ಬ, ಹೊಸ ವರುಷಗಳನ್ನು ಆಚರಿಸುವುದರಿಂದ ಯಾವ ಸಂತಸವೂ, ಸಂಭ್ರಮವೂ ಇಲ್ಲ ಎಂದು ಹೇಳುವವರೂ ಇದ್ದಾರೆ.

ಈ ಹೊಸ ವರ್ಷವೆಂಬುದು ಸಂಭ್ರಮದಿಂದ ಆಚರಿಸಲೇಬೇಕಾದ ಹಬ್ಬ ಎಂದು ತಿಳಿದವರೂ ಇದ್ದಾರೆ. ಡಿಸೆಂಬರ್ ಮೂವತ್ತೊಂದರ ರಾತ್ರಿ ಶುರು ಮಾಡಿ ಹನ್ನೆರೆಡು ಗಂಟೆ ಹೊಡೆದಾಗ ಜನವರಿ ಒಂದು ಉದಯಿಸಿತೆಂದು ಸಂಭ್ರಮಿಸಿ… ಬೆಳಗಿನ ಜಾವದ ತನಕ ಕುಡಿದು, ಕುಣಿದು ಕುಪ್ಪಳಿಸಿ… ಹೊಸ ವರ್ಷವನ್ನು ಬರಮಾಡಿಕೊಂಡು ಸೂರ್ಯ ಉದಯಿಸಿದ ಮೇಲೆ ಹೊಸ ವರ್ಷದ ಮೊದಲ ದಿನ ಮಲಗಿ ನಿದ್ರೆ ಮಾಡುವವರೂ ಇದ್ದಾರೆ…

ಹೊಸ ಹೊಸ ರಿಸಲ್ಯೂಷನ್ಸ್ ಗಳನ್ನು ಮಾಡಿ… ಜನವರಿ ಒಂದರಿಂದ ಅವುಗಳನ್ನು ಪಾಲಿಸಲು ನಿರ್ಧರಿಸಿ ತಮ್ಮ ಬದುಕನ್ನು ಉತ್ತಮಗೊಳಿಸಿಕೊಂಡವರು ಇದ್ದಾರೆ.

ಜನವರಿ ಒಂದು ಈ ಬಾರಿ ಭಾನುವಾರ ಬಂದು… ಪೂರಾ ರಿಲ್ಯಾಕ್ಸ್ ಮಾಡಿ… ವರ್ಷವಿಡೀ ಆ ಮೂಡಿನಲ್ಲಿಯೇ, ಗುಂಗಿನಲ್ಲಿಯೇ ಇರಬಹುದು ಎಂದು ಖುಷಿಪಟ್ಟವರೂ ಇದ್ದಾರೆ.

ಹೆಚ್ಚಿನ ಮಂದಿ ಜನವರಿ ಒಂದರಿಂದ ವಾಕಿಂಗ್ ಮಾಡಲು ಶುರುಮಾಡುವುದು, ಡೈಯೆಟ್ ಶುರು ಮಾಡುವುದು, ಜಿಮ್ಗೆ, ಯೋಗಾಗೆ ಸೇರುವುದು… ನನ್ನಂತವರು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಇತ್ಯಾದಿ ಮಾಡುತ್ತಾರೆ.

ನಾನು ಎಷ್ಟೊ ವರ್ಷ ಜನವರಿ ಒಂದರಿಂದ ಡೈರಿ ಬರೆಯಲು ಶುರು ಮಾಡಿದ್ದಿದೆ. ಒಂದಿಪ್ಪತ್ತು ಡೈರಿಗಳಿರಬಹುದು… ಅಬ್ಬಬ್ಬಾ ಅಂದರೆ ಮಾರ್ಚಿವರೆಗು ಬರೆಯಬಹುದು. ಎದ್ದಿದ್ದು, ತಿಂದಿದ್ದು, ಅಂದದ್ದು ಪ್ರತಿಯೊಂದು ದಾಖಲೆಯಾಗಬೇಕೆಂಬ ತುಡಿತ… ನಂತರ ದಿನಗಳೆದಂತೆ ಆಸಕ್ತಿ ಕುಗ್ಗಿ ಡೈರಿಯೆಲ್ಲೋ ನಾನೆಲ್ಲೋ.. ತಿರುಗಿ ಜನವರಿ ಬರಬೇಕು ಆಸಕ್ತಿ ಹುಟ್ಟಲು. ಈಗ ವರ್ಷಗಳೇ ಕಳೆದವು ಏನನ್ನು ದಾಖಲಿಸದೆ. ನೆನಪಿನಲ್ಲಿ ಉಳಿದವು ಇವೆ… ಬೇಡದ ನೆನಪುಗಳೇ… ಹೆಚ್ಚು… ಆದರೆ ಮರೆತಿರುವೆ ಎಂದುಕೊಂಡಿದ್ದು ಕೂಡ. ಯಾವುದೋ ಒಂದು ಕಾರಣಕ್ಕೆ ನೆನಪಿನಂಗಳದಿಂದ ಎದ್ದು ಧುತ್ತೆಂದು ಮುಂದೆ ಬಂದು ಕಾಡಿದ್ದು, ಮುದಗೊಳಿಸಿದ್ದು ಉಂಟು.

