ಪೆಟ್ರೋಲ್ ಸುರಿದುಕೊಂಡು ಭಗ್ಗೆಂದಿರುವ ಚರ್ಚೆ: ಕಾರ್ಡು ವ್ಯವಹಾರದ ವೆಚ್ಚ ಭರಿಸೋರು ಯಾರು?

ಡಿಜಿಟಲ್ ಕನ್ನಡ ಟೀಮ್:

ಸದ್ಯಕ್ಕೇನೋ ಪೆಟ್ರೊಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಧ್ಯಪ್ರವೇಶದಿಂದ ಪೆಟ್ರೊಲ್ ಬಂಕುಗಳಲ್ಲಿ ಕಾರ್ಡು ಸ್ವೀಕಾರ ಮುಂದುವರಿದಿದೆ. ಆದರೆ ಈ ಬಗ್ಗೆ ಸ್ಪಷ್ಟ ಚಿತ್ರಣವೇನೂ ಹೊರಬಿದ್ದಿಲ್ಲ. ಜನವರಿ 13ರವರೆಗೆ ಬ್ಯಾಂಕುಗಳು ಕಾರ್ಡು ವಹಿವಾಟಿಗೆ ಶುಲ್ಕ ವಿಧಿಸುವ ನಿರ್ಧಾರದಿಂದ ಹಿಂತೆಗೆದಿವೆ ಅಷ್ಟೆ.

ಧರ್ಮೇಂದ್ರ ಪ್ರಧಾನ್ ಅವರು ಹೇಳುವ ಪ್ರಕಾರ ಬಹುತೇಕ ಬ್ಯಾಂಕುಗಳು ತಾವು ಶುಲ್ಕ ಹಾಕದೇ ಇರುವುದಕ್ಕೆ ಒಪ್ಪಿವೆ. ಆದರೆ ಎಲ್ಲ ಬ್ಯಾಕುಗಳೂ ಇದಕ್ಕೆ ಸಮ್ಮತಿಸಿಲ್ಲ. ಕಾರ್ಡ್ ಮೂಲಕ ವಹಿವಾಟು ಸಾಕಾರಗೊಳಿಸುವ ತಂತ್ರಜ್ಞಾನ ಸೇವೆಯಲ್ಲಿರುವವರಿಗೆ ಅವರ ಸೇವೆಯ ಶುಲ್ಕ ಸಲ್ಲಬೇಕಲ್ಲ? ಇದನ್ನು ಹೊರುವವರು ಯಾರು ಎಂಬ ಪ್ರಶ್ನೆ ಸಹಜವೇ. ಗ್ರಾಹಕ ಭರಿಸಬೇಕೋ, ಬ್ಯಾಂಕುಗಳೋ ಅಥವಾ ಪೆಟ್ರೋಲ್ ಬಂಕುಗಳೋ?

ತಮಗುಳಿಯುವ ಮಾರ್ಜಿನ್’ನಲ್ಲಿ ಅದನ್ನೆಲ್ಲ ಭರಿಸಲಾಗದು. ಶುಲ್ಕ ಹಾಕುತ್ತಾರೆ ಎಂದಾದರೆ ನಾವು ಕಾರ್ಡ್ ಮೂಲಕ ಪಾವತಿಯನ್ನೇ ಸ್ವೀಕರಿಸುವುದಿಲ್ಲ ಎಂಬುದು ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟಗಳ ನಿಲುವು.

ನೋಟು ಅಮಾನ್ಯ ಕ್ರಮಕ್ಕೂ ಮೊದಲು ಗ್ರಾಹಕರು ಕೆಲು ಕಾರ್ಡುಗಳನ್ನು ಬಳಸಿದರೆ ಸರ್ಚಾರ್ಜ್ ವಸೂಲಾಗುತ್ತಿತ್ತು. ನೋಟು ಅಮಾನ್ಯ ಪರ್ವದಲ್ಲಿ ಡಿಜಿಟಲ್ ವ್ಯವಹಾರ ಉತ್ತೇಜಿಸುವುದಕ್ಕೆ ಸರ್ಕಾರ ಇದರ ಶುಲ್ಕ ಇಲ್ಲವಾಗಿಸಿತು. ಆದರೆ ಅದರ ಅವಧಿ ಮುಗಿಯುತ್ತಲೇ ಬ್ಯಾಂಕುಗಳು ತಮ್ಮ ವೆಚ್ಚ ವಸೂಲಿ ಮಾರ್ಗದತ್ತ ಸಹಜವಾಗಿಯೇ ಎಳೆಸಿವೆ.

ಡಿಸೆಂಬರ್ 16ರ ಆರ್ಬಿಐ ಕ್ರಮವೊಂದರಿಂದ ಮತ್ತೆ ಅಸ್ಪಷ್ಟತೆಗೆ ಸಿಲುಕಿದೆ. ಪಿಒಎಸ್ ಮಷಿನ್ ಬಳಕೆ ಶುಲ್ಕವನ್ನು ಬ್ಯಾಂಕುಗಳ ಮರ್ಚೆಂಟ್ ಡಿಸ್ಕೌಂಟ್ ರೇಟ್ ನಿರ್ಧರಿಸುತ್ತಿತ್ತು. ಈ ಎಂಡಿಆರ್ ಅನ್ನು ಸಾವಿರ ರುಪಾಯಿಗಳವರೆಗಿನ ವಹಿವಾಟಿಗೆ 0.25ರ ದರದಲ್ಲಿ ಹಾಗೂ 1000 ಮತ್ತು 2000 ವಹಿವಾಟಿಗೆ 0.5 ರ ದರವನ್ನು ಜನವರಿ 1ರಿಂದ ಮಾರ್ಚ್ 31ರವರೆಗೆ ಕಾಯ್ದುಕೊಳ್ಳುವಂತೆ ಸೂಚಿಸುತ್ತದೆ ಆರ್ಬಿಐ ಸುತ್ತೋಲೆ.

ಮುಖ್ಯವಾಗಿ ಈ ಕಾರಣಕ್ಕೆ ಬ್ಯಾಂಕುಗಳು ಇಂಥದೊಂದು ತೀರ್ಮಾನ ತೆಗೆದುಕೊಂಡಿವೆ. ಹೀಗೆ ಎಂಡಿಆರ್ ಅಡಿ ಪಡೆದ ಶುಲ್ಕದಿಂದಲೇ ಅವು ಕಾರ್ಡ್ ತಂತ್ರಜ್ಞಾನ ಒದಗಿಸುತ್ತಿರುವ ಮಾಸ್ಟರ್ ಕಾರ್ಡ್, ವೀಸಾಗಳಿಗೆ ಹಣ ಕೊಡಬೇಕಿರುತ್ತದೆ.

ಈ ವೆಚ್ಚವನ್ನು ತೈಲ ಕಂಪನಿಗಳು ಭರಿಸುವಂತೆ ಮಾಡುವ ಉತ್ಸುಕತೆ ಸರ್ಕಾರಕ್ಕೆ ಇರುವಂತೆ ತೋರುತ್ತಿದೆಯಾದರೂ, ಜನವರಿ 13ರ ಆಚೆಗೆ ಮೂಡಲಿರುವ ಪರಿಹಾರದ ಚಿತ್ರಣ ಸ್ಪಷ್ಟವಿಲ್ಲ.

Leave a Reply