ದೀಪಿಕಾ ಪಡುಕೋಣೆ ಹಾಲಿವುಡ್ ಪ್ರವೇಶದ ಹಿಂದಿದೆಯೇ ಭಾರತೀಯ ಮಾರುಕಟ್ಟೆ ನುಂಗಿ ನೀರು ಕುಡಿವ ತಂತ್ರ..?!

author-ssreedhra-murthyಬಾಲಿವುಡ್‍ನ ನಂಬರ್ ಒನ್ ನಟಿ ಎನ್ನಿಸಿಕೊಂಡಿರುವ ದೀಪಿಕಾ ಪಡಕೋಣೆ xxx The Return of xander cage ಚಿತ್ರದ ಮೂಲಕ ಬಾಲಿವುಡ್ ಪ್ರವೇಶವನ್ನು ಪಡೆದಿರುವುದು ಈಗ ಪ್ರಚಲಿತದಲ್ಲಿರುವ ಸುದ್ದಿ. ಭಾರತವನ್ನು ಪ್ರತಿನಿಧಿಸುತ್ತಿರುವ ಹೆಮ್ಮೆ ನನ್ನದು ಎಂದೇನೋ ಅವರು ಹೇಳಿಕೊಂಡಿದ್ದಾರೆ. ಈ ಹೆಮ್ಮೆಗೆ ಪೂರಕ ಎನ್ನುವಂತೆ ಜಗತ್ತಿನ ಎಲ್ಲೆಡೆಗಿಂತ ಮೊದಲು  ಜನವರಿ 14ರಂದು ಭಾರತದಲ್ಲಿಯೇ ಮೊದಲು ಬಿಡುಗಡೆಯಾಗಲಿದೆ.

ಕನ್ನಡದ ‘ಐಶ್ವರ್ಯ’ ಚಿತ್ರದಿಂದ ಆರಂಭಿಸಿ ಹಾಲಿವುಡ್ ತಲುಪಿರುವ ಅವರ ಚಿತ್ರಯಾನವೇನೋ ವಿಶೇಷವಾದದ್ದೇ. ಆದರೆ ಈ ಚಿತ್ರದ ಕುರಿತು ನಾವೆಷ್ಟು ಹೆಮ್ಮೆ ಪಡಬಹುದು ಎಂದು ಯೋಚಿಸಿದಾಗ ಹಲವಾರು ಸೂಕ್ಷ್ಮಗಳು ಗಮನಕ್ಕೆ ಬರುತ್ತವೆ. ಮೊದಲನೆಯದಾಗಿ ಹಾಲಿವುಡ್ ಯಾವ ಕಲಾವಿದರಿಗೂ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಅಲ್ಲವೇ ಅಲ್ಲ. ಅಲ್ಲಿ ಚಲನಚಿತ್ರವನ್ನು ಗಂಭೀರ ಕಲಾ ಮಾಧ್ಯಮ ಎಂದು ಪರಿಗಣಿಸಿದ್ದಕ್ಕೆ ಉದಾಹರಣೆಗಳು ಇಲ್ಲವೇ ಇಲ್ಲ.  ಅಲ್ಲಿರುವುದು ತಾಂತ್ರಿಕ ವೈಭವ ಮತ್ತು ಒಂದಿಷ್ಟು ಸಾಹಸ ಮತ್ತು ಹಸಿಬಿಸಿ ದೃಶ್ಯಗಳು. ದೀಪಿಕಾ ಸಾಕಷ್ಟು ಹಸಿಬಿಸಿಯಾಗಿಯೇ ಕಾಣಿಸಿಕೊಂಡಿರುವುದನ್ನು ಟೀಸರ್‍ಗಳು ಖಚಿತ ಪಡಿಸಿವೆ. ಎರಡನೆಯದಾಗಿ ದೀಪಿಕಾ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಗಿರುವುದು ಅವರ ಪ್ರತಿಭೆ ಅಲ್ಲವೇ ಅಲ್ಲ. ಅವರು  ಬಾಲಿವುಡ್‍ನ ನಂಬರ್ ಒನ್ ನಟಿ ಎನ್ನುವುದೇ ಆಯ್ಕೆಗೆ ಇರುವ ಪ್ರಮುಖ ಕಾರಣ. ಇದರ ಉದ್ದೇಶ ಕೂಡ ಸರಳ. ದೀಪಿಕಾ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಲು ಹಾಲಿವುಡ್ ಕಾತುರವಾಗಿದೆ.