ಮದುವೆಯಾದ ಮೊದಲ ವರ್ಷ… ಫೂನಾಗೆ ಯಾವುದೋ ಕೆಲಸದ ಮೇಲೆ ಹೋಗಿದ್ದ ಇವರೊಂದಿಗೆ ಹೋಗಿದ್ದು, ಇಳಿದುಕೊಂಡಿದ್ದ ಹೊಟೆಲ್ಲಿನಲ್ಲಿ ಹೊಸ ವರ್ಷದ ಸಂಭ್ರಮ. ನಮ್ಮ ಕೋಣೆಯ ಕಿಟಕಿಯಿಂದ ನೋಡಿದರೆ,, ಅಲ್ಲಿ ಈಜು ಕೊಳದ ಬಳಿ ಭರ್ಜರಿ ಏರ್ಪಾಟು ಆಗಿತ್ತು. ಸಂಗೀತ… ಡ್ಯಾನ್ಸು ಮಾಡಲು ಸ್ಟೇಜು… ಹಾರಾಡುತ್ತಿದ್ದ ಬಲೂನುಗಳು ಮಿನುಗುತ್ತಿದ್ದ ಸೀರಿಯಲ್ ದೀಪಗಳು ಓಡಾಡುತ್ತಿದ್ದ ಚೆಂದಾಗಿ ಅಲಂಕರಿಸಿಕೊಂಡಿದ್ದ ಜನ..

ಸರಿ.. ಹೋಗಿ ನೋಡಿಕೊಂಡು ಬರುವ ಎಂದು ಇಬ್ಬರೂ ಹೋದೆವು. ಅಲ್ಲಿ ಬಾಗಿಲ ಬಳಿ ಟಿಕೆಟ್ ತೆಗೆದುಕೊಂಡು ಒಳ ಹೋಗಬೇಕು ಎಂದಾಗ ಬರಿ ನೋಡಿಕೊಂಡು ಹೋಗುತ್ತೇವೆ ಅಷ್ಟೇ ಅಂದು ಹೇಳಲು ಅವಮಾನ. ದುಡ್ಡಿಲ್ಲ ಎಂದುಕೊಂಡು ಬಿಡುತ್ತಾರೇನೋ ಎಂಬ ಪ್ರತಿಷ್ಠೆ. ಸರಿ ಮುಖ ಮುಖ ನೋಡಿಕೊಂಡು ದುಡ್ಡು ತೆತ್ತು ಒಳಹೋದೆವು. ಪೂಲ್ ಬಳಿ ಬೇರೆ… ಮೇಲೆ ಆಕಾಶ… ಮೈ ಗದಗುಟ್ಟಿಸುವ ಚಳಿ. ಸ್ಟೇಜಿನ ಮೇಲೆ ಡ್ಯಾನ್ಸ್ ಮಾಡಲು ಬಾರದು… ಸಂಗೀತವೋ ನನ್ನ ಕಿವಿಗಳಿಗೆ ತುಂಬಾ ಆರ್ಭಟ (Loud) ಅನ್ನಿಸುತ್ತಿತ್ತು. Hot drinks ಇರಲಿ… ಇಬ್ಬರಿಗೂ Cold drink ಕೂಡ ಬೇಡವಾಗಿತ್ತು.

