ಪ್ರತಿಪಕ್ಷಗಳು ಕೋರಿದಂತೆ ಕೇಂದ್ರ ಬಜೆಟ್ ದಿನ ನಿಗದಿಯನ್ನು ಬದಲಿಸುವ ಅವಕಾಶ ಚುನಾವಣಾ ಆಯೋಗದ ಮುಂದಿದೆಯೇ?

 

ಡಿಜಿಟಲ್ ಕನ್ನಡ ಟೀಮ್:

ಪ್ರತಿಪಕ್ಷಗಳೆಲ್ಲ ಒಂದುಗೂಡಿ ಗುರುವಾರ ಕೇಂದ್ರ ಚುನಾವಣಾ ಆಯೋಗದ ಬಳಿ ಸಾರಿ, ಬಜೆಟ್ ಅನ್ನು ಮುಂದೂಡುವಂತೆ ಮನವಿ ಸಲ್ಲಿಸಿವೆ.

ಕಾರಣವಿಷ್ಟೆ. ನಿಗದಿಯಂತೆ ಫೆಬ್ರವರಿ 1ರಂದು ಕೇಂದ್ರದ ಆಯವ್ಯಯ ಮಂಡನೆ ಆಗುತ್ತದೆ. ಫೆಬ್ರವರಿ 5ರಿಂದಲೇ ಐದು ರಾಜ್ಯಗಳಲ್ಲಿ ವಿಧಾನಸಭೆ ಮತದಾನ ಶುರುವಾಗುತ್ತದೆ. ಹೀಗಿರುವಾಗ ಕೇಂದ್ರದ ಬಿಜೆಪಿ ಸರ್ಕಾರವು ಆಯವ್ಯಯದಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸಿ ಚುನಾವಣೆಗೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಬಜೆಟ್ ಅನ್ನು ಮುಂದೂಡಬೇಕು ಎಂಬುದು ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಚುನಾವಣಾ ಆಯೋಗವನ್ನು ಸಂದರ್ಶಿಸಿದ ಪ್ರತಿಪಕ್ಷ ನೇತಾರರ ಅಹವಾಲು.

ಇದಕ್ಕೆ ಕಾಂಗ್ರೆಸ್ಸಿನ ಆನಂದ ಶರ್ಮ ಅವರು ಈ ಹಿಂದಿನ ಉದಾಹರಣೆಯನ್ನೂ ಕೊಟ್ಟಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ರಾಜ್ಯಗಳ ಚುನಾವಣೆ ಎದುರಾಗಿತ್ತು. ಆಗ ಫೆಬ್ರವರಿ ಕೊನೆಯಲ್ಲಿ ಮಂಡಿಸಬೇಕಾಗಿದ್ದ ಬಜೆಟ್ ಅನ್ನು ಮಾರ್ಚ್ ಮಧ್ಯಭಾಗಕ್ಕೆ ಮುಂದೂಡಲಾಗಿತ್ತು ಎಂದವರು ಉಲ್ಲೇಖಿಸಿದ್ದಾರೆ.

ಆದರೆ ಬಿಜೆಪಿ ಮಾತ್ರ ಚುನಾವಣೆ ಮುಂದೂಡಿಕೆ ಅಗತ್ಯವಿಲ್ಲ ಎಂದಿದೆ. ವಿಧಾನಸಭೆ ಚುನಾವಣೆಗಳು ಬರುತ್ತಲೇ ಇರುತ್ತವೆ. ಅದಕ್ಕೋಸ್ಕರ ಬಜೆಟ್ ಪ್ರಕ್ರಿಯೆ ತಡೆಯಲಾಗದು ಎಂಬ ಅಭಿಮತ ಅದರದ್ದು. ಅಲ್ಲದೇ 2014ರಲ್ಲಿ ಲೋಕಸಭೆ ಚುನಾವಣೆಗೆ ಮುಂಚೆ ಮಧ್ಯಾಂತರ ಬಜೆಟ್ ಮಂಡಿಸಿರಲಿಲ್ಲವೇ ಎಂಬ ಪ್ರಶ್ನೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರದ್ದು.

ರಾಜಕೀಯ ಪಕ್ಷಗಳ ನಿಲುವು ಏನೇ ಇದ್ದಿರಲಿ. ಪ್ರಾಯೋಗಿಕವಾಗಿ ಚುನಾವಣಾ ಆಯೋಗದ ಮುಂದಿರುವ ದಾರಿ ಯಾವುದು ಎಂಬುದಕ್ಕೆ ಈ ಕೆಳಗಿನ ಅಂಶಗಳನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ.

