ಭಾರತದಲ್ಲಿ ಹಾಸುಹೊಕ್ಕಾಗಿರುವ ಕುಟುಂಬ ರಾಜಕಾರಣ, ಪ್ರಧಾನಿ ಮೋದಿ ಮಾರ್ಗ ಮಾತ್ರ ವಿಭಿನ್ನ!

ಡಿಜಿಟಲ್ ಕನ್ನಡ ಟೀಮ್:

ಕೆಲದಿನಗಳಿಂದ ಫೇಸ್ಬುಕ್ಕಿನಲ್ಲಿ ಪ್ರಧಾನಿ ಮೋದಿ ಅವರ ಸಹೋದರ ಬಂಧುಗಳು ಅತಿಸಾಮಾನ್ಯ ಜೀವನ ನಡೆಸುತ್ತಿರುವ ಫೋಟೊಗಳು ಕಾಣಸಿಗುತ್ತವೆ. ಇವು ಹೀಗೆಯೇ ಸಾಮಾಜಿಕ ತಾಣದಲ್ಲಿ ತೇಲಿಬಿಟ್ಟ ಫೋಟೋಗಳೋ ಅಥವಾ ನಿಜಕ್ಕೂ ಇವುಗಳ ಹಿಂದೆ ಕತೆ ಇದೆಯೋ?

ಇದು ವಿಶ್ವಾಸಾರ್ಹ ಸುದ್ದಿಯೇ. ಇಂಡಿಯಾ ಟುಡೆ ನಿಯತಕಾಲಿಕದಲ್ಲಿ ಉದಯ್ ಮಹೂರ್ಕರ್ ಅವರು ಬರೆದಿರುವ ‘ದ ಅದರ್ ಮೋದೀಸ್’ ನುಡಿಚಿತ್ರ ಎಲ್ಲ ವಿವರಗಳನ್ನು ತೆರೆದಿಟ್ಟಿದೆ.

ಸಾಮಾನ್ಯವಾಗಿ ರಾಜಕಾರಣಿಗಳು ಅಧಿಕಾರಕ್ಕೆ ಬಂದರೆ ಅವರ ಜತೆಗೆ ಕುಟುಂಬಸ್ಥರು ಸಹ ಪರೋಕ್ಷ ಅಧಿಕಾರ ಅಥವಾ ಅಧಿಕಾರದ ಪ್ರಭಾವವನ್ನು ಹೊಂದಿರುವುದನ್ನು ಸಾಕಷ್ಟು ನೋಡಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಈ ವ್ಯಾಪ್ತಿಗೆ ಒಳಪಡುವುದಿಲ್ಲ ಅಂತ ನಿಯತಕಾಲಿಕದ ವರದಿ ಸಾರುತ್ತದೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದರೂ ಇವರ ಸಹೋದರರು ಮಾತ್ರ ದೇಶದ ಇತರೆ ಸಾಮಾನ್ಯ ಪ್ರಜೆಗಳಲ್ಲಿ ಒಬ್ಬರಂತೆ ಬದುಕುತ್ತಿದ್ದಾರೆ. ಮೋದಿ ಪ್ರಧಾನಿ ಗದ್ದುಗೆ ಏರಿದರೂ ಕುಟುಂಬಸ್ಥರು ಮಾತ್ರ ಅದರ ಪ್ರಭಾವದಿಂದ ಸಿಗುವ ಯಾವುದೇ ಪರೋಕ್ಷ ಅಧಿಕಾರದ ಹತ್ತಿರಕ್ಕೂ ಹೋಗಿಲ್ಲ ಎಂಬುದು ಗಮನಾರ್ಹ.

