ಯಶಸ್ವಿ ನಟ ಓಂಪುರಿ ಕೊನೆಯಲ್ಲಿ ನಮಗೆ ಬಿಟ್ಟುಹೋದ ಕತೆ ಯಾವುದು? ಏನದರ ಸಂದೇಶ?

ಚೈತನ್ಯ ಹೆಗಡೆ

ತಮ್ಮ 66ನೇ ವಯಸ್ಸಿನಲ್ಲಿ ಗತಿಸಿದ ನಟ ಓಂ ಪುರಿ ಅವರಿಗೆ ಸಿನಿಮೋದ್ಯಮದ ಶ್ರದ್ಧಾಂಜಲಿಗಳು ಹರಿದುಬರುತ್ತಿವೆ. ನಾಸಿರುದ್ದೀನ್ ಶಾ, ಸ್ಮಿತಾ ಪಾಟೀಲ್, ಶಬಾನಾ ಆಜ್ಮಿ… ಇಂಥ ಅಲೆಗಳ ಜಮಾನಾದಲ್ಲಿ ಹೊರಹೊಮ್ಮಿದ್ದ ಓಂಪುರಿ ಎಲ್ಲ ನೆನಕೆಗಳಿಗೆ ಅರ್ಹರು.

ಹಳಬರೆಲ್ಲ 80ರ ದಶಕದ ಅವರ ಆಕ್ರೋಶ್, ಅರ್ಧ ಸತ್ಯ ಸಿನಿಮಾಗಳ ಪಾತ್ರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಘಾಯಲ್, ಚಾಚಿ 420, ಹೇರಾಫೇರಿ ಇಲ್ಲೆಲ್ಲ ಅವರ ಪಾತ್ರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಮತ್ತೊಂದು ವರ್ಗದ ಸಿನಿಪ್ರಿಯರು. ಸಿಟಿ ಆಫ್ ಜಾಯ್ಸ್, ವೂಲ್ಫ್ ಇತ್ಯಾದಿ ಹಾಲಿವುಡ್ ಚಿತ್ರಗಳಲ್ಲೂ ಪಾತ್ರಧಾರಿಯಾಗಿದ್ದರವರು ಎಂಬುದು ಮತ್ತೆ ಕೆಲವರ ಮೆಲುಕು.

ಇವೆಲ್ಲ ಗೌರವಗಳಿಗೆ ಪಾತ್ರವಾಗುತ್ತಲೇ, ಓಂಪುರಿ ಎಲ್ಲರ ಪಾಲಿಗೊಂದು ಎಚ್ಚರಿಕೆಯ ಕತೆಯನ್ನೂ ಬಿಟ್ಟುಹೋಗಿದ್ದಾರೆನಿಸುತ್ತದೆ. ಚಿತ್ರ ಜಗತ್ತು ಅಂತಲ್ಲ, ಇವತ್ತು ಯಶಸ್ಸಿನ ಹಪಹಪಿಯಲ್ಲಿರುವ ವಿವಿಧ ರಂಗಗಳ ನಾವೆಲ್ಲರೂ ಸೃಷ್ಟಿಸಿಕೊಂಡುಬಿಡಬಹುದಾದ ಕತೆ ಇದು…

—-

ಓಂಪುರಿ ಸಿನಿಮಾಗಳಿಗೆ ಕತೆ-ಏರಿಳಿತಗಳಿದ್ದಂತೆ ಖುದ್ದು ಓಂಪುರಿಯದ್ದೂ ಕತೆಯೊಂದಿದೆ. ಪಂಜಾಬಿನ ಅಂಬಾಲಾದಿಂದ ಬಂದು, ರಂಗಭೂಮಿ ರುಚಿಯ ಮಾರ್ಗದಲ್ಲಿ ಬಾಲಿವುಡ್ ತಲುಪಿಕೊಂಡ ವ್ಯಕ್ತಿ ಓಂಪುರಿ. ಈ ಹಿನ್ನೆಲೆಯಲ್ಲಿ ನೋಡಿದಾಗ ಇಂಥವರ ಯಶಸ್ಸು ಇನ್ನಷ್ಟು ಝಳಪಳಿಸುತ್ತದೆ. ಏಕೆಂದರೆ ಯಾರೋ ನಿರ್ಮಾಪಕನ, ಸ್ಟಾರ್ ಕುಟುಂಬದ ಕುಡಿಯೇನೂ ಅಲ್ಲ ಓಂಪುರಿ. ಹಾಗಂತ ಅಂಥ ಕುಟುಂಬಗಳಲ್ಲಿದ್ದವರಿಗೆ ಎಲ್ಲವೂ ಸುಸೂತ್ರ ಎಂದಲ್ಲ. ಆದರೆ ಪ್ರವೇಶಕ್ಕೆ, ವೇದಿಕೆಗೆ ಉಳಿದವರಷ್ಟು ಹೋರಾಡಬೇಕಾದ ದರ್ದು ಅವರಿಗಿರುವುದಿಲ್ಲ.