  • ಈ ಬಾರಿ ರೈಲ್ವೆ ಬಜೆಟ್ ಅನ್ನು ಮುಖ್ಯ ಬಜೆಟ್ಟಿನಲ್ಲಿ ವಿಲೀನಗೊಳಿಸಿ, ಫೆಬ್ರವರಿ ಅಂತ್ಯದ ಬದಲು ಜನವರಿ ಅಂತ್ಯದಲ್ಲೇ  ಬಜೆಟ್ ಅಧಿವೇಶನ ನಡೆಸುವ ಕ್ರಮವನ್ನು ಬಹಳ ಮೊದಲೇ ಘೋಷಿಸಲಾಗಿತ್ತು. ಚುನಾವಣಾ ಆಯೋಗದ ದಿನಾಂಕ ಘೋಷಣೆಗಳಾಗಿದ್ದು ತೀರ ಮೊನ್ನೆ. ಹೀಗಾಗಿ ಬಜೆಟ್ ಅನ್ನು ಮುಂದೂಡುವಂತೆ ಚುನಾವಣಾ ಆಯೋಗ ಮಧ್ಯಪ್ರವೇಶಿಸುವ ಸಾಧ್ಯತೆ ವಿರಳ.
  • ಚುನಾವಣಾ ಆಯೋಗಕ್ಕೆ ಹೀಗೊಂದು ಅಧಿಕಾರ ಇದೆಯೇ ಎಂಬುದೇ ಪ್ರಶ್ನಾರ್ಥಕ. ಏಕೆಂದರೆ 2012ರಲ್ಲಿ ಯುಪಿಎ ಸರ್ಕಾರ ಬಜೆಟ್ ಮುಂದೆ ಹಾಕಿದ್ದು ಆಯೋಗದ ತಾಕೀತಿನಿಂದಲ್ಲ, ಬದಲಿಗೆ ಸ್ವಯಂಪ್ರೇರಿತವಾಗಿ. ಬಜೆಟ್ ಅವಧಿಯನ್ನು ಬದಲಿಸುವಂತೆ ಚುನಾವಣಾ ಆಯೋಗ ಈ ಹಿಂದೆ ನಿರ್ದೇಶಿಸಿರುವ ಪರಂಪರೆಯೇ ಇಲ್ಲ.
  • ಹೀಗಂದರೆ ಹೇಗೆ? ಚುನಾವಣೆಗಳನ್ನು ನ್ಯಾಯುತವಾಗಿ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗಕ್ಕೆ ಇದೆಯಲ್ಲ ಎಂಬ ಪ್ರಶ್ನೆ ಕಾಂಗ್ರೆಸ್ಸಿನದ್ದು. ‘ಚುನಾವಣಾ ರಾಜ್ಯಗಳನ್ನೇ ಗುರಿಯಾಗಿಸಿಕೊಂಡು ಆಯವ್ಯಯದಲ್ಲಿ ಯೋಜನೆಗಳನ್ನು ಘೋಷಿಸುವಂತಿಲ್ಲ. ಈ ರಾಜ್ಯಗಳಿಗೆ ಸಂಬಂಧಿಸಿದಂತೆ ಹೊಸ ಯೋಜನೆಗಳ ಘೋಷಮೆ ಮತ್ತು ಹಣ ಹಂಚಿಕೆ ಇದ್ದಲ್ಲಿ ಅದನ್ನು ನಂತರದಲ್ಲಿ ಘೋಷಿಸಬೇಕು’ ಎಂಬುದು ಚುನಾವಣಾ ಆಯೋಗದ ಮೂಲಗಳು ರಾಷ್ಟ್ರೀಯ ಮಾಧ್ಯಮಗಳಿಗೆ ಹೇಳುತ್ತಿರುವ ಮಾತು. ಅರ್ಥಾತ್, ಬಜೆಟ್ ದಿನವನ್ನು ಬದಲಿಸುವ ಚರ್ಚೆಗೆ ಹೋಗದೇ, ಇಂಥ ನಿಯಮಗಳ ಎಚ್ಚರಿಕೆ ನೀಡಿ ತನ್ನ ಹೊಣೆಗಾರಿಕೆ ಪೂರೈಸಿಕೊಳ್ಳುವ ಮಾರ್ಗವನ್ನು ಚುನಾವಣಾ ಆಯೋಗ ಹಿಡಿಯುವ ಸಾಧ್ಯತೆಯೇ ಹೆಚ್ಚು.

Leave a Reply