ಸರಿದುಹೋದ ವಿಜ್ಞಾನ ಸಂಗತಿಗಳು-ಅನಾವಣರಗೊಂಡ ಅಸಾಧಾರಣ ಶೋಧಗಳು

author-ananthramuಭೂಮಿ ಹೊಸವರ್ಷಕ್ಕೆ ಉರುಳುವ ಮುನ್ನ ತನ್ನ ಕಕ್ಷೆಯಲ್ಲಿ 940 ಮಿಲಿಯನ್ ಕಿಲೋಮೀಟರ್ ಪಯಣಮಾಡಿದೆ-ಪ್ರತಿ ಸೆಕೆಂಡಿಗೆ 28 ಕಿಲೋಮೀಟರ್ ಲೆಕ್ಕದಲ್ಲಿ. ಈ ಅವಧಿಯಲ್ಲಿ ಭೂಮಿಯ ಮೇಲೆ ಲಕ್ಷಾಂತರ ಘಟನೆಗಳು ಸಂಭವಿಸಿವೆ. ವಿಜ್ಞಾನ ಕ್ಷೇತ್ರ ದಾಂಗುಡಿ ಇಡುತ್ತ ಸಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರತಿವರ್ಷವೂ ಅಭೂತಪೂರ್ವ ಶೋಧನೆಗಳಾಗುತ್ತವೆ. ಅವನ್ನೆಲ್ಲ ಸೆರೆಹಿಡಿಯುವುದು ಇಲ್ಲೇ ಕೂತು ಚಂದ್ರನಿಗೆ ಕೈಚಾಚಿದಂತೆ. 2016ರ ಅನೇಕ ವಿಜ್ಞಾನ ಸಂಗತಿಗಳನ್ನು `ಸೈನ್ಸ್ ಸ್ಕೋಪ್‍ನಲ್ಲಿ’ ನೀವು ಓದಿರುತ್ತೀರಿ. ಇನ್ನಷ್ಟು ಸುದ್ದಿಮಾಡಿದ ಕೆಲವು ವೈಜ್ಞಾನಿಕ ಸಾಧನೆಯ ಬಗ್ಗೆ ಪುಟ್ಟ ಪುಟ್ಟ ಟಿಪ್ಪಣಿಯನ್ನು ಇಲ್ಲಿ ಕೊಟ್ಟಿದೆ. ಪ್ರಕೃತಿಯನ್ನು ಮಾನವ ಅರ್ಥೈಸಿಕೊಳ್ಳಲು ಮಾಡುವ ಪ್ರಯತ್ನ ಭಾರಿ ಬೌದ್ಧಿಕ ಶ್ರಮ ಬೇಡುತ್ತದೆ. ವಿಜ್ಞಾನಿಗಳಿಗೆ ಸವಾಲನ್ನು ಸ್ವೀಕರಿಸುವುದೇ ಆನಂದ.

ಚಿಂಪಾಂಜಿಗೂ ಬೇಕಾಗಿದೆ ಸಮೀಪದೃಷ್ಟಿಯ ಕನ್ನಡಕ

ಬೊನೊಬೊ ಎಂಬುದು ಚಿಂಪಾಂಜಿಯ ಒಂದು ಬಗೆ. ಉದ್ದ ಕಾಲು, ಪಾಟಲ ತುಟಿ, ಕರಿಮುಖ, ಒರಟುಬಾಲ, ಬೈತಲೆ ತೆಗೆದಂತೆ ತಲೆಗೂದಲು-ಇವು ಸಾಮಾನ್ಯ ಚಿಂಪಾಂಜಿಗಿಂತ ಭಿನ್ನ ಎಂದು ತೋರಿಸಿಕೊಡುವ ಲಕ್ಷಣಗಳು. ಹೆಚ್ಚಿನಪಾಲು ಮಧ್ಯ ಆಫ್ರಿಕದ ಕಾಂಗೋ ಕಾಡಿನಲ್ಲಿ ವಾಸಿಸುತ್ತವೆ. ಇವು ಮನುಷ್ಯನ ಹತ್ತಿರ ಸಂಬಂಧಿ. ಅವುಗಳ ಆವಾಸ ನಾಶವಾಗುತ್ತಿದೆಯೆಂದು ವಿಶ್ವಸಂಸ್ಥೆ ಕೆಂಪುಪಟ್ಟಿಯಲ್ಲಿ ಇಟ್ಟಿದೆ. ಅಂದರೆ ಅಳಿವಿನ ಭೀತಿ ಎದುರಿಸುತ್ತಿರುವ ಪ್ರಾಣಿಗಳು. ವಿಶೇಷವೆಂದರೆ ಅವುಗಳಿಗೆ ದಯಾಪರತೆ, ಸಹಾನುಭೂತಿ, ಸಹಜೀವಿಗಳ ಬಗ್ಗೆ ಪ್ರತಿಕ್ರಿಯಿಸುವ ಸೂಕ್ಷ್ಮತೆ ಇದೆ. 1