ಆದರೆ…

ಹೀಗೆ ಚಿಕ್ಕ ಪಟ್ಟಣಗಳಿಂದ ಬಂದು ಯಶಸ್ಸಿನ ಏಣಿ ಏರುತ್ತ ಹೋಗುವವರು ಅಂಥ ಯಶಸ್ಸುಗಳು ತರುವ ಉತ್ಕರ್ಷವನ್ನು ಸಂಭಾಳಿಸುವುದಕ್ಕೆ ಎಡವಿಬಿಡುತ್ತಾರಾ? ಆ ದಾರಿಯಲ್ಲಿ ಎಲ್ಲವನ್ನೂ ಕಲಸುಮೇಲೋಗರ ಮಾಡಿಕೊಂಡು ಅಸ್ತವ್ಯಸ್ತವಾಗುವ ಅಪಾಯವೊಂದಕ್ಕೆ ಎದುರಾಗುತ್ತಾರಾ?

ಓಂಪುರಿ ವೈಯಕ್ತಿಕ ಬದುಕಿನ ಕತೆ ಇಂಥ ಸಾಧ್ಯತೆಗಳ ಬಗ್ಗೆ ಎಚ್ಚರಿಸುತ್ತದೆ.

1991ರಲ್ಲಿ ಓಂಪುರಿ ಸೀಮಾ ಕಪೂರ್ ಅವರನ್ನು ಮದುವೆಯಾಗುತ್ತಾರೆ. ಅದು ಎಂಟೇ ತಿಂಗಳಿಗೆ ಮುರಿದುಬೀಳುತ್ತದೆ. ತಾವೇರಿರುವ ಎತ್ತರಕ್ಕೆ, ತಮ್ಮ ವರ್ಚಸ್ಸಿಗೆ ಸಂಗಾತಿ ಸರಿಹೊಂದಳು, ಆಕೆ ಮೃದು ಮಾತುಗಾರ್ತಿ, ತಮ್ಮ ವೇಗಕ್ಕಲ್ಲ… ಹಿಂಗೆಲ್ಲ ಏನೇನೋ ಕಾರಣಗಳನ್ನು ಹೊಂದಿಸಿಕೊಂಡಿದ್ದು ಅವರ ಹಲವು ಸಂದರ್ಶನಗಳಲ್ಲಿ ವ್ಯಕ್ತವಾಗುತ್ತದೆ.

ಇದಾಗಿ ಪುರಿಯವರ ಮುಂದಿನ ಆಯ್ಕೆ ಸಹ ಇದನ್ನೇ ದೃಢೀಕರಿಸುತ್ತದೆ. ಮೊದಲ ಹೆಂಡತಿಗೆ ತದ್ವಿರುದ್ಧ ವರ್ಚಸ್ಸಿನ ನಂದಿತಾ ಎಂಬ ಪತ್ರಕರ್ತೆಯನ್ನು ಮದುವೆಯಾಗುತ್ತಾರೆ. ಸ್ವತಂತ್ರ ಸ್ವಭಾವದ, ಮುಕ್ತ ಅಭಿವ್ಯಕ್ತಿಯ, ಗಟ್ಟಿ ಮಾತುಗಾರಿಕೆಯ ತಥಾಕಥಿತ ಪ್ರಗತಿಪರ ರಚನೆಗೆ ಹೊಂದಿಕೊಂಡಿರುವ ನಂದಿತಾ ತನಗೆ ಅನುರೂಪಳು ಅಂದುಕೊಳ್ಳುತ್ತ ವಿವಾಹವಾಗುತ್ತಾರೆ ಸಣ್ಣ ಪಟ್ಟಣದಿಂದ ಬಂದು ಹಿರಿಯವನೆನಿಸಿಕೊಂಡ ಹುಡುಗ!

ಹೀಗೆ ಇಷ್ಟಪಟ್ಟು ವಿವಾಹವಾದ ನಂದಿತಾ ಮೇಲೆ ಕೈ ಮಾಡಿದ ಆರೋಪದ ಮೇಲೆ 2013ರಲ್ಲಿ ಪುರಿ ವಿರುದ್ಧ ಪ್ರಕರಣವೊಂದು ದಾಖಲಾಗುತ್ತದೆ! ಗೃಹ ದೌರ್ಜನ್ಯ ಕಾಯ್ದೆಯ ಕಠಿಣ ನಿಯಮಗಳ ಅಡಿ ನಂದಿತಾ ಇಂಥದೊಂದು ಪ್ರಕರಣ ದಾಖಲಿಸುತ್ತಾರೆ. ಆ ನಂತರ ಆ ಪ್ರಕರಣ ತಣ್ಣಗಾಯಿತಾದರೂ ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪುರಿ ನೀಡಿದ ಸಂದರ್ಶನಗಳಲ್ಲಿ ಮೊದಲನೆ ಹೆಂಡತಿಯ ಕುರಿತಾದ ಮೋಹ, ಪಶ್ಚಾತ್ತಾಪದ ಅಭಿವ್ಯಕ್ತಿಗಳು ಅಡಿಗಡಿಗೂ ಇಣುಕಾಡಿವೆ!