ಸರಿ ದುಡ್ಡು ಕೊಟ್ಟಿದ್ದಕ್ಕೆ ಊಟ ಮಾಡಿ ಹೋಗೋಣ ಎಂದುಕೊಂಡರೆ ಗಂಟೆ ಹನ್ನೆರೆಡು ಹೊಡೆದ ಮೇಲೆ ಊಟ… ಅಲ್ಲಿಯವರೆಗೂ ಹಾಡು, ಕುಡಿತ, ಕುಣಿತ, ಮೂರೂ ಬೇಡ ನಮಗೆ… ಜಗಳವಾಡಲು, ಮಾತನಾಡಲು ಇಬ್ಬರಿಗೂ ಹೊಸತು. ಅಲ್ಲೋ ಬರಿ ಮರಾಠಿ, ಹಿಂದಿ ಅಲ್ಪಸ್ವಲ್ಪ ಇಂಗ್ಲೀಷು. ಸುತ್ತಾ ಇದ್ದ ಅಪರಿಚಿತರೆಲ್ಲಾ ಕುಡಿದು, ಸಿಗರೇಟು ಸೇದುತ್ತಾ ಕುಣಿಯುತ್ತಿದ್ದರು…

ಏನೇನೋ ಬಹುಮಾನಗಳು ಬೇರೆ. ‘ಪಾಯಲ್ ಹಾಕಿಕೊಂಡಿರುವ ಮಹಿಳೆಗೆ ಬಹುಮಾನ’ ಎಂದಾಗ ಪಾಯಲ್ ಅಂದರೆ ಗೆಜ್ಜೆ ಎಂದು ಗೊತ್ತಿಲ್ಲದೆ ಸುಮ್ಮನೆ ಕುಳಿತದ್ದು… ಈಗಲೂ ಗೆಜ್ಜೆ ನೋಡಿಕೊಂಡಾಗಲೆಲ್ಲಾ ನಗು ಬಗುತ್ತದೆ. ಬಫೆಯಲ್ಲಿ ಊಟ ಇರಿಸಿದ ತಕ್ಷಣ ಉಂಡು ಕೋಣೆಗೆ ಬಂದೆವು. (ನಮ್ಮ ಟಿಕೆಟ್ಗೆ bumper prize ಎಂದು ರೋಮ್ ಗೆ ಏರ್ ಟಿಕೆಟ್ ಬಂದಿದ್ದು… ಅದು ನಮಗೆ ಅರ್ಥವಾಗಿ ಸ್ಟೇಜಿಗೆ ಹೋಗಿ ಚಪ್ಪಾಳೆಯ ಮಧ್ಯೆ ತೆಗೆದುಕೊಂಡಿದ್ದು… highlight!)

ಈ ನೆನಪೆಲ್ಲಾ ಒದ್ದುಕೊಂಡು ಬಂದಿದ್ದು ಈ ಹೊಸವರ್ಷದ ದಿನದಂದು. ನಾನು ನನ್ನ ಗಂಡನೊಡನೆ ಹಲವಾರು ಪಾರ್ಟಿಗಳಿಗೆ ಹೋಗಿದ್ದೇನೆ. (ಹೊಸ ವರ್ಷದ ಪಾರ್ಟಿ ಅದೊಂದೇ ಹೋಗಿದ್ದು ಎಂಬ ನೆನಪು) ನಾವಿಬ್ಬರೂ ಕುಡಿಯುವುದಿಲ್ಲ… ಆದರೆ ಈವರೆಗೆ ಪಾರ್ಟಿಯಲ್ಲಿ ಕುಡಿದು ಕೆಟ್ಟದಾಗಿ ವರ್ತಿಸಿದವರನ್ನು ನಾನು ಕಂಡಿಲ್ಲ.

ನಮ್ಮ ಬೆಂಗಳೂರಿನಲ್ಲಿ ನಾನು ಓಡಾಡಿದ ರಸ್ತೆಗಳು Church street,  ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ. ಡಿಸೆಂಬರ್ 31ರ ರಾತ್ರಿ ಅಲ್ಲಿ ಗುಂಪು ಜನ ಸೇರಿ ಹೆಣ್ಣು ಮಕ್ಕಳ ಜೊತೆ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸಿದರು, ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸಿದರು ಎಂದೆಲ್ಲಾ ಓದಿದಾಗ ಖೇದವೆನ್ನಿಸುತ್ತದೆ. ಎಲ್ಲಿಂದ ಬಂದರು ಈ ಜನ? ರಸ್ತೆಯಲ್ಲಿ ಹೇಗೆ ಕುಡಿದರು? ಅಲ್ಲಿಯ ಹಲವಾರು ಪಬ್ಬು, ರೆಸ್ಟೊರೆಂಟುಗಳಲ್ಲಿ ಹೊಸ ವರ್ಷ ಆಚರಿಸಲು ಬರುವ ಹೆಣ್ಣು ಮಕ್ಕಳನ್ನು ನೋಡಲು ಅವರಿಗೆ ಕಿರುಕುಳ ಕೊಡಲು ಬಂದರೆ?