ಇತ್ತೀಚಿನ ಶೋಧದಂತೆ ಚಿಂಪಾಂಜಿಗಳಿಗೆ ವಯಸ್ಸಾಗುತ್ತ ಬರುತ್ತಿದ್ದಂತೆ ಸಮೀಪದೃಷ್ಟಿ ಕಳೆದುಕೊಳ್ಳುತ್ತವೆ. ಅಂದರೆ ದೂರದೃಷ್ಟಿ ಇರುತ್ತದೆ. ಅವುಗಳ ಆವಾಸದಲ್ಲಿ ವಿವಿಧ ವಯೋಮಾನದ ಚಿಂಪಾಂಜಿಗಳನ್ನು ಗಮನಿಸಿದಾಗ ಪರಸ್ಪರ ತಲೆ ನೇವರಿಸುವುದು, ಮೈಸವರುವುದನ್ನು ವಿಜ್ಞಾನಿಗಳು ಕಂಡರು. ಆದರೆ ಹೀಗೆ ಮಾಡುವಾಗ ಮಾರುದ್ದ ದೂರದಿಂದ ಕೈಮುಂದು ಮಾಡಿಕೊಂಡು ಈ ಕ್ರಿಯೆಯಲ್ಲಿ ತೊಡಗುತ್ತಿದ್ದವು. ಮನುಷ್ಯನಿಗೆ 40ರ ಪ್ರಾಯದಲ್ಲಿ ಚಾಳೀಸು ಬರುವ ಹಾಗೆ ಇವುಗಳಲ್ಲೂ ದೃಷ್ಟಿಯ ತೊಂದರೆ ಬರುತ್ತದಂತೆ. ಬಹುಶಃ ಚಿಂಪಾಂಜಿ ಮತ್ತು ಮನುಷ್ಯನ ಪೂರ್ವಿಕರು ಒಂದೇ ಆದ್ದರಿಂದ ಈ ಗುಣವೂ ಸಂತತಿಯಿಂದ ಸಂತತಿಗೆ ಸಾಗಿಬಂದಿರಬಹುದು.