ಹಾಗೆ ನೋಡಿದರೆ 2011ರಲ್ಲಿ ಪರ್ತಕರ್ತೆ ಹೆಂಡತಿ ತಮ್ಮ ಜೀವನಗಾಥೆ ಬರೆದಾಗಲೇ ಅವಳೊಂದಿಗೆ ಮುನಿಸು ತೀವ್ರವಾಗಿತ್ತು ಪುರಿಗೆ. ತನ್ನ ಹೆಂಡತಿ ಪುಸ್ತಕ ಬರೆಯುತ್ತಿದ್ದಾಳೆಂದು ಮುದಗೊಂಡು ಪ್ರಕಟಣಾಪೂರ್ವದಲ್ಲಿ ಹೇಳಿಕೆಗಳನ್ನು ಕೊಟ್ಟಿದ್ದ ಪುರಿ, ಪುಸ್ತಕ ಬಂದ ನಂತರ, ‘ನಂದಿತಾ ತನಗೆ ಬರವಣಿಗೆಯ ಭಾಗಗಳನ್ನು ತೋರಿಸದೇ ಮೋಸ ಎಸಗಿದ್ದಾಳೆ. ಕೆಲವೆಡೆಗಳಲ್ಲಿ ಕೆಟ್ಟದಾಗಿ ಚಿತ್ರಿಸಿದ್ದಾಳೆ’ ಎಂದೆಲ್ಲ ಹರಿಹಾಯತೊಡಗಿದರು. ಅದಕ್ಕೆ ಕಾರಣಗಳೂ ಇದ್ದವು.

ಓಂಪುರಿ 14ನೇ ವಯಸ್ಸಿನಲ್ಲೇ ಕೆಲಸದವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರೆಂಬುದನ್ನೂ, ಇನ್ನೊಮ್ಮೆ ತಮ್ಮ ರೋಗಿಷ್ಟ ತಂದೆಯನ್ನು ನೋಡಿಕೊಳ್ಳಲು ಬರುತ್ತಿದ್ದ ಕೆಲಸದಾಕೆ ಜತೆಗೆ ಪುರಿಯ ಲೈಂಗಿಕ ಸಂಬಂಧಗಳನ್ನು ‘ಅನ್ ಲೈಕ್ಲಿ ಹೀರೋ: ಸ್ಟೋರಿ ಆಫ್ ಓಂಪುರಿ’ಯಲ್ಲಿ ರಸವತ್ತಾಗಿ ಬರೆದರು ನಂದಿತಾ.

ಓಂಪುರಿಗೆ ಎರಡು ಬಗೆಯ ಆಘಾತಗಳಾದವು. ತಮ್ಮ ಅಭಿಮಾನಿಗಳ ಎದುರು ವರ್ಚಸ್ಸು ಕೆಟ್ಟಿತೆಂಬುದು ಒಂದೆಡೆ. ಇದಕ್ಕಿಂತ ಹೆಚ್ಚಿನ ಆಘಾತ ವಿಶ್ವಾಸಕ್ಕೆ ಸಂಬಂಧಿಸಿದ್ದು. ತನ್ನ ಸಂಗಾತಿಯೆಂಬ ಕಾರಣಕ್ಕೆ ಹೇಳಿದ್ದ ತೀರ ಖಾಸಗಿ ವಿವರಗಳನ್ನು ಮಡದಿ ಹೀಗೆ ಪುಸ್ತಕದಲ್ಲಿ ಬೆತ್ತಲಾಗಿಸಿದಳಲ್ಲ… ಅದಲ್ಲದೇ ಆಕೆ ಉಲ್ಲೇಖಿಸಿರುವ ಹೆಂಗಸರಿಗೆಲ್ಲ ಅವರದ್ದೇ ಸಂಸಾರವಿದೆ. ಈಗ ಹೀಗೆಲ್ಲ ಬರೆದು ಬಹಿರಂಗವಾಗಿಸಿದ್ದು ಯಾವ ನ್ಯಾಯ ಎಂಬ ಆಕ್ರೋಶಕ್ಕೆ ಬಿದ್ದರು ಓಂಪುರಿ.