ತಮ್ಮ ಸ್ನೇಹಿತರು, ಬಂಧುಗಳೊಡನೆ ಸಂಭ್ರಮದಿಂದ ಆಚರಿಸಬೇಕಾದ ಹೊಸ ವರ್ಷದ ಪ್ರಾರಂಭ ಹೀಗೆ ರಸ್ತೆಯಲ್ಲಿ ಆಚರಿಸುವ ಪರಿಪಾಠ ಬಂದಿದ್ದು ಹೇಗೆ? ಆ ಹೆಣ್ಣು ಮಕ್ಕಳು ರಸ್ತೆಯಲ್ಲಿ ಕುಡಿಯುತ್ತಿದ್ದರೆ? ಅಥವಾ ಕುಡಿದು ರಸ್ತೆಗೆ ಬಂದಿದ್ದರೆ? ಕುಡಿದು ರಸ್ತೆಯಲ್ಲಿ ಇದ್ದ ಹುಡುಗರಿಗೆ (ಪಾಪಾ… ಕುಡಿದ ಮತ್ತಿನಲ್ಲಿ ಇದ್ದರು) ಆ ಹೆಣ್ಣು ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಲು ಉತ್ತೇಜನವೇನು? ಆ ಹೆಣ್ಣು ಮಕ್ಕಳು ಧರಿಸಿದ ಬಟ್ಟೆಯೇ? ಆ ಗಂಡು ಮಕ್ಕಳ ಹೊಟ್ಟೆಯೊಳಗಿದ್ದ ಮದ್ಯವೇ? ಅವರಪ್ಪ ಅಮ್ಮ ಅವರಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ತುಂಬಲು ವಿಫಲರಾಗಿದ್ದೆ?

ಅಷ್ಟೊಂದು ಮಂದಿ ಇದ್ದಾಗ ಏನು ಮಾಡಿದರೂ ನಾವೇ ಮಾಡಿದ್ದು ಎಂದು ಸಿಕ್ಕಿ ಹಾಕಿಕೊಳ್ಳುವ ಅವಕಾಶವಿಲ್ಲಎಂಬ ಧಾಷ್ಟ್ಯವೇ? ಪುಟ್ಟ ಕೋಲು ಹಿಡಿದು ಜನರನ್ನು ಓಡಿಸಲು ವಿಫಲ ಪ್ರಯತ್ನಪಡುತ್ತಿದ್ದ ಅಧಿಕಾರವಿಲ್ಲದ ವೃತ್ತಿಪರತೆಯಿಲ್ಲದ ಪೊಲೀಸರೇ? ಎಷ್ಟು ಜನ ಬರಬಹುದು ಎಂಬ ಅಂದಾಜೇ ಇಲ್ಲದ ಕಾನೂನು ಪಾಲಕರದೇ?

ಬೇರೆ ದೇಶಗಳಲ್ಲಿ ಆ ರಸ್ತೆಗೆ ಬರುವ ಜನರ ಐಡಿಗಳನ್ನು ನೋಡಿ ದಾಖಲಿಸಿಕೊಂಡು ಒಳಗೆ ಬಿಡುತ್ತಾರಂತೆ… ಇಲ್ಲಿ ಗುಂಪಾಗಿ ಕುಡಿದ ಜನ ಬಂದರೆ ಪೊಲೀಸರು ಅತ್ತ ಮುಖ ಮಾಡಿ ನಿಲ್ಲುತ್ತಾರೆ. ಶಿಕ್ಷೆಯಿಲ್ಲ ಎಂಬ ಉಡಾಫೆ ನಮ್ಮ ಜನರದ್ದೆ?