ಕಿವಿ ತಯಾರಾಗಿದೆ- ಮೇಡ್ ಟು ಆರ್ಡರ್

2ಇದು ತ್ರಿ-ಡಿ ಪ್ರಿಂಟಿಂಗ್ ಯುಗ. `ಇಂಟೆಗ್ರೇಟೆಡ್ ಟಿಷ್ಯೂ ಆರ್ಗನ್ ಪ್ರಿಂಟರ್’ ಈಗ ಭರ್ಜರಿ ಸುದ್ದಿಮಾಡುತ್ತಿದೆ. ಅದರಿಂದ ನಿಮ್ಮ ದೇಹದ ಯಾವುದೇ ಅಂಗಾಂಗವನ್ನು ಸೃಷ್ಟಿಸಬಹುದು. ಈ ಚಿತ್ರದಲ್ಲಿ ತೋರಿಸಿರುವ `ಕಿವಿ’ ಇಂಥ ತಂತ್ರಜ್ಞಾನದ ಬಳುವಳಿ. ಕಿವಿಯ ಹೊರರೂಪವನ್ನು ತ್ರಿ-ಡಿ ಪ್ರಿಂಟರ್ ಬಳಸಿ ಸೃಷ್ಟಿಸಿದೆ. ಒಳಗೆ ನಿಜವಾದ ಕಿವಿಗಿರಬೇಕಾದ ಎಲ್ಲ ರಚನೆಗಳೂ ಇವೆ. ಜೀವಂತ ಕೋಶವನ್ನು ಈ ಬಗೆಯಲ್ಲಿ ಹಿಂದೆ ಸೃಷ್ಟಿಸಿರುವುದು ನಿಜ. ಆದರೆ ದೊಡ್ಡ ಅಂಗಾಂಗ ಬೆಳೆಸುವುದು (ಪ್ರಿಂಟರ್‍ನಲ್ಲಿ ಕಷ್ಟ) ಸವಾಲೇ ಸರಿ. ಏಕೆಂದರೆ ಸದಾ ಅವುಗಳ ಒಳಗೆ ಜೀವಕೋಶಗಳಿಗೆ ಆಕ್ಸಿಜನ್ ಸತತ ಪೂರೈಕೆಯಾಗಬೇಕು. ಇಲ್ಲದಿದ್ದರೆ ಕುಸಿದೇಬಿಡುತ್ತವೆ. ಈಗ ಜೀವಕೋಶಕ್ಕೆ ಸ್ನೇಹಿಯಾದ ಹೈಡ್ರೋಜಿಲ್‍ನ್ನು ಬಳಸಿ ಅದಕ್ಕೆ ಗಡಸುಕೊಡುವ ಪದಾರ್ಥವನ್ನು ಅಂಟಿಸುತ್ತಾರೆ. ಇದು ಯಾವ ಅಂಗಾಂಗ ಬೆಳೆಯಬೇಕೋ ಅದಕ್ಕೆ ಉತ್ತಮ ರಚನೆಯನ್ನು ಒದಗಿಸುತ್ತದೆ. ಜೊತೆಗೆ ಆಕ್ಸಿಜನ್ ಧಾರಾಳವಾಗಿ ಹರಿದಾಡಲು ಸಣ್ಣ ರಂಧ್ರವಿರುವ ನಳಿಕೆಗಳನ್ನು ಸೃಷ್ಟಿಸುತ್ತಾರೆ. ಆದ್ದರಿಂದ ಕೋಶಗಳು ಸಾಯುವುದಿಲ್ಲ. ಕೃತಕ ಅಂಗಾಂಗಗಳನ್ನು ಸೃಷ್ಟಿಸಿ ಅವಕ್ಕೆ ಜೀವಂತ ಕೋಶವನ್ನು ಸೇರಿಸುವುದೇ ತ್ರಿ-ಡಿ ಪ್ರಿಂಟರ್‍ನ ವಿಶಿಷ್ಟ ಕೆಲಸ. ಈಗಾಗಲೇ ಇಲಿಗಳ ಮೇಲೆ ಪ್ರಯೋಗಿಸಿ ಅವುಗಳ ಮೂಳೆ, ಸ್ನಾಯು, ಮೃದ್ವಸ್ಥಿ (ಕಾರ್ಟಿಲೇಜ್) ಬೆಳೆಸಿದ್ದಾರೆ. ನೇಚರ್ ಬಯೋಟೆಕ್ನಾಲಜಿ ಈ ಸಂಶೋಧನೆಯನ್ನು ಪ್ರಕಟಿಸಿದೆ.

