ವಿದ್ಯಾರ್ಥಿಯಾದಾಗಿಂದ ನಿವೃತ್ತಿವರೆಗಿನ ಸಾಲದ ಬದುಕಲ್ಲಿ ನನ್ನದೆನ್ನುವುದೇನು?: ಹಣಕ್ಲಾಸಿಗೆ ಪ್ರತಿಕ್ರಿಯೆ

ಮಂಜು ಅನಂತ್

ನಾನು ಮೈಸೂರು ಮೂಲದ ಅನಿವಾಸಿ ಭಾರತೀಯ ಕಳೆದ ಹಂದಿನೆಂಟು ವರ್ಷದಿಂದ ಅಮೇರಿಕಾದ ನಾರ್ತ್ ಕರೋಲಿನಾ ದಲ್ಲಿ ವಾಸ. ಡಿಜಿಟಲ್ ಕನ್ನಡದಲ್ಲಿ ಆಸ್ತಿ ಮತ್ತು ಹೊಣೆಯ ಬಗ್ಗೆ ನಿಮ್ಮ ಲೇಖನ ಓದಿದೆ. ಇಷ್ಟೂ ವರ್ಷಗಳ ಈ ಸಮಾಜವನ್ನ ಗಮನಿಸುತ್ತಾ ಬಂದಿರುವ ನನ್ನ ಅನುಭವ ನಿಮ್ಮ ಲೇಖನದ ಪ್ರತಿ ಸಾಲಿಗೂ ತಾಳೆ ಆಗುತ್ತಿದೆ.

ಇಲ್ಲಿನ ಜನ ತಾವು ವಾಸವಿರುವ ಮನೆಯನ್ನ ‘ತಮ್ಮದು ‘ ಎಂದು ಭಾವಿಸುತ್ತಾರೆ. ಸರಕಾರ ಮತ್ತಿತರೆ ಸಂಸ್ಥೆಗಳು ನೀಡುವ ಅಂಕಿಅಂಶ ಕೂಡ ಸಮಾಜದ ಇಷ್ಟು ಪ್ರತಿಶತ ಜನ ಸ್ವಂತ ಮನೆ ಹೊಂದಿದ್ದಾರೆ ಎಂದೇ ಹೇಳುತ್ತವೆ. ಇದೆ ರೀತಿಯ ಜಾಳು ಅಂಕಿಅಂಶ ಕಾರು, ಹಡಗು , ಹೆಲಿಕಾಪ್ಟರ್ ಇವಕ್ಕೂ ಅನ್ವಯಿಸುತ್ತದೆ. ಆದರೆ ನಿಜಕ್ಕೂ ಇವು ಅವರ ಸ್ವಂತದ್ದೇ? ಇಲ್ಲಿ ನಾನು ನಿಮಗೊಂದು ವಿಷಯ ತಿಳಿಸಲು ಬಯಸುತ್ತೇನೆ ಇವೆಲ್ಲವೂ ಕೊಂಡಿರುವುದು ಸಾಲದಲ್ಲಿ! ಇಲ್ಲಿನ ಸಾಲ ನೀಡುವ ಸಂಸ್ಥೆಗಳು ಎಷ್ಟು ದೊಡ್ಡವೆಂದರೆ ಈ ರೀತಿ ಸಾಲ ಪಡೆದು ಕಾರು ಮನೆ ಕೊಳ್ಳುವುದು ಅತಿ ಸಾಮಾನ್ಯ, ಅತಿ ಸಹಜ ಎಂದು ಯೋಚಿಸುವಂತೆ ಮಾಡಿವೆ. ಭೂಮಿಯ ಮೇಲಿನ ಸಕಲ ವಸ್ತುವೂ ಇಲ್ಲಿ ಕೊಳ್ಳಬಹುದು ಸಾಲ ಮಾಡಿ.