ಶೀಲಾಕಿ ಜವಾನಿ, ನಾ ಬೋರ್ಡು ಇರದ ಬಸ್ಸನು, ಮೇರಾ ಫೋಟೋ ಚಾಪಲೇ ಎಂದೆಲ್ಲಾ ಬರುವ ಹಾಡುಗಳನ್ನು, ಸುಲಭವಾಗಿ ಸಿಗುವ Porn videoಗಳನ್ನು ನೋಡಿರುವ ಯುವಕರಿಗೆ ಹೆಣ್ಣು ಮಕ್ಕಳು ಒಬ್ಬಳು ವ್ಯಕ್ತಿಗಿಂಥ ಒಂದು ವಸ್ತುವಿನಂತೆ ಗೋಚರಿಸುತ್ತಾಳಾ?

ಅವಳು ಅರೆಬರೆ ಬಟ್ಟೆ ತೊಟ್ಟಿದ್ದರಂತೂ.. ಅವಳನ್ನು ರಸ್ತೆಯಲ್ಲೇ ಅನುಭವಿಸಿಬಿಡಬಹುದು ಎಂದು ಕೊಳ್ಳುತ್ತಾರಾ? ಅವಳೂ ಕುಡಿದಿದ್ದರೆ, ಅವಳು ಎಲ್ಲದಕ್ಕೂ ಸೈ ಎಂದು ಭಾವಿಸುತ್ತಾರಾ? ಅಥವಾ ಸರಿ ರಾತ್ರಿ ಅರೆ ಬರೆ ಬಟ್ಟೆ ತೊಟ್ಟು ಕುಡಿದು ಬೀದಿಗೆ ಬಂದಿರುವ ಅವಳ ಮೇಲೆ ದೌರ್ಜನ್ಯವೆಸಗಿ ಅವಳನ್ನು ಶಿಕ್ಷಿಸುವುದು ತಮ್ಮ ಹಕ್ಕು ಎಂದುಕೊಳ್ಳುತ್ತಾರಾ?

ಮೂಲಭೂತವಾಗಿ ಪುರುಷ ಪ್ರಧಾನ ಸಮಾಜ ಆಗಿರುವುದರಿಂದ ಬಂದಿರುವ ಮಾನಸಿಕ ಸ್ಥಿತಿ (mindset) ಏನೆಂದರೆ ಹೆಣ್ಣನ್ನು ಶಿಕ್ಷಿಸುವ ಅಧಿಕಾರ, ರಕ್ಷಿಸುವ ಹೊಣೆ ಪುರುಷರದು ಎಂಬುದು, ರಕ್ಷಿಸುವ ಭರದಲ್ಲಿ ಕೂಡಿ ಹಾಕಿ, ಶಿಕ್ಷಿಸುವ ಭರದಲ್ಲಿ ರೇಪ್ ಮಾಡಿ ಅವಳ ಸ್ಥಿತಿಯನ್ನು ಹಾಳುಗೆಡವಿ ಇಟ್ಟಿದ್ದಾರೆ.

ನಮ್ಮ ಗೃಹಮಂತ್ರಿ, ಮೇಯರ್, ಪೊಲೀಸ್ ಕಮಿಷನರ್ ಅವರಿಂದ ಮೊದಲು ಮಾಡಿ ಹಲವಾರು ಮಂದಿ ಮಹನೀಯರು ಹಾಗೂ ಮಹಿಳೆಯರು… ಹೆಣ್ಣು ಮಕ್ಕಳದೇ ತಪ್ಪು ಎಂದು ಸಾರಿದ್ದಾರೆ. ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಕಡೆ ಹೆಣ್ಣು ಮಕ್ಕಳು ಹೋಗುವುದೇ ತಪ್ಪು. ಕುಡಿದ ಗುಂಪಿಗೆ ಬುದ್ಧಿ ಹೇಳಲಾಗುತ್ತದೆಯೇ? Mob mentalityನೇ ಹಾಗೆ… ಪೊಲೀಸರೂ ಮನುಷ್ಯರಲ್ಲವೇ ಅವರು ತಾನೇ ಏನು ಮಾಡಲು ಸಾಧ್ಯ?