ಮಗು ಒಂದು, ಧಾತರು ಮೂರು

ಈ ಶೀರ್ಷಿಕೆ ಓದಿದರೆ ನಿಮಗೆ ಕುತೂಹಲ, ಜಿಗುಪ್ಸೆ, ಅಚ್ಚರಿ ಒಟ್ಟಿಗೇ ಆಗಬಹುದು. ಮಗು ಎಂದರೆ ಅದು ಅಪ್ಪ, ಅಮ್ಮ ಇಬ್ಬರಿಂದಲೂ ಬಂದ 46 ಕ್ರೋಮೋಸೋಮುಗಳನ್ನು ಪಡೆದಿರುತ್ತದೆ. ಅದು ಹಾಗೆ ಇರಲೇಬೇಕು, ನಿಸರ್ಗದ ನಿಯಮ. ಬ್ರಿಟನ್ನಿನಲ್ಲಿ ಕೆಲವು ಮಹಿಳೆಯರಿಗೆ ವಂಶಾನುಗತವಾಗಿ ಮಕ್ಕಳಿಗೆ ಡಿ.ಎನ್.ಎ. ವರ್ಗಾವಣೆಯಾದಾಗ ಅದು ಭಾರಿ ರೋಗರುಜಿನಗಳಿಗೆ ಕಾರಣವಾಗುತ್ತಿದೆ. ಜೀವಕೋಶದ ಒಂದು ಭಾಗದಲ್ಲಿ ಮೈಟೋಕಾಂಡ್ರಿಯ ಎಂಬುದಿದೆ. ಅದರಲ್ಲೂ ಡಿ.ಎನ್.ಎ. ಇರುತ್ತದೆ. ಮೈಟೋಕಾಂಡ್ರಿಯ ಅಂದರೆ ಪ್ರತಿಜೀವಕೋಶಕ್ಕೂ ಬ್ಯಾಟರಿ ಇದ್ದಂತೆ. ಈ ಮೂಲದ ಡಿ.ಎನ್.ಎ. ತಾಯಿಯಿಂದ ಮಾತ್ರ ವರ್ಗಾವಣೆಯಾಗುವಂತಹದ್ದು. 3

ಪರಿಸ್ಥಿತಿ ಹೀಗಿರುವಾಗ ಡಿ.ಎನ್.ಎ. ಸಹಿತ ಇಡೀ ಮೈಟ್ರೋಕಾಂಡ್ರಿಯವನ್ನೇ ಬದಲಿಸಿದರೆ? ಅಂದರೆ ಆರೋಗ್ಯವಂತ ತಾಯಿಯ ಜೀವಕೋಶದಲ್ಲಿರುವ ಮೈಟ್ರೋಕಾಂಡ್ರಿಯನ್ನು ಅಂಡಾಣುವಿಗೆ ಸೇರಿಸುವುದು. ಮುಂದೆ ಮಗು ಆರೋಗ್ಯವಾಗಿರುತ್ತದೆ ಎನ್ನುವುದು ವೈದ್ಯಕೀಯ ಶೋಧನೆ. ಇದನ್ನು `ಮೈಟ್ರೋಕಾಂಡ್ರಿಯ ರಿಪ್ಲೇಸ್‍ಮೆಂಟ್ ಥೆರಪಿ’ ಎನ್ನುತ್ತಾರೆ. ಬ್ರಿಟನ್ ಈಗ ಇದನ್ನು ಕಾನೂನುಬದ್ಧಗೊಳಿಸಿದೆ. ಅಂದರೆ ಮಗುವಿಗೆ ತಾಯಿ, ತಂದೆಯ ಜೀನ್ಸ್ ಜೊತೆಗೆ ದಾನಿಗಳ ಜೀನುಗಳೂ ಬೇಕು.

ಯಾರದೋ ದೇಹಕ್ಕೆ ಯಾರದೋ ತಲೆ- ನೆನಪಿಸಿಕೊಳ್ಳಿ `ಹಯವದನ’.