ಮೋದಿ ಅವರ ವಂಶವೃಕ್ಷವನ್ನು ನೋಡುವುದಾದರೆ, ಮೋದಿ ಅವರ ತಾತ ಮೂಲ್ ಚಂದ್ ಮದನ್ ಲಾಲ್ ಮೋದಿ. ಇವರಿಗೆ ಆರು ಜನ ಮಕ್ಕಳು. ಆ ಪೈಕಿ ಮೊದಲ ಮಗ ದಾಮೋದರ್ ದಾಸ್ ಅವರಿಗೆ 6 ಜನ ಮಕ್ಕಳು ಆ ಪೈಕಿ ಮೂರನೇಯವರು ನರೇಂದ್ರ ಮೋದಿ. ಮೋದಿ ಅವರಿಗೆ ಸೋಮ್ ಭಾಯ್, ಅಮೃತ್ ಭಾಯ್, ಪ್ರಹಲ್ಲಾದ್ ಭಾಯ್, ವಾಸಂತಿಬೆನ್ ಮತ್ತು ಪಂಕಜ್ ಭಾಯ್ ಎಂಬ ಸಹೋದರರಿದ್ದಾರೆ.

ಸೋಮ್ ಭಾಯ್ ಅವರು ವಾದ್ ನಗರ್ ನಲ್ಲಿ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, 2015ರ ಸಮಾರಂಭವೊಂದರಲ್ಲಿ ಇವರು ನರೇಂದ್ರ ಮೋದಿ ಅವರ ದೊಡ್ಡಣ್ಣ ಎಂದ ಪರಿಚಯಿಸಿದಾಗ ಅಲ್ಲಿದ್ದವರಿಗೆಲ್ಲಾ ಅಚ್ಚರಿ ಎದುರಾಗಿತ್ತು. ಆಗ ಸೋಮ್ ಭಾಯ್ ಹೇಳಿದ ಮಾತು ಹೀಗಿತ್ತು… ‘ನನ್ನ ಹಾಗೂ ಪ್ರಧಾನಿ ಮೋದಿ ನಡುವೆ ಒಂದು ಪರದೆ ಇದೆ, ಅದನ್ನು ನಾನು ಮಾತ್ರ ನೋಡಬಲ್ಲೆ. ನಿಮಗೆ ಕಾಣಿಸುವುದಿಲ್ಲ. ನಾನು ನರೇಂದ್ರ ಮೋದಿಯ ಸಹೋದರನೆ ಹೊರತು, ಪ್ರಧಾನ ಮಂತ್ರಿ ಸಹೋದರನಲ್ಲ. ಪ್ರಧಾನಿ ಮೋದಿ ಪಾಲಿಗೆ ನಾನು ದೇಶದ 125 ಕೋಟಿ ಸೋದರ ಸೋದರಿಯರಲ್ಲಿ ನಾನು ಒಬ್ಬ.’

ಇನ್ನು ಅವರ ಮತ್ತೊಬ್ಬ ಅಣ್ಣ ಅಮೃತ್ ಭಾಯ್ ಖಾಸಗಿ ಕಂಪನಿಯಲ್ಲಿ ಫಿಟ್ಟರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದಿದ್ದಾರೆ. ಮಧ್ಯಮ ವರ್ಗದ ಕುಟುಂಬದವರಾಗಿ ತಮ್ಮ ನಿವೃತ್ತಿ ಜೀವನ ಅನುಭವಿಸುತ್ತಿದ್ದಾರೆ.

ಮೋದಿ ಅವರ ತಮ್ಮ ಪ್ರಹಲ್ಲಾದ್ ಮೋದಿ ಗುಜರಾತಿನ ನ್ಯಾಯ ಬೆಲೆ ಅಂಗಡಿಯ ಮಾಲೀಕರಾಗಿದ್ದಾರೆ. ಅಲ್ಲದೆ ಗುಜರಾತಿನ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇದೇ ಪ್ರಹಲ್ಲಾದ್ ಅವರು ಪಿಡಿಎಶ್ ವ್ಯವಸ್ಥೆ ಜಾರಿಗೊಳಿಸುವ ಸಂದರ್ಭದಲ್ಲಿ ಪಾರದರ್ಶಕತೆ ಇರಬೇಕು ಎಂದು ನರೇಂದ್ರ ಮೋದಿ ಅವರಿಗೆ ಬಹಿರಂಗವಾಗಿ ಆಗ್ರಹಿಸಿ ಟೀಕೆ ಮಾಡಿದ್ದರು.