ನಿಜ, ಕಳ್ಳ ಬರಬಹುದು ಎಂದು ಬಾಗಿಲಿಗೆ ಬೀಗ ಹಾಕಿ ಇರುವುದಿಲ್ಲವೇ? ಕಳ್ಳತನ ತಪ್ಪು… ಕಳ್ಳತನ ಯಾರೂ ಮಾಡುವುದಿಲ್ಲ ಎಂದು ಬಾಗಿಲು ತೆರೆದು ಮಲಗುತ್ತೇವೆಯೇ? ನಮ್ಮನ್ನು ಕಾಯುವುದು, ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಕೆಲಸ ನಿಜ. ಆದರೆ ನಮಗೂ ಜವಾಬ್ದಾರಿ ಇದೆಯಲ್ಲವೇ? ಹೆಣ್ಣು ಮಕ್ಕಳಿಗೆ, ಪಾರ್ತಿ ಮಾಡಲು ಇಚ್ಛಿಸುವ ಹೆಣ್ಣು ಮಕ್ಕಳಿಗೆ ಗನ್ ಲೈಸೆನ್ಸ್ ಸುಲಭವಾಗಿ ಸಿಗುವಂತೆ ಮಾಡಬೇಕು. ಪೆಪ್ಪರ್ ಸ್ಪ್ರೇ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು… ಅಥವಾ ಬೆಸ್ಟು.. ಮನೆಯಲ್ಲಿಯೇ ಪಾರ್ಟಿ ಮಾಡಿಕೊಳ್ಳಿ… ಹೊರಗೆ ಹೋಗಲೇಬೇಕು ಎಂಬ ಹುಚ್ಚು ಯಾಕೆ?

ಸುಸಂಸ್ಕೃತ  ಸಮಾಜದ ನಿರ್ಮಾಣದ ಕೆಲಸದಲ್ಲಿ ನಾವಿನ್ನೂ ಬಾಲಿಶದಲ್ಲಿಯೇ ಇದ್ದೇವೆ ಅಥವಾ ಅಂತಹ ಒಂದು ಸಮಾಜದ ಕಲ್ಪನೆಯೇ ಬಾಲಿಶವೇ?

ಗಂಡು ಬೆಂಕಿ, ಸಿಂಹ, ಹುಲಿ, ಮೃಗ… ಕುಡಿದ ಗಂಡು ಕಜ್ಜಿ ನಾಯಿ, ಮತ್ತೆ ಇನ್ನೇನೇನೋ… ಸುಡಿಸಿಕೊಳ್ಳದೆ, ಕಚ್ಚಿಸಿಕೊಳ್ಳದೆ, ಆಹಾರವಾಗದೆ, ಆಹಾರವಾಗದೆ ಹುಷಾರಾಗಿ ಇರಬೇಕು ಹೆಣ್ಣು. ಆ ರಸ್ತೆಗಳಿಗೆ ಹೋಗಿ ಕುಡಿದು, ಕುಣಿದು ಹೊಸ ವರ್ಷ ಆಚರಿಸಬೇಕು ಎನ್ನುವ ದರ್ದು ಏನು ಹುಡುಗಿಯರಿಗೆ? ಶಾಲೆಗೆ, ಕಾಲೇಜಿಗೆ ಹೋಗಲು, ದುಡಿಯಲು ಹೋಗಲು ಸ್ವಾತಂತ್ರವಿದೆ. ಅಲ್ಲಿ ಯಾರೂ ಹಲ್ಲೆ ಮಾಡುವುದಿಲ್ಲ… (ಅದ್ಯಾರೋ ಶಿಕ್ಷಕ ಹೆಣ್ಣು ಮಕ್ಕಳನ್ನು ಬಳಸಿಕೊಂಡ ಎಂಬ ಸುದ್ದಿ ಓದಿದ ನೆನಪು)

ಹಾಳಾಗಲಿ,

2017ರ ಡಿಸೆಂಬರ್ 31ರಂದು ಎಲ್ಲರೂ ದಯವಿಟ್ಟು ನಿಮ್ಮ ನಿಮ್ಮ ಮನೆಗಳಲ್ಲಿಯೇ ಹೊಸ ವರ್ಷ ಆಚರಿಸಿ. 2018ರ ಆರಂಭ ಚೆಂದವಿರಲಿ. ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಕಡಿಮೆಯಾಗಲಿ. (ನಮ್ಮ ಸಂಸ್ಕೃತಿ ಹೆಣ್ಣಿನ ಬಟ್ಟೆ ಹರಿ, ಅವಳೊಂದಿಗೆ ಅಸಭ್ಯವಾಗಿ ವರ್ತಿಸು ಎಂದು ಎಲ್ಲಿಯೂ ಹೇಳಿಲ್ಲ… with or without alcohol inside you!)

Leave a Reply