ಭಾರತ ಪ್ರವೇಶಿಸಲು ಹಾಲಿವುಡ್‍ ಏಕೆ ಅಷ್ಟು ಕಾತುರವಾಗಿದೆ ಎನ್ನುವದಕ್ಕೆ ಸುದೀರ್ಘ ಇತಿಹಾಸವೇ ಇದೆ. ಹಾಲಿವುಡ್ ಇವತ್ತು ನಿಸ್ಸಂಶಯವಾಗಿ ಚಿತ್ರಜಗತ್ತಿನ ಅನಭಿಷಕ್ತ ದೊರೆ ಎನ್ನಿಸಿಕೊಂಡಿದೆ.  ಒಂದು ಕಾಲದಲ್ಲಿ ಗಮನಾರ್ಹ ಚಿತ್ರಗಳನ್ನು ನಿರ್ಮಿಸುತ್ತಿದ್ದ ಯೂರೋಪಿಯನ್, ಲ್ಯಾಟಿನ್ ಅಮೇರಿಕನ್, ಆಸ್ಟ್ರೇಲಿಯನ್ ಹೀಗೆ ಜಗತ್ತಿನ ಬಹುತೇಕ ಎಲ್ಲಾ ಚಿತ್ರ ಮಾರುಕಟ್ಟೆಯನ್ನು ಅದು ಆಕ್ರಮಿಸಿದೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಭಾರತವನ್ನು ಆಕ್ರಮಿಸಲು ಅದಕ್ಕೆ ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಭಾರತೀಯ ಚಿತ್ರಗಳಲ್ಲಿನ ಹಾಡು-ನೃತ್ಯ ಮತ್ತು ವಿಭಿನ್ನ ಶೈಲಿಯ ರೋಮ್ಯಾಂಟಿಕ್ ಕಥೆಗಳು. ಈ ಗ್ರಾಮರ್‍ ಅರಿಯಲು ಎಷ್ಟೇ ಪ್ರಯತ್ನಿಸಿದರೂ ಹಾಲಿವುಡ್‍ಗೆ ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ವರ್ಷಕ್ಕೆ ಸರಾಸರಿ 1300 ಚಿತ್ರಗಳು ನಿರ್ಮಾಣವಾಗುತ್ತವೆ. ಹಾಲಿವುಡ್‍ನಲ್ಲಿ ಸರಾಸರಿ 450 ಚಿತ್ರಗಳು ನಿರ್ಮಾಣವಾಗುತ್ತವೆ. ಆದರೆ ಹಾಲಿವುಡ್‍ನ 2016ರ ಗಳಿಕೆ 11.2 ಬಿಲಿಯನ್ ಡಾಲರ್‍ಗಳು,  ಇದಕ್ಕೆ ಹೋಲಿಸಿದರೆ ಬಾಲಿವುಡ್‍ನ ಗಳಿಕೆ ಕೇವಲ 2.4 ಬಿಲಿಯನ್ ಡಾಲರ್‍ಗಳು. ಹೀಗಿದ್ದರೂ ಭಾರತವನ್ನು ಪ್ರವೇಶಿಸಲು ಹಾಲಿವುಡ್‍ ಏಕೆ ಅಪೇಕ್ಷಿಸುತ್ತದೆ ಎಂದರೆ ಕಳೆದ ಕೆಲವು ವರ್ಷಗಳಿಂದಲೂ ಹಾಲಿವುಡ್‍ನ ಗಳಿಕೆ ಕುಸಿಯುತ್ತಲೇ ಇದೆ. ಕಳೆದ ವರ್ಷವೇ ಅದು ಶೇ 9ರಷ್ಟು ಕುಸಿತ ಕಂಡಿದೆ. ಅದೇ ಸಮಯದಲ್ಲಿ ಬಾಲಿವುಡ್ ಶೇ 11ರ ಏರಿಕೆಯನ್ನು ಕಂಡುಕೊಂಡಿದೆ. 2010ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಬಾಲಿವುಡ್‍ನ ಗಳಿಕೆ ದ್ವಿಗಣವಾಗಿದೆ. ವರ್ಷಕ್ಕೆ 4 ಬಿಲಿಯನ್ ಟಿಕೆಟ್‍ ಮಾರಾಟವಾಗುವ ಬಾಲಿವುಡ್‍ನ ಬೃಹತ್ ಮಾರುಕಟ್ಟೆಯ ಮೇಲೆ ಹಾಲಿವುಡ್‍ನ ಕಣ್ಣಿರುವುದು ಈ ಕಾರಣಕ್ಕೇ!