4aಈಗ ಮೂತ್ರಪಿಂಡದ ಕಸಿ, ಹೃದಯ ಕಸಿ ಮುಂತಾದವು ವೈದ್ಯ ಜಗತ್ತಿನಲ್ಲಿ ತೀರ ಹಳೆಯ ಮಾತು. ಇಟಲಿಯ ಡಾ. ಸೆರಿಗೋ ಎಂಬ ನರತಜ್ಞ ಒಬ್ಬರ ದೇಹಕ್ಕೆ, ಇನ್ನೊಬ್ಬರ ತಲೆ ಸೇರಿಸುವುದು ಅಸಾಧ್ಯವಾದ ತಂತ್ರಜ್ಞಾನವಲ್ಲ ಎನ್ನುತ್ತಿದ್ದಾನೆ. ಈ ವರ್ಷ ಮಾಡಿ ತೋರಿಸುತ್ತೇನೆಂದು ಹಟ ತೊಟ್ಟಿದ್ದಾನೆ. ತಂತ್ರಜ್ಞಾನ ಸುಲಭಸಾಧ್ಯವೇನಲ್ಲ. ಸರ್ಜರಿ ಮಾಡುವ ಸಮಯದಲ್ಲಿ ದೇಹ ಶೈತ್ಯದಲ್ಲಿರಬೇಕು. ಈಗ ಬೆನ್ನಹುರಿಯನ್ನು (ಸ್ಪೈನಲ್ ಕಾರ್ಡ್) ಅತ್ಯಂತ ಕರಾರುವಾಕ್ಕಾಗಿ ಕತ್ತರಿಸುವ ತಂತ್ರವೂ ಇದೆ. ನೇರವಾಗಿ ಮನುಷ್ಯನ ಮೇಲೆ ಪ್ರಯೋಗಿಸುವುದು ಅನೀತಿ ಎನ್ನುತ್ತಿದ್ದಾರೆ ಅಮೆರಿಕದ ತಜ್ಞರು. ಇದು ಧರ್ಮಸಂಕಟಕ್ಕೂ ಕಾರಣವಾಗಬಹುದು. ಹೊಸತಲೆ ಇಟ್ಟುಕೊಂಡ ವ್ಯಕ್ತಿಯನ್ನು ಮನೆಯವರು ಏನೆಂದು ಪರಿಭಾವಿಸಬೇಕು? ಗಿರೀಶ್ ಕಾರ್ನಾಡರ `ಹಯವದನ’ ನಾಟಕ ನಿರೂಪಿಸಿರುವ ಫಜೀತಿ ಗೊತ್ತಲ್ಲ? ದೇವದತ್ತನ ತಲೆಯನ್ನು ಕಪಿಲನ ಶರೀರಕ್ಕೆ ಪದ್ಮಿನಿ ಜೋಡಿಸಿದ ಮೇಲೆ ಅನುಭವಿಸುವ ಸಂಧಿಗ್ಧ. ಅದು ಹಾಗಿರಲಿ, ಈಗ ಇಟಲಿಯ ಕಂಪ್ಯೂಟರ್ ತಜ್ಞನೊಬ್ಬ ಭಯಂಕರ ನರರೋಗದಿಂದ ಬಳಲುತ್ತಿದ್ದಾನೆ. ಅವನ ಹೆಸರು ವೆನೆರಿ ಸ್ಪಿರಿಡಿನೋವ್. ತನ್ನ ತಲೆಯನ್ನು ಆರೋಗ್ಯಕರ ಶರೀರಕ್ಕೆ ಕಸಿಮಾಡಲು ಒಪ್ಪಿದ್ದಾನೆ.

ಕಾಸ್ಮಿಕ್ ಕಿರಣಗಳನ್ನು ಆಹಾರವಾಗಿ ತಿನ್ನುವ ಅನ್ಯಗ್ರಹ ಜೀವಿಗಳು ಇರಬಾರದೇಕೆ?

