ನೋಟು ಬಂದ್ ವಿಷಯದಲ್ಲಿ ನಿತೀಶ್ ಹೊಗಳಿಕೆಯನ್ನು ಸಾರಾಯಿ ಬಂದ್ ಪ್ರಶಂಸೆಯಲ್ಲಿ ತೀರಿಸಿದ ಪ್ರಧಾನಿ ಮೋದಿ, ಮುಗಿದಿಲ್ಲ ಆರ್ಬಿಐ ಹಳೆನೋಟು ಲೆಕ್ಕಾಚಾರ

ಡಿಜಿಟಲ್ ಕನ್ನಡ ಟೀಮ್:

ನಿತೀಶರನ್ನು ಹೊಗಳಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿಯ ನೋಟು ಅಮಾನ್ಯ ಕ್ರಮವನ್ನು ಈ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶ್ಲಾಘಿಸಿದ್ದರು. ಪ್ರತಿಪಕ್ಷಗಳೆಲ್ಲ ಈ ವಿಷಯದಲ್ಲಿ ಪ್ರಧಾನಿ ಮೋದಿ ನಿಲುವಿನ ವಿರುದ್ಧ ನಿಲುವು ತಾಳಿದ್ದರೂ ಬಿಹಾರ ಮುಖ್ಯಮಂತ್ರಿ ಮಾತ್ರ ಕೇಂದ್ರದ ನಿಲುವನ್ನು ಸ್ವಾಗತಿಸಿದ್ದರು.

ಗುರುವಾರ ಆ ಉಪಕಾರವನ್ನು ಪ್ರಧಾನಿ ಮೋದಿ ತೀರಿಸಿದಂತಾಗಿದೆ. ಪಟ್ನಾದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ 10ನೇ ಸಿಖ್ ಗುರು ಗೋವಿಂದ ಸಿಂಗ್ ಅವರ 350ನೇ ಜನ್ಮದಿನ ಆಚರಣೆ ‘ಪ್ರಕಾಶ ಪರ್ವ’ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು ಪ್ರಧಾನಿ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಈ ವೇಳೆ ಪ್ರಧಾನಿ ಮೋದಿ ಬಿಹಾರದಲ್ಲಿ ಸಾರಾಯಿ ನಿಷೇಧ ಜಾರಿಗೊಳಿಸಿರುವ ನಿತೀಶ್ ಕ್ರಮವನ್ನು ಕೊಂಡಾಡಿದರು. ‘ಮುಂದಿನ ಪೀಳಿಗೆಯನ್ನು ಮದ್ಯಪಾನದಿಂದ ವಿಮುಕ್ತಗೊಳಿಸಲು ನಿತೀಶರು ಕೈಗೊಂಡ ಕ್ರಮವನ್ನು ನಾನು ಶ್ಲಾಘಿಸುತ್ತೇನೆ. ರಾಜ್ಯದ ಖಜಾನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದರೂ ಅವರು ಈ ಧೈರ್ಯದ ಕ್ರಮ ಕೈಗೊಂಡಿದ್ದಾರೆ. ಇದು ಕೇವಲ ನಿತೀಶ್ ಅಥವಾ ರಾಜಕೀಯ ಪಕ್ಷವೊಂದರ ಕಾರ್ಯಕ್ರಮವಾಗಬಾರದು. ಬದಲಿಗೆ ಪ್ರತಿಯೊಬ್ಬರೂ ಈ ವಿಕಾಸದಲ್ಲಿ ಕೈಜೋಡಿಸಬೇಕು’ ಎಂದರು ಮೋದಿ.

ಮೋದಿ-ನಿತೀಶ್ ಸ್ನೇಹ ಗಟ್ಟಿಯಾಗುತ್ತಿದೆಯೇ ಎಂದು ರಾಜಕೀಯ ಚರ್ಚೆಯೊಂದು ಕಳೆಗಟ್ಟುತ್ತಿದ್ದರೆ, ಇನ್ನೊಂದೆಡೆ, ನೋಟ್ ಬಂದ್ ನಂತರ ದೇಶದಲ್ಲಿ ಮದ್ಯಪಾನ ಬಂದ್ ಕಾರ್ಯಕ್ರಮಕ್ಕೂ ಮೋದಿ ಮುಂದಾಗುತ್ತಾರೆ ಎಂಬ ಚರ್ಚೆಗಳು ಶುರುವಾಗಿವೆ.

ಮುಗಿದಿಲ್ಲ ಹಳೆ ನೋಟುಗಳ ಆರ್ಬಿಐ ಲೆಕ್ಕ!

ಹಳೆ 500 ಮತ್ತು 1000ಗಳ ಶೇ. 96-97 ಮೌಲ್ಯ ಬ್ಯಾಂಕುಗಳಿಗೆ ಹಿಂತಿರುಗಿದೆ, ಹಾಗಾದರೆ ಕಾಳಧನ ಹೋಯಿತೆಲ್ಲಿಗೆ ಎಂಬುದು ಕೆಲದಿನಗಳಿಂದ ತೆರೆದುಕೊಂಡಿದ್ದ ಚರ್ಚೆ.

ಆದರೆ ಆರ್ಬಿಐ ಗುರುವಾರ ನೀಡಿರುವ ಪ್ರಕಟಣೆಯ ಪ್ರಕಾರ ಅದಿನ್ನೂ ಹಳೆನೋಟುಗಳನ್ನು ಲೆಕ್ಕ ಹಾಕಿ ಮುಗಿಸಿಲ್ಲ. ಈಗ ವರದಿಯಾಗುತ್ತಿರುವ ಸರಾಸರಿ ಪ್ರಮಾಣಗಳೆಲ್ಲ ಕರೆನ್ಸಿ ಚೆಸ್ಟ್ ಗೆ ಬ್ಯಾಂಕುಗಳಿಂದ ಸಲ್ಲಿಕೆಯಾಗಿರುವ ಲೆಕ್ಕದ ಆಧಾರದ್ದು. ಆದರೆ, ಎಲ್ಲ ನೋಟುಗಳು ಎಣಿಕೆಯಾದ ನಂತರವಷ್ಟೇ ನಿರ್ದಿಷ್ಟ ಚಿತ್ರಣ ಸಿಕ್ಕಲಿದೆ ಎಂದು ಆರ್ಬಿಐ ಹೇಳಿದೆ. ಈ ಹಿಂದಿನ ದಾಖಲೆಯಲ್ಲಿ ಹಲವು ಸಂದರ್ಭಗಳಲ್ಲಿ ಎರಡೆರಡು ಬಾರಿ ಒಂದೇ ಹಣ ಎಣಿಕೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದೂ ಪ್ರಕಟಣೆ ಹೇಳಿದೆ.

Leave a Reply