deepika-4

ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಹಾಲಿವುಡ್‍ ಭಾರತ ಪ್ರವೇಶಿಸದಂತೆ ಕಠಿಣ ನಿಯಮಗಳನ್ನು ರೂಪಿಸಿದ್ದರು. ಆದರೆ ಕ್ರಮೇಣ ಅದು ಕರಗುತ್ತಾ ಬಂದು 2002ರಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಂಪೂರ್ಣ ವಿದೇಶಿ ಹೂಡಿಕೆಗೆ ಅನುಮತಿ ನೀಡುವ ಮೂಲಕ ಭಾರತ ಸರ್ಕಾರವೇ ರತ್ನಗಂಬಳಿ ಹಾಸಿ ಹಾಲಿವುಡ್‍ನನ್ನು ಸ್ವಾಗತಿಸಿತು. ಆದರೆ ಯಾವ ಹಾಲಿವುಡ್‍ ಚಿತ್ರಗಳೂ ಭಾರತದಲ್ಲಿ ಗಮನಾರ್ಹ ಗೆಲುವನ್ನು ಕಾಣಲಿಲ್ಲ. ಟೈಟಾನಿಕ್ ಗಳಿಸಿದ ಐದು ನೂರು ಮಿಲಿಯನ್‍ ಇದುವರೆಗೂ ಹಾಲಿವುಡ್‍ ಚಿತ್ರವೊಂದರ ಅತಿ ದೊಡ್ಡ ಗಳಿಕೆ. ಹಾಲಿವುಡ್‍ನ ಪ್ರಮುಖ ಆರು ಸ್ಟುಡಿಯೋಗಳಲ್ಲಿ ಐದು ಬಾಲಿವುಡ್ ಚಿತ್ರಗಳನ್ನು ನಿರ್ಮಿಸಲೂ ಪ್ರಯತ್ನಿಸಿದವು. ವಿದೇಶಿ ಹೂಡಿಕೆಗೆ ಅನುಮತಿ ಸಿಕ್ಕ ಐದು ವರ್ಷಗಳ ನಂತರ ಕೊಲಂಬಿಯಾ ತ್ರೀಸ್ಟಾರ್ 2007ರಲ್ಲಿ ‘ಸಾವರಿಯಾ’ಚಿತ್ರವನ್ನು ನಿರ್ಮಿಸಿತು. ಟ್ವಂಟಿಯತ್ ಸೆಂಚುರಿ ಫಾಕ್ಸ್‍ ‘ಏಕ್ ದಿವಾನತಾ’ ನಿರ್ಮಿಸಿದ್ದು ಮಾತ್ರವಲ್ಲದೆ ಮುಂಬೈನಲ್ಲಿ ಸ್ಟುಡಿಯೋ ಕೂಡ ಆರಂಭಿಸಿತ್ತು. ಆದರೆ ಕಳೆದ ವರ್ಷ ಸೋಲನ್ನು ಒಪ್ಪಿಕೊಂಡು ಅದನ್ನು ಮುಚ್ಚಲಾಯಿತು. ಫಾಕ್ಸ್‍ ಸ್ಟಾರ್ ಸ್ಟುಡಿಯೋ ‘ದಮ್ ಮರೆ ದಮ್’ ವಾರ್ನರ್ ಬ್ರದರ್ಸ್ ‘ಚಾಂದಿನಿ ಚೌಕ್‍ ಟು ಚೀನಾ’ ಮತ್ತು ‘ಸೆಂಚುರಿ ಫಾಕ್ಸ್’ ‘ಮೈ ನೇಮ್ ಇಸ್ ಖಾನ್’ ನಿರ್ಮಿಸಿದ್ದವು. ಆದರೆ ಈ ಎಲ್ಲಾ ಚಿತ್ರಗಳೂ ಸೋಲನ್ನು ಕಂಡು ಹಾಲಿವುಡ್‍ನ ಭಾರತದ ಪ್ರವೇಶ ಕಠಿಣವಾಯಿತು. ‘ಅವತಾರ್‍’ ಚಿತ್ರದ ಮೂಲಕ ಡಬ್‍ ಮಾಡುವ ಪ್ರಯೋಗ ಕೊಂಚ ಯಶಸ್ಸು ಕಂಡಿದ್ದು ಮಾತ್ರ ದೊರೆತ ಆಶಾದಾಯಕ ಫಲಿತಾಂಶ. ಈಗಲೂ ಹಾಲಿವುಡ್‍ ಚಿತ್ರಗಳಿಗೆ ಹಣ ಹಿಂದಕ್ಕೆ ತಂದು ಕೊಡುತ್ತಿರುವುದು ಡಬ್ ಆದ ಚಿತ್ರಗಳೇ!