ಒಂದು ವಸ್ತು ಪೂರ್ಣವಾಗಿ ನಿಮ್ಮದಲ್ಲದ ಮೇಲೆ ಅದನ್ನ ‘ನನ್ನದು ‘ ಎನ್ನುವುದು ಹೇಗೆ ? ಈ ಪ್ರತಿಕ್ರಿಯೆ ಬರೆಯುವಾಗ ನಾನು ರೆಸ್ಟುರಾಂಟ್ ಒಂದರಲ್ಲಿ ಕೂತು ಆರಾಮಾಗಿ ಮಧ್ಯಾಹ್ನದ ಊಟ ಸವಿಯುತ್ತಾ ರಸ್ತೆಯ ಮೇಲೆ ಓಡಾಡುತ್ತಿರುವ ವಾಹನಗಳನ್ನ ಅವುಗಳ ಹಿಂದಿನ ದೈತ್ಯ ಕಟ್ಟಡಗಳನ್ನ ನೋಡುತ್ತಾ ಮನಸ್ಸಿನಲ್ಲಿ ಪ್ರಶ್ನಿಸಿಕೊಂಡೆ… ಇವುಗಳಲ್ಲಿ ಎಷ್ಟು ಸ್ವಂತದ್ದು ? ಇವುಗಳು ಎಷ್ಟು ನಿಜ ? ಸತ್ಯವೆಂದರೆ ನಿಜ ಅರ್ಥದಲ್ಲಿ ಇವ್ಯಾವೂ ಸ್ವಂತದ್ದಲ್ಲ ! ದೇಶದ ದೃಷ್ಟಿಯಿಂದ ನೋಡಿದರೆ ಈ ದೇಶ ನಿಂತಿರುವುದೇ ಸಾಲದ ಮೇಲೆ.

ನನ್ನ ಉದಾಹರಣೆಯನ್ನೇ ನೋಡಿ. ನನ್ನ ಬಳಿ ದೊಡ್ಡ ಮನೆಯಿದೆ ಅಕ್ಕಪಕ್ಕದವರು ಹೊಟ್ಟೆಕಿಚ್ಚು ಪಡುವಷ್ಟು ದೊಡ್ಡ ಮನೆಯಿದೆ. ಆದರೇನು ಅದು ನನ್ನದಲ್ಲ. ಪ್ರತಿ ತಿಂಗಳು ಬ್ಯಾಂಕಿಗೆ ಕಂತು ಕಟ್ಟಬೇಕು.  ವಿದ್ಯಾರ್ಥಿ ದೆಸೆಯಿಂದ ನಿವೃತ್ತಿವರೆಗೂ ಸಾಲ ಸಾಲ ಸಾಲ…, ಸಾಲದಲ್ಲೇ ಬದುಕು ಕಳೆದು ಹೋಗುತ್ತದೆ. ಇಲ್ಲಿ ಸಾಮಾನ್ಯವಾಗಿ ಸಾಲದ ಅವಧಿ 30 ವರ್ಷ. ಅಂದರೆ 25ರ  ಯುವಕ ಮನೆಕೊಂಡರೆ ಅದು ಅವನದ್ದು ಆಗುವ ವೇಳೆಗೆ ಆತನಿಗೆ 55 ವರ್ಷವಾಗಿರುತ್ತದೆ. ಈ ಮಧ್ಯೆ ಕೆಲಸ ಹೋದರೆ  ಕಂತು ಕಟ್ಟುವುದ  ಕೆಲವು ತಿಂಗಳು ನಿಲ್ಲಿಸಿದರೆ ಮನೆಯನ್ನು ಬ್ಯಾಂಕ್ ಆಕ್ರಮಿಸುತ್ತದೆ. ಅಷ್ಟೇ ಅಲ್ಲದೆ 2 ಲಕ್ಷ ಸಾಲಕ್ಕೆ 30 ವರ್ಷದಲ್ಲಿ ನಾವು 3 ಲಕ್ಷ ಬಡ್ಡಿ ಕಟ್ಟಿರುತ್ತೇವೆ!  ಇದೊಂದು ವಿಷ ವರ್ತುಲ. ಇಲ್ಲಿನ ಸಮಾಜ ಹೇಗೆ ನಿರ್ಮಾಣವಾಗಿದೆ ಎಂದರೆ ಸಾಲ ಮಾಡುವುದ ನಿಲ್ಲಿಸಿ ಉಳಿಕೆ ಶುರು ಮಾಡಿದರೆ ಇಡೀ ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತದೆ. ಒಂದೇ ಸಾಲಿನಲ್ಲಿ ಹೇಳಬೇಕಂದರೆ ಅಮೇರಿಕಾದಲ್ಲಿ ಯಾವುದೂ ನಿಜವಲ್ಲ, ಎಲ್ಲವೂ ನೆಡೆಯುವುದು ಸಾಲದಲ್ಲಿ. ಅಟ್ ಲೀಸ್ಟ್ ನಾನು ನಿಜದಲ್ಲಿ ಬದುಕಲು ಇಚ್ಛೆ ಪಡುತ್ತೇನೆ. ಎಲ್ಲಿಯವರೆಗೆ ಮನೆಯ ಮೇಲಿನ ಸಾಲ ಪೂರ್ಣ ಕಟ್ಟಿಲ್ಲ ಅಲ್ಲಿಯವರೆಗೆ ಅದು ನನ್ನದಲ್ಲ.

Leave a Reply