ಭಾರತದ ಡಿಜಿಟಲ್ ಸಾಮರ್ಥ್ಯ, ಗೂಗಲ್ ನಾಯಕತ್ವ ಎಲ್ಲದರ ಬಗ್ಗೆ ಸುಂದರ್ ಪಿಚ್ಚೈ ಹೇಳಿದ್ದೇನು?

 

ಖರಗಪುರ ರೈಲ್ವೆ ನಿಲ್ದಾಣದಲ್ಲಿ ಗೂಗಲ್ ಸಹಯೋಗದ ಉಚಿತ ವೈಫೈ ಪರೀಕ್ಷಿಸುತ್ತಿರುವ ಸುಂದರ್ ಪಿಚ್ಚೈ

ಡಿಜಿಟಲ್ ಕನ್ನಡ ಟೀಮ್:

ಗೂಗಲ್ ಸಿಇಒ ಸುಂದರ್ ಪಿಚ್ಚೈ ಭಾರತ ಪ್ರವಾಸದಲ್ಲಿದ್ದಾರೆ. ಬುಧವಾರ ಡಿಜಿ ಅನ್ ಲಾಕ್ಡ್ ಸೇವೆ ಉದ್ಘಾಟಿಸಿದ್ದ ಅವರು, ಗುರುವಾರ ತಾವು ಕಲಿತ ಖರಗಪುರ ಐಐಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅನೇಕ ರಾಷ್ಟ್ರೀಯ ಮಾಧ್ಯಮಗಳಿಗೂ ಅವರು ಸಂದರ್ಶನಗಳನ್ನು ನೀಡಿದ್ದಾರೆ. ಅವೆಲ್ಲದರ ಮುಖ್ಯಾಂಶಗಳನ್ನು ಇಲ್ಲಿ ಹೆಕ್ಕಿಡುವುದಾದರೆ…