deepika-5

ಹೇಗಾದರೂ ಭಾರತೀಯ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲೇ ಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಹಾಲಿವುಡ್‍ಗೆ ಗೋಚರಿಸಿದ ಇನ್ನೊಂದು ಉಪಾಯ ಬಾಲಿವುಡ್ ಕಲಾವಿದರನ್ನು ಬಳಸಿಕೊಳ್ಳುವುದು. ‘ಲೈಫ್ ಆಫ್ ದಿ ಪೈ’ ಚಿತ್ರದಲ್ಲಿ ಬಾಲಿವುಡ್ ಕಲಾವಿದರನ್ನು ಬಳಸುವ ಪ್ರಯೋಗ ಮೊದಲಿಗೆ ನಡೆಯಿತು. ಸುರಾಜ್ ಶರ್ಮ, ಅದಿಲ್ ಹಾಸನ್, ಟಬು ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಬಾಲಿವುಡ್‍ನ ಟಾಪ್ ‍ಸ್ಟಾರ್‍ಗಳನ್ನು ಬಳಸಿ ಹಾಲಿವುಡ್ ಸೂತ್ರದ ಚಿತ್ರವನ್ನು ಮಾಡುವ ಪ್ರಯತ್ನಕ್ಕೆ ಇದುವರೆಗೂ ಯಶಸ್ಸು ಸಿಕ್ಕಿರಲಿಲ್ಲ. ಈಗ ಬಾಲಿವುಡ್ ನಂಬರ್ ಒನ್ ಕಲಾವಿದೆಯನ್ನು ಬಳಸಿಕೊಂಡು ತನ್ನ ಸೂತ್ರಗಳಿಗನುಗುಣವಾಗಿ ಚಿತ್ರ ನಿರ್ಮಿಸುವ ಪ್ರಯತ್ನ ನಡೆದಿದೆ. ಇದು ಯಶಸ್ವಿಯಾದರೆ ಹಾಲಿವುಡ್ ತನ್ನ ಎಂದಿನ ಮಾರುಕಟ್ಟೆಯ ಜೊತೆಗೆ ಭಾರತದ ಮಾರುಕಟ್ಟೆಯನ್ನು ಕೂಡ ಆಕ್ರಮಿಸಿಕೊಳ್ಳವ ಕನಸು ನನಸಾಗಲಿದೆ.  ಜಗತ್ತಿನ ಬಹುತೇಕ ಚಿತ್ರರಂಗಗಳನ್ನು ನುಂಗಿ ನೀರು ಕುಡಿದಿರುವ ಹಾಲಿವುಡ್‍ನ ಬಹುದಿನದ ಬಯಕೆ ಈ ಮೂಲಕ ಈಡೇರಲಿದೆ.  ಭಾರತದ ಕಲಾವಿದೆ ಅದರಲ್ಲೂ ಕನ್ನಡತಿ ಹಾಲಿವುಡ್‍ನ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವ ಭಾವನಾತ್ಮಕತೆಯಾಚೆಗೆ ಈ ವಿಷಯವನ್ನು ನೋಡ ಬೇಕಾದ ಅಗತ್ಯವಿರುವುದು ಈ ಕಾರಣಕ್ಕೆ.

Leave a Reply