ಕೊನೆಗೆ ನಂದಿತಾ ಜತೆಗಿನ ಬಾಂಧವ್ಯ ವಿಚ್ಛೇದನವಲ್ಲದ, ನ್ಯಾಯಾಂಗ ಬೇರ್ಪಡೆಯ ಕ್ರಮದಲ್ಲಿ ಅಂತ್ಯವಾಯಿತು. ಕಾಯ್ದೆ ಪ್ರಕಾರ ಆಕೆ ಹೆಂಡತಿಯೇ. ಆದರೆ ದಂಪತಿ ಬೇರೆ ಇರುತ್ತಾರೆ ಹಾಗೂ ಆ ಹಂತದಲ್ಲಿ 14ರ ಹರೆಯದವನಾಗಿದ್ದ ಮಗನ ಕ್ಷೇಮಾಭ್ಯುದಯದ ದೃಷ್ಟಿಯಿಂದ ಮಾತ್ರ ಒಟ್ಟಿಗೆ ವ್ಯವಹರಿಸುತ್ತಾರೆ ಎಂಬ ಒಡಂಬಡಿಕೆ ಇದು.

ಹಾಗೆ ನೋಡಿದರೆ ಇಲ್ಲಿ ನಂದಿತಾ ಸಹ ವಿಲನ್ ಅಲ್ಲ. ಆಕೆಯ ಜೀವನ ಗ್ರಹಿಕೆ ರೀತಿ ವಿಭಿನ್ನವಾಗಿತ್ತು ಹಾಗೂ ಅದರ ವೇಗಕ್ಕೆ ಓಂಪುರಿ ಓಘ ಹೊಂದಿಕೆಯಾಗುತ್ತಿರಲಿಲ್ಲ. ಬಹುಶಃ ಮೊದಲನೇ ಹೆಂಡತಿಯನ್ನು ತೊರೆಯುವುದಕ್ಕೆ ಓಂಪುರಿಗಿದ್ದ ಕಾರಣ ಇಂಥದ್ದೇ ಎಂಬುದು ವಿಪರ್ಯಾಸ.

ಪುಸ್ತಕ ಸೃಷ್ಟಿಸಿದ ಅಸೌಖ್ಯದ ನಂತರವೂ ಓಂಪುರಿ ಏಕಾಏಕಿ ಬಾಂಧವ್ಯ ಕಡಿದುಕೊಳ್ಳಲಿಲ್ಲ. ‘ಆಕೆ ನನ್ನ ಮಗುವಿನ ತಾಯಿ. ನಾನದನ್ನು ಗೌರವಿಸಬೇಕು. ಈ ಬಾಂಧವ್ಯದ ಬಗ್ಗೆ ನಿರ್ಧರಿಸುವುದಕ್ಕೆ ಇನ್ನೆರಡು ವರ್ಷ ಬೇಕಾಗುತ್ತದೆ’ ಎಂದಿದ್ದರು. ಆ ಹಂತದಲ್ಲೇ ಗೃಹಹಿಂಸೆ ಕಾಯ್ದೆ ಪ್ರಕರಣ ಎದುರಿಸಬೇಕಾಯಿತು.

ಬಹುಶಃ ಇವೆಲ್ಲ ನಿರ್ವಾತಗಳನ್ನು ಹೊರಗಿನ ವೇದಿಕೆಗಳಲ್ಲಿ ತುಂಬಿಕೊಳ್ಳುವ ಧಾವಂತಕ್ಕೆ ಬಿದ್ದರೇನೋ ಓಂಪುರಿ. ಹಾಗೆಂದೇ ಅಣ್ಣಾ ಹಜಾರೆ ವೇದಿಕೆಗೆ ಹೋಗಿ ಸಂಸದರನ್ನೆಲ್ಲ ಸಾರಾಸಗಟಾಗಿ ಓದಲು ಬಾರದವರೆಂದು ಟೀಕಿಸಿ ನಂತರ ಕ್ಷಮೆಯಾಚಿಸಿದರು. ತೀರ ಇತ್ತೀಚೆಗೆ ಯೋಧರ ಕುರಿತು ಅಹಿತದ ಮಾತುಗಳನ್ನಾಡಿ ಫಜೀತಿ ಸೃಷ್ಟಿಸಿಕೊಂಡರು. ಇವೆಲ್ಲ ಓಂಪುರಿ ಬದುಕು ಸೃಷ್ಟಿಸಿದ ಮಾನಸಿಕ ಗೊಂದಲಗಳ ಪರಿಣಾಮವಾಗಿತ್ತಾ?

ಓಂಪುರಿ ಆತ್ಮಕ್ಕೆ ಶಾಂತಿ ಸಿಗಲಿ. ಯಶಸ್ವಿ ನಟನ ಬದುಕಿನ ಗೋಜಲುಗಳಲ್ಲಿ ನಮಗೆಲ್ಲ ಪಾಠ ಸಿಗಲಿ.

Leave a Reply