ಇನ್ನು ಮೋದಿ ಅವರ ಸೋದರ ಸಂಬಂಧಿಗಳ ಪೈಕಿ ಅವರ ಚಿಕ್ಕಪ್ಪ ನರಸಿಂಹದಾಸ್ ಅವರ ಮಗ ಅಶೋಕ್ ಭಾಯ್ ಗಾಳಿಪಟ, ಪಟಾಕಿಗಳನ್ನು ತಳ್ಳುವ ಗಾಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮತ್ತೊಬ್ಬ ಸೋದರ ಸಂಬಂಧಿ ಭರತ್ ಭಾಯ್ 55ನೇ ವಯಸ್ಸಿನಲ್ಲೂ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂದ್ರಕಾಂತ್ ಭಾಯ್ ಎಂಬುವವರು ಗೋಶಾಲೆ ಒಂದರಲ್ಲೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ವಿಂದ್ ಭಾಯ್ ಎಂಬುವವರು ಹಳೇ ವಸ್ತು ಮಾರಾಟಗಾರರಾಗಿದ್ದು, ಭೋಗಿಭಾಯ್ ಎಂಬುವವರು ಸಣ್ಣ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನು ನರೇಂದ್ರ ಮೋದಿಯವರ ಚಿಕ್ಕಪ್ಪನವರಾದ ಕಾಂತಿಲಾಲ್ ಹಾಗೂ ಜಯಂತಿಲಾಲ್ ನಿವೃತ್ತ ಶಿಕ್ಷಕಿಯರಾಗಿದ್ದಾರೆ.

ಮೋದಿ ಅವರ ಅಣ್ಣ ಸೋಮ್ ಭಾಯ್ ಅವರು ಕಳೆದ ಎರಡೂವರೆ ವರ್ಷದಿಂದ ತಮ್ಮ ಕಿರಿಯ ಸಹೋದರ ನರೇಂದ್ರ ಮೋದಿಯನ್ನು ಭೇಟಿ ಮಾಡಿಯೇ ಇಲ್ಲ. ಆಗಾಗ್ಗೆ ದೂರವಾಣಿ ಮೂಲಕ ಮಾತನಾಡಿರುವುದು ಬಿಟ್ಟರೆ, ಪರಸ್ಪರ ಭೇಟಿ ಸಾಧ್ಯವೇ ಆಗಿಲ್ಲ.

ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಧಾನಮಂತ್ರಿ ಅವರ ಅಧಿಕಾರ ವ್ಯಾಪ್ತಿಯಿಂದ ತಮ್ಮ ಕುಟುಂಬ ಹಾಗೂ ಸಂಬಂಧಿಕರನ್ನು ದೂರವಿಟ್ಟಿರೋದು ಸ್ಪಷ್ಟವಾಗುತ್ತದೆ. ಒಬ್ಬ ನಾಯಕ ಅಧಿಕಾರ ಪಡೆದಾಗ ಕುಟುಂಬಸ್ಥರು ಮಾತ್ರವಲ್ಲದೇ ಸೋದರ ಸಂಬಂಧಿಗಳು ಅಧಿಕಾರದ ಫಲವನ್ನು ಪರೋಕ್ಷವಾಗಿ ಬಳಸಿಕೊಳ್ಳುತ್ತಿರುವ ಸ್ಥಿತಿ ಸಹಜವಾಗಿರುಸ ಪರಿಸ್ಥಿತಿಯಲ್ಲಿ ಮೋದಿ ಅವರ ಕುಟುಂಬಸ್ಥರು ಈ ಲಾಭವನ್ನು ಪಡೆಯದೇ ಇರುವುದು ವಿಶೇಷವಾಗಿ ಕಾಣುತ್ತದೆ.

Leave a Reply