  • ಕೇಂದ್ರ ಸರ್ಕಾರದ ಯಪಿಐ (ಯುನಿಫೈಡ್ ಪೇಮಂಟ್ ಇಂಟರ್ ಫೇಸ್) ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ ಪಿಚ್ಚೈ. ‘ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ ಸವಾಲುಗಳಿದ್ದಿರಬಹುದು. ಆ ಬಗ್ಗೆ ಪರಿಣತ ನಾನಲ್ಲದಿದ್ದರೂ ಗೂಗಲ್ ದೃಷ್ಟಿಯಲ್ಲಿ ನೋಡುವುದಾದರೆ ಇದೊಂದು ಅತಿ ಧೈರ್ಯಶಾಲಿ ಕ್ರಮ. ಈ ನಿಟ್ಟಿನಲ್ಲಿ ಯಾವುದೇ ಸಹಯೋಗಕ್ಕೆ ಗೂಗಲ್ ಸಿದ್ಧವಿದೆ. ಬೇರೆ ದೇಶಗಳಲ್ಲಿ ಕಂಡುಬರದ ವಿಶಿಷ್ಟ ಯೋಜನೆ ಇದು.’
  • ಭಾರತಕ್ಕೆ ದೊಡ್ಡ ನೆಗೆತವೊಂದರ ಅವಕಾಶವಿದೆ. ಪಾಶ್ಚಾತ್ಯ ರಾಷ್ಟ್ರಗಳು ಲ್ಯಾಂಡ್ ಲೈನ್ ಮಾದರಿಯಿಂದ ಈಗಿನ ಯುಗಕ್ಕೆ ಬದಲಾವಣೆ ಹೊಂದಿದವು. ಆದರೆ ಭಾರತ ಅದನ್ನು ಸೆಲ್ಫೋನಿನಲ್ಲೇ ಮಾಡುತ್ತಿದೆ.
  • ಭಾರತದಲ್ಲಿ ಗೂಗಲ್ ಕಂಡುಕೊಳ್ಳುವ ಸಮಸ್ಯೆ ಪರಿಹಾರದ ಮಾರ್ಗಗಳು ವಿಶ್ವಮಟ್ಟದಲ್ಲಿ ಸಹಕರಿಸಲಿವೆ. ನಾನಾ ಭಾಷೆ, ವಿವಿದ ನುಡಿಗಟ್ಟುಗಳಲ್ಲಿ ಹರಡಿಕೊಂಡಿರುವ ಭಾರತದ ನಿಜವಾದ ಡಿಜಿಟಲ್ ಸಾಮರ್ಥ್ಯ ಅಭಿವ್ಯಕ್ತಿಯ ಸಾಧ್ಯತಾ ಶಕ್ತಿ ಬಹಳ ದೊಡ್ಡದು. ಈ ನಿಟ್ಟಿನಲ್ಲಿ ನಮ್ಮ ಗೂಗಲ್ ತಂಡ ಗ್ರಾಮ ಭಾರತಗಳಲ್ಲಿ ಅಧ್ಯಯನ ನಿರತವಾಗಿದೆ. ಗ್ರಾಮೀಣ ಭಾರತ ಅಂತರ್ಜಾಲವನ್ನು ಬಳಕೆಯಲ್ಲಿ ಯಾವ ವರ್ತನೆ ತೋರುತ್ತಿದೆ, ಡಾಟಾ ಸಿಗ್ನಲ್ ಅಸ್ತವ್ಯಸ್ತಗೊಳ್ಳುವ ಸ್ಥಳಗಳಲ್ಲಿ ಆಫ್ಲೈನ್ ಮಾರ್ಗವಾಗಿ ಹೇಗೆಲ್ಲ ತಲುಪಬಹುದು ಎಂಬೆಲ್ಲ ಅಧ್ಯಯನಗಳು ಆಗುತ್ತಿವೆ.
  • ವಿಶ್ವಮಟ್ಟದಲ್ಲಿ ಗೂಗಲ್ ಸಂಶೋಧನಾ ತಂಡ ತೊಡಗಿಸಿಕೊಂಡಿರುವುದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಪ್ರತಿಕ್ರಿಯೆ ವ್ಯವಸ್ಥೆ) ಹಾಗೂ ಯಂತ್ರ ಕಲಿಕೆಯಲ್ಲಿ. ಇವು ಭವಿಷ್ಯದ ಮುಖ್ಯ ಸಂಗತಿಗಳೆಂದು ನಂಬುತ್ತೇವೆ.
  • ಗೂಗಲ್ ಎಂಬ ದೈತ್ಯ ಸಂಸ್ಥೆ ಮುನ್ನಡೆಸುವಾಗ ನಿಮಗೆ ನೆರವಾಗುತ್ತಿರುವ ನಾಯಕತ್ವ ಗುಣಗಳ್ಯಾವವು ಎಂಬ ಪ್ರಶ್ನೆಗೆ ಸುಂದರ್ ಪಿಚ್ಚೈ ಉತ್ತರಿಸಿದ ರೀತಿ ವಿಶಿಷ್ಟವಾಗಿತ್ತು. ’60 ಸಾವಿರ ಜನ ಕೆಲಸ ಮಾಡು ಕಂಪನಿ ನಮ್ಮದು. ಇಲ್ಲಿ ನಾಯಕತ್ವ ಎಂದರೆ ವೈಯಕ್ತಿಕವಾಗಿ ಯಶಸ್ಸು ಸಾಧಿಸುವುದು ಎಂದಲ್ಲ. ಕಂಪನಿಯ ಪ್ರತಿಭಾವಂತರು ಅವರ ಕೆಲಸದಲ್ಲಿ ಯಶಸ್ಸು ಸಾಧಿಸುವುದಕ್ಕೆ ಕೆಲವು ತಡೆಗಳು ಎದುರಾಗಿರುತ್ತವಲ್ಲ… ಅವನ್ನು ನಿವಾರಿಸಿ ಅವರ ಯಶಸ್ಸನ್ನು ಖಾತ್ರಿಗೊಳಿಸುವ ಹೊಣೆಗಾರಿಕೆ ನನ್ನದು. ಕಂಪನಿಯ ಸಮಾಲೋಚನೆ ಸಭೆಗಳಲ್ಲಿ ಕುಳಿತಾಗ ನನ್ನೆದುರಿಗಿರುವವರು ನನಗಿಂತ ಎಷ್ಟೆಲ್ಲ ಪ್ರತಿಭಾವಂತರಿದ್ದಾರೆ ಎಂಬ ಬೆರಗು ಕಾಡುತ್ತಲೇ ಇರುತ್ತದೆ.’

Leave a Reply