ರಾಜ್ಯಕ್ಕೆ ಸಿಕ್ಕಿತು ಬೆಳೆ ನಷ್ಟ ಪರಿಹಾರ, ಸಿಕ್ಕಿಬಿದ್ದರು ಬೆಂಗಳೂರು ಕಾಮುಕರು, ವಿವಾದಿತ ಹೇಳಿಕೆಗೆ ಪರಮೇಶ್ವರರ ಸ್ಪಷ್ಟನೆ, ಆನ್ಲೈನ್ ಬಿಪಿಎಲ್-ಎಪಿಲ್ ಕಾರ್ಡುಗಳು…

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದಿಂದ ಬೆಳೆ ನಷ್ಟ ಪರಿಹಾರ

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬೆಳೆ ಪರಿಹಾರಕ್ಕಾಗಿ 1768.44 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.  ಇತ್ತೀಚಿನ ವರ್ಷಗಳಲ್ಲಿ ಬೆಳೆ ಪರಿಹಾರಕ್ಕಾಗಿ ಬಂದಿರುವ ಭಾರೀ ಮೊತ್ತದ ಹಣ ಇದಾಗಿದ್ದು, ಪರಿಹಾರ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಬೇಕಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿಂದು ನಡೆದ ಪ್ರಕೃತಿ ವಿಕೋಪ ಸಮಿತಿ ರಾಜ್ಯದ ಮನವಿಗೆ ಸ್ಪಂದಿಸಿದೆ.

ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದ ರಾಜ್ಯ ಸರ್ಕಾರ 139 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ, ಮುಂಗಾರು ಬೆಳೆ ಪರಿಹಾರಕ್ಕಾಗಿ 4702  ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ  ಮನವಿ ಮಾಡಿತ್ತು. ಇದಲ್ಲದೆ, ಬರದಿಂದ 17000 ಕೋಟಿ ರೂ. ನಷ್ಟ ಉಂಟಾಗಿದ್ದು ಇತರ ಪರಿಹಾರ ಕಾಮಗಾರಿ ಕೈಗೊಳ್ಳಲು ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವ ಪಕ್ಷಗಳ ನಾಯಕರ ತಂಡ ಇತ್ತೀಚೆಗಷ್ಟೆ ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಪ್ರಧಾನಿ ಅವರ ಸಲಹೆ ಮೇರೆಗೆ ಪ್ರಕೃತಿ ವಿಕೋಪ ನಿಧಿಯಿಂದ ಹಣ ಬಿಡುಗಡೆಗೊಂಡಿದೆ, ಆದರೆ, ಬೆಳೆ ಪರಿಹಾರಕ್ಕೆ ಮಾತ್ರ ಅನುದಾನ ದೊರೆತಿದ್ದು, ಬರ ಪರಿಹಾರ ಕಾಮಗಾರಿಗೆ ಹಣ ಸಿಕ್ಕಿಲ್ಲ.

ಬರ ಪರಿಸ್ಥಿತಿಯಿಂದ 2016-17ನೇ ಸಾಲಿನಲ್ಲಿ ಹಾನಿಗೀಡಾದ ಬೆಳೆಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಹಣವನ್ನು ಆರ್‍ಟಿಜಿಎಸ್ ಅಥವಾ ಎನ್‍ಇಎಫ್‍ಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಕೇಂದ್ರ ಸ್ಪಷ್ಟವಾಗಿ ತಿಳಿಸಿದೆ.

ಖಾತೆ ಇಲ್ಲದ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾತೆ ತೆರೆಯಬೇಕು ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಹೇಳಿದೆ.

ಕಾಮುಕರು ವಶಕ್ಕೆ, ಗೃಹ ಸಚಿವ ಪರಮೇಶ್ವರರಿಂದ ಹೇಳಿಕೆ ಕುರಿತ ಸ್ಪಷ್ಟನೆ

ಕಮ್ಮನಹಳ್ಳಿಯಲ್ಲಿ  ಜನವರಿ 1 ರ ನಸುಕಿನ ವೇಳೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ಈ ಪೈಕಿ ಪ್ರಮುಖ ಆರೋಪಿ ಲಿನೋ ಎಂದು ಪೊಲೀಸರು ತಿಳಿಸಿದ್ದಾರೆ. ಫ್ರೆಜರ್‍ಟೌನ್ ನಿವಾಸಿಯಾಗಿರುವ ಈತ ಬಿಕಾಂ ವಿದ್ಯಾರ್ಥಿ. ಇನ್ನೋರ್ವ ಬಂಧಿತ ಆರೋಪಿ ಸ್ಕೂಟರ್‍ನಲ್ಲಿ ಕುಳಿತಿದ್ದವ ಅಯ್ಯಪ್ಪ ಎಂದು ಗುರುತಿಸಲಾಗಿದೆ. ಕೃತ್ಯದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದು ಉಳಿದವರಿಗಾಗಿ ಶೋಧ ಮುಂದುವರಿದಿದೆ. ಎಲ್ಲರೂ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ವೇಳೆ ಸ್ನೇಹಿತರಾಗಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಗುರುವಾರ ಆ ಬಗ್ಗೆ ಸ್ಪಷ್ಟೀಕರಣ ನೀಡಿದ ಸಚಿವರು, ತಾವು ಲೈಂಗಿಕ ದೌರ್ಜನ್ಯ ಸಮರ್ಥಿಸಿಕೊಂಡ ರೀತಿಯಲ್ಲಿ ತಪ್ಪಾಗಿ ಹೇಳಿಕೆಯನ್ನು ತಿರುಚಲಾಗಿದೆ ಎಂದರಲ್ಲದೇ ಈ ಘಟನೆ ಬಳಸಿಕೊಂಡು ಬೆಂಗಳೂರಿನ ವರ್ಚಸ್ಸು ಕೆಡಿಸುವ ಪ್ರಯತ್ನಗಳೂ ನಡೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಅವರು ಕೆಲವು ಭರವಸೆಗಳನ್ನು ನೀಡಿದ್ದಾರೆ. ಅವು ಹೀಗಿವೆ-