ದಕ್ಷಿಣ ಆಫ್ರಿಕದ 2.8 ಕಿಲೋಮೀಟರ್ ಆಳದ ತಳದಲ್ಲಿ ಆಕ್ಸಿಜನ್ನೂ ಇಲ್ಲ, ಬೆಳಕೂ ಇಲ್ಲ. ಕಾರ್ಬನ್ನೂ ಇಲ್ಲ. ಆದರೂ ಕೆಲವೊಂದು ಬ್ಯಾಕ್ಟೀರಿಯಗಳು ಅಲ್ಲಿ ಬಾಳ್ವೆ 5ಮಾಡಿವೆ. ವಿಕಿರಣ ಸೂಸುವ ಯುರೇನಿಯಮ್ಮನ್ನು ತಿಂದು ಬದುಕುತ್ತಿರುವುದು ಹಳೆಯ ಸಂಗತಿ. ವಿಶ್ವದ ಯಾವುದೋ ಗೆಲಾಕ್ಸಿಯ, ಯಾವುದೋ ಸೂರ್ಯನ ಕೃಪೆಯಲ್ಲಿ ಪರಿಭ್ರಮಿಸುತ್ತಿರುವ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು ಇಂಥದೇ ವಿಧಾನದಲ್ಲಿ ಏಕೆ ಬದುಕಿರಬಾರದು ಎಂದು ಡಿಮಿಟ್ರಿ ಅತ್ರಿ ಎಂಬ ಸಿಯಾಟ್ಲ್ ವಿಜ್ಞಾನಿ ಕೇಳುತ್ತಿದ್ದಾನೆ. ಖಗೋಳವಿಜ್ಞಾನ ಅವನ ಸಂಶೋಧನ ನೆಲೆ. ಗಿಡಗಳು ದ್ಯುತಿಸಂಶ್ಲೇಷಣೆಯ ಮೂಲಕ ಆಹಾರ ಉತ್ಪಾದಿಸಿಕೊಳ್ಳುತ್ತವೆ. ಅದನ್ನು ಪ್ರಾಣಿಗಳು ತಿಂದು ಶಕ್ತಿ ಸಂಪಾದಿಸಿಕೊಳ್ಳುತ್ತವೆ. ಅನ್ಯಗ್ರಹ ಜೀವಿಗಳು ಕಾಸ್ಮಿಕ್ ಕಿರಣಗಳನ್ನು (ಅತಿಶಕ್ತ ಪ್ರೋಟಾನ್‍ಗಳು ಮತ್ತು ಪರಮಾಣುಬೀಜ) ಭಕ್ಷಿಸಿ ವಿಕಾಸವಾಗಿರಬಹುದಲ್ಲ? ಇದನ್ನು ಇನ್ನೊಂದು ಪ್ರಶ್ನೆಯ ಮೂಲಕವೂ ಕೇಳಬಹುದು. ಅನ್ಯಗ್ರಹ ಜೀವಿಗಳೆಂದರೆ ಮನುಷ್ಯ ರೂಪದ ಪರಿಕಲ್ಪನೆಯೇ ಏಕೆ? ಬೇರೆ ರೂಪಗಳಲ್ಲೂ ಇರಬಹುದಲ್ಲ?

 

ಗೋ-ಆಟದಲ್ಲಿ ವಿಶ್ವ ಛಾಂಪಿಯನ್ ಆಗಿರುವ ಲೀ ಸೆಡೋಲ್‍ನನ್ನು ಸೋಲಿಸಿದ ಕೃತಕ ಬುದ್ಧಿಮತ್ತೆ.

