ಪ್ರತಿಭಾ ಪಲಾಯನವನ್ನು ಪ್ರತಿಭಾ ಸಂಚಯವನ್ನಾಗಿ ಪರಿವರ್ತಿಸುತ್ತಿದ್ದೇವೆ ಅಂತ ಪ್ರವಾಸಿ ಭಾರತೀಯ ದಿನದಲ್ಲಿ ಪ್ರಧಾನಿ ಮೋದಿ ಹೇಳಿರುವುದರ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ಬ್ರೇನ್ ಡ್ರೇನ್/ ಬ್ರೇನ್ ಗೇನ್ ಎಂಬೆಲ್ಲ ಪದಗುಚ್ಛಗಳನ್ನು ಉಪಯೋಗಿಸಿ, ಭಾರತೀಯ ಸಂಜಾತರಿಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಹೇಳಿದರು. ನಮ್ಮ ಸರ್ಕಾರ ಬ್ರೇನ್ ಡ್ರೇನ್ ಅನ್ನು ಬ್ರೇನ್ ಗೇನ್ ಆಗಿಸಲು ಯತ್ನಿಸುತ್ತಿದೆ ಎಂಬ ಪ್ರಧಾನಿ ಮಾತಿನ ಅರ್ಥವಾದರೂ ಏನು?

ಭಾರತದ ಪ್ರತಿಭಾವಂತ ಮಿದುಳುಗಳು ಅರ್ಥಾತ್ ವ್ಯಕ್ತಿಗಳು ವಿದೇಶಗಳಿಗೆ ಹೋಗಿ ಅವರ ಭವಿಷ್ಯ ಬೆಳೆಸಿಕೊಂಡಿರುವುದು ಹೌದಷ್ಟೆ. ಈ ಮಿದುಳುಗಳನ್ನು ಮತ್ತೆ ಭಾರತದ ಅಭ್ಯದಯಕ್ಕೆ ಬಳಸಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರವಿದೆ ಎಂಬುದು ಮೋದಿಯ ಬ್ರೇನ್ ಗೇನ್ ಎಂಬ ಮಾತಿನರ್ಥ.

ಹಂಗಂದ್ರೆ ಅವರೆಲ್ಲ ಮರಳಿ ಭಾರತಕ್ಕೆ ಬರುವ ವಾತಾವರಣ ನಿರ್ಮಿಸುತ್ತಾರೆ ಅಂತಲಾ?

ಕ್ಷಮಿಸಿ… ನಾವದೇನೇ ಭಾರತೀಯ ಅಭಿಮಾನದಿಂದ ಮಾತನಾಡಿದರೂ ವಿದೇಶಗಳಲ್ಲಿ ನೆಲೆಯಾಗಿರುವ ಪ್ರತಿಭಾವಂತರನ್ನು ಅಲ್ಲಿನ ಜೀವನಶೈಲಿ ತೊರೆದು ಇಲ್ಲಿಗೆ ಮರಳುವಷ್ಟು ಆಕರ್ಷಿಸುವ ಹಂತಕ್ಕೆ ಭಾರತ ಬೆಳೆದಿಲ್ಲ. ಬಿಜೆಪಿ ಅಂತಲ್ಲ, ಯಾವ ಸರ್ಕಾರಕ್ಕೂ ಅಲ್ಲಿನವರನ್ನು ಮರಳಿ ಬರುವ ಆಫರ್ ಕೊಡುವಷ್ಟು ಧೈರ್ಯವಿಲ್ಲ. ಉತ್ತರ ಸರಳ- ಇಲ್ಲಿನ ಮೂಲಸೌಕರ್ಯ ಅದಕ್ಕೆ ಪೂರಕವಾಗಿಲ್ಲ. ರಾತ್ರಿ ಬೆಳಗಾಗುವುದರೊಳಗೆ ಇದನ್ನು ಬದಲಿಸುವುದಕ್ಕೂ ಸಾಧ್ಯವಿಲ್ಲ.

ಈಗ ಪ್ರಧಾನಿ ಮೋದಿ ಆಕರ್ಷಕ ಪದಗುಚ್ಛಗಳನ್ನು ಉಪಯೋಗಿಸಿದರೂ ಒಟ್ಟಾರೆ ಮಾತಿನ ಅರ್ಥ ಇಷ್ಟೆ. ಈ ದೇಶದಿಂದ ಹೋದ ಪ್ರತಿಭಾವಂತರ ಬುದ್ಧಿಮತ್ತೆಯನ್ನು ಅವರಿದ್ದಲ್ಲಿಂದಲೇ ಉಪಯೋಗಿಸಿಕೊಳ್ಳುವ ಪ್ರಯತ್ನ ತಮ್ಮದು. ಇಲ್ಲಿನ ಸೌಕರ್ಯ ಮತ್ತು ಮಾರುಕಟ್ಟೆ ಅವಕಾಶಗಳನ್ನು ಹೇಳುತ್ತ ಅವರ ಬಂಡವಾಳವನ್ನು ಆಕರ್ಷಿಸುವುದು ಇನ್ನೊಂದು ಅಂಶ.