550 ಸಿಸಿಟಿವಿ ಅಳವಡಿಸಲು 39 ಕೋಟಿ ರೂ. ವೆಚ್ಚವಾಗಲಿದೆ. ಸೂಕ್ಷ್ಮ ಪ್ರದೇಶ ಸೇರಿದಂತೆ ಅವಶ್ಯಕತೆಯಿರುವ ಕಡೆ ಸಿಸಿಟಿವಿ ಅಳವಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ 5 ಸಾವಿರ ಸಿಸಿಟಿವಿ ಅಳವಡಿಸಲು ಉದ್ದೇಶಿಸಲಾಗಿದೆ. ಪೊಲೀಸ್ ಕಚೇರಿ ನಿಯಂತ್ರಣ ಕೊಠಡಿ 100 ಸಂಖ್ಯೆಗೆ ಈಗ 15 ಮಾರ್ಗವಿದ್ದು, ಅವುಗಳನ್ನು ನೂರು ಲೈನ್‍ಗಳಿಗೆ ಹೆಚ್ಚಳ ಮಾಡಲಾಗುವುದು. ಇದಕ್ಕಾಗಿ 14 ಕೋಟಿ ರೂ. ವೆಚ್ಚ ಮಾಡಲಾಗುವುದು. ದಿನದ 24 ಗಂಟೆ ವಾರದ ಏಳು ದಿನವೂ ಕಾರ್ಯನಿರ್ವಹಿಸಲಿವೆ. ಶೇ.5ರಷ್ಟಿರುವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಶೇ.20ಕ್ಕೆ ಹೆಚ್ಚಿಸಲಾಗುವುದು.

ಆನ್ಲೈನ್ ಮೂಲಕವೇ ಬಿಪಿಎಲ್-ಎಪಿಎಲ್ ಕಾರ್ಡುಗಳು

ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‍ಗಳನ್ನು ಪಡೆಯುವ ವಿನೂತನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಜನವರಿ 9ರಿಂದ ಆನ್‍ಲೈನ್‍ನಲ್ಲಿ ಎಪಿಎಲ್ ಕಾರ್ಡ್‍ಗಳಿಗೆ ಅರ್ಜಿ ತುಂಬಿ ಸ್ಥಳದಲ್ಲೇ ಪಡಿತರ ಚೀಟಿ ಪಡೆಯಬಹುದು, ಬಿಪಿಎಲ್ ಕಾರ್ಡ್ ಪಡೆಯಲು ಇಚ್ಛಿಸುವವರು ಜನವರಿ 20ರ ನಂತರ ಈ ವ್ಯವಸ್ಥೆ ಅಡಿ ಚೀಟಿ ಪಡೆಯಲು ಸರ್ಕಾರ  ಅವಕಾಶ ಮಾಡಿಕೊಟ್ಟಿದೆ.

ಇದುವರೆಗೆ ಬಿಪಿಎಲ್ ಕಾರ್ಡಿಗಾಗಿ ಹತ್ತು ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ.ಆದರೆ ಅವರು ಹೊಸತಾಗಿ ಅರ್ಜಿ ಸಲ್ಲಿಸುವುದು ಅನಿವಾರ್ಯ, ಇದಕ್ಕೆ  ಆಧಾರ್ ಅನ್ನು ಕಡ್ಡಾಯ ಮಾಡಲಾಗಿದೆ. ಎಪಿಎಲ್ ಕಾರ್ಡು ಪಡೆಯುವರ ಪೈಕಿ ಒಬ್ಬರ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಸಚಿವ ಯು ಟಿ ಖಾದರ್ ವಿವರ ನೀಡಿದ್ದಾರೆ.

ಬಿಪಿಎಲ್ ಕಾರ್ಡಿಗೆ ಸಂಬಂಧಿದಂತೆ ಈಗ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದ್ದು ನಗರ ಪ್ರದೇಶದಲ್ಲಿ ಸಾವಿರ ಚದರಡಿಗಿಂತ ಕಡಿಮೆ ಅಳತೆಯ ನಿವೇಶನದಲ್ಲಿ ಸ್ವಂತ ಮನೆ ಹೊಂದಿದವರು, ನಾಲ್ಕು ಚಕ್ರಗಳ ವಾಹನ ಹೊಂದಿಲ್ಲದವರು, ನೂರೈವತ್ತು ಯೂನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸದವರು ಬಿಪಿಎಲ್ ಕಾರ್ಡು ಪಡೆಯಲು ಅರ್ಹರಾಗುತ್ತಾರೆ. ಗ್ರಾಮ ಲೆಕ್ಕಿಗ ಇಲ್ಲವೇ ಕಂದಾಯ ಅಧಿಕಾರಿಗಳ ಪರಿಶೀಲನೆ ನಡೆಸಿದ ನಂತರ ಗ್ರಾಹಕರಿಗೆ ಕಾರ್ಡ್ ದೊರೆಯಲಿದೆ.

Leave a Reply