SKOREA-SCIENCE-COMPUTERS-AI-RESEARCHಚೀನಿಯರ ಪ್ರಾಚೀನ ಆಟ `ಗೋ’ ಗೊತ್ತಲ್ಲ? ಅದು ಬೋರ್ಡ್ ಮೇಲೆ ಆಡುವ ಆಟ, ನಮ್ಮ ಚದುರಂಗದಂತೆ. ಇದರ ವಿಶೇಷ ಅಂದರೆ ಪಾನುಗಳನ್ನು ಚಲಿಸಲು ಶತಶತಕೋಟಿಷ್ಟು ಸಾಧ್ಯತೆಗಳನ್ನು ತೋರಿಸಿಕೊಟ್ಟಿದೆ. ಗೂಗಲ್‍ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗ `ಆಲ್ಪಾ ಗೋ’ ಎಂಬ ಕಂಪ್ಯೂಟರ್ ಪ್ರೋಗ್ರಾಂ ಅಭಿವೃದ್ಧಿಪಡಿಸಿದೆ. ದಕ್ಷಿಣ ಕೊರಿಯದ, 18 ಬಾರಿ ವಿಶ್ವ ಛಾಂಪಿಯನ್ ಆಗಿದ್ದ `ಗೋ’ ಆಟಗಾರ ಲೀ ಸೇಡೋಲ್‍ನನ್ನು ಪ್ರತಿಸ್ಪರ್ಧಿಯಾಗಿ ಆಟಕ್ಕೆ ಇಳಿಸಿತು. ನಾಲ್ಕು ಆಟಗಳಲ್ಲಿ ಮೂರನ್ನು `ಆಲ್ಪಾ ಗೋ’ ಸೃಷ್ಟಿಸಿದ ಡೀಪ್ ಮೈಂಡ್ ಗೆದ್ದುಬಿಟ್ಟಿತು. ಹೇಗೆ ಸಾಧ್ಯ? ಈ ಆಟದಲ್ಲಿ `ಡೀಪ್ ಮೈಂಡ್’, `ಗೋ’ ಆಟಕ್ಕೆ ಬಳಸಿದ ಮೂರು ಲಕ್ಷ ನಡೆಯನ್ನು ವಿಶ್ಲೇಷಿಸಿತ್ತು. ಅಷ್ಟೇ ಅಲ್ಲ, ತನ್ನ ಬುದ್ಧಿಯನ್ನೂ ತಾನೇ ಪರೀಕ್ಷಿಸಿಕೊಳ್ಳಲು ಅದೇ ಎದುರಾಳಿಯಾಗಿ ಸಾವಿರಾರು ಬಾರಿ ಪ್ರಾಕ್ಟೀಸ್ ಮಾಡಿತ್ತು. ಮುಂದೊಂದು ದಿನ ಕಂಪ್ಯೂಟರ್‍ಗಳೇ ನಮ್ಮನ್ನು ಆಳಬಹುದು ಎಂಬ ತರ್ಕಕ್ಕೆ ಇದು ಪುಷ್ಟಿಕೊಡುತ್ತಿದೆಯೋ, ಭಯಹುಟ್ಟಿಸುತ್ತಿದೆಯೋ – ಕಾಲನಿರ್ಧರಿಸುತ್ತಿದೆ – ದೂರವೇನಿಲ್ಲ.

ಕಣ್ಣಪರದೆಯ ಮೇಲೆ ಸರಿದ ಚಿತ್ರಗಳು

pho-1

ಅಂಬರದಲ್ಲಿ ಸಿಕ್ಕಿಹಾಕಿಕೊಂಡ ಡೈನೋಸಾರ್ ಬಾಲದ ಗರಿಗಳು

pho-2ಪರಸ್ಪರ ಡಿಕ್ಕಿ ಹೊಡೆದ ಕಪ್ಪು ರಂಧ್ರಗಳಿಂದ ಹೊರಟ ಗುರುತ್ವದ ಅಲೆಗಳು

pho-3

ರೊಸೆಟ್ಟ ವ್ಯೋಮನೌಕೆಗೆ ಶ್ರದ್ಧಾಂಜಲಿ

pho-4

ಒಂಬತ್ತನೆಯ ಗ್ರಹ ಅದೃಶ್ಯವಾಗಿ ಆಟವಾಡಿಸುತ್ತಿದೆಯೆ?

pho-5

ಹಂಪ್ ಬ್ಯಾಕ್ ತಿಮಿಂಗಿಲಗಳು, ಶಾರ್ಕ್ ಆಕ್ರಮಣಕ್ಕೆ ಬಲಿಯಾಗಲಿದ್ದ ಸೀಲ್ ಪ್ರಾಣಿಯನ್ನು ರಕ್ಷಿಸಿದ ಬಗೆ

pho-6

ಐದು ಚಂಡಮಾರುತಗಳು ಒಟ್ಟಿಗೇ ಸೇರಿ ಸೃಷ್ಟಿಸುವ ಬಿರುಗಾಳಿಯನ್ನು ಇದೊಂದೇ ಯಂತ್ರ ಸೃಷ್ಟಿಸಬಲ್ಲದು.

 

Leave a Reply