ಪ್ರವಾಸಿ ಭಾರತೀಯ ದಿವಸ ಆಚರಣೆಯಲ್ಲಿ ತನ್ನನ್ನು ಅಭಿವ್ಯಕ್ತಗೊಳಿಸುತ್ತಿದೆ ಕರ್ನಾಟಕ

ಡಿಜಿಟಲ್ ಕನ್ನಡ ಟೀಮ್:

ಮೂರು ದಿನಗಳ ಕಾಲ ನಗರದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ  ಆಯೋಜಿಸಲಾಗಿರುವ  ಪ್ರವಾಸಿ ಭಾರತೀಯ ದಿವಸ್‍ನಲ್ಲಿ ವಿವಿಧ ದೇಶ, ರಾಜ್ಯಗಳ ಕಲೆ-ಸಂಸ್ಕೃತಿ, ಪ್ರವಾಸಿ ತಾಣ ಸೇರಿದಂತೆ ಇನ್ನಿತರ ಮಹತ್ವದ ಮಾಹಿತಿಗಳನ್ನೊಳಗೊಂಡ ಮಳಿಗೆಗಳು ಆಕರ್ಷಣೆಯ ಕೇಂದ್ರಗಳಾಗಿವೆ.

ಹೈಟೆಕ್ ಮಳಿಗೆಗಳು, ವೈಫೈ ಸಜ್ಜಿತ ವಸ್ತುಪ್ರದರ್ಶನ ಕೇಂದ್ರ ಇವು ಪ್ರಮುಖ ಅಂಶಗಳು. ಸರ್ಕಾರಿ ಯೋಜನೆಗಳನ್ನು ಜನಪ್ರಿಯಗೊಳಿಸುವುದಕ್ಕೆ ಒಟ್ಟಾರೆ ಪ್ರದರ್ಶನವನ್ನು ಉಪಯೋಗಿಸಿಕೊಳ್ಳುತ್ತಿರುವುದೂ ಸ್ಪಷ್ಟ.

ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಾದ ನಮಾಮಿ ಗಂಗೆ, ಸ್ವಚ್ಛಭಾರತ್,  ಕ್ಯಾಶ್‍ಲೆಸ್ ಇಂಡಿಯಾದಂತಹ ಯೋಜನೆಗಳು, ಅದರ ಉಪಯೋಗಗಳ ಬಗ್ಗೆ ಮಾಹಿತಿ ಒದಗಿಸುವ ಮಳಿಗೆಗಳಿವೆ. ಜತೆಯಲ್ಲೇ  ಖಾಸಗಿ ಸಂಸ್ಥೆಗಳು ಹಾಗೂ ಬ್ಯಾಂಕ್‍ಗಳ ಮಳಿಗೆಗಳು ತಮ್ಮ ಕಾರ್ಯವೈಖರಿ ಬಗ್ಗೆ ಸೂಕ್ತ ಮಾಹಿತಿ ಒದಗಿಸಲು ಸಜ್ಜಾಗಿ ನಿಂತಿವೆ.

ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಕೂಡ ಕೈಗೊಂಡಿರುವ ಕೆಲಸಗಳು ಹಾಗೂ ಉದ್ದೇಶಿತ ಯೋಜನೆ  ಬಗ್ಗೆ ತಿಳಿಸಿಕೊಡಲು ಮುಂದಾಗಿವೆ. ಗುಜರಾತ್, ಬಿಹಾರ, ಮಹಾರಾಷ್ಟ್ರ, ಅಸ್ಸೋಂ, ಮಿಜೋರಾಂ, ಕೇರಳ, ಆಂಧ್ರ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳು ಮಳಿಗೆಗಳನ್ನು ಸ್ಥಾಪಿಸಿವೆ.

ಕ್ಯಾಷ್‍ಲೆಸ್ ಇಂಡಿಯಾ ಕುರಿತ ಸಾಧಕ-ಬಾಧಕಗಳು, ಅದರಿಂದ ಸಾಮಾನ್ಯರು ಸೇರಿದಂತೆ ಇನ್ನಿತರ ಎಲ್ಲಾ ವರ್ಗಗಳಿಗೆ ಆಗುವ ಉಪಯೋಗಗಳ ಬಗ್ಗೆ ಮಳಿಗೆಗಳಲ್ಲಿ ತಿಳಿಸಿಕೊಡಲಾಗುತ್ತಿದೆ.

ರಾಜ್ಯ ಸರ್ಕಾರದ ವಿಶೇಷ ಮಳಿಗೆಯಾಗಿರುವ ಬೆಂಗಳೂರು ಸಂತೆಯಲ್ಲಿ ರಾಜ್ಯದ ವಿಶೇಷ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್, ಮೈಸೂರು ಸಿಲ್ಕ್ಸ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಪ್ರಿಯದರ್ಶಿನಿ, ನಂದಿನಿ ಉತ್ಪನ್ನಗಳು ಅತ್ಯಂತ ಹೆಚ್ಚು ಜನರನ್ನು ಆಕರ್ಷಿಸಿದವು. ಸಾಂಪ್ರದಾಯಿಕ ಬಳೆ ಮಳಿಗೆಗಳು ವಿದೇಶಿಯರನ್ನು ಆಕರ್ಷಿಸಿವೆ.

ಪ್ರದರ್ಶನದ ಮುಖ್ಯ ಉದ್ದೇಶ ಹೂಡಿಕೆ ಆಕರ್ಷಣೆ. ಈ ನಿಟ್ಟಿನಲ್ಲಿ ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದು- ವಿದೇಶದಲ್ಲಿರುವ ಭಾರತೀಯರಿಗೆ ಪ್ರವಾಸ, ಹೂಡಿಕೆ, ಸೇವಾಕ್ಷೇತ್ರ ಎಲ್ಲದಕ್ಕೂ ಕರ್ನಾಟಕ ಅತ್ಯುತ್ತಮ ಆಯ್ಕೆಯಾಗಿದೆ. ಕರ್ನಾಟಕ ಅತ್ಯುತ್ತಮ ಪ್ರವಾಸಿ ತಾಣವೆಂಬ ಸಂದೇಶವನ್ನು ಪ್ರವಾಸಿ ಭಾರತೀಯ ದಿವಸ್ ಮೂಲಕ ರವಾನಿಸುತ್ತಿದ್ದೇವೆ. ಬಂಡವಾಳ ಹೂಡಿಕೆ ನಿರಂತರ ಪ್ರಕ್ರಿಯೆ, ಇನ್ವೆಸ್ಟ್ ಕರ್ನಾಟಕದ ನಂತರ ಹೂಡಿಕೆದಾರರನ್ನು ಸೆಳೆಯುವ ಮತ್ತೊಂದು ವೇದಿಕೆ ಪ್ರವಾಸಿ ಭಾರತೀಯ ದಿವಸ್ ಆಗಲಿದೆ. ಮೊದಲ ದಿನ ಯುವ ಪ್ರವಾಸಿಗರನ್ನು ಕೇಂದ್ರೀಕರಿಸಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತ ಪ್ರವಾಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

Leave a Reply