ಅಡಿದಾಸ್ ಕಂಪನಿ ತಿರಸ್ಕರಿಸಿದ ವಿದ್ಯಾರ್ಥಿ ನಿರ್ಮಿತ ಈ ಜಾಹೀರಾತು ಚಿತ್ರ ಯೂಟ್ಯೂಬ್ ನೋಡುಗರನ್ನು ಹುಚ್ಚೆಬ್ಬಿಸಿದೆ!

ಡಿಜಿಟಲ್ ಕನ್ನಡ ಟೀಮ್:

ಯುಗೆನ್ ಮೆರಹರ್ ಜರ್ಮನಿಯ ವಿದ್ಯಾರ್ಥಿ. ತಾವು ಕೆಲಸಕ್ಕೆ ಅರ್ಹ ಎಂದು ನಿರೂಪಿಸುವುದಕ್ಕೆ ಆತ ಸ್ನೇಹಿತರೊಂದಿಗೆ ಒಡಗೂಡಿ, ಜನಪ್ರಿಯ ಕಂಪನಿ ಅಡಿದಾಸ್ ಆಶಯಗಳನ್ನು ಬಿಂಬಿಸುವ ಚೊಕ್ಕ ಕತೆಯ ಚಿಕ್ಕ ಚಿತ್ರವೊಂದನ್ನು ಕಂಪನಿಗೆ ಕಳುಹಿಸಿಕೊಟ್ಟ.

ಬ್ರೇಕ್ ಫ್ರೀ… ಅರ್ಥಾತ್ ಬಂಧಮುಕ್ತವಾಗುವುದು ಎಲ್ಲರ ಎದೆಯೊಳಗಿನ ಆಸೆಯೂ ಅಲ್ಲವೇ? ಇರುವ ಕೆಟ್ಟ ಪರಿಸ್ಥಿತಿಯಿಂದ, ಬೇಜಾರಾಗಿರುವ ಯಥಾಸ್ಥಿತಿಯಿಂದ ಬಂಧಮುಕ್ತವಾಗಿ ಹೊಸತನ ಹುಡುಕಬೇಕೆಂದು ಬಹಳಷ್ಟು ಮಂದಿಗೆ ಅನ್ನಿಸಿರುತ್ತದೆ.

ಈ ಚಿತ್ರದಾರಂಭದಲ್ಲಿ ಒಂದು ನಿವೃತ್ತರ ಗೂಡು. ಅಲ್ಲೊಬ್ಬ ಮೌನಿ ಇಳಿವಯಸ್ಕ. ಮಾತಿಲ್ಲ-ಕತೆಯಿಲ್ಲ. ಆದರೆ ಆತನಿಗೆ ಅಲ್ಲಿಂದ ಬಂಧಮುಕ್ತನಾಗಿ ಹೊರಜಗತ್ತಲ್ಲಿ ಓಡಾಡಬೇಕೆಂಬ ಅದಮ್ಯ ಆಸೆ ಇರುವುದು ಆತನ ತಲ್ಲಣಗಳಲ್ಲೇ ಗೊತ್ತಾಗುತ್ತದೆ. ಅದು ಚಿತ್ರದ ಫ್ರೇಮ್ ನಿಂದ ಫ್ರೇಂಗೆ ನಿಚ್ಚಳವಾಗುತ್ತ ಸಾಗುತ್ತದೆ. ಕೊನೆಗೂ ಗಾಲಿಕುರ್ಚಿಯ ಸಹವರ್ತಿಯೊಬ್ಬನ ಒತ್ತಾಸೆಯಿಂದ, ಆತ ಕೊಟ್ಟ ಆಡಿದಾಸ್ ಸ್ನೀಕರ್ ಧರಿಸಿ ಓಡೋಡಿ ಹೊರಬೀಳುತ್ತಾನೆ ಆತ. ಅಲ್ಲಿಗೆ ಬ್ರೇಕ್ ಫ್ರೀ ಎಂಬ ಘೋಷವನ್ನು ಆಡಿದಾಸ್ ಜತೆಗೆ ಸಮೀಕರಿಸಿ ತೆರೆ ಎಳೆಯಲಾಗುತ್ತದೆ. ತೆರೆ ಮೇಲೆ ನೋಡುವುದಕ್ಕೆ ಅನನ್ಯ ಆನಂದ ನೀಡುವ ಕಿರುಚಿತ್ರವಿದು. ಹಾಗೆಂದೇ ಯೂಟ್ಯೂಬಿನಲ್ಲಿ 70 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ವೈರಲ್ ಆಗಿದೆ, ಮೆಚ್ಚುಗೆಗಳು ಹರಿದು ಬಂದಿವೆ.

ಆದರೆ ಇದು ಯೂಟ್ಯೂಬಿಗೇರುವುದಕ್ಕೆ ಮೊದಲು ಅಡಿದಾಸ್ ಇದನ್ನು ತಿರಸ್ಕರಿಸಿತ್ತು.

ಹಾಗಂತ ಯುವ ಪ್ರತಿಭೆಯನ್ನು ಹೊಗಳುವ ಭರದಲ್ಲಿ ಅಡಿದಾಸ್ ಅನ್ನು ದೂಷಿಸಬೇಕಿಲ್ಲ. ಅವರ ಅಸ್ವೀಕೃತಿಗೆ ಅವರದ್ದೇ ಆದ ಬ್ರಾಂಡ್ ಕಾರಣಗಳಿರುತ್ತವೆ. ಅಡಿದಾಸ್ ತನ್ನ ಕ್ರೀಡಾ ಪಾದರಕ್ಷೆಯ ಉತ್ಪನ್ನಗಳನ್ನೆಲ್ಲ ಯುವಕರೊಂದಿಗೆ ಸಮೀಕರಿಸಿ ಪ್ರಚಾರ ಮಾಡಿದೆ. ಇಲ್ಲಿನ ನಿವೃತ್ತಿ ಮೆನಯ ಪಾತ್ರ ಅದರ ಬ್ರಾಂಡಿಗೆ ಹೊಂದುವಂಥದ್ದಲ್ಲವೆನಿಸುತ್ತದೆ. ಅಲ್ಲದೇ, ಈ ಪಾತ್ರವನ್ನು ಮರೆಗುಳಿ ಎಂಬಂತೆ ನೋಡುವ ಅವಕಾಶವೂ ಇರುವುದರಿಂದ, ಬ್ರೇಕ್ ಫ್ರೀ ಘೋಷದಲ್ಲಿ ಆತನನ್ನು ಹೊರಗೆ ಬಿಟ್ಟುಬಿಟ್ಟರೆ ಮುಂದಾಗುವ ಅವಘಡಗಳಿಗೆ ಯಾರು ಹೊಣೆ ಎಂಬ ಪ್ರಶ್ನೆಯೊಂದನ್ನು ಉಳಿಸುವ ಅಪಾಯವೂ ಇಲ್ಲಿದೆ.

ಅದೇನೇ ಇರಲಿ, ಯುವಪ್ರತಿಭೆಯ ಪ್ರಯತ್ನವಂತೂ ಪ್ರಶಂಸನೀಯವೇ. ಜಾಹೀರಾತು ಉದ್ಯಮವನ್ನು ಚರ್ಚೆಗೆ ದೂಡುವ ಚಿತ್ರವೊಂದು ವಿದ್ಯಾರ್ಥಿಯ ಕೈಯಲ್ಲರಳಿತಲ್ಲ? ಇದಲ್ಲವೇ ಸಾರ್ಥಕತೆ?

Leave a Reply