ಇದನ್ನು ಈಡೇರಿಸಿಕೊಳ್ಳುವುದಕ್ಕಾಗಿ ಪ್ರಧಾನಿ ಮೋದಿ ಪ್ರವಾಸಿ/ಅನಿವಾಸಿ ಭಾರತೀಯರ ಪರ ಸರ್ಕಾರದ ತುಡಿತಗಳನ್ನು ಕರ್ಣಾನಂದ ನುಡಿಗಟ್ಟುಗಳಲ್ಲಿ ಹೀಗೆ ಕಟ್ಟಿಟ್ಟರು.

  • ಜಗತ್ತಿನಾದ್ಯಂತ ವಿದೇಶಿ ಸಮುದಾಯಗಳ ಪೈಕಿ, ಭಾರತೀಯ ಸಂಜಾತ ಸಮುದಾಯವೇ ಅತ್ಯುತ್ತಮ ಮೌಲ್ಯ, ಸಂಸ್ಕೃತಿಗಳನ್ನು ಹೊಂದಿದ್ದಾಗಿದೆ..
  • ತಾವು ಹೋದೆಡೆಯಲ್ಲೆಲ್ಲಾ ಭಾರತೀಯರು ಅಭಿವೃದ್ಧಿ ಹರಡಿದ್ದಾರೆ. ಅವರ ಗುರಿಗಳು ಬೇರೆ ಬೇರೆ ಇದ್ದರೂ ಬೆಸೆದಿರುವ ದಾರ ಭಾರತೀಯತೆ.
  • ನನ್ನ ಸರ್ಕಾರಕ್ಕೆ ಹಾಗೂ ವೈಯಕ್ತಿಕವಾಗಿ ಸಾಗರದಾಚೆ ಭಾರತೀಯರ ಜತೆಗಿನ ಸಂವಹನ ಮುಖ್ಯ ಅಂಶವಾಗಿದೆ. ಅಮೆರಿಕ, ಯುಕೆ, ಆಸ್ಟೇಲಿಯ, ದಕ್ಷಿಣ ಆಫ್ರಿಕ, ಯುಎಇ, ಕತಾರ್, ಚೀನಾ, ಜಪಾನ್, ಸೌತ್ ಕೊರಿಯಾ ಇಲ್ಲೆಲ್ಲ ಬಹಳ ಭಾರತೀಯರನ್ನು ಭೇಟಿಯಾಗಿದ್ದೇನೆ. ಇವರೆಲ್ಲ ಭಾರತದ ವಿಕಾಸಯಾತ್ರೆಯಲ್ಲಿ ಸಹಪ್ರಯಾಣಿಕರಾಗಿರುತ್ತಾರೆ.
  • ವಿದೇಶದಲ್ಲಿರುವ ಭಾರತೀಯರ ರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಪಾಸ್ಪೋರ್ಟ್, ಕಾನೂನು ಸಲಹೆ, ವೈದ್ಯಕೀಯ ಸಹಕಾರ, ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರುವ ಸಂದರ್ಭ ಇಲ್ಲೆಲ್ಲ ಕಾರ್ಯತತ್ಪರ ಪ್ರತಿಕ್ರಿಯೆ ನೀಡುವಂತೆ ಭಾರತೀಯ ರಾಜತಾಂತ್ರಿಕ ಕಚೇರಿಗಳನ್ನು ಸಜ್ಜುಗೊಳಿಸಲಾಗಿದೆ.
  • ನಾವು ಪಾಸ್ಪೋರ್ಟ್ ಬಣ್ಣ ಯಾವುದೆಂದು ಗಮನಿಸುವುದಿಲ್ಲ. ರಕ್ತ ಸಂಬಂಧ ಮುಖ್ಯವಾಗುತ್ತದೆ.
  • ನಮ್ಮ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಕಟಕ್ಕೆ ಸಿಲುಕಿರುವ ವಿದೇಶಗಳಲ್ಲಿನ ಭಾರತೀಯರ ರಕ್ಷಣೆಗೆ ಧಾವಿಸುವಲ್ಲಿ ಯಾವತ್ತೂ ಕಟಿಬದ್ಧರಾಗಿರುತ್ತಾರೆ.
  • ವಿದೇಶದಲ್ಲಿರುವ ಕಾರ್ಮಿಕರ ಸುರಕ್ಷತೆಗೆ ಆನಲೈನ್ ನೋಂದಣಿಯಂಥ ಕ್ರಮ ಕೈಗೊಂಡಿದ್ದೇವೆ. ಭಾರತದಲ್ಲಿರುವ ಅಕ್ರಮ ಉದ್ಯೋಗ ಏಜೆಂಟರಿಂದ ಶೋಷಣೆಗೊಳಗಾಗದಂತೆ ಈ ವ್ಯವಸ್ಥೆ ಸಹಕರಿಸುತ್ತದೆ. ಇಲ್ಲಿ ಅವರ ಕಷ್ಟಗಳನ್ನೂ ಹೇಳಿಕೊಳ್ಳಬಹುದು.
  • ಮಾರಿಷಸ್ ಇತ್ಯಾದಿಗಳಲ್ಲಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಿ ಅಲ್ಲಿನ ಭಾರತೀಯ ಸಮುದಾಯದ ಸಂತಾನವೂ ಸಾಗರದಾಚೆ ಭಾರತೀಯ ನಾಗರಿಕ ಕಾರ್ಡ್ (ಒಸಿಐ) ಹೊಂದುವಂತೆ ಮಾಡಿದ್ದೇವೆ.

